ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾನ್ ಚೇತನ ಬಂಗಾರಪ್ಪ: ಸ್ವಾಮೀಜಿ

Last Updated 6 ಜನವರಿ 2012, 7:30 IST
ಅಕ್ಷರ ಗಾತ್ರ

ಶಿವಮೊಗ್ಗ: ಸಮಾನತೆ, ಸ್ವಾಭಿಮಾನಕ್ಕಾಗಿ ಜೀವನವನ್ನೇ ಯಜ್ಞ ಮಾಡಿದ ಮಹಾನ್ ಚೇತನ ಬಂಗಾರಪ್ಪ ಎಂದು ಶ್ರೀರಾಮಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಸ್ಮರಿಸಿದರು.

ಸೊರಬ ತಾಲ್ಲೂಕಿನ ಆನವಟ್ಟಿ ಹೋಬಳಿಯ ಸಮನವಳ್ಳಿಯ `ಬಂಗಾರ ತೋಟ~ದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಎಸ್. ಬಂಗಾರಪ್ಪ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಹಿಂದೆ ರಾಜಾ-ಮಹಾರಾಜರು ವಿವಿಧ ಕಾರಣಗಳಾಗಿ ಯಜ್ಞಗಳನ್ನು ನಡೆಸುತ್ತಿದ್ದರು. ಆದರೆ, ಬಂಗಾರಪ್ಪ ಅವರು ಸಮಾಜದ ಕೆಳವರ್ಗದವರಿಗೆ ಸಮಾನತೆ ಕಲ್ಪಿಸಿ, ಅವರಲ್ಲಿ ಸ್ವಾಭಿಮಾನದ ಪ್ರಜ್ಞೆ ಮೂಡಿಸಲು ತಮ್ಮ ಜೀವನವನ್ನೇ ಯಜ್ಞ ಮಾಡಿಕೊಂಡಿದ್ದರು ಎಂದರು.

ಸತ್ಯಕ್ಕೆ, ನ್ಯಾಯಕ್ಕೆ ಅಪಚಾರ ಬಂದಾಗಲೆಲ್ಲ ಅವರು ಸೆಟೆದು ನಿಲ್ಲುತ್ತಿದ್ದರು ಎಂದು ಹೇಳಿದರು.
ಎಲ್ಲಾ ಜಾತಿ, ಜನಾಂಗಗಳನ್ನು ಒಟ್ಟಿಗೆ ತರುವ ಕೆಲಸಗಳನ್ನು ಅವರು ಮಾಡಿದ್ದರು. ಅವರ ಜನಪ್ರಿಯ ಕಾರ್ಯಕ್ರಮಗಳಿಂದ ಅವರು ಪುಣ್ಯದ ಉತ್ತುಂಗ ಏರಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಭಗೀರಥಪೀಠ ಪುರುಷೋತ್ತಮಾ ನಂದ ಸ್ವಾಮೀಜಿ ಮಾತನಾಡಿ, ನಂಬಿದ ಸಿದ್ಧಾಂತಕ್ಕೆ, ಸ್ವಾಭಿಮಾನಕ್ಕೆ ಧಕ್ಕೆ ಬಂದಾಗಲೆಲ್ಲ ಬಂಗಾರಪ್ಪ ಸಿಡಿದೇಳುತ್ತಿದ್ದರು. ನೊಂದವರಿಗೆ ಸಹಾನುಭೂತಿ ತೋರಿಸುತ್ತಿದ್ದರು. ಪ್ರಕೃತಿ ಆರಾಧಕರು, ಕಲಾವಿದರೂ ಆಗಿದ್ದ ಅವರ ಬದುಕು ವೈವಿಧ್ಯಮಯವಾಗಿತ್ತು ಎಂದರು.

ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಭಾಗವಹಿಸಿ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಸಂದೇಶ ವಾಚಿಸಿದರು. ತದನಂತರ ಮಾತನಾಡಿ, ಬಂಗಾರಪ್ಪ ಅವರ ಹೆಸರನ್ನು ಶಾಶ್ವತಗೊಳಿಸುವ ಕೆಲಸ ಮಾಡಲಾಗುವುದು ಎಂದರು.

ಮಧು ಬಂಗಾರಪ್ಪ ಅವರ ರಾಜಕೀಯ ಭವಿಷ್ಯದ ಬಗ್ಗೆ ವಿಶೇಷ ಸಂಕಲ್ಪ ತೊಟ್ಟಿದ್ದರು. ಅದನ್ನು ನೆರವೇರಿಸಲು ತಾವು ಸಂಪೂರ್ಣ ಸಹಕಾರ ನೀಡುವುದಾಗಿ ಕುಮಾರಸ್ವಾಮಿ ಭರವಸೆ ನೀಡಿದರು.

ಸಂಸದ ಚೆಲುವರಾಯಸ್ವಾಮಿ, ಶಾಸಕ ಜಮೀರ್ ಅಹಮದ್, ಮಾಜಿ ಸಚಿವ ಬಸವರಾಜ ಪಾಟೀಲ್ ಯತ್ನಾಳ್ ಮಾತನಾಡಿ, ಬಂಗಾರಪ್ಪ ವ್ಯಕ್ತಿತ್ವದ ಗುಣಗಾನ ಮಾಡಿ, ಮಧು ಬಂಗಾರಪ್ಪ ಅವರಿಗೆ ರಾಜಕೀಯ ಶಕ್ತಿ ತುಂಬಬೇಕು ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದರು.

ಶಾಸಕ ಬೇಳೂರು ಗೋಪಾಲಕೃಷ್ಣ, ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ. ಗೋವಿಂದ ಮತ್ತಿತರರು ಮಾತನಾಡಿದರು. 

ಡಾ.ಮಹಾಂತ ಸ್ವಾಮೀಜಿ, ಹಿರೇಮಾಗಡಿ ಶಿವಮೂರ್ತಿ ಸ್ವಾಮೀಜಿ, ಶಾಂತಪುರದ ಶಿವಾಚಾರ್ಯ ಸ್ವಾಮೀಜಿ, ಚನ್ನಬಸವ ಸ್ವಾಮೀಜಿ, ಕುಕ್ಕೆ ಸುಬ್ರಹ್ಮಣ್ಯ ಮುರಳೀಧರ ಸ್ವಾಮೀಜಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT