ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಬ್ಯಾಂಕ್ ರಚನೆಗೆ ಪ್ರಸ್ತಾವ

Last Updated 18 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿರುವ ವಿವಿಧ ಸ್ತ್ರೀಶಕ್ತಿ ಸಂಘಟನೆಯ ಸದಸ್ಯರು ಸಾಲ ಪಡೆಯುವ ಸಲುವಾಗಿ ರಾಷ್ಟ್ರೀಕೃತ ಬ್ಯಾಂಕುಗಳಿಗೆ ಇನ್ನು ಮುಂದೆ ಅಲೆಯುವಂತಿಲ್ಲ. ಸ್ತ್ರೀ ಶಕ್ತಿ ಸಂಘಟನೆಗಳಿಗಾಗಿ `ಮಹಿಳಾ ಬ್ಯಾಂಕು~ ರಚನೆಯಾಗುವ ಪ್ರಸ್ತಾವ ಈಗಾಗಲೇ ಸರ್ಕಾರದ ಮುಂದಿದೆ!

ವಿವಿಧ ಜಿಲ್ಲೆಗಳಲ್ಲಿ ಅಸ್ತಿತ್ವದಲ್ಲಿರುವ ಸ್ತ್ರೀ ಶಕ್ತಿ ಸಂಘಟನೆಗಳ ಆರ್ಥಿಕ ವ್ಯವಹಾರಕ್ಕೆ ವೇದಿಕೆ ಒದಗಿಸುವ ಸಲುವಾಗಿ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು ಮಹಿಳಾ ಬ್ಯಾಂಕುಗಳ ರಚನೆಯ ಪ್ರಸ್ತಾವವನ್ನು ಈಗಾಗಲೇ ಸರ್ಕಾರದ ಮುಂದಿಟ್ಟಿದ್ದು, ಮುಖ್ಯಮಂತ್ರಿ ಸಹಿಗಾಗಿ ಕಾಯುತ್ತಿದೆ.

ರಾಜ್ಯದ ಒಟ್ಟು 30 ಜಿಲ್ಲೆಗಳಲ್ಲಿ 1.40 ಲಕ್ಷ ನೋಂದಾಯಿತ ಸ್ತ್ರೀಶಕ್ತಿ ಸಂಘಟನೆಗಳು ಅಸ್ತಿತ್ವದಲ್ಲಿವೆ. ಇತರೆ ಸಂಘಟನೆಗಳಷ್ಟೇ ಸ್ಪಧಾತ್ಮಕವಾಗಿ ಸ್ತ್ರೀ ಶಕ್ತಿ ಸಂಘಟನೆಗಳು ಹಣಕಾಸು ವ್ಯವಹಾರದಲ್ಲಿ  ಪೈಪೋಟಿ ನೀಡುತ್ತಿವೆ. ಸ್ತ್ರೀ ಶಕ್ತಿ ಸಂಘಟನೆಗಳಲ್ಲಿ ಸಂಗ್ರಹವಾಗುವ ಹಣವನ್ನು ಕ್ರೋಢೀಕರಿಸುವ ಸಲುವಾಗಿ ಈ ಬ್ಯಾಂಕಿನ ಯೋಜನೆಯನ್ನು ರಚಿಸಲಾಗಿದೆ.

ಪ್ರತಿ ಜಿಲ್ಲೆಯಲ್ಲಿರುವ ಸ್ತ್ರೀ ಶಕ್ತಿ ಸಂಘಟನೆಯಿಂದ ಸಾಕಷ್ಟು ಮೊತ್ತದ ಹಣವು ಸಂಗ್ರಹಗೊಳ್ಳುತ್ತಿದೆ. ಶಿವಮೊಗ್ಗ ಜಿಲ್ಲೆ ಒಂದರಲ್ಲೇ 56 ಕೋಟಿ ರೂಪಾಯಿ ಸಂಗ್ರಹಗೊಂಡಿದೆ. ಆದರೆ, ಈ ಹಣವು ವಿವಿಧ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಹಂಚಿ ಹೋಗಿದೆ. ಸಾಕಷ್ಟು ಠೇವಣಿ ಹೊಂದಿದ್ದರೂ ಸ್ತ್ರೀಶಕ್ತಿ ಸಂಘಟನೆಗಳಿಗೆ ಸಾಲ ನೀಡುವ ಸಂದರ್ಭದಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳು ಮೀನ ಮೇಷ ಎಣಿಸುತ್ತವೆ. ಸಾಲ ಪಡೆಯುವ ಸಂದರ್ಭದಲ್ಲಿ ಬ್ಯಾಂಕುಗಳ ವ್ಯವಸ್ಥಾಪಕರ ಮರ್ಜಿಗೆ ಕಾಯಬೇಕು ಮತ್ತು ದಾಖಲೆಗಳ ಪರಿಶೀಲನೆಯಲ್ಲಿಯೇ ಸಮಯ ವ್ಯರ್ಥವಾಗುತ್ತಿದೆ. ಹೀಗಾಗಿ ಮಹಿಳಾ ಬ್ಯಾಂಕ್ ಆರಂಭವಾದರೆ ಸ್ತ್ರೀ ಶಕ್ತಿ ಸಂಘಟನೆಗಳಿಗೆ ಇನ್ನಷ್ಟು ಆರ್ಥಿಕ ಬೆಂಬಲ ನೀಡಲಿದೆ.

ಮಹಿಳಾ ಬ್ಯಾಂಕ್ ಬಗ್ಗೆ: ಈ ಪ್ರಸ್ತಾವದ ಪ್ರಕಾರ ಜಿಲ್ಲೆಯೊಂದರಲ್ಲಿ ಸ್ತ್ರೀ ಬ್ಯಾಂಕುಗಳು ರಚನೆಗೊಳ್ಳುತ್ತವೆ. ಇದರ ಸಿಬ್ಬಂದಿ ಮತ್ತು ಆಡಳಿತ ನಿರ್ವಹಣೆಯ ಜವಾಬ್ದಾರಿಯನ್ನು ಸಂಪೂರ್ಣವಾಗಿ ವಿವಿಧ ಸ್ತ್ರೀಶಕ್ತಿ ಸಂಘಟನೆಯ ಸದಸ್ಯರಿಗೆ ವಹಿಸಲಾಗುತ್ತದೆ. ಒಟ್ಟಿನಲ್ಲಿ ಈ ಬ್ಯಾಂಕು ಸಂಪೂರ್ಣ ಮಹಿಳೆಯರದ್ದೇ ಆಗಿರುತ್ತದೆ. ಇದರ ವ್ಯವಹಾರವು ನಿಗಮದ ಮೂಲಕವೇ ನಡೆಯಲಿದೆ. ರಾಷ್ಟ್ರೀಕೃತ ಬ್ಯಾಂಕುಗಳಿಗೆ ಪರ್ಯಾಯವಾಗಿ ಸ್ತ್ರೀಶಕ್ತಿ ಸಂಘಟನೆಗಳ ಆರ್ಥಿಕ ವ್ಯವಹಾರದ ಸಂಪೂರ್ಣ ಜವಾಬ್ದಾರಿಯನ್ನು ಈ ಬ್ಯಾಂಕ್ ವಹಿಸಿಕೊಳ್ಳಲಿದೆ.ಈ ಬಗ್ಗೆ `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಸರೋಜಿನಿ ಭಾರದ್ವಾಜ್, `ಈ ಯೋಜನೆಯು ಮೊದಲ ಬಾರಿಗೆ ರಾಜ್ಯದಲ್ಲಿ ಅನುಷ್ಠಾನವಾಗಲಿದೆ.

ಪ್ರಾಥಮಿಕ ಹಂತದಲ್ಲಿ ಶಿವಮೊಗ್ಗ ಮತ್ತು ಮಂಗಳೂರು ಜಿಲ್ಲೆಯಲ್ಲಿ ಸ್ತ್ರೀ ಬ್ಯಾಂಕು ರಚನೆಗೆ ಸರ್ಕಾರದಿಂದ ಹಸಿರು ನಿಶಾನೆ ದೊರೆತಿದೆ. ಶಿವಮೊಗ್ಗದಲ್ಲಿ ಕಟ್ಟಡ ನಿರ್ಮಾಣಕ್ಕೆ ನಿವೇಶನ ಲಭ್ಯವಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರಾಗಿದ್ದ ಸಿ.ಸಿ.ಪಾಟೀಲ್ ಅವರ ಮುಂದೆ ಈ ಪ್ರಸ್ತಾವ ಮುಂದಿಡಲಾಗಿತ್ತು. ಅವರು ಗದಗದಲ್ಲಿ ಯೋಜನೆ ಆರಂಭಿಸುವಂತೆ ಸೂಚಿಸಿದ್ದರು~ ಎಂದು ಹೇಳಿದರು.

`ನಿಗಮದ ಬಜೆಟ್‌ನ ಹಣ 50 ಕೋಟಿ ರೂಪಾಯಿಯನ್ನು ಸಹ ಈ ಬ್ಯಾಂಕಿನಲ್ಲಿಯೇ ಇರಿಸಲಾಗುವುದು. ಸ್ತ್ರೀ ಶಕ್ತಿ ಸಂಘಟನೆಗಳ ಸದಸ್ಯರಿಗೆ ಬ್ಯಾಂಕಿನ ಸದಸ್ಯತ್ವವನ್ನು ನೀಡಿ, ಬ್ಯಾಂಕಿನ ಸಮಗ್ರ ಜವಾಬ್ದಾರಿಯನ್ನು ವಹಿಸಲಾಗುವುದು. ಮೊದಲ ಹಂತವಾಗಿ ಬ್ಯಾಂಕಿನ ವ್ಯವಹಾರವನ್ನು ಸ್ತ್ರೀಶಕ್ತಿ ಸಂಘಟನೆಗಳಿಗೆ ಸೀಮಿತಗೊಳಿಸಲಾಗುವುದು. ನಂತರದ ದಿನಗಳಲ್ಲಿ ಅಸಂಘಟಿತ ಮಹಿಳೆಯರನ್ನು ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಚಿಂತಿಸಲಾಗುವುದು~ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT