ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಕ್ರಿಕೆಟ್:ಸವಾಲು ಎದುರಿಸಲು ಸಿದ್ಧರಾಗಿದ್ದೇವೆ

Last Updated 5 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಈ ತಿಂಗಳ ಅಂತ್ಯದಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ಆರಂಭವಾಗಲಿರುವ ಟ್ವೆಂಟಿ-20 ಹಾಗೂ ಏಕದಿನ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಭರವಸೆಯನ್ನು ಭಾರತ ತಂಡದ ನೂತನ ನಾಯಕಿ ಅಂಜುಮ್ ಚೋಪ್ರಾ ವ್ಯಕ್ತಪಡಿಸಿದ್ದಾರೆ.

ಮೂರು ಏಕದಿನ ಹಾಗೂ ಐದು ಟ್ವೆಂಟಿ-20 ಪಂದ್ಯಗಳ ಸರಣಿ ಆಡಲು ಭಾರತ ತಂಡದವರು ಫೆಬ್ರುವರಿ 15ರಂದು ಕೆರಿಬಿಯನ್ ನಾಡಿಗೆ ತೆರಳಲಿದ್ದಾರೆ. ಏಕದಿನ ಸರಣಿ ಫೆ.29ರಂದು ಆರಂಭವಾಗಲಿದೆ.

`ನಾವು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ)ಯಲ್ಲಿ ಕಳೆದ 10 ದಿನಗಳಿಂದ ನಡೆದ ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದ್ದೆವು. ಎಲ್ಲಾ ಆಟಗಾರ್ತಿಯರೂ ಫಿಟ್ ಆಗಿದ್ದಾರೆ. ಫೀಲ್ಡಿಂಗ್ ಹಾಗೂ ಬೌಲಿಂಗ್ ವಿಭಾಗದಲ್ಲಿ ತರಬೇತಿ ವೇಳೆ ಹೆಚ್ಚು ಒತ್ತು ನೀಡಲಾಗಿತ್ತು. ವಿಂಡೀಸ್ ಸವಾಲು ಎದುರಿಸಲು ನಾವು ಸನ್ನದ್ಧರಾಗಿದ್ದೇವೆ~ ಎಂದು ಭಾನುವಾರ ಸಂಜೆ ಅಂಜುಮ್ ನುಡಿದರು.

ಈ ತಂಡದಲ್ಲಿರುವ ಕರ್ನಾಟಕದ ಏಕೈಕ ಆಟಗಾರ್ತಿ ವೇದಾ ಕೃಷ್ಣಮೂರ್ತಿ. ಈ ಕುರಿತು ಪ್ರತಿಕ್ರಿಯೆ ನೀಡಿದ ಚೋಪ್ರಾ, `ವೇದಾ ಪ್ರತಿಭಾವಂತ ಆಟಗಾರ್ತಿ. ಆಲ್‌ರೌಂಡ್ ಆಟಗಾರ್ತಿ ಕೂಡ. ಈ ಹಿಂದಿನ ಟೂರ್ನಿಗಳಲ್ಲಿ ಗಮನ ಸೆಳೆದಿದ್ದಾರೆ~ ಎಂದರು.

ತಂಡದ ಸಂಯೋಜನೆ ಕುರಿತು ಪ್ರತಿಕ್ರಿಯಿಸಿದ ಕೋಚ್ ಅಂಜು ಜೈನ್, `ತಂಡ ಸಮಾತೋಲನದಿಂದ ಕೂಡಿದ್ದು ಉತ್ತಮ ಪ್ರದರ್ಶನದ ಭರವಸೆ ಇದೆ. ನಮ್ಮ ಮುಂದೆ ಹಲವು ಸವಾಲುಗಳಿವೆ. ಸೆಪ್ಟೆಂಬರ್‌ನಲ್ಲಿ ಟ್ವೆಂಟಿ-20 ವಿಶ್ವಕಪ್ ನಡೆಯಲಿದೆ. ಅದಕ್ಕೆ ನಾವು ಈಗಿನಿಂದಲೇ ಸಿದ್ಧರಾಗಬೇಕು. ಆದರೆ ಈಗ ನಮ್ಮ ಮೊದಲ ಆದ್ಯತೆ ವಿಂಡೀಸ್‌ನಲ್ಲಿ ನಡೆಯಲಿರುವ ಸರಣಿ~ ಎಂದರು.

ತಂಡ ಇಂತಿದೆ: ಅಂಜುಮ್ ಚೋಪ್ರಾ (ನಾಯಕಿ), ಮಿಥಾಲಿ ರಾಜ್ (ಉಪನಾಯಕಿ), ಜೂಲನ್ ಗೋಸ್ವಾಮಿ, ಹರ್ಮಿತ್‌ಪ್ರೀತ್ ಕೌರ್, ವೇದಾ ಕೃಷ್ಣಮೂರ್ತಿ, ಸುಭಲಕ್ಷ್ಮಿ, ಡಯಾನಾ ಡೇವಿಡ್, ಸುನೀತಾ ಆನಂದ್, ಗೌಹರ್ ಸುಲ್ತಾನಾ, ಮಮತಾ ಕನೋಜಿಯಾ, ಅರ್ಚನಾ ದಾಸ್, ಎಕ್ತಾ ಬಿಸ್ತ್, ಅಮಿತಾ ಶರ್ಮ, ಮಾಧುರಿ ಮೆಹ್ತಾ, ಸುಲಕ್ಷಣಾ ನಾಯ್ಕ. ಕೋಚ್: ಅಂಜು ಜೈನ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT