ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಆಯೋಗದ ಕಚೇರಿ ಸಾಂತ್ವನ ಕೇಂದ್ರ

Last Updated 14 ಫೆಬ್ರುವರಿ 2011, 9:40 IST
ಅಕ್ಷರ ಗಾತ್ರ

ಬೆಳಗಾವಿ: ಶಿಶು ಅಭಿವೃದ್ಧಿ ಯೋಜನಾ ಕಚೇರಿ ಅಥವಾ ಸಾಂತ್ವನ ಕೇಂದ್ರಗಳನ್ನು ಮಹಿಳಾ ಆಯೋಗದ ಸಂಪರ್ಕ ಕಚೇರಿಗಳನ್ನಾಗಿಸಲು ಉದ್ದೇಶಿಸಲಾಗಿದೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಸಿ ಹೇಳಿದರು.

‘ಇದರಿಂದ ಶೋಷಣೆಗೆ ಒಳಗಾದ ಮಹಿಳೆಯರು ಬೆಂಗಳೂರಿಗೆ ಅಲೆದಾಡುವುದು ತಪ್ಪಿ; ಸ್ಥಳೀಯ ಮಟ್ಟದಲ್ಲಿಯೇ ಮಹಿಳಾ ಆಯೋಗಕ್ಕೆ ದೂರು ನೀಡಲು ಸಾಧ್ಯವಾಗುತ್ತದೆ. ಈ ಕುರಿತು ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ ಅಂತಿಮ ನಿರ್ಧಾರಕ್ಕೆ ಬರಲಾಗುವುದು ಎಂದು ಅವರು ಭಾನುವಾರ ಸುದ್ದಿಗಾರರಿಗೆ ತಿಳಿಸಿದರು.

‘ಮನೆಯಲ್ಲಿ ಹಾಗೂ ಕಚೇರಿಯಲ್ಲಿ ಮಹಿಳೆಯರು ಮೇಲೆ ನಡೆಯುವ ದೌರ್ಜನ್ಯಗಳ ಬಗೆಗೆ ಆಯೋಗಕ್ಕೆ ನಿರ್ಭಯವಾಗಿ ದೂರು ನೀಡಬೇಕು. ಆಯೋಗ ಸಂಪೂರ್ಣವಾಗಿ ಶೋಷಿತ ಮಹಿಳೆಯನ್ನು ಬೆಂಬಲಿಸಲಿದೆ’ ಎಂದು ಹೇಳಿದರು.

‘ಸರ್ಕಾರಿ ಉದ್ಯೋಗದಲ್ಲಿರುವ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿರುವುದು ಆಯೋಗದ ಗಮನಕ್ಕೆ ಬಂದಿದೆ. ದೂರು ದಾಖಲಿಸಲು ಹಿಂದೇಟು ಹಾಕುತ್ತಾರೆ.ಅವಶ್ಯವಿದ್ದಲ್ಲಿ ಅವರ ಹೆಸರನ್ನು ಗುಪ್ತವಾಗಿಟ್ಟು ಸೂಕ್ತ ಕ್ರಮಕೈಗೊಳ್ಳಲಾಗುವುದು. ಆದ್ದರಿಂದ ದೂರು ನೀಡಬೇಕು’ ಎಂದು ಮನವಿ ಮಾಡಿಕೊಂಡರು.

‘ಹೆಣ್ಣು ಭ್ರೂಣ ಹತ್ಯೆ ಹಾಗೂ ಮಹಿಳೆಯರ ಮಾರಾಟ ಜಾಲದ ಬಗೆಗೆ ಕೇಳಿದ ಪ್ರಶ್ನೆಗೆ, ಪೊಲೀಸ್ ಅಧಿಕಾರಿಗಳೊಂದಿಗೆ ಈ ಬಗೆಗೆ ಚರ್ಚಿಸುತ್ತೇನೆ. ಉತ್ತರ ಕರ್ನಾಟಕದಲ್ಲಿ ಇದು ನಡೆಯುತ್ತಿದ್ದು, ಇದನ್ನು ನಿಯಂತ್ರಿಸಲು ಸೂಕ್ತ ಕ್ರಮಕೈಗೊಳ್ಳಲಾಗುವುದು’ ಎಂದರು.

‘ಮಹಿಳೆಯರಿಗೆ ಸುರಕ್ಷತೆ ಒದಗಿಸುವುದು ಆಯೋಗದ ಮೊದಲ ಆದ್ಯತೆಯಾಗಿದೆ. ಆಯೋಗದ ಮುಂದೆ 447 ಪ್ರಕರಣಗಳಿದ್ದು, ಅದರಲ್ಲಿ 226 ಪ್ರಕರಣಗಳು ಮಹಿಳೆಯರ ಸುರಕ್ಷತೆಗೆ ಸಂಬಂಧಿಸದ್ದಾಗಿವೆ. 15 ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ’ ಎಂದು ವಿವರಿಸಿದರು.

‘ದೌರ್ಜನ್ಯ, ಶೋಷಣೆ ವಿರುದ್ಧ ವ್ಯಾಪಕವಾಗಿ ಮಹಿಳೆಯರು ಧ್ವನಿ ಎತ್ತಬೇಕು. ಈಗಲೂ ಧ್ವನಿ ಎತ್ತದಿದ್ದರೆ ದೌರ್ಜನ್ಯ ತಡೆಯಲು ಸಾಧ್ಯವಾಗುವುದಿಲ್ಲ. ಹೋರಾಟಕ್ಕೆ ಬಲ ತುಂಬಬೇಕಾಗಿದೆ. ಗ್ರಾಮೀಣ ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ’ ಎಂದು ಹೇಳಿದರು.

‘ಹಿಂಡಲಗಾ ಕಾರಾಗೃಹಕ್ಕೆ ಭೇಟಿ ನೀಡಿದ್ದೆ. 53 ಮಹಿಳಾ ಖೈದಿಗಳಿದ್ದಾರೆ. ಅದರಲ್ಲಿ 7 ಮಂದಿ ವರದಕ್ಷಿಣೆ ಹಾಗೂ ಸೊಸೆ ಸಾವಿಗೆ ಸಂಬಂಧಿಸಿದಂತೆ ಶಿಕ್ಷೆ ಅನುಭವಿಸುತ್ತಿದ್ದರೆ, 8 ಮಂದಿ ಇದಕ್ಕೇ ಸಂಬಂಧಿಸಿದಂತೆ ವಿಚಾರಣೆ ಎದುರಿಸುತ್ತಿದ್ದಾರೆ. ಇದನ್ನು ನೋಡಿದರೆ ವರದಕ್ಷಿಣೆ ಭೂತ ಮಹಿಳೆಯರನ್ನು ಬಿಟ್ಟಿಲ್ಲ ಎಂಬುದು ಗೊತ್ತಾಗುತ್ತದೆ. ಜನರಲ್ಲಿ ಈ ಬಗೆಗೆ ಜಾಗೃತಿ ಮೂಡಿಸಬೇಕಾಗಿದೆ’ ಎಂದರು. ಗಿರಿಜಾ ಮಠಪತಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT