ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಪ್ರಾತಿನಿಧ್ಯ

Last Updated 1 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ರಾಜ್ಯ ವಿಧಾನಸಭೆ ಚುನಾವಣೆಗಳಿಗೆ ಅಭ್ಯರ್ಥಿಗಳ ಆಯ್ಕೆಯ ಪ್ರಕ್ರಿಯೆ ಎಲ್ಲಾ ರಾಜಕೀಯ ಪಕ್ಷಗಳಲ್ಲಿ ಬಿರುಸಾಗಿ ಸಾಗಿದೆ. ಸಾಕಷ್ಟು ಸಂಖ್ಯೆಯ ಮಹಿಳೆಯರು ಎಲ್ಲಾ ರಾಜಕೀಯ ಪಕ್ಷಗಳಲ್ಲಿ ಈ ಬಾರಿ ಟಿಕೆಟ್ ಆಕಾಂಕ್ಷಿಗಳಾಗಿರುವುದು ವಿಶೇಷ.

ರಾಜ್ಯ ಮಹಿಳಾ ಕಾಂಗ್ರೆಸ್ ಸದಸ್ಯೆಯರಂತೂ ಹೆಚ್ಚಿನ ರೀತಿಯ್ಲ್ಲಲೇ ಒತ್ತಡ ಹೇರಿದ್ದಾರೆ. ನವದೆಹಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ನಿವಾಸದ ಎದುರು  ಮಹಿಳಾ ಕಾಂಗ್ರೆಸ್ ಸದಸ್ಯೆಯರ ಒಂದು ಗುಂಪು ಧರಣಿ ನಡೆಸಿದೆ. ಈ ಬಾರಿಯ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಮಹಿಳೆಯರಿಗೆ ಕನಿಷ್ಠ ಶೇ 10ರಷ್ಟಾದರೂ ಸೀಟುಗಳನ್ನು ನೀಡಬೇಕೆಂಬುದು ಈ ಮಹಿಳೆಯರ ಒತ್ತಾಯ. ಬಹುಶಃ ಬೀದಿಗಿಳಿದು ತಮ್ಮ ರಾಜಕೀಯ ಹಕ್ಕಿಗಾಗಿ ರಾಜಕೀಯ ಪಕ್ಷವೊಂದರ ಸದಸ್ಯೆಯರು ಈ ರೀತಿಯ ಧರಣಿ ನಡೆಸಿರುವುದು ರಾಜ್ಯದ ರಾಜಕೀಯ ಇತಿಹಾಸದಲ್ಲಿ ಇದೇ ಮೊದಲು.

ಮುಖ್ಯವಾಹಿನಿಯ ರಾಜಕೀಯ ವಲಯದಲ್ಲಿ ಮಹಿಳೆಯರ ಪಾಲು ರಾಜ್ಯದಲ್ಲಿ ಶೋಚನೀಯ ಸ್ಥಿತಿಯಲ್ಲಿರುವುದಂತೂ ನಿಜ. ಕಳೆದ 13ನೇ ವಿಧಾನಸಭೆಯಲ್ಲಿ ಇದ್ದಂತಹ ಮಹಿಳೆಯರ ಪ್ರಾತಿನಿಧ್ಯದ ಸಂಖ್ಯೆ ಕೇವಲ ಮೂರೇ ಮೂರು. ಅಂದರೆ 224 ಸದಸ್ಯಬಲದ ವಿಧಾನಸಭೆಯಲ್ಲಿ ಈ ಪ್ರಮಾಣ ಕೇವಲ ಶೇ 1.34. ರಾಜ್ಯದಲ್ಲಿರುವ ಸುಮಾರು ಮೂರು ಕೋಟಿ ಮಹಿಳೆಯರ ಪ್ರತಿನಿಧಿಗಳಾಗಿದ್ದವರು ಬೆರಳೆಣಿಕೆಯ ಈ ಮೂರೇ ಮೂರು ಮಹಿಳೆಯರು. ಚುನಾವಣೆಗೆ ಸ್ಪರ್ಧಿಸಿದ್ದ 2134 ಪುರುಷರ ಮಧ್ಯೆ ಸ್ಪರ್ಧಿಸಿದ್ದ ಮಹಿಳೆಯರ ಸಂಖ್ಯೆ ಕೇವಲ 108. ಎಂದರೆ ಮುಖ್ಯವಾಹಿನಿಯ ರಾಜಕೀಯ ವಲಯದ ಭಾಗವಾಗಲು ಮಹಿಳೆಗಿನ್ನೂ ಅವಕಾಶದ ಬಾಗಿಲುಗಳನ್ನು ತೆರೆಯಲಾಗಿಲ್ಲ ಎಂಬುದು ಇದರಿಂದ ಸೂರ್ಯಸ್ಪಷ್ಟ.

ಜನಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರು ಚುನಾವಣೆ ಸಂದರ್ಭಗಳಲ್ಲಿ ರಾಜಕಾರಣಿಗಳ ಮಟ್ಟಿಗೆ ಪ್ರಬಲ ವೋಟ್‌ಬ್ಯಾಂಕ್‌ಗಳಾಗಷ್ಟೇ ಉಳಿದುಕೊಂಡಿರುವುದು ದುರದೃಷ್ಟ. ಈಗಲೂ ರಾಜಕೀಯ ಪಕ್ಷಗಳಲ್ಲಿ ಮಹಿಳೆಯರ ಸದಸ್ಯತ್ವ ಪ್ರಮಾಣ ಅತ್ಯಂತ ಕಡಿಮೆ. ರಾಜಕೀಯ ಪಕ್ಷಗಳ ಉನ್ನತ ಸ್ತರಗಳಲ್ಲಂತೂ ಈ ಸಂಖ್ಯೆ ಇನ್ನೂ ಕಡಿಮೆ. ಎಲ್ಲಾ ಪ್ರಮುಖ ರಾಜಕೀಯ ಪಕ್ಷಗಳಲ್ಲೂ ಮಹಿಳೆಯರಿಗೇ ಪ್ರತ್ಯೇಕ ಘಟಕಗಳಿವೆ. ಆದರೆ ಈ ಘಟಕಗಳಿಗೆ ತಂತಮ್ಮ ಪಕ್ಷಗಳ ಮುಖ್ಯವಾಹಿನಿಯ ಚಟುವಟಿಕೆಗಳ ಬಗ್ಗೆ ಅರಿವಿರುತ್ತದೆಯೇ ಎಂಬುದೇ ಪ್ರಶ್ನೆ. ಹೀಗಾಗಿ ಮಹಿಳೆಯರ ರಾಜಕೀಯ ಪಾಲ್ಗೊಳ್ಳುವಿಕೆ ರೀತಿಯೇ ಬದಲಾಗಬೇಕಾಗಿದೆ.

ಸೊಸೆ, ಪತ್ನಿ, ಮಗಳು ಅಥವಾ ಗೆಳತಿ ಎಂಬ ಪರಿಕಲ್ಪನೆಗಳಿಂದಾಚೆಗೆ ಸ್ವತಂತ್ರ ನೆಲೆಯಲ್ಲಿ ಮಹಿಳಾ ನಾಯಕತ್ವವನ್ನು ಬೆಳೆಸುವುದು ಅವಶ್ಯಕ. ಆದರೆ ಮಹಿಳೆಗೆ ಟಿಕೆಟ್ ನೀಡುವ ವಿಚಾರದ್ಲ್ಲಲೇ, ಈವರೆಗೆ ಯಾವ ರಾಜಕೀಯ ಪಕ್ಷವೂ ಶೇ 10ರ ಗಡಿ ದಾಟಿಲ್ಲ. ಸಂಸತ್ತು ಹಾಗೂ ಶಾಸನಸಭೆಗಳಲ್ಲಿ ಶೇ 33ರಷ್ಟು ಮೀಸಲು ಕಲ್ಪಿಸುವ ಮಹಿಳಾ ಮೀಸಲು ಮಸೂದೆ ಮರೀಚಿಕೆಯೇ ಆಗಿದೆ.

ಕನಿಷ್ಠ ಪಕ್ಷಗಳ ಮಟ್ಟಗಳಲ್ಲಾದರೂ ಟಿಕೆಟ್ ನೀಡುವ ಸಂದರ್ಭದಲ್ಲಿ ಮಹಿಳೆಯರಿಗೆ ಕಡ್ಡಾಯ ಮೀಸಲು ನೀಡಬೇಕೆಂಬ ಸಲಹೆಗಳು ನಿರ್ಲಕ್ಷ್ಯಕ್ಕೆ ಒಳಗಾಗುತ್ತಿರುವುದು ವಿಷಾದನೀಯ. ಮಹಿಳೆಯ ಸಕ್ರಿಯ ಪಾಲ್ಗೊಳ್ಳುವಿಕೆಗೆ ವಾತಾವರಣ ಪಕ್ವವಾಗಿಲ್ಲ, ಮಹಿಳೆಯರೇ ಹಿಂಜರಿಯುತ್ತಾರೆ ಎಂಬ ವಾದಗಳಿವೆ. ಆದರೆ ಅವಕಾಶಗಳೇ ಸಿಗದಿದ್ದಲ್ಲಿ ನಾಯಕತ್ವ ಬೆಳೆಯುವುದಾದರೂ ಹೇಗೆ? ಈ ಹಿನ್ನೆಲೆಯಲ್ಲಿ ಮಹಿಳಾ ಮತ ಬ್ಯಾಂಕ್ ಎಂಬುದು ಪ್ರಭಾವಯುತ ಪ್ರತ್ಯೇಕ ಲಾಬಿಯಾಗಿ ರಾಜಕಾರಣದಲ್ಲಿ ತನ್ನ ಸ್ವರೂಪವನ್ನು ಸ್ಪಷ್ಟಗೊಳಿಸಿಕೊಳ್ಳುವತ್ತ ಹೆಜ್ಜೆ ಇರಿಸಬೇಕಾಗಿದೆ. ಇದು ಮಹಿಳಾ ನಾಯಕತ್ವ ಬೆಳವಣಿಗೆಗೆ ಸಹಕಾರಿಯಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT