ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಕಾನ್‌ಸ್ಟೆಬಲ್ `ಬೆಂಗಾವಲು'

ರಾಜ್ಯದಲ್ಲಿ ಮೊದಲ ಬಾರಿಗೆ ನೈರುತ್ಯ ರೈಲ್ವೆ ಕ್ರಮ
Last Updated 8 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಒಬ್ಬರ ಕೈಯಲ್ಲಿ ವಾಕಿಟಾಕಿ. ಇನ್ನೊಬ್ಬರ ಬಳಿ ಮೆಗಾ ಫೋನ್. ಇಬ್ಬರ ಬಳಿ ಲಾಠಿ. ಮತ್ತಿಬ್ಬರಲ್ಲಿ ಸ್ಟೆನ್‌ಗನ್!

ಈ ಆರೂ ಮಂದಿ ಮಹಿಳಾ ಕಾನ್‌ಸ್ಟೆಬಲ್‌ಗಳು ರೈಲು ಪ್ರಯಾಣಿಕರ ಮಧ್ಯೆ ಓಡಾಡಿ, ಬೋಗಿಯಿಂದ ಬೋಗಿಗೆ ಹತ್ತಿ, ಇಳಿದು ಗಟ್ಟಿ ಧ್ವನಿಯಲ್ಲಿ ನೀಡುವ ಸಲಹೆ-ಎಚ್ಚರಿಕೆ, ತುಂಬುವ ಆತ್ಮವಿಶ್ವಾಸ ಗಮನ ಸೆಳೆಯುತ್ತದೆ.

ನೈರುತ್ಯ ರೈಲ್ವೆ, ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಹುಬ್ಬಳ್ಳಿ- ಬಳ್ಳಾರಿ ಮಧ್ಯೆ ಹಗಲು ವೇಳೆಯಲ್ಲಿ ಸಂಚರಿಸುವ ಪ್ಯಾಸೆಂಜರ್ ರೈಲಿನಲ್ಲಿ ನಿಯೋಜಿಸಿದ ರೈಲ್ವೆ ಭದ್ರತಾ  ಪಡೆ (ಆರ್‌ಪಿಎಫ್) ಮಹಿಳಾ ಕಾನ್‌ಸ್ಟೆಬಲ್‌ಗಳ `ಬೆಂಗಾವಲು' ತಂಡದ ಕಾರ್ಯವೈಖರಿಯಿದು.

ದೆಹಲಿ ಸಾಮೂಹಿಕ ಅತ್ಯಾಚಾರ ಘಟನೆಯ ಬಳಿಕ ರೈಲಿನಲ್ಲಿ ಪ್ರಯಾಣಿಸುವ ಮಹಿಳೆಯರಿಗೆ ರಕ್ಷಣೆ ನೀಡುವ ಉದ್ದೇಶದಿಂದ ಭಾರತೀಯ ರೈಲ್ವೆ ಸಚಿವಾಲಯ ದೇಶದಾದ್ಯಂತ ಈ ಸೇವೆಗೆ ಚಾಲನೆ ನೀಡಿದ್ದು, ಹುಬ್ಬಳ್ಳಿ ವಿಭಾಗದಲ್ಲಿ `ಆರ್‌ಪಿಎಫ್ ಮಹಿಳಾ ಕಾನ್‌ಸ್ಟೆಬಲ್‌ಗಳ ಎಸ್ಕಾರ್ಟ್ ತಂಡ' ರಚಿಸಲಾಗಿದೆ. ತಿಂಗಳ ಹಿಂದೆ ಈ ವಿಶೇಷ ತಂಡ ರಚಿಸಲಾಗಿದೆ. ಆರ್‌ಪಿಎಫ್ ಇನ್‌ಸ್ಪೆಕ್ಟರ್ ಶೇಖ್ ರಹಮತ್-ಉಲ್ಲಾ ತಂಡಕ್ಕೆ ಮಾರ್ಗದರ್ಶಕರಾಗಿದ್ದಾರೆ.

ಈ ಬಗ್ಗೆ `ಪ್ರಜಾವಾಣಿ' ಜೊತೆ ಮಾತನಾಡಿದ ರಹಮತ್-ಉಲ್ಲಾ, `ಮಹಿಳಾ ರೈಲು ಪ್ರಯಾಣಿಕರಿಗೆ ಸುರಕ್ಷತೆ ನೀಡುವ ಉದ್ದೇಶದಿಂದ ಆರ್‌ಪಿಎಫ್ ಡಿಐಜಿ ಆರ್. ಪಚರವಾಲಾ ಅವರು ಮೂರು ತಿಂಗಳ ಹಿಂದೆ `ಆರ್‌ಪಿಎಫ್- ಟ್ರೈನ್ ಎಸ್ಕಾರ್ಟ್ ಕಂಪೆನಿ' ಸ್ಥಾಪಿಸಿದ್ದಾರೆ. ಅವರ ನಿರ್ದೇಶನದಂತೆ ಮೊದಲಿಗೆ ಹುಬ್ಬಳ್ಳಿ ವಿಭಾಗದಲ್ಲಿ ಮಹಿಳಾ ಎಸ್ಕಾರ್ಟ್ ತಂಡ ರಚಿಸಲಾಗಿದೆ. ಸದ್ಯದಲ್ಲೇ ನೈರುತ್ಯ ರೈಲ್ವೆ ವಲಯದ ಬೆಂಗಳೂರು ಮತ್ತು ಮೈಸೂರು ವಿಭಾಗದಲ್ಲೂ ಇಂತಹ ತಂಡ ರಚಿಸುವ ಬಗ್ಗೆ ಚಿಂತನೆ ನಡೆದಿದೆ' ಎಂದರು.

`ಹುಬ್ಬಳ್ಳಿ- ಬಳ್ಳಾರಿ ಮಧ್ಯೆ ಹಗಲಿನಲ್ಲಿ ಪ್ಯಾಸೆಂಜರ್ ರೈಲಿನಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಿದೆ. ಹೀಗಾಗಿ ಸದ್ಯಕ್ಕೆ ಈ ತಂಡ ಈ ಮಾರ್ಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದೆ. ರೈಲಿನಲ್ಲೇ ಪ್ರಯಾಣಿಸಿ, ಪ್ರಯಾಣದ ವೇಳೆ ಮಹಿಳೆಯರು ವಹಿಸಬೇಕಾದ ಎಚ್ಚರಿಕೆ ಕುರಿತು ಜಾಗೃತಿ ಮೂಡಿಸುವುದು, ಪ್ರಯಾಣಿಕರ ದಟ್ಟಣೆಯ ಸಂದರ್ಭದಲ್ಲಿ ಸೂಕ್ತ ರಕ್ಷಣೆ ನೀಡುವುದು, ಲಗೇಜ್‌ಗಳ ಸೂಕ್ಷ್ಮ ಪರಿಶೋಧನೆ ಈ ಮಹಿಳಾ ಕಾನ್‌ಸ್ಟೆಬಲ್‌ಗಳ ಕರ್ತವ್ಯ. ಎಫ್‌ಐಆರ್ ದಾಖಲಿಸಿಕೊಳ್ಳಬೇಕಾದ ಸಂದರ್ಭದಲ್ಲಿ ವಾಕಿಟಾಕಿ ಮೂಲಕ ರೈಲ್ವೆ ಪೊಲೀಸರಿಗೆ ತಂಡ ಮಾಹಿತಿ ನೀಡುತ್ತದೆ' ಎಂದರು.

`ತಿರುಪತಿ ಪ್ಯಾಸೆಂಜರ್, ಹುಬ್ಬಳ್ಳಿ- ಹೌರಾ ಮಧ್ಯೆ ವಾರದಲ್ಲಿ ನಾಲ್ಕು ದಿನ ಓಡಾಡುವ ಅಮರಾವತಿ ಎಕ್ಸ್‌ಪ್ರೆಸ್ ಮತ್ತು ಲಿಂಕ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಹುಬ್ಬಳ್ಳಿ- ಬಳ್ಳಾರಿ ಮಧ್ಯೆ ಸಂಚರಿಸುವ ಮಹಿಳಾ ಪ್ರಯಾಣಿಕರಲ್ಲಿ ಆತ್ಮಸ್ಥೆರ್ಯ ತುಂಬುವ ಕೆಲಸವನ್ನು ಈ ತಂಡ ಮಾಡುತ್ತಿದೆ.

ಪುರುಷ ಸಹ ಪ್ರಯಾಣಿಕರ ಅನುಚಿತ ವರ್ತನೆ, ಕಣ್‌ಸನ್ನೆ, ಪಿಕ್ ಪಾಕೆಟ್, ಸರ ಅಪಹರಣ ಮತ್ತಿತರ ಸಂದರ್ಭದಲ್ಲಿ ಮಹಿಳಾ ಪ್ರಯಾಣಿಕರು ಯಾವ ರೀತಿ ಪ್ರತಿಕ್ರಿಯಿಸಬೇಕು, ಅಗತ್ಯಬಿದ್ದರೆ ರೈಲು ಬೋಗಿಯ್ಲ್ಲಲಿ ಅಳವಡಿಸಿರುವ ನಿಲ್ಲಿಸಲು ತುರ್ತು ಸಂದೇಶ ನೀಡುವ ಸರಪಳಿ ಎಳೆಯುವುದು ಹೇಗೆ ಎಂಬ ಬಗ್ಗೆಯೂ ತಂಡದ ಸದಸ್ಯರು ತಿಳಿವಳಿಕೆ ನೀಡುತ್ತಾರೆ.

ಈ ತಂಡ ಕರ್ತವ್ಯ ಆರಂಭಿಸಿದ ಬಳಿಕ ಹುಬ್ಬಳ್ಳಿ- ಬಳ್ಳಾರಿ ಮಾರ್ಗದಲ್ಲಿ ಮಹಿಳಾ ಪ್ರಯಾಣಿಕರಿಗೆ ಕಿರುಕುಳ, ಸಣ್ಣಪುಟ್ಟ ಕಳ್ಳತನ ಮುಂತಾದ ಅಪರಾಧ ಕೃತ್ಯಗಳ ಸಂಖ್ಯೆ ಗಮನೀಯವಾಗಿ ಕಡಿಮೆಯಾಗಿದೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT