ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಕಾಲೇಜಿಗೆ ನ್ಯಾಕ್ ಭೇಟಿ

Last Updated 18 ಜನವರಿ 2011, 10:10 IST
ಅಕ್ಷರ ಗಾತ್ರ

ಚಿಂತಾಮಣಿ: ನಗರದ ಸರ್ಕಾರಿ ಮಹಿಳಾ ಕಾಲೇಜಿಗೆ ಫೆಬ್ರುವರಿ 10 ಮತ್ತು 11 ರಂದು ನ್ಯಾಕ್ ಸಮಿತಿ ತಂಡವು ಮರುಮೌಲ್ಯಮಾಪನಕ್ಕಾಗಿ ಭೇಟಿ ನೀಡಲಿದ್ದು, ಏಳು ರೀತಿಯ ಅಳತೆಗೋಲುಗಳ ಆಧಾರದ ಮೇಲೆ ಮೌಲ್ಯಮಾಪನ ಕಾರ್ಯ ನಡೆಯಲಿದೆ ಎಂದು ಕಾಲೇಜಿನ ಪ್ರಾಂಶುಪಾಲ ಸೋಮವಾರ ಇಲ್ಲಿ ತಿಳಿಸಿದರು.

ಕೇಂದ್ರದ ಧನಸಹಾಯ ಆಯೋಗದ ಅಂಗ ಸಂಸ್ಥೆಯಾದ ರಾಷ್ಟ್ರೀಯ ಮೌಲ್ಯಮಾಪನ ಮತ್ತು ವಿಶ್ವವಿದ್ಯಾಲಯ ಮಾನ್ಯತಾ ಸಂಸ್ಥೆಯು 2004-05 ರ ಶೈಕ್ಷಣಿಕ ವರ್ಷದಲ್ಲಿ ಕಾಲೇಜಿಗೆ ಭೇಟಿ ನೀಡಿ ಬಿ.ಶ್ರೇಣಿಯನ್ನು ನೀಡಿತ್ತು. ಕಳೆದ 5 ವರ್ಷಗಳ ಅವಧಿಯಲ್ಲಿ ಕಾಲೇಜು ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ ಸಾಕಷ್ಟು ಬೆಳವಣಿಗೆ ಪಡೆದುಕೊಂಡಿದೆ ಎಂದರು.

ಕಾಲೇಜಿನ ಬಿ.ಎ, ಬಿ.ಎಸ್ಸಿ, ಬಿ.ಕಾಂ, ಬಿಬಿಎಂ ಕೋರ್ಸ್‌ಗಳಲ್ಲಿ ಹೊಸ ಹೊಸ ವಿಷಯಗಳನ್ನು ಪರಿಚಯಿಸಲಾಗಿದೆ. ನುರಿತ ಅಧ್ಯಾಪಕ ಹಾಗೂ ಪ್ರಾಧ್ಯಾಪಕರಿದ್ದಾರೆ. 2009-10 ನೆ ಸಾಲಿನಲ್ಲಿ 24 ಗಂಟೆಗಳ ನಿರಂತರ ಇಂಟರ್‌ನೆಟ್ ಸಂಪರ್ಕವಿರುವ ಸುಸಜ್ಜಿತ ಕಂಪ್ಯೂಟರ್ ಲ್ಯಾಬ್‌ನ್ನು ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿ ಗಮನದಲ್ಲಿಟ್ಟುಕೊಂಡು ಆರಂಭಿಸಲಾಗಿದೆ ಎಂದು ತಿಳಿಸಿದರು.

ಅಂತಿಮ ಪದವಿ ವಿದ್ಯಾರ್ಥಿನಿಯರಿಗೆ ಕಿಯೋನಿಕ್ಸ್ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಕಂಪ್ಯೂಟರ್ ತರಬೇತಿಯನ್ನು ನೀಡಲಾಗುತ್ತಿದೆ. ಶ್ರೀಮಂತ ಮತ್ತು ಬಡ ವಿದ್ಯಾರ್ಥಿಗಳ ನಡುವಿನ ಅಸಮಾನತೆ ಹೋಗಲಾಡಿಸುವ ನಿಟ್ಟಿನಲ್ಲಿ ಎಲ್ಲ ವಿದ್ಯಾರ್ಥಿನಿಯರಿಗೆ ಸಮವಸ್ತ್ರ ಪರಿಚಯಿಸಲಾಗಿದೆ. ಪದವಿ ವಿದ್ಯಾರ್ಥಿನಿಯರಿಗೆ ಸಮವಸ್ತ್ರ ಪರಿಚಯಿಸುತ್ತಿರುವ ಏಕೈಕ ಕಾಲೇಜು ಇದಾಗಿದೆ ಎಂದರು.

ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಅತ್ಯುತ್ತಮ ಫಲಿತಾಂಶ ಪಡೆಯುತ್ತಿರುವ ಸರ್ಕಾರಿ ಮಹಿಳಾ ಕಾಲೇಜಿನ ಬಿ.ಎಸ್ಸಿ ವಿದ್ಯಾರ್ಥಿನಿ ವಸುಧಾ ಬೆಂಗಳೂರು ವಿಶ್ವವಿದ್ಯಾನಿಲಯ 2010 ಮೇ, ಜೂನ್ ನಲ್ಲಿ ನಡೆಸಿದ ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್ ಗಳಿಸಿದ್ದಾರೆ. 2010-11 ನೇ ಸಾಲಿನಲ್ಲಿ ಕಾಲೇಜಿನಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿನಿಯರ ಸಂಖ್ಯೆ ದ್ವಿಗುಣಗೊಂಡಿದೆ.

ಸ್ಥಳೀಯ ಶಾಸಕರು ಹಾಗೂ ಕಾಲೇಜು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ.ಎಂ.ಸಿ.ಸುಧಾಕರ್ ಪ್ರಯತ್ನದ ಫಲವಾಗಿ ರಾಜ್ಯ ಸರ್ಕಾರದಿಂದ 1.60 ಕೋಟಿ ರೂಪಾಯಿ ಅನುದಾನ ದೊರೆತಿದ್ದು ನೂತನ ಕಟ್ಟಡದ ಕಾಮಗಾರಿ ಪ್ರಗತಿಯಲ್ಲಿದೆ. ಕಾಲೇಜಿನ ಬೋಧಕ ಮತ್ತು ಬೋಧಕೇತರರರು ಒಮ್ಮನಸ್ಸಿನಿಂದ ಒಂದು ತಂಡವಾಗಿ ಕಾರ್ಯನಿರ್ವಹಿಸುತ್ತಿದ್ದು ನ್ಯಾಕ್ ಸಮಿತಿಯ ಮೌಲ್ಯಮಾಪನದಲ್ಲಿ ಕಾಲೇಜು ಅತ್ಯುತ್ತಮ ಶ್ರೇಣಿ ಪಡೆಯುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT