ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾಭಾರತ ಸಾರ್ವಕಾಲಿಕ: ನರಹಳ್ಳಿ

Last Updated 20 ಜುಲೈ 2013, 19:50 IST
ಅಕ್ಷರ ಗಾತ್ರ

ಬೆಂಗಳೂರು: `ಮಹಾಭಾರತ ರಾಜಕೀಯ ಕಾವ್ಯವೂ ಹೌದು, ಧಾರ್ಮಿಕ ಕಾವ್ಯವೂ ಹೌದು. ಮಹಾಭಾರತದಲ್ಲಿ ಎಲ್ಲ ಕಾಲದ ಧರ್ಮ ಹಾಗೂ ರಾಜಕಾರಣಗಳನ್ನು ವಿಶ್ಲೇಷಣೆ ನಡೆಸಿದೆ' ಎಂದು ಹಿರಿಯ ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯ ಅಭಿಪ್ರಾಯಪಟ್ಟರು.

ಹಿರಿಯ ಸಾಹಿತಿ ಡಾ.ಯು.ಆರ್.ಅನಂತಮೂರ್ತಿ ಗೌರವ ಮಾಲಿಕೆಯ ಅಡಿಯಲ್ಲಿ `ಅಭಿನವ ಪ್ರಕಾಶನ'ದ ಆಶ್ರಯದಲ್ಲಿ ನಗರದ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಶನಿವಾರ ನಡೆದ ಹಿರಿಯ ಕವಿ ಎಚ್.ಎಸ್.ವೆಂಕಟೇಶಮೂರ್ತಿ ಅವರ `ಕುಮಾರವ್ಯಾಸ ಕಥಾಂತರ (ಆದಿಕಾಂಡ)' ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

`ಮಹಾಭಾರತದ ವಿಸ್ತಾರ ಬೆರಗು ಹುಟ್ಟಿಸುವಂತಹುದು. ಈ ಕಾವ್ಯ ಮನುಷ್ಯ ಸ್ವಭಾವದ ಎಲ್ಲ ಮಾದರಿಗಳನ್ನು ಪ್ರತಿನಿಧಿಸುತ್ತದೆ. ಇದರಷ್ಟು ವಿಸ್ತಾರ ಹಾಗೂ ಪಾತ್ರ ವೈವಿಧ್ಯ ಜಗತ್ತಿನ ಬೇರೆ ಯಾವ ಕೃತಿಯಲ್ಲೂ ಕಾಣಲಿಕ್ಕೆ ಸಾಧ್ಯ ಇಲ್ಲ' ಎಂದು ಹೇಳಿದರು.

`ಪಂಪ ಹಾಗೂ ಕುಮಾರವ್ಯಾಸ ಅವರನ್ನು ಕನ್ನಡ ಸಾಹಿತ್ಯದ ಶಿಖರಗಳು ಎಂದು ರಾಷ್ಟ್ರಕವಿ ಕುವೆಂಪು ಬಣ್ಣಿಸಿದ್ದರು. ಇವರಿಬ್ಬರು ಕನ್ನಡದಲ್ಲಿ `ಮಾತಿನ ಪರಂಪರೆ' ಹಾಗೂ `ದೇಸಿ ಪರಂಪರೆ' ಎಂಬ ಎರಡು ಮಾದರಿಗಳನ್ನು ಸೂಚಿಸಿದ್ದಾರೆ. ಇವೆರಡು ತೀರಾ ಭಿನ್ನವಾದ ಅಭಿವ್ಯಕ್ತಿ ಮಾದರಿಗಳು. ಆದರೆ, ಇವೆರಡು ಸೊಗಸಾದ ಮಾದರಿಗಳು' ಎಂದು ನರಹಳ್ಳಿ ಬಣ್ಣಿಸಿದರು.

`ಪಂಪನಿಗೆ ಮಹಾಭಾರತ ರಾಜಕೀಯ ಕಾವ್ಯ. ಇಲ್ಲಿ ಅರ್ಜುನನೇ ಕಥಾನಾಯಕ. ಕುಮಾರವ್ಯಾಸನಿಗೆ ಮಹಾಭಾರತ ಧಾರ್ಮಿಕ ಕಾವ್ಯ. ಅವನು ಇದನ್ನು ಐದನೇ ವೇದ ಎಂದು ಕರೆದನು. ಇಲ್ಲಿ ಕೃಷ್ಣ ಕಥಾನಾಯಕ. ಪಂಪನ ಕೃಷ್ಣ ಚತುರ ರಾಜಕಾರಣಿ. ಪಂಪಭಾರತದಲ್ಲಿ ಕೃಷ್ಣ ದೇವರು ಅಲ್ಲ. ಆದರೆ, ಕುಮಾರವ್ಯಾಸನ ಕೃಷ್ಣ ಸಂಧಿಗೆ ಬರುವ ಕ್ರಮವೇ ಬೇರೆ. ಸಂಧಿಯ ನೆಪದಲ್ಲಿ ಕಾಳಗವನ್ನು ತರುತ್ತೇನೆ ಎಂದು ದ್ರೌಪದಿಗೆ ಅಭಯ ನೀಡಿಯೇ ಕೃಷ್ಣ ಸಂಧಾನಕ್ಕೆ ತೆರಳುತ್ತಾನೆ' ಎಂದರು.

`ವ್ಯಾಸ, ಪಂಪ, ಕುಮಾರವ್ಯಾಸ ಅವರನ್ನು ಹಿನ್ನೆಲೆಯಲ್ಲಿ ಇಟ್ಟುಕೊಂಡು ವೆಂಕಟೇಶಮೂರ್ತಿ ಅವರು ಮಹಾಭಾರತವನ್ನು ಪ್ರವೇಶ ಮಾಡುತ್ತಾರೆ. ಈ ಕಾವ್ಯದ ಮೂಲಕ ನಮ್ಮ ಕಾಲದ ಶ್ರೇಷ್ಠ ಸೃಜನಶೀಲ ಮನಸ್ಸು ಮತ್ತೊಂದು ಸೃಜನಶೀಲ ಮನಸ್ಸಿನ ಜತೆಗೆ ಸಂವಾದ ನಡೆಸಿದೆ' ಎಂದು ಅವರು ವಿಶ್ಲೇಷಿಸಿದರು.  

ಹಿರಿಯ ಸಾಹಿತಿ ಚಂದ್ರಶೇಖರ ಕಂಬಾರ ಕೃತಿ ಬಿಡುಗಡೆ ಮಾಡಿ, `ಮಹಾಭಾರತದಷ್ಟು ನಮ್ಮ ದೇಶದ ಜನರನ್ನು ಗಾಢವಾಗಿ ಕಾಡಿದ ಕಾವ್ಯ ಇನ್ನೊಂದು ಇಲ್ಲ. ವಿಶ್ವದಲ್ಲೇ ಇಂತಹ ಕೃತಿ ಮತ್ತೊಂದು ಇಲ್ಲ. ಆರಂಭದಲ್ಲಿ ಮಹಾಭಾರತದಲ್ಲಿ 6,000 ಶ್ಲೋಕಗಳು ಇದ್ದವು.

ಈಗ 1.49 ಲಕ್ಷ ಶ್ಲೋಕಗಳು ಇವೆ. ಆರಂಭಿಕ ಹಂತದಲ್ಲಿ ಕೌರವರು ಗೆಲುವು ಸಾಧಿಸುತ್ತಾರೆ. ದೇಶದ ಜನರು ವಿವೇಚನೆಯಲ್ಲಿ ತೊಡಗಿ ಈ ಕಾವ್ಯವನ್ನು ತಿದ್ದುತ್ತಾ ಬಂದರು. ಇಡೀ ದೇಶವೇ ಈ ಕಾವ್ಯ ಸೃಷ್ಟಿ ಮಾಡುವ ಪ್ರಕ್ರಿಯೆಯಲ್ಲಿ ತೊಡಗಿತು. ಕೊನೆಗೆ ಪಾಂಡವರನ್ನು ಗೆಲ್ಲಿಸಿ ಕೌರವರನ್ನು ಸೋಲಿಸಲಾಯಿತು' ಎಂದರು.

ಕಥೆಗಾರ ವಿಕ್ರಂ ಹತ್ವಾರ್, `ಯಾವ ಕವಿಯೂ ಮಹತ್ವಾಕಾಂಕ್ಷೆಯಿಂದ ಕಾವ್ಯ ರಚನೆ ಮಾಡುವುದಿಲ್ಲ. ಕವಿಗೆ ಉತ್ಕಟ ಅನುಭವ ಹಂಚಿಕೊಳ್ಳುವ ಅನಿವಾರ್ಯತೆ ಇರುತ್ತದೆ. ಈ ಪ್ರಕ್ರಿಯೆಯೇ ಕಾವ್ಯವಾಗಿ ಹೊರಹೊಮ್ಮುತ್ತದೆ' ಎಂದರು.

ಗೌರವ ಮಾಲಿಕೆಯ ಸಂಪಾದಕ ಎನ್.ಎ.ಎಂ. ಇಸ್ಮಾಯಿಲ್ ಪ್ರಾಸ್ತಾವಿಕವಾಗಿ ಮಾತನಾಡಿ, `ಇದು ಗೌರವ ಮಾಲಿಕೆಯ ನಾಲ್ಕನೇ ಕೃತಿ. 12 ಕೃತಿಗಳನ್ನು ಪ್ರಕಟಿಸಲು ಉದ್ದೇಶಿಸಲಾಗಿದೆ' ಎಂದರು.

`ಭಾಷೆಯನ್ನು ಮಾತಾಗಿಸುವವ ಕವಿ'
`ಪ್ರತಿ ಕವಿ ಭಾಷೆಯನ್ನು ಮಾತಾಗಿ ಪರಿವರ್ತಿಸುತ್ತಾನೆ' ಎಂದು ಎಚ್.ಎಸ್. ವೆಂಕಟೇಶಮೂರ್ತಿ ಪ್ರತಿಪಾದಿಸಿದರು.

ಸಮಾರಂಭದಲ್ಲಿ ಮಾತನಾಡಿದ ಅವರು, `ಭಾಷೆ ಬೇರೆ ಹಾಗೂ ಮಾತು ಬೇರೆ. ಭಾಷೆ ಸಮಾಜದ್ದು. ಮಾತು ಖಾಸಗಿಯಾದುದು. ಆದರೆ, ನಾವು ಅನೇಕ ಬಾರಿ ಇವೆರಡನ್ನು ಒಂದೇ ಎಂದು ತಿಳಿದುಕೊಳ್ಳುತ್ತಿದ್ದೇವೆ. ಭಾಷೆಯನ್ನು ಯಾವ ಕವಿ ಮಾತಾಗಿ ಪರಿವರ್ತಿಸುತ್ತಾನೋ ಆ ಕವಿ ನನಗೆ ಮುಖ್ಯ ಅನಿಸುತ್ತಾನೆ' ಎಂದರು.

`ಭಾಷೆಯನ್ನು ಮಾತಾಗಿ ಪರಿವರ್ತಿಸುವ ಅದ್ಭುತ ಹೋರಾಟವೇ ಕುಮಾರವ್ಯಾಸ ಕಾವ್ಯ. ಕಾವ್ಯ ಎಂದರೆ ವಚನ ರಚನೆ ಎಂದು ಮಾನ್ಯ ಮಾಡಿದ ಮೊದಲ ಕವಿ ಕುಮಾರವ್ಯಾಸ. ಅವರ ಕಾವ್ಯದ ಪ್ರತಿ ಓದು ಹೊಸ ಓದು ಅನಿಸುತ್ತದೆ. ನಾನು ಈಗಾಗಲೇ ಕುಮಾರವ್ಯಾಸ ಕಾವ್ಯವನ್ನು ಅರ್ಥ ಮಾಡಿಕೊಂಡಿದ್ದೇನೆ ಎಂದು ಅಂದುಕೊಂಡಿಲ್ಲ. ಈ ಕಾವ್ಯವನ್ನು ಪ್ರತಿ ಬಾರಿ ಓದಿದಾಗಲೂ ದಟ್ಟ ಕಾಡಿಗೆ ಪ್ರವೇಶ ಮಾಡಿದ ಹಾಗೆ ಅನಿಸುತ್ತದೆ' ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT