ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾನಗರ ಗೃಹ ನಿರ್ಮಾಣ ಇಳಿಮುಖ

Last Updated 17 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಹಾನಗರಗಳಲ್ಲಿ ಹೊಸದಾಗಿ ನಿರ್ಮಿಸಿದ ಮನೆಗಳ ಮೌಲ್ಯ ಮುಂದಿನ ಆರು ತಿಂಗಳಲ್ಲಿ ಕುಸಿಯಲಿದೆ ಎನ್ನುವ ಮಾರುಕಟ್ಟೆ ಸಮೀಕ್ಷೆಯ ಬೆನ್ನಲ್ಲೇ ಹೊಸ ಮನೆಗಳ ನಿರ್ಮಾಣ ಪ್ರಮಾಣವೂ ಇಳಿಮುಖವಾಗುತ್ತಿರುವ ಅಂಶ ಇದೀಗ ಬೆಳಕಿಗೆ ಬಂದಿದೆ. ಆದರೆ, ಬೆಂಗಳೂರಿನಲ್ಲಿ ಮಾತ್ರ ಫ್ಲ್ಯಾಟ್‌ಗಳ ನಿರ್ಮಾಣ ಚಟುವಟಿಕೆ ಚುರುಕಿನಿಂದ ಸಾಗುತ್ತಲೇ ಇದೆ. ಹಿಂದಿನ ವರ್ಷಕ್ಕಿಂತ ಈ ವರ್ಷ ಸ್ವಲ್ಪ ಹೆಚ್ಚಿನ ಸಂಖ್ಯೆಯ ಮನೆಗಳೇ ನಿರ್ಮಾಣವಾಗಿವೆ.

ದೇಶದ ಎಂಟು ಮಹಾನಗರಗಳಲ್ಲಿ  ಈ ವರ್ಷ ಹೊಸ ಮನೆಗಳ ನಿರ್ಮಾಣ ಕಾರ್ಯ ಶೇಕಡಾ 12ರಷ್ಟು ಕುಸಿತ ಕಂಡಿದೆ ಎಂದು ಜಾಗತಿಕ ಸ್ಥಿರಾಸ್ತಿ ವಹಿವಾಟು ಮಾರ್ಗದರ್ಶನ ಸಂಸ್ಥೆ ‘ಕುಷ್ಮನ್ ಅಂಡ್‌ ವೇಕ್‌ಫಿೀಲ್ಡ್’ ಅಧ್ಯಯನ ವರದಿ ತಿಳಿಸಿದೆ. ಮಹಾನಗರಗಳಲ್ಲಿ ಹೊಸ ಮನೆಗಳ ಮೌಲ್ಯ ಕುಸಿಯಲಿದೆ ಎಂದು ‘ಇಂಡಿ­ಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇ­ಜ್‌­ಮೆಂಟ್’ ಮತ್ತು ‘ಮ್ಯಾಜಿಕ್‌ಬ್ರಿಕ್ಸ್’ ಜಂಟಿ ಸಮೀಕ್ಷೆ  ಇತ್ತೀಚೆಗಷ್ಟೇ ಮಾರು­ಕಟ್ಟೆ ಅಧ್ಯಯನ ವರದಿ ಪ್ರಕಟಿಸಿದ್ದವು. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ನಿರ್ಮಾಣ­ದಾರರು ಅಂದಾಜು 1.72 ಲಕ್ಷ ಹೊಸ ಮನೆಗಳ ನಿರ್ಮಾಣವನ್ನೇ ಸದ್ಯಕ್ಕೆ ಕೈಬಿಟ್ಟಿದ್ದಾರೆ ಎಂದಿದೆ ‘ಕುಷ್ಮನ್ ಅಂಡ್‌ ವೇಕ್‌ಫಿೀಲ್ಡ್’.

ರಾಷ್ಟ್ರೀಯ ರಾಜಧಾನಿ ವಲಯದಲ್ಲಿ (ಎನ್‌ಸಿಆರ್) ಈ ವರ್ಷದಲ್ಲಿ ಒಟ್ಟು 38,411ರಷ್ಟು ಹೊಸ ಮನೆಗಳ ನಿರ್ಮಾಣ ಸ್ಥಗಿತಗೊಂಡಿದೆ.  ಈ ಪ್ರದೇಶದ ರಿಯಲ್‌ ಎಸ್ಟೇಟ್‌ ಚಟುವಟಿ­ಕೆಗೆ ಹೋಲಿಸಿದರೆ ಗೃಹ ನಿರ್ಮಾಣ ಕಾಮ­ಗಾರಿ ಶೇ 33ರಷ್ಟು ಇಳಿಮುಖ­ವಾಗಿದೆ. ಕಳೆದ ವರ್ಷ ಇದೇ ಅವಧಿ­ಯಲ್ಲಿ 57,098 ಫ್ಲ್ಯಾಟ್‌ಗಳು ನಿರ್ಮಾ­ಣವಾಗಿದ್ದವು. ಕಳೆದ ವರ್ಷಕ್ಕೆ ತುಲನೆ ಮಾಡಿದರೆ 2013ರಲ್ಲಿ ಹೊಸ ಮನೆಗಳ ನಿರ್ಮಾಣ ಯೋಜನೆಯಲ್ಲಿ ಶೇ 12­ರಷ್ಟು ಇಳಿಕೆಯಾಗಿದೆ. ಭಾರತದ ಎಂಟು ಮಹಾನಗರಗಳಲ್ಲಿ ಒಟ್ಟು 1,72,500 ಫ್ಲ್ಯಾಟ್‌ಗಳು ನಿರ್ಮಾಣವಾಗಿವೆ ಎಂದು ‘ಕುಷ್ಮನ್ ಅಂಡ್‌ ವೇಕ್‌ಫಿೀಲ್ಡ್’ ಅಂಕಿ ಅಂಶ ಪ್ರಕಟಿಸಿದೆ.

2012ರಲ್ಲಿ ಬೆಂಗಳೂರು, ಎನ್‌ಸಿಆರ್, ಚೆನ್ನೈ, ಮುಂಬೈ, ಕೊಲ್ಕತಾ, ಅಹಮದಾಬಾದ್, ಹೈದರಾಬಾದ್ ಮತ್ತು ಪುಣೆಯಲ್ಲಿ 196,846 ಹೊಸ ಮನೆಗಳು ನಿರ್ಮಾಣವಾಗಿದ್ದವು. ಈ ವರ್ಷ ಬೆಂಗಳೂರಿನಲ್ಲಿ 49,279 ಫ್ಲ್ಯಾಟ್‌ಗಳು ನಿರ್ಮಾಣವಾಗಿವೆ. ಇದು ಕಳೆದ ವರ್ಷಕ್ಕಿಂತ ಶೇ 15ರಷ್ಟು ಅಧಿಕವಾಗಿದೆ. ಚೆನ್ನೈನಲ್ಲಿ ಮಾತ್ರ ರಿಯಲ್‌ ಎಸ್ಟೇಟ್‌ ಚಟುವಟಿಕೆ ಹಿನ್ನಡೆ ಕಂಡಿದೆ. ಇಲ್ಲಿ ಈ ವರ್ಷ ಹೊಸ ಮನೆಗಳ ನಿರ್ಮಾಣ ತೀವ್ರ ಕುಸಿತ ಕಂಡಿದೆ. ಕಳೆದ ವರ್ಷಕ್ಕಿಂತ ಶೇ 39ರಷ್ಟು ಗೃಹ ನಿರ್ಮಾಣ ಚಟುವಟಿಕೆ ತಗ್ಗಿದೆ. ಉಳಿದಂತೆ ಎನ್‌ಸಿಆರ್ (ಶೇ 33) ಪುಣೆ ( ಶೇ 20), ಮತ್ತು ಹೈದರಾಬಾದ್ (ಶೇ 3)ರಷ್ಟು ಇಳಿಕೆಯಾಗಿದೆ.

ಪ್ರಸಕ್ತ ಆರ್ಥಿಕ ಸ್ಥಿತಿಯಲ್ಲಿ  ಮನೆಗಳ ಖರೀದಿಯಷ್ಟೇ ಅಲ್ಲದೆ ರಿಯಲ್ ಎಸ್ಟೇಟ್‌ ವಿಚಾರದ ಎಲ್ಲಾ ವ್ಯವಹಾರಗಳಿಗೂ ಸಂಬಂಧಪಟ್ಟಂತೆ ಖರೀದಿದಾರರು ಮತ್ತು ನಿರ್ಮಾ­ಣದಾರು ಇಬ್ಬರಿಗೂ ಇದೊಂದು ಎಚ್ಚರಿಕೆಯ ಸಂದೇಶವಾಗಿದೆ ಎಂದು ‘ಕುಷ್ಮನ್ ಅಂಡ್‌ ವೇಕ್‌ಫಿೀಲ್ಡ್’ನ ದಕ್ಷಿಣ ಏಷ್ಯಾ ಕಾರ್ಯಕಾರಿ ವ್ಯವಸ್ಥಾ­ಪಕ ನಿರ್ದೇಶಕ ಸಂಜಯ್ ದತ್ ಗಮನ ಸೆಳೆದಿದ್ದಾರೆ.ನಿವೇಶನ, ನಿರ್ಮಾಣ ಮತ್ತು ಸಾಲದ ಮೇಲಿನ ವೆಚ್ಚದಲ್ಲಿ ಗಣನೀಯ ಏರಿಕೆ ಕಂಡುಬರುತ್ತಿರುವುದರಿಂದ  ನಿರ್ಮಾಣದಾರರಿಗೆ ಮನೆಗಳ  ವೆಚ್ಚ ಕಡಿಮೆ ಮಾಡಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ದತ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT