ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಅಭ್ಯರ್ಥಿಗಳು ಕೇವಲ 6!

Last Updated 24 ಏಪ್ರಿಲ್ 2013, 6:22 IST
ಅಕ್ಷರ ಗಾತ್ರ

ಮಂಡ್ಯ: ಜಿಲ್ಲೆಯಲ್ಲಿ ಮಹಿಳೆಯರ ಸಂಖ್ಯೆ ಶೇ 49.71ರಷ್ಟಿದ್ದರೂ (2011ರ ಜನಗಣತಿ ಪ್ರಕಾರ) ಚುನಾವಣಾ ಕಣದಲ್ಲಿ ಆರು ಮಂದಿ ಮಹಿಳೆಯರಷ್ಟೇ ಇದ್ದಾರೆ !

ಭಾರತೀಯ ಜನತಾ ಪಕ್ಷ ಹಾಗೂ ಬಹುಜನ ಸಮಾಜ ಪಕ್ಷ ತಲಾ ಒಬ್ಬ ಮಹಿಳೆಗೆ ಟಿಕೆಟ್ ನೀಡಿದ್ದರೆ, ಉಳಿದ ಪಕ್ಷಗಳು ಮಹಿಳೆಯರನ್ನು ಸಂಪೂರ್ಣವಾಗಿ ಕಡೆಗಣಿಸಿವೆ. ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 91 ಅಭ್ಯರ್ಥಿಗಳು ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಇವರಲ್ಲಿ ಆರು ಮಂದಿ ಮಾತ್ರ ಮಹಿಳೆರಿದ್ದಾರೆ.

ಮದ್ದೂರು ಕ್ಷೇತ್ರದಿಂದ ಕಲ್ಪನಾ ಸಿದ್ದರಾಜು (ಪಕ್ಷೇತರ), ವನಜಾಕ್ಷಿ (ಬಿಜೆಪಿ), ಶ್ರೀರಂಗಪಟ್ಟಣದಿಂದ ರತ್ನಮ್ಮ (ಬಿಎಸ್‌ಪಿ), ನಾಗಮಂಗಲದಿಂದ ಸಿ.ಪಿ.ಲಾವಣ್ಯ (ಅಖಿಲ ಕರ್ನಾಟಕ ಭಾರತೀಯ ರೈತ ಪಾರ್ಟಿ) ಹಾಗೂ ಕೃಷ್ಣರಾಜಪೇಟೆಯಿಂದ ಜಿ.ಸಿ.ಆಶಾ ಮತ್ತು ಮಂಜುಳಮ್ಮ (ಪಕ್ಷೇತರರು) ಕಣದಲ್ಲಿರುವ ಮಹಿಳೆಯರು. ಉಳಿದಂತೆ, ಮಂಡ್ಯ, ಮಳವಳ್ಳಿ ಹಾಗೂ ಮೇಲುಕೋಟೆ ಕ್ಷೇತ್ರಗಳಲ್ಲಿ ಮಹಿಳಯರು ಸ್ಪರ್ಧಿಸಿಲ್ಲ.

ಚುನಾವಣಾ ಅಖಾಡದಲ್ಲಿರುವ ಅಭ್ಯರ್ಥಿಗಳ ಪೈಕಿ ಅತ್ಯಂತ ಕಿರಿಯೆ ಜಿ.ಸಿ.ಆಶಾ (26) ಅವರು ಎಂಜಿನಿಯರಿಂಗ್ ಪದವೀಧರೆ. ವನಜಾಕ್ಷಿ -ಎಂ.ಎ. ಪದವಿ, ಕಲ್ಪನಾ ಸಿದ್ದರಾಜು -ಬಿ.ಎ. ಪದವಿ, ಮಂಜುಳಮ್ಮ -ಪಿಯುಸಿ, ಸಿ.ಪಿ.ಲಾವಣ್ಯ ಮತ್ತು ರತ್ನಮ್ಮ -ಎಸ್ಸೆಸ್ಸೆಲ್ಸಿ ವಿದ್ಯಾರ್ಹತೆ ಹೊಂದಿದ್ದಾರೆ.

ಪುರುಷ ಅಭ್ಯರ್ಥಿಗಳಿಗೆ ಹೋಲಿಸಿದರೆ, ಚರಾಸ್ತಿ-ಸ್ಥಿರಾಸ್ತಿ ಸೇರಿದಂತೆ ಒಟ್ಟು ಆದಾಯ ಹೊಂದಿರುವುದರಲ್ಲೂ ಮಹಿಳಾ ಅಭ್ಯರ್ಥಿಗಳು ಹಿಂದಿದ್ದಾರೆ. ಮಳವಳ್ಳಿ ಕ್ಷೇತ್ರದಲ್ಲಿ ಕಾಂಗ್ರೆಸ್ ಆಕಾಂಕ್ಷಿಯಾಗಿದ್ದ ಮಾಜಿ ಶಾಸಕಿ ಮಲ್ಲಾಜಮ್ಮ, ಮಂಡ್ಯ ಕ್ಷೇತ್ರಕ್ಕೆ ಕೆಜೆಪಿಯಿಂದ ಆಕಾಂಕ್ಷಿಯಾಗಿದ್ದ ಪ್ರೇಮಾ ಯುವರಾಜ್ ಹಾಗೂ ಮದ್ದೂರಿನಿಂದ ಜೆಡಿಎಸ್ ಆಕಾಂಕ್ಷಿಯಾಗಿದ್ದ ಕಲ್ಪನಾ ಸಿದ್ದರಾಜು ಅವರಿಗೆ ಟಿಕೆಟ್ ದೊರೆಯಲಿಲ್ಲ. ಕೊನೆಗೆ ಪಕ್ಷೇತರವಾಗಿ ಸ್ಪರ್ಧಿಸಿದರು.

ಮಳವಳ್ಳಿಯಲ್ಲಿ ಸೌಭಾಗ್ಯಮ್ಮ ಮಹದೇವಯ್ಯ ಅವರಿಗೆ ಬಿಜೆಪಿ ಟಿಕೆಟ್ ನೀಡಿತ್ತು. ಕಡೇ ಕ್ಷಣದಲ್ಲಿ ಅವರು `ಕೈ' ಗಾಳಕ್ಕೆ ಸಿಲುಕಿ, ಕಣದಿಂದ ಹಿಂದೆ ಸರಿದರು.ಮೀಸಲಾತಿ ಬೇಕು: ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಶೇ 50 ರಷ್ಟು ಮೀಸಲಾತಿ ನೀಡಲಾಗಿದೆ. ಹಾಗೆಯೇ ವಿಧಾನಸಭೆ ಚುನಾವಣೆಗೂ ನೀಡಬೇಕು ಎನ್ನುತ್ತಾರೆ ರೈತ ನಾಯಕಿ ಸುನಂದಾ ಜಯರಾಂ. ಹೆಣ್ಣು ಭ್ರೂಣ ಹತ್ಯೆ ನಿಲ್ಲಿಸಬೇಕು. ರಾಜಕಾರಣದಲ್ಲಿಯೂ ಸಮಾನ ಅವಕಾಶ ಕೊಡಬೇಕು. ಆಗಲೇ ದೇಶದ ಚಿತ್ರಣವನ್ನು ಬದಲಾಗುತ್ತದೆ. ವಂಶಪಾರಂಪರ್ಯ ರಾಜಕಾರಣದಲ್ಲಿ ಮಹಿಳೆಯರಿಗೆ ಪಕ್ಷಗಳು ಅವಕಾಶ ಮಾಡಿಕೊಡುತ್ತವೆ. ಆದರೆ ಸಾಮಾನ್ಯ ಮಹಿಳೆಯರಿಗೆ ನೀಡುವುದಿಲ್ಲ ಎಂದು ವಿಷಾದಿಸಿದರು.

ಕೆ. ಚೇತನ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT