ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರದ ಶಿರ್ಕೆಯಿಂದ ಬೆಳಗಾವಿಗೆ ಸುವರ್ಣ ಕಿರೀಟ

Last Updated 6 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಗಡಿ ಕುರಿತು ಮಹಾರಾಷ್ಟ್ರ ಏಕೀಕರಣ ಸಮಿತಿ ಕ್ಯಾತೆ ಮುಂದುವರಿಸಿದ್ದರೂ ರಾಜ್ಯದ ಎರಡನೇ ರಾಜಧಾನಿ ಎನಿಸಿಕೊಂಡಿರುವ ಬೆಳಗಾವಿಗೆ `ಸುವರ್ಣ ವಿಧಾನಸೌಧ~ ಭವ್ಯ ಕಟ್ಟಡದ ಕಿರೀಟ ತೊಡಿಸಿದ್ದು ಮಹಾರಾಷ್ಟ್ರ ಮೂಲದ ಸಂಸ್ಥೆ!

`ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ~ ಎಂಬುದನ್ನು ಸಾರಿ ಹೇಳುವ ಸಲುವಾಗಿ ರಾಜ್ಯ ಸರ್ಕಾರವು, ಕರ್ನಾಟಕ ಏಕೀಕರಣದ 50 ವರ್ಷಗಳ ನೆನಪಿಗಾಗಿ ಬೆಳಗಾವಿಯಲ್ಲಿ `ಸುವರ್ಣ ವಿಧಾನಸೌಧ~ ನಿರ್ಮಿಸಿದೆ. ಜೊತೆಗೆ ಬೆಳಗಾವಿ ರಾಜ್ಯದ ಎರಡನೇ ರಾಜಧಾನಿ ಎಂದು ಕರೆಯಿಸಿಕೊಳ್ಳುವ ಗೌರವವನ್ನೂ ತಂದುಕೊಟ್ಟಿದೆ.

ಈ ಗೌರವ ಇಮ್ಮಡಿಗೊಳಿಸಲು ಮಹಾರಾಷ್ಟ್ರದ ಪುಣೆಯ ಬಿ.ಜಿ. ಶಿರ್ಕೆ ಕನ್‌ಸ್ಟ್ರಕ್ಷನ್ಸ್ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ಎಂಬ ಸಂಸ್ಥೆ `ಸುವರ್ಣ ವಿಧಾನಸೌಧ~ವನ್ನು ಎಲ್ಲರ ಕಣ್ಣು ಕುಕ್ಕುವಂತೆ ನಿರ್ಮಿಸಿದೆ. ಇಡೀ ಕಟ್ಟಡದಲ್ಲಿ ಯಾವುದೇ ಕೊರತೆ ಕಾಣದಂತೆ ಜಾಗರೂಕತೆಯಿಂದ ನಿಗದಿತ ಅವಧಿಯಲ್ಲಿಯೇ ಪೂರ್ಣಗೊಳಿಸಿದೆ. 2010ರ ಜುಲೈ ತಿಂಗಳಲ್ಲಿ ಕಟ್ಟಡ ಕಾಮಗಾರಿ ಆರಂಭಿಸಿ ಮೂರು ವರ್ಷಗಳ ಅವಧಿಯಲ್ಲಿ ಮುಗಿಸಿದೆ.

`ಬೆಂಗಳೂರಿನಲ್ಲಿ ವಿಕಾಸಸೌಧ ಕಟ್ಟಡ ನಿರ್ಮಿಸಿರುವ ಅನುಭವ ಹೊಂದಿರುವ ಈ ಸಂಸ್ಥೆಗೆ `ಸುವರ್ಣ ವಿಧಾನಸೌಧ~ ಕಟ್ಟಡ ನಿರ್ಮಾಣದ ಸಂದರ್ಭದಲ್ಲಿ ಯಾವುದೇ ತೊಂದರೆ ಆಗಲಿಲ್ಲ. ಗುತ್ತಿಗೆ ಪಡೆದಾಗ ವಿಧಿಸಿರುವ ಯಾವುದೇ ಷರತ್ತುಗಳನ್ನು ಉಲ್ಲಂಘಿಸಿಲ್ಲ~ ಎಂದು ಉಸ್ತುವಾರಿ ವಹಿಸಿರುವ ಲೋಕೋಪಯೋಗಿ ಇಲಾಖೆ ಅಧೀಕ್ಷಕ ಎಂಜಿನಿಯರ್ ವಿನಾಯಕ ಸುಗೂರ `ಪ್ರಜಾವಾಣಿ~ಗೆ ತಿಳಿಸಿದರು.

`ನಮಗೆ ಕನ್ನಡ- ಮರಾಠಿ ಭೇದಭಾವವಿಲ್ಲ, ನಾವೆಲ್ಲರೂ ಭಾರತೀಯರು ಎಂಬುದು ಮುಖ್ಯ. ನಮ್ಮ ಉದ್ಯೋಗ ಕಟ್ಟಡ ನಿರ್ಮಿಸುವುದು. ಆದ್ದರಿಂದ ಯಾವುದೇ ರಾಜ್ಯವಿರಲಿ ನಮಗೆ ತೊಂದರೆಯಿಲ್ಲ.

ನಮ್ಮ ಸಂಸ್ಥೆ ಕಳೆದ 27 ವರ್ಷಗಳಿಂದ ಈ ಉದ್ಯೋಗದಲ್ಲಿದ್ದು, ಈ ಪೈಕಿ 22 ವರ್ಷಗಳಿಂದ ಕರ್ನಾಟಕದಲ್ಲಿ ಕೆಲಸ ಮಾಡುತ್ತಿದ್ದೇವೆ. ಕರ್ನಾಟಕದಿಂದ ಎಲ್ಲ ರೀತಿಯ ಸಹಕಾರ ಸಿಕ್ಕಿದೆ. ಇಲ್ಲಿನ ಜನರು ಹಾಗೂ ಅಧಿಕಾರಿಗಳು ಸಹೃದಯಿಗಳು~ ಎಂದು ಶಿರ್ಕೆ ಸಂಸ್ಥೆಯ ಹಿರಿಯ ಉಪ ಮಹಾಪ್ರಬಂಧಕ ಬಿ.ಜಿ.ಸಾಂಗ್ಲೆ ~ಪ್ರಜಾವಾಣಿ~ಗೆ ಹೇಳಿದರು.

`ವಿಧಾನಸೌಧ ಮಾದರಿಯಲ್ಲಿಯೇ ಈ ಕಟ್ಟಡದ ನೀಲನಕ್ಷೆಯನ್ನು ಸರ್ಕಾರ ತಯಾರಿಸಿದೆ. ಕಟ್ಟಡದ ಅಂದ ಹೆಚ್ಚಿಸಲು ಬಳಸಿರುವ ಅಲಂಕಾರಿಕ ಕಲ್ಲುಗಳನ್ನು ತಮಿಳುನಾಡಿನಿಂದ ತರಲಾಗಿದೆ. ದೊಡ್ಡ ಗಾತ್ರದ 20 ಮೀಟರ್ ಅಗಲದ ಪಿಲ್ಲರ್ ಹಾಕಲಾಗಿದೆ. ಒಳಾಂಗಣದ ವಿನ್ಯಾಸವನ್ನು ವಿಧಾನಸೌಧದಂತೆ ಮಾಡಲಾಗಿದ್ದು, ತಜ್ಞ ಎಂಜಿನಿಯರುಗಳ ಸಲಹೆ ಪಡೆಯಲಾಗಿದೆ. ಆಧುನಿಕ ತಂತ್ರಜ್ಞಾನ ಹಾಗೂ ಯಂತ್ರಗಳ ಸಹಾಯ ಪಡೆಯಲಾಗಿದೆ~ ಎಂದು ತಿಳಿಸಿದರು.

`ತಮಿಳುನಾಡು, ಪಶ್ಚಿಮ ಬಂಗಾಳದ ಕಾರ್ಮಿಕರು ಸೇರಿದಂತೆ 1400 ಮಂದಿ ಕೆಲಸಗಾರರು ಹಾಗೂ 36 ಮಂದಿ ಎಂಜಿನಿಯರ್ ಹಗಲಿರುಳು ದುಡಿದಿದ್ದರಿಂದ ಈ ಭವ್ಯ ಕಟ್ಟಡ ಬೇಗನೇ ಮುಗಿದಿದೆ. ಕಟ್ಟಡಕ್ಕೆ ಬೇಕಾದ ದೊಡ್ಡ ಬಿಳಿ ಬಣ್ಣದ ಕಲ್ಲುಗಳನ್ನು ಬೆಂಗಳೂರು ಸಮೀಪದ ಹೆಸರಘಟ್ಟದಿಂದ ತರಲಾಗಿದೆ~ ಎಂದು ಸಾಂಗ್ಲೆ ಹೇಳಿದರು.

ಇಂಥ ಭವ್ಯ ಕಟ್ಟಡದ ಲೋಕಾರ್ಪಣೆ ಅ. 11 ನಿಗದಿಯಾಗಿದ್ದರೂ, ಎಂಇಎಸ್‌ದವರ ತಕರಾರು ಮುಂದುವರಿದಿದೆ. `ಸುವರ್ಣ ವಿಧಾನಸೌಧ~ ಕಟ್ಟಡ ಉದ್ಘಾಟನೆಗೆ ರಾಷ್ಟ್ರಪತಿಗಳು ಆಗಮಿಸಬಾರದು ಎಂದು ಒತ್ತಾಯ ಮಾಡುತ್ತಿರುವ ಎಂಇಎಸ್ ಕಾರ್ಯಕರ್ತರು ಸೋಮವಾರ (ಅ. 8) ಪ್ರತಿಭಟನೆ ನಡೆಸಲು ನಿರ್ಧರಿಸ್ದ್ದಿದಾರೆ. ರಾಷ್ಟ್ರಪತಿಗಳ ಭೇಟಿ ತಡೆಯಲು ಒತ್ತಡ ಹೇರುವುದಕ್ಕಾಗಿ ಮಹಾರಾಷ್ಟ್ರದ ಎಲ್ಲ ಸಂಸದರ ಮನೆಯ ಎದುರು ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT