ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಪ್ರಾಬಲ್ಯದ ಕ್ಷೇತ್ರದಲ್ಲಿ ವನಿತೆಯರಿಗೆ ಅವಕಾಶ ಇಲ್ಲ

Last Updated 25 ಏಪ್ರಿಲ್ 2013, 6:46 IST
ಅಕ್ಷರ ಗಾತ್ರ

ಪಡುಬಿದ್ರಿ: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಶಂಕರಪುರದ ಮಲ್ಲಿಗೆಯ ಸುವಾಸನೆ ಬೀರಿಸುವ ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಯಾರು ಶಾಸಕರಾಗಿ ಆಯ್ಕೆಯಾಗುತ್ತಾರೆ ಎಂಬ ಕುತೂಹಲ. ಮಹಿಳಾ ಮತದಾರರೇ ಹೆಚ್ಚಿರುವ ಈ ಕ್ಷೇತ್ರದಲ್ಲಿ ಮಹಿಳೆಯರು ಆಯ್ಕೆಯಾಗುವ ಅವಕಾಶ ಇದು ವರೆಗೂ ಸಿಕ್ಕಿಲ್ಲ. ಈ ಬಾರಿಯೂ ಈ ಕ್ಷೇತ್ರದಲ್ಲಿ ಮಹಿಳಾ ಅಭ್ಯರ್ಥಿಗಳು ಸ್ಪರ್ಧಿಸುತ್ತಿಲ್ಲ. 

ಉಡುಪಿ ವಿಧಾನಸಭಾ ಕ್ಷೇತ್ರದಿಂದ 1957ರಲ್ಲಿ ಬೇರ್ಪಟ್ಟು ಪ್ರತ್ಯೇಕವಾದ ಕಾಪು ವಿಧಾನಸಭಾ ಕ್ಷೇತ್ರದಲ್ಲಿ ನಾಲ್ಕು ಮಂದಿ ಶಾಸಕರಾಗಿ ಆಯ್ಕೆಯಾಗಿದ್ದು, ಸಚಿವ ಸ್ಥಾನವೂ ಈ ಕ್ಷೇತ್ರಕ್ಕೆ ಲಭಿಸಿದೆ. ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಪಿಎಸ್‌ಪಿ, ಕಾಂಗ್ರೆಸ್, ಬಿಜೆಪಿ ಜಯಗಳಿಸಿವೆ.

ಈ ಕ್ಷೇತ್ರದಿಂದ ಐದು ಬಾರಿ ಆಯ್ಕೆಯಾದ ವಸಂತ ವಿ.ಸಾಲ್ಯಾನ್ ಸಚಿವರೂ ಆಗಿದ್ದರು. ಕಳೆದ ಎರಡು ಬಾರಿ ಇವರು ಕೆಲವೇ ಮತಗಳ ಅಂತರದಲ್ಲಿ ಸೋಲು ಅನುಭವಿಸಿದರು. ಎಫ್.ಎಕ್ಸ್.ಡಿ.ಪಿಂಟೊ ಡಿಸೋಜ ಹೊರತು ಪಡಿಸಿ ಭಾಸ್ಕರ್ ಶೆಟ್ಟಿ ನಾಲ್ಕು ಬಾರಿ, ವಸಂತ ಸಾಲ್ಯಾನ್ ಐದು ಬಾರಿ, ಲಾಲಾಜಿ ಮೆಂಡನ್ ಎರಡು ಬಾರಿ ಆಯ್ಕೆಯಾಗಿದ್ದಾರೆ. ಈ ಮೂಲಕ ಒಮ್ಮೆ ಆಯ್ಕೆಯಾದ ಅಭ್ಯರ್ಥಿ ಅಷ್ಟೊಂದು ಸುಲಭದಲ್ಲಿ ಸೋಲದೇ ಇರುವುದೇ ಕಾಪು ಕ್ಷೇತ್ರದ ವಿಶೇಷ.

ಪ್ರವಾಸೋದ್ಯಮದಲ್ಲಿ ಕಾಪು ಲೈಟ್‌ಹೌಸ್, ಕುಂಜಾರುಗಿರಿ ಕ್ಷೇತ್ರವು ಧಾರ್ಮಿಕವಾಗಿ ವಿಶೇಷವಾಗಿ ಭಕ್ತರನ್ನು ಆಕರ್ಷಿಸುತ್ತಿದೆ. ಹೆಚ್ಚು ಗ್ರಾಮೀಣ ಪ್ರದೇಶವನ್ನು ಒಳಗೊಂಡಿರುವ ಈ ಕ್ಷೇತ್ರವು ಕಳೆದ ಚುನಾವಣೆ ವೇಳೆಗೆ  ಪುನರ್ವಿಂಗಡಣೆಯಾಗಿದೆ. ಪುನರ್ವಿಂಗಡಣೆಯ ಬಳಿಕ ಉಡುಪಿ ಹಾಗೂ ಬ್ರಹ್ಮಾವರ ಕ್ಷೇತ್ರದ ಕೆಲವು ಪ್ರದೇಶಗಳು ಕಾಪು ಕ್ಷೇತ್ರಕ್ಕೆ ಸೇರ್ಪಡೆಗೊಂಡರೆ, ಕಾಪು ಕ್ಷೇತ್ರದಲ್ಲಿದ್ದ ಇನ್ನಾ, ಮುಂಡ್ಕೂರು, ಬೆಳ್ಮಣ್ ಪ್ರದೇಶಗಳು ಕಾರ್ಕಳ ಕ್ಷೇತ್ರಕ್ಕೆ ಸೇರ್ಪಡೆಗೊಂಡವು.

1,52,210 ಒಟ್ಟು ಮತದಾ ರರಿದ್ದು, 70,605 ಪುರುಷರು ಹಾಗೂ 81,502 ಮಹಿಳಾ ಮತದಾರನ್ನು ಹೊಂದಿದ್ದಾರೆ. 
ಸಮಸ್ಯೆಗಳು ಇಲ್ಲಿ ಪ್ರಮುಖವಾಗಿ ಕುಡಿಯುವ ನೀರಿನ ಸಮಸ್ಯೆ. ಹೆಚ್ಚಿನ ಗ್ರಾಮೀಣ ಪ್ರದೇಶಗಳನ್ನೊಳಗೊಂಡ ಕಾಪು ಕ್ಷೇತ್ರದ ಜನ ಕುಡಿಯುವ ನೀರಿಗಾಗಿ ಇನ್ನು ಪರಿತಪಿಸತ್ತಿದ್ದಾರೆ. ಉಚ್ಚಿಲದಲ್ಲಿರುವ ಕಟ್ಟಿಂಗೇರಿ ಕೆರೆ, ಎ್ಲ್ಲಲೂರಿನಲ್ಲಿರುವ ದಳಂತರ ಕೆರೆ ಅಭಿವೃದ್ಧಿ ಇನ್ನೂ ಮರೀಚಿಕೆಯಾಗಿಯೇ ಉಳಿದಿದೆ. ಹಲವಾರು ವರ್ಷಗಳಿಂದ ಈ ಕೆರೆ ಅಭಿವೃದ್ಧಿಗೆ ಬೇಡಿಕೆ ಇಟ್ಟಿದ್ದರೂ ಈ ಬಾರಿ ಸ್ವಲ್ಪ ಮಟ್ಟಿಗೆ ಕಾಮಗಾರಿ ನಡೆದರೂ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಸಾಧ್ಯವಾಗಿಲ್ಲ. ಉಚ್ಚಿಲದ ಕಟ್ಟಿಂಗೇರಿ ಕೆರೆ ಇನ್ನೂ ಅಭಿವೃದ್ಧಿ ಕಾಣದೆ ಹಾಗೆಯೇ ಉಳಿದಿದೆ.

ಫಲಿಮಾರು ಗ್ರಾಪಂ ವ್ಯಾಪ್ತಿಯಲ್ಲಿರುವ ಶಾಂಭವಿ ನದಿ ನೀರನ್ನು ಬಳಸಿ ಬಹುಗ್ರಾಮ ಕುಡಿಯುವ ನೀರು ಯೋಜನೆ ಹಮ್ಮಿಕೊಳ್ಳಲಾಗಿತ್ತು. ಸರ್ಕಾರದ ಈ ಯೋಜನೆ ಉಪಯುಕ್ತವಾದರೂ ಅದು ಘೋಷಣೆಯಾಗಿಯೇ ಉಳಿಯಿತು. ಈ ಯೋಜನೆ ಅನುಷ್ಠಾನಕ್ಕೆ ಬಂದಲ್ಲಿ ಫಲಿಮಾರು, ಹೆಜಮಾಡಿ, ಪಡುಬಿದ್ರಿ, ಎರ್ಮಾಳು ತೆಂಕ, ಬಡಾ, ಮುದರಂಗಡಿ ಗ್ರಾಪಂ ವ್ಯಾಪ್ತಿಯ ಜನರ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರವಾ ಗಬಹುದಿತ್ತು. ಆದರೆ ಇನ್ನೂ ಅದು ಅನುಷ್ಠಾನ ಆಗಿಲ್ಲ.

ಹೆಜಮಾಡಿ ಬಂದರು: 10 ವರ್ಷಗಳ ಹಿಂದೆ ಸುಮಾರು 5ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಹೆಜ ಮಾಡಿ ಕೋಡಿಯ ಕಿರು ಮೀನುಗಾರಿಕಾ ಬಂದರು ಮೀನುಗಾರರ ಉಪಯೋಗಕ್ಕೆ ಇನ್ನೂ ಲಭ್ಯವಾಗಿಲ್ಲ. ಬ್ರೇಕ್ ವಾಟರ್ ಇಲ್ಲದ ಈ ಮೀನುಗಾರಿಕಾ ಬಂದರು ಮೀನುಗಾರರಿಗೆ ಉಪಯೋಗಕ್ಕೆ ಊಟಕಿಲ್ಲದ ಉಪ್ಪಿನಕಾಯಿಯಂತೆ ಆಗಿದೆ. ಬಂದರು ಉದ್ಘಾಟನಾ ಆದ ಬಳಿಕ 10ಕ್ಕೂ ಹೆಚ್ಚು ಸಚಿವರು ಬಂದು ಹೋಗಿ ಮೀನುಗಾರರಿಗೆ ಭರವಸೆಯನ್ನು ಮಾತ್ರ ನೀಡಿದ್ದು, ಮುಂದಿನ ಬಜೆಟ್‌ನಲ್ಲಿ ಅನುದಾನ ಮೀಸಲಿಡುವುದಾಗಿ ಹೇಳಿದ್ದರು. ಆದರೆ ಇದುವರೆಗೂ ಮೀನುಗಾರರ ಮುಖದಲ್ಲಿ ಮಂದಹಾಸ ಮೂಡುವ ಕೆಲಸ ಆಗಿಲ್ಲ. ಇತ್ತೀಚೆಗೆ ಪುಣೆಯ ಸಂಸ್ಥೆಯೊಂದು ಇಲ್ಲಿಗೆ ಭೇಟಿ ನೀಡಿ ಸರ್ವೇ ನಡೆಸಿ ಪ್ರತ್ಯೇಕ ಬಂದರು ನಿರ್ಮಾಣದ ಒಲವು ವ್ಯಕ್ತಪಡಿಸಿದೆ.

ಕೈಗಾರಿಕೆಗಳ ಸಮಸ್ಯೆ:
ಇತ್ತೀಚಿನ ದಿನಗಳಲ್ಲಿ ಕೈಗಾರಿಕಾ ಕ್ಷೇತ್ರವಾಗಿ ಬೆಳೆಯುತ್ತಿದ್ದು, ಇದೇ ಒಂದು ದೊಡ್ಡ ಸಮಸ್ಯೆಯಾಗಿದೆ. ಎಲ್ಲೂರಿನಲ್ಲಿ ಕಾರ್ಯಾಚರಿಸುತ್ತಿರುವ ಯುಪಿಸಿಎಲ್ ವಿದ್ಯುತ್ ಸ್ಥಾವರ, ಪಡುಬಿದ್ರಿಯಲ್ಲಿರುವ ಸುಜ್ಲಾನ್ ಕಂಪೆನಿ, ಕಾಪುವಿನ ಪಾದೂರಿನಲ್ಲಿ ನಿರ್ಮಾಣ ಹಂತದಲ್ಲಿರುವ ಕಚ್ಚಾತೈಲ ಸಂಗ್ರಹಣಾ ಘಟಕ ಐಎಎಸ್‌ಪಿಆರ್‌ಎಲ್ ಯೋಜನೆ, ಫಲಿಮಾರಿನ ನಂದಿಕೂರಿನಲ್ಲಿ ನಿರ್ಮಾಣ ಹಂತದಲ್ಲಿರುವ ವಿಶೇಷ ಕೈಗಾರಿಕಾ ವಲಯಗಳ ಮೂಲಕ ಕಾಪು ಕ್ಷೇತ್ರ ಪ್ರಮುಖವಾಗಿ ಕೈಗಾರಿಕಾ ವಲಯವಾಗಿ ಪರಿವರ್ತನೆಗೊಳ್ಳುತ್ತಿದೆ.

ಇಷ್ಟೆಲ್ಲಾ ದೊಡ್ಡ ಕಂಪೆನಿಗಳು ಇಲ್ಲಿ ಇದ್ದರೂ ನಿರುದ್ಯೋಗ ಸಮಸ್ಯೆ ಮಾತ್ರ ನೀಗಿಲ್ಲ. ಸ್ಥಳೀಯರಿಂದ ಭೂಮಿ ಕಬಳಿಸಿದ ಕೆಐಎಡಿಬಿಯು ಬೃಹತ್ ಕಂಪೆನಿಗಳಿಗೆ ಜಾಗ ನೀಡಿತ್ತು. ಆದರೆ ಕಂಪೆನಿಗಳು ಸ್ಥಳೀಯರಿಗಿಂತ ಹೆಚ್ಚಾಗಿ ಹೊರ ಜಿಲ್ಲೆ ಹಾಗೂ ರಾಜ್ಯಗಳ ಜನತೆಗೆ ಕೆಲಸ ನೀಡುತ್ತಿದೆ. ಈ ಬಗ್ಗೆ ಯಾವ ಜನಪ್ರತಿನಿಧಿಗಳೂ ಮಾತನಾಡುತ್ತಿಲ್ಲ ಎಂಬುದು ಸ್ಥಳೀಯರ ಆರೋಪ. ಯುಪಿಸಿಎಲ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದಾಗಿ ಹೇಳಿದ್ದ
ಜನಪ್ರತಿನಿಧಿಗಳಲ್ಲಿ ಈಗ ಅದರ ಬಗ್ಗೆ ಮಾತೇ ಇಲ್ಲ.

ಅಬ್ದುಲ್ ಹಮೀದ್ ಪಡುಬಿದ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT