ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾಸಮರಕ್ಕೆ ಸಜ್ಜಾಗೋಣ: ಸೋನಿಯಾ

Last Updated 18 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ‘ಇತ್ತೀಚೆಗೆ ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆಗಳಲ್ಲಿ ಪಕ್ಷವು ಹೀನಾಯ ಸೋಲು ಕಂಡಿರುವುದಕ್ಕೆ ಶಿಸ್ತು ಹಾಗೂ ಒಗ್ಗಟಿನ ಕೊರತೆ ಕೂಡ ಕಾರಣ’ ಎಂದಿರುವ  ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ, ಮುಂಬರುವ ಲೋಕಸಭೆ ಚುನಾವಣೆಗೆ ಸನ್ನದ್ಧರಾಗುವಂತೆ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

‘ಸೋಲಿಗೆ ಹಲವಾರು ಕಾರಣಗಳು ಇವೆ. ನಮ್ಮ ನೀತಿ, ಕಾರ್ಯಕ್ರಮ ಹಾಗೂ ಸಾಧನೆಗಳ ಬಗ್ಗೆ ಜನರಿಗೆ ಸರಿಯಾಗಿ ಮನವರಿಕೆ ಮಾಡಿಕೊಡುವಲ್ಲಿ ಸೋತಿದ್ದೇವೆ. ಅವರ ಆಶೋತ್ತರಗಳನ್ನು ಈಡೇರಿಸುವಲ್ಲಿಯೂ ವಿಫಲರಾಗಿದ್ದೇವೆ’ ಎಂದು ಸೋನಿಯಾ ಆತ್ಮಾವಲೋಕನ ಮಾಡಿಕೊಂಡಿದ್ದಾರೆ.

ಬುಧವಾರ ಇಲ್ಲಿ ನಡೆದ ಕಾಂಗ್ರೆಸ್‌ ಸಂಸದೀಯ ಪಕ್ಷದ (ಸಿಪಿಪಿ) ಸಭೆಯಲ್ಲಿ ಮಾತನಾಡಿ, ‘ಮಧ್ಯಪ್ರದೇಶ, ಛತ್ತೀಸಗಡ, ದೆಹಲಿ ಹಾಗೂ ರಾಜಸ್ತಾನದಲ್ಲಿ ನಾವು  ಸೋಲು ಕಂಡಿರುವುದಕ್ಕೆ ಪಕ್ಷದಲ್ಲಿ ಶಿಸ್ತು ಹಾಗೂ ಒಗ್ಗಟ್ಟಿನ ಕೊರತೆ ಕೂಡ ಕಾರಣ’ ಎಂದರು.

‘ಸೋಲಿಗೆ ನಾವು ಎದೆಗುಂದಬಾರದು. 2014ರ ಮೇ ತಿಂಗಳಿನಲ್ಲಿ ನಡೆಯಲಿರುವ ಮಹಾಸಮರಕ್ಕೆ ಸಿದ್ಧರಾಗೋಣ.  ಸೋಲು, ಗೆಲುವು ಮುಖ್ಯವಲ್ಲ. ಶಕ್ತಿ ಮೀರಿ ಜನಸೇವೆ ಮಾಡುವುದು ನಮ್ಮ ಗುರುತರ ಹೊಣೆಗಾರಿಕೆ ಎನ್ನುವುದನ್ನು ಮರೆಯಬಾರದು’ ಎಂದು ಸೋನಿಯಾ  , ಪಕ್ಷದ ಕಾರ್ಯಕರ್ತರಿಗೆ ಬುದ್ಧಿ ಮಾತು ಹೇಳಿದರು.

‘ಪ್ರಜಾಪ್ರಭುತ್ವ, ಜಾತ್ಯತೀತವಾದ, ಉದಾರವಾದಕ್ಕೆ ನಾವು ನಿಷ್ಠರಾಗಿದ್ದೇವೆ. ಇವು ನಮ್ಮ ಪಕ್ಷದ ಸ್ಥಿರವಾದ ಮೌಲ್ಯಗಳು. ನಮ್ಮ ಸಿದ್ಧಾಂತಗಳ ಬಗ್ಗೆ ಮಾತನಾಡಲು ನಾವು ಅಂಜಬೇಕಾಗಿಲ್ಲ. ಅದೇ ರೀತಿ ನಮ್ಮ ಎದುರಾಳಿಗಳ ಸಿದ್ಧಾಂತದ ಬಗ್ಗೆ ಕೂಡ ಯಾವುದೇ ಹಿಂಜರಿಕೆ ಇಲ್ಲದೆ ಮಾತನಾಡಬಲ್ಲೆವು’ ಎಂದು ಪರೋಕ್ಷವಾಗಿ ಬಿಜೆಪಿಗೆ ಎದಿರೇಟು ನೀಡಿದರು.

‘ಲೋಕಪಾಲ, ಆಹಾರ ಭದ್ರತೆ ಹಾಗೂ  ಭೂಸ್ವಾಧೀನ ಮಸೂದೆಗಳಿಗೆ ಸಂಸತ್‌ ಅನುಮೋದನೆ ಪಡೆದುಕೊಂಡಿರುವುದು ನಮಗೆ ಹೆಮ್ಮೆಯ ವಿಷಯ’ ಎಂದ ಸೋನಿಯಾ,  ಕೋಮು ಹಿಂಸೆ ತಡೆ ಮಸೂದೆಗೆ ಕೇಂದ್ರ ಸಂಪುಟ ಒಪ್ಪಿಗೆ ನೀಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.

ಲೋಕಸಭೆ ಹಾಗೂ ವಿಧಾನಸಭೆಗಳಲ್ಲಿ  ಶೇ33ರಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡುವ ಮಸೂದೆ ಗೆ ಅನುಮೋದನೆ ಸಿಗದಿರುವ ಬಗ್ಗೆ ಅವರು ಅಸಮಾಧಾನ ಹೊರಹಾಕಿದರು.

ಬಿಜೆಪಿಗೆ ಪ್ರಧಾನಿ ಸವಾಲು: ನವದೆಹಲಿ (ಪಿಟಿಐ): ‘ಯಾವ ಉದ್ದೇಶಕ್ಕಾಗಿ ಸ್ಥಿರವಾದ ನಾಯಕತ್ವ ಬೇಕು ಎನ್ನುವುದನ್ನು ಸ್ಪಷ್ಟಪಡಿಸಬೇಕು. ಅದು ಬಿಟ್ಟು ಸುಖಾ ಸುಮ್ಮನೆ ಸ್ಥಿರವಾದ ನಾಯಕತ್ವದ ಬಗ್ಗೆ ಮಾತನಾಡಿದರೆ ಪ್ರಯೋಜನವಿಲ್ಲ’
ನರೇಂದ್ರ ಮೋದಿ ಪ್ರಭಾವಿ ನಾಯಕ ಎಂದು ಬೀಗುತ್ತಿರುವ ಬಿಜೆಪಿಯ ಅಹಂಕಾರವನ್ನು ಇಳಿಸಲು ಪ್ರಧಾನಿ ಮನಮೋಹನ್‌ ಸಿಂಗ್‌ ಆಡಿದ ಮಾತಿದು.

ಕಾಂಗ್ರೆಸ್‌ ಸಂಸದೀಯ ಪಕ್ಷದ ಸಭೆಯಲ್ಲಿ ಮಾತನಾ­ಡಿದ ಅವರು, ‘ಈಡೇರಿಸಲು ಸಾಧ್ಯವಾಗದಂಥ ಭರವಸೆಗಳನ್ನು ನೀಡಬಾರದು’ ಎಂದು  ಆಮ್‌ ಆದ್ಮಿ ಪಕ್ಷವನ್ನು ಉದ್ದೇಶಿಸಿ ನುಡಿದರು. ಇತ್ತೀಚಿನ ವಿಧಾನಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್‌ ಪಕ್ಷ ಹೀನಾಯವಾಗಿ ಸೋಲು ಕಂಡ ಬಳಿಕ ಇದೇ ಮೊದಲ ಬಾರಿ ಪ್ರತಿಕ್ರಿಯೆ ನೀಡಿದ ಸಿಂಗ್‌, ‘ಸೋಲಿಗೆ ಅಂಜಬಾರದು. ಮುಂದಿನ ಮಹಾಸಮರಕ್ಕೆ ಸಜ್ಜಾಗೋಣ’ ಎಂದು ಕಾರ್ಯಕರ್ತ­ರಲ್ಲಿ ಭರವಸೆ ತುಂಬುವ ಪ್ರಯತ್ನ ಮಾಡಿದರು.

‘ವಿಧಾನಸಭೆ ಚುನಾವಣೆಗಳ ಫಲಿತಾಂಶ ಮುಂದಿನ ಮಹಾಸಮರಕ್ಕೆ ದಿಕ್ಸೂಚಿಯಾಗಬೇಕಿಲ್ಲ. ಈ ಹಿಂದೆ ಕೂಡ ಇಂಥ ಸನ್ನಿವೇಶ ಎದುರಾಗಿತ್ತು.  2003ರ ವಿಧಾನಸಭೆ ಚುನಾವಣೆಗಳಲ್ಲಿ ಎನ್‌ಡಿಎ ಮೇಲುಗೈ ಸಾಧಿಸಿತ್ತು. ಆದರೆ 2004ರಲ್ಲಿ ಕೇಂದ್ರದಲ್ಲಿ ಯುಪಿಎ ಅಧಿಕಾರಕ್ಕೆ ಬಂದಿತ್ತು’ ಎಂದು ನೆನಪಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT