ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾಶಿವರಾತ್ರಿ: ಶಿವನಿಗೆ ವಿಶೇಷ ಪೂಜೆ

Last Updated 21 ಫೆಬ್ರುವರಿ 2012, 5:50 IST
ಅಕ್ಷರ ಗಾತ್ರ

ಬಳ್ಳಾರಿ: ನಗರದ ವಿವಿಧೆಡೆ ಇರುವ ಶಿವನ ದೇವಸ್ಥಾನಗಳಲ್ಲಿ ಸೋಮವಾರ ಮಹಾಶಿವರಾತ್ರಿ ಅಂಗವಾಗಿ ವಿಶೇಷ ಪೂಜೆ, ಅಭಿಷೇಕ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳನ್ನು ಶ್ರದ್ಧಾಭಕ್ತಿಯಿಂದ ಕೈಗೊಳ್ಳಲಾಯಿತು.
ಬೆಳಿಗ್ಗೆಯಿಂದಲೇ ನಗರದ ಕೋಟೆ ಮಲ್ಲೇಶ್ವರಸ್ವಾಮಿ ದೇವಸ್ಥಾನ ಹಾಗೂ ಇತರೆಡೆ ಇರುವ ಶಿವನ ದೇವಸ್ಥಾನಗಳಿಗೆ ತೆರಳಿದ ಭಕ್ತರು, ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದರು.

ಗಾಂಧಿನಗರ, ಪಾರ್ವತಿನಗರ, ಪಟೇಲ್‌ನಗರ, ಸತ್ಯನಾರಾಯಣ ಪೇಟೆ, ನೆಹರೂ ನಗರ, ಬಸವೇಶ್ವರ ನಗರ ಸೇರಿದಂತೆ ಇತರ ಭಾಗಗಳ ಭಕ್ತರು ನಗರದ ಸತ್ಯನಾರಾಯಣ ಪೇಟೆ ಬಳಿಯ ಶಿವಾಲಯಕ್ಕೆ ಬೆಳಿಗ್ಗೆಯಿಂದಲೇ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ, ದರ್ಶನ ಪಡೆದರು.

ಗ್ರಹಾಂ ರಸ್ತೆಯಲ್ಲಿರುವ ಮಲ್ಲಿಕಾರ್ಜುನ ದೇವಸ್ಥಾನ, ದೊಡ್ಡ ಮಾರುಕಟ್ಟೆ ಪ್ರದೇಶದಲ್ಲಿನ ನೀಲಕಂಠೇಶ್ವರ ದೇವಸ್ಥಾನ, ಬಸವೇಶ್ವರ ನಗರದಲ್ಲಿನ ಬಸವ ಮಂಟಪದ ಬಳಿಯ ಸಂಗಮೇಶ್ವರ ದೇವಸ್ಥಾನ, ಬಸವ ಭವನದ ಬಳಿಯ ಈಶ್ವರ, ವೀರಭದ್ರೇಶ್ವರ ದೇವಸ್ಥಾನ, ಬ್ರಾಹ್ಮಣ ಬೀದಿಯಲ್ಲಿರುವ ನಗರೇಶ್ವರ ದೇವಸ್ಥಾನ, ಅಲ್ಲಿಪುರದ ಮಹದೇವ ತಾತನ ಮಠದಲ್ಲಿರುವ ಶಿವನ ದೇವಾಲಯ ಹಾಗೂ ತೇರುಬೀದಿಯ ಮೇದಾರ ಓಣಿಯಲ್ಲಿರುವ ಶಿವನ ದೇವಸ್ಥಾನಗಳಲ್ಲಿ ದಿನವಿಡೀ ಪ್ರಾರ್ಥನೆ, ಭಜನೆ, ವಿಶೇಷ ಪೂಜೆ, ನಡೆದವು.

ಮಹಾಶಿವರಾತ್ರಿಯ ಹಿನ್ನೆಲೆಯಲ್ಲಿ ಉಪವಾಸ ಆಚರಣೆಯಲ್ಲಿ ತೊಡಗಿದ ಭಕ್ತರು ದೇವಾಲಯಗಳಲ್ಲಿ ಅಹೋರಾತ್ರಿ ನಡೆದ ಭಜನೆಯಲ್ಲೂ ಪಾಲ್ಗೊಂಡು ಶಿವ ಧ್ಯಾನ ಮಾಡಿದರು.

ಭಕ್ತರ ಮಹಾಪೂರ: ನಗರದ ಕೋಟೆ ಪ್ರದೇಶದಲ್ಲಿರುವ ಮಲ್ಲೇಶ್ವರ ಸ್ವಾಮಿ ದೇವಸ್ಥಾನ, ಸತ್ಯನಾರಾಯಣ ಪೇಟೆಯ ರೈಲ್ವೆಕೆಳ ಸೇತುವೆ ಬಳಿಯ ಶಿವನ ದೇವಾಲಯಗಳಲ್ಲಿ ಬೆಳಿಗ್ಗೆ ಹಾಗೂ ಸಂಜೆಯ ವೇಳೆ ಭಕ್ತರ ಮಹಾಪೂರವೇ ಹರಿದುಬಂತು. ಸರದಿ ಸಾಲಿನಲ್ಲಿ ಗಂಟೆಗಟ್ಟಲೇ ನಿಂತು ಶಿವನ ದರ್ಶನ ಪಡೆದ ಭಕ್ತರಿಗೆ ವಿಶೇಷವಾಗಿ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿತ್ತು.

ನಗರದ ವಿಷ್ಣುವರ್ಧನ್ ಉದ್ಯಾನವನ ಸೇರಿದಂತೆ ಹಲವು ಕಡೆಗಳಲ್ಲಿ ಶಿವರಾತ್ರಿಯ ಜಾಗರಣೆ ಅಂಗವಾಗಿ ಸಂಗೀತ ಕಾರ್ಯಕ್ರಮವನ್ನು ರಾತ್ರಿಯಿಡೀ ಹಮ್ಮಿಕೊಳ್ಳಲಾಗಿತ್ತು.

ಕ್ಷೀರಾಭಿಷೇಕ: ನಗರದ ಡಾ. ರಾಜಕುಮಾರ್ ರಸ್ತೆಯಲ್ಲಿರುವ ನಗರೂರು ನಾರಾಯಣರಾವ್ ಉದ್ಯಾನದಲ್ಲಿರುವ ಶಿವನ ಬೃಹತ್ ಮೂರ್ತಿಗೆ ಕೆಎಂಎಫ್ ಅಧ್ಯಕ್ಷ, ಶಾಸಕ ಜಿ. ಸೋಮಶೇಖರರೆಡ್ಡಿ ಕ್ಷೀರಾಭಿಷೇಕ ನೆರವೇರಿಸಿದರು. ಸಂಜೆ ನಡೆದ ಈ ಸಮಾರಂಭದಲ್ಲಿ ನೂರಾರು ಭಕ್ತರು ಪಾಲ್ಗೊಂಡು ಶಿವನಾಮ ಸ್ಮರಣೆ ಮಾಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT