ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾನ್ ಕಲಾವಿದನಿಗೆ ಬೆಚ್ಚನೆಯ ಬೀಳ್ಕೊಡುಗೆ

Last Updated 12 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಪಂಡಿತ್ ರವಿಶಂಕರ್ ಅವರು ಬೆಂಗಳೂರಿಗೆ ವಿದಾಯ ಹೇಳುವ ಕಾರ್ಯಕ್ರಮ ಫೆಬ್ರುವರಿ 7ರಂದು ಅರಮನೆ ಮೈದಾನದಲ್ಲಿ ನಡೆಯಿತು. ಅವರಿಗೆ 92 ವರ್ಷ ವಯಸ್ಸು. ಮತ್ತೆ ಈ ಊರಿನಲ್ಲಿ ಕಛೇರಿ ಕೊಡುವುದು ಅಸಂಭವ ಎಂದು ತೀರ್ಮಾನಿಸಿ ಕಾರ್ಯಕ್ರಮವನ್ನು `ಫೇರ್‌ವೆಲ್ ಟು ಬ್ಯಾಂಗಲೋರ್~ ಎಂದು ಆಯೋಜಕರು ಕರೆದಿದ್ದರು.

ಕಛೇರಿಗೆ ಮೂರು ದಿನ ಇರುವಾಗಲೇ ಟಿಕೆಟ್ ಖಾಲಿಯಾಗಿತ್ತು. ಶಾಸ್ತ್ರೀಯ ಸಂಗೀತಕ್ಕೆ ಕೇಳುಗರಿಲ್ಲ ಎಂದು ವಾದಿಸುವ ಜನರಿಗೆ ಇದು ಬೆರಗು ಹುಟ್ಟಿಸುವ ವಿಷಯವಾಗಿದ್ದಿರಬೇಕು. ರವಿಶಂಕರ್ ಅವರ ಶಾಸ್ತ್ರೀಯ ಸಂಗೀತದಷ್ಟೇ ಹೆಸರು ಮಾಡಿರುವುದು ಅವರ ಪ್ರಯೋಗಾತ್ಮಕ ಸಂಗೀತ. ಅವರು ಪಾಲ್ಗೊಂಡ ಕಛೇರಿಗಳು ಮತ್ತು ಧ್ವನಿಮುದ್ರಿಕೆಗಳು ಇಂದಿನ ಫ್ಯೂಶನ್ ಮತ್ತು ವರ್ಲ್ಡ್ ಮ್ಯೂಸಿಕ್‌ಗೆ ಬುನಾದಿ ಎಂದು ಎಲ್ಲ ಸಂಗೀತಗಾರರೂ ಒಪ್ಪುತ್ತಾರೆ. ಹಾಗಾಗಿ ಶಾಸ್ತ್ರೀಯ ಸಂಗೀತ ಕೇಳುಗರು ಮತ್ತು ಪ್ರಯೋಗಾತ್ಮಕ ಸಂಗೀತ ಕೇಳುವವರು ಎರಡೂ ವರ್ಗದ ಜನ ಕುತೂಹಲದಿಂದ ಕಾರ್ಯಕ್ರಮಕ್ಕೆ ಬಂದಿದ್ದರು.

ಶಾಸ್ತ್ರೀಯ ಸಂಗೀತ ಪ್ರಿಯರಿಗೆ ಅವರು ಪಂಡಿತ್ ಜೀ ಆದರೆ ಇತರರಿಗೆ ವರ್ಲ್ಡ್ ಮ್ಯೂಸಿಕ್‌ನ ಗಾಡ್ ಫಾದರ್ ಎಂದು ಪರಿಚಯ. ಯಹೂದಿ ಮೆನ್ಯುಹಿನ್ ಅವರಂಥ ಮೇರು ಸಂಗೀತಗಾರರೊಂದಿಗೆ ಅವರು ನಡೆಸಿದ ಸ್ವರ ಒಡನಾಟ ಭಾರತೀಯ ಸಂಗೀತವನ್ನು ಪಶ್ಚಿಮದಲ್ಲಿ ಪರಿಚಯಿಸಿತಲ್ಲದೆ ವಿಶ್ವ ಸಂಗೀತದಲ್ಲೇ ಮೈಲುಗಲ್ಲಾಗಿ ನಿಂತಿದೆ. ಅವರಿಬ್ಬರ ಧ್ವನಿಮುದ್ರಿಕೆಗಳು `ಈಸ್ಟ್ ಮೀಟ್ಸ್ ವೆಸ್ಟ್~ ಎಂಬ ಹೆಸರಿನಲ್ಲಿ ಹೊರಬಂದವು. (ಕೆಲ ದಶಕಗಳ ನಂತರ ಹ್ಯಾರಿ ಮಾನ್ಕ್ಸ್ ಎಂಬ ಗಿಟಾರ್ ಕಲಾವಿದ ತನ್ನ ಒಂದು ಆಲ್ಬಮನ್ನು ತಮಾಷೆಯಾಗಿ `ವೆಸ್ಟ್ ಈಟ್ಸ್ ಮೀಟ್~ ಎಂದು ಕರೆದ!).  

ಬೆಂಗಳೂರಿನ ಕಾರ್ಯಕ್ರಮದಲ್ಲಿ ರವಿಶಂಕರ್ ಅವರ ಮಗಳು ಅನೌಷ್ಕಾ ಎರಡು ಕರ್ನಾಟಕ ಸಂಗೀತದ ರಾಗಗಳನ್ನು ನುಡಿಸಿದರು (ಕಥನ ಕುತೂಹಲ ಮತ್ತು ವಾಚಸ್ಪತಿ). ಬೆಂಗಳೂರಿನವರೇ ಆದ ಕೊಳಲು ವಾದಕ ರವಿಶಂಕರ್ ಕೂಲೂರ್ ಅವರೊಡನೆ ಸವಾಲ್ ಜವಾಬ್ ನಡೆಸಿ, ರವಿಶಂಕರ್ ಅವರ ವಾದ್ಯವೃಂದದ ನೆನಪು ಮರುಕಳಿಸುವಂತೆ ಮಾಡಿದರು. ಮಧ್ಯಂತರದ ನಂತರ ರವಿಶಂಕರ್ ರಂಗದ ಮೇಲೆ ಊರುಗೋಲು ಹಿಡಿದುಬಂದರು. ಬಿಳಿ ಗಡ್ಡ ಬೆಳೆದು ಯಾವುದೋ ಸಂತರ ಹಾಗೆ ಕಾಣುತ್ತಿದ್ದರು. ಸಿತಾರ್ ಶ್ರುತಿ ಮಾಡುವುದಕ್ಕೆ ಒಬ್ಬರು ಸಹಾಯಕರಿದ್ದರು. ರವಿಶಂಕರ್ ಅವರ ಹಾಸ್ಯಪ್ರಜ್ಞೆ ಮೊದಲ ಹಾಗೇ ಇತ್ತು. (ಗಡ್ಡ ತೋರಿಸಿ `ನನ್ನ ಮೈತೂಕ ಇಲ್ಲಿ ಹೆಚ್ಚಾಗಿದೆ~ ಅಂದರು).

ಅವರ ಕೈಬೆರಳುಗಳು ಮೊದಲಿನಷ್ಟೇ ವೇಗವಾಗಿ ಚಲಿಸಿದವು. ಆದರೆ ತಂತಿ ಒತ್ತುವುದು ಸ್ವಲ್ಪ ಮೆದುವಾಗಿತ್ತು. ಹಾಗಾಗಿ ಸ್ವರಗಳು ಮೊದಲಿನಷ್ಟು ಪ್ರಕಾಶಮಾನವಾಗಿ ಕೇಳುತ್ತಿರಲಿಲ್ಲ. ಆದರೆ ಅವರ ಸಂಗೀತದ ಗರಿಗರಿ ಸ್ವರಪುಂಜಗಳು ಅನೌಷ್ಕಾ ಕೈಯಲ್ಲಿ ನುಡಿಯುತ್ತಿದ್ದವು. ರವಿಶಂಕರ್ ಅವರು ಸ್ವರ ಜೋಡಿಸುವ ರೀತಿ ಸಂಕೀರ್ಣವಾಗಿಯೂ, ಸ್ಟೈಲಿಶ್ ಆಗಿಯೂ ಮೆರೆಯುವುದು ಸಂಗೀತ ಪ್ರೇಮಿಗಳಿಗೆ ಗೊತ್ತಿರುವ ವಿಷಯ. ಈ ಸೊಗಸನ್ನು ಹೇಗೆ ಮಗಳಿಗೆ ಧಾರೆ ಎರೆದಿದ್ದಾರೆ ಎಂದು ಬೆಂಗಳೂರಿನ ಜನ ಕಿವಿಯಾರೆ ಕೇಳುವಂತಾಯಿತು. ಯಮನ್ ಕಲ್ಯಾಣ್ ಆಲಾಪ್ ಮಾಡಿ ನಂತರ ಅವರೇ ಸೃಷ್ಟಿ ಮಾಡಿರುವ ತಿಲಕ್ ಶ್ಯಾಮ್ ರಾಗವನ್ನು ನುಡಿಸಿದರು. ಕೊನೆಗೆ ಖಮಾಚ್ ರಾಗದಿಂದ ಒಂದು ಧುನ್ ಪ್ರಾರಂಭಿಸಿ ಹಲವಾರು ರಾಗಗಳ ರುಚಿಯನ್ನು ಪ್ರೇಕ್ಷಕರಿಗೆ ಉಣಬಡಿಸಿದರು.

ಒಟ್ಟಿನಲ್ಲಿ, ಕಛೇರಿ ಅದ್ದೂರಿಯಾಗಿ ನಡೆಯಿತು. ಪ್ರೇಮಾಲಯ ಎಂಬ ಸಂಸ್ಥೆಯ ಸಹಾಯಾರ್ಥ ನಡೆದ ಕಾರ್ಯಕ್ರಮದಲ್ಲಿ ಮಹಾನ್ ಕಲಾವಿದರೊಬ್ಬರಿಗೆ ಈ ನಗರ ಕೊಡುವ ಗೌರವ ಮತ್ತು ಆದರ ಕಂಡುಬಂತು. ಬೆಂಗಳೂರು ನಾವು ಅಂದುಕೊಂಡಷ್ಟೇನೂ ಕೆಟ್ಟಿಲ್ಲ!

ಮರೆಯಾಗುತ್ತಿರುವ ಅಂಗಡಿಗಳು

ಸದನದಲ್ಲಿ ಚರ್ಚೆ ನಡೆಯುತ್ತಿರುವಾಗ ಕದ್ದು ಪೋಲಿ ಚಿತ್ರ ನೋಡಿದ ಆಪಾದನೆಯ ಮೇಲೆ ಮೂರು ಮಂತ್ರಿಗಳು ಮನೆ ಸೇರಿದ್ದಾರೆ. ಇದು ಟೆಲಿಕಾಂ ಕ್ರಾಂತಿಯಿಂದ ಆದ ಒಂದು ಸಣ್ಣ ಅನಾಹುತ. ಆದರೆ ಏನೂ ತಪ್ಪು ಮಾಡದೆ ಈ ಕ್ರಾಂತಿಯ ದೆಸೆಯಿಂದ ಕೆಲಸ ಕಳೆದುಕೊಂಡವರೂ ಇದ್ದಾರೆ.

ಐದು ವರ್ಷದ ಹಿಂದೆ ಫೋನ್‌ನಲ್ಲಿ ಪೋಲಿ ಚಿತ್ರವಿರಲಿ, ಇ-ಮೇಲ್ ಚೆಕ್ ಮಾಡುವುದೂ ಸಾಧ್ಯವಿರಲಿಲ್ಲ. ಇಂದು ಮೊಬೈಲ್ ಫೋನ್‌ಗಳಿಗೂ ವೇಗವಾದ ತ್ರೀಜಿ ಇಂಟರ್ನೆಟ್ ಬಂದಿದೆ. ಅಂದರೆ ಅದರಲ್ಲಿ ಹಾಡು, ವೀಡಿಯೊ, ಸಿನಿಮಾ ಎಲ್ಲವೂ ಸುಲಭವಾಗಿ ರವಾನಿಸಬಹುದು, ಸ್ವೀಕರಿಸಬಹುದು. ಈ ಹೊಸ ಸಂಭ್ರಮದಲ್ಲಿ ಮರೆಯಾಗುತ್ತಿರುವುದು ಸೈಬರ್ ಕೆಫೆಗಳು.

ಒಂದೆರಡು ಮೂರು ವರ್ಷ ಭರ್ಜರಿ ವ್ಯಾಪಾರ ಮಾಡುತ್ತಿದ್ದ ಸೈಬರ್ ಕೆಫೆಗಳು ಕೆಲವೇ ಕೆಲವು ಉಳಿದುಕೊಂಡಿವೆ. ಕಾಲೇಜ್ ಹುಡುಗ ಹುಡುಗಿಯರು ಅಕ್ಕಪಕ್ಕ ಕೂರುವುದಕ್ಕೆ ಅನುಕೂಲವಾದ ಸ್ಥಳವಾಗಿ ಈ ಸೈಬರ್ ಕೆಫೆಗಳು ಸ್ವಲ್ಪ ದಿನ ಜನಪ್ರಿಯವಾಗಿದ್ದವು. ಆದರೆ ಇಂಥ ಅಂಗಡಿಗಳಿಗೆ ಉಳಿಗಾಲವಿಲ್ಲದಂತೆ ಕಾಣುತ್ತಿದೆ. ಎಷ್ಟೋ ಸೈಬರ್ ಕೆಫೆಗಳು ಇವತ್ತೋ ನಾಳೆಯೋ ಅನ್ನುವ ಹಾಗೆ ಕಾಲ ಹಾಕುತ್ತಿವೆ. ಕೆಲವು ಬೇರೆ ಅವತಾರ ತಾಳಿವೆ. ಮಕ್ಕಳು ಆಡುವ ವಿಡಿಯೊ ಗೇಮ್ ಪಾರ್ಲರ್‌ಗಳಾಗಿ ಮಾರ್ಪಟ್ಟಿವೆ. ಜೆರಾಕ್ಸ್ ಅಂಗಡಿಗಳಾಗಿಯೂ ಬದಲಾಗಿವೆ.

ಮೊನ್ನೆಮೊನ್ನೆ ತಾನೇ ಹುಟ್ಟಿಕೊಂಡ ಎಷ್ಟೋ ಡಿ.ವಿ.ಡಿ ಲೈಬ್ರರಿಗಳು ಆಗಲೇ ಬಾಗಿಲು ಮುಚ್ಚಿವೆ. ಡಿಶ್ ಮತ್ತು ಕೇಬಲ್ ಟೀವಿ ನೋಡುವ ಜನರಿಗೆ ಇಂದು ವಿಪರೀತ ಆಯ್ಕೆಗಳಿವೆ. ಸಿನಿಮಾ ತೋರಿಸುವ ವಾಹಿನಿಗಳೇ ಡಜನ್‌ಗಟ್ಟಲೆ ಇವೆ. ಬ್ರಾಡ್‌ಬ್ಯಾಂಡ್ ಸೌಕರ್ಯ ಇರುವ ಕೆಲವರು ಕಂಪ್ಯೂಟರ್‌ನಲ್ಲೇ ಸಿನಿಮಾ ನೋಡುತ್ತಾರೆ. ಟೀವಿಯಲ್ಲಿ ಬೇಕಾದ ಸಿನಿಮಾ ಕೇಳಿ ಬಿತ್ತರಿಸುವಂತೆ ಮಾಡಿಕೊಳ್ಳಲೂಬಹುದು. ಹೀಗೆಲ್ಲ ಇರುವಾಗ ಡಿ.ವಿ.ಡಿ ಹುಡುಕಿಕೊಂಡು ಹೋಗಿ ಎರವಲು ಪಡೆಯುವವರ ಸಂಖ್ಯೆ ಕಡಿಮೆ. ಬೆಂಗಳೂರಿನ ಖಾಸಗಿ ಗ್ರಂಥಾಲಯಗಳು (ಸರ್ಕ್ಯುಲೇಟಿಂಗ್ ಲೈಬ್ರರಿಗಳು)  ಕ್ರಮೇಣ ಕಣ್ಮರೆಯಾದಂತೆ ಡಿ.ವಿ.ಡಿ ಲೈಬ್ರರಿಗಳೂ ಕಣ್ಮರೆಯಾಗುತ್ತಿವೆ.

ಮೊಬೈಲ್ ಅವಾಂತರ

ಕರ್ನಾಟಕವನ್ನು ಪೊಲೀಸ್ ರಾಜ್ಯ ಎಂದು ಕರೆಯಬಹುದೇನೋ. ಸದನದ ತುಂಬಾ ಪೋಲಿಗಳು ಇದ್ದಾರೆ ನೋಡಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT