ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ವಿಶ್ವಕಪ್ ಕ್ರಿಕೆಟ್: ಭಾರತ ಎದುರಾಳಿ ಪಾಕಿಸ್ತಾನ

ಸನಾ ಪಡೆಗೆ ಮೊದಲ ಗೆಲುವಿನ ಗುರಿ
Last Updated 6 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ಭುವನೇಶ್ವರ (ಪಿಟಿಐ): ಮಹಿಳಾ ವಿಶ್ವಕಪ್ ಕ್ರಿಕೆಟ್ ಟೂರ್ನಿಯಿಂದ ಲೀಗ್ ಹಂತದಲ್ಲಿಯೇ ಹೊರಬಿದ್ದು ಮುಖಭಂಗ ಅನುಭವಿಸಿರುವ ಆತಿಥೇಯ ಭಾರತ ತಂಡ ಏಳನೇ ಸ್ಥಾನ ಪಡೆಯಲು ಪಾಕಿಸ್ತಾನ ವಿರುದ್ಧ ಗುರುವಾರ `ಪ್ಲೇ ಆಫ್' ಪಂದ್ಯವನ್ನಾಡಲಿದೆ.

ಶ್ರೀಲಂಕಾ ವಿರುದ್ಧ ಕೊನೆಯ ಲೀಗ್ ಪಂದ್ಯದಲ್ಲಿ ಸೋಲು ಕಂಡಿರುವ ಮಿಥಾಲಿ ರಾಜ್ ಪಡೆ ಕೊನೆಯ ಪಂದ್ಯದಲ್ಲಾದರೂ ಗೆಲುವು ಸಾಧಿಸುವ ಗುರಿಯೊಂದಿಗೆ ಬುಧವಾರ ಇಲ್ಲಿಗೆ ಬಂದಿಳಿಯಿತು. ಪಂದ್ಯ ಇಲ್ಲಿನ ಬಾರಾಬತಿ ಕ್ರೀಡಾಂಗಣದಲ್ಲಿ ನಡೆಯಲಿದೆ.  ಮಿಥಾಲಿ ಹಾಗೂ ಉಳಿದ ಆಟಗಾರ್ತಿಯರಿಗೆ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಸ್ವಾಗತ ನೀಡಿ ಬಿಗಿಭದ್ರತೆಯೊಂದಿಗೆ ಹೋಟೆಲ್‌ಗೆ ಕರೆದೊಯ್ಯಲಾಯಿತು.

ಮೂರು ಲೀಗ್ ಪಂದ್ಯಗಳನ್ನಾಡಿರುವ ಭಾರತ ಎರಡರಲ್ಲಿ ಸೋಲು ಕಂಡು ಒಂದು ಪಂದ್ಯದಲ್ಲಿ ಮಾತ್ರ ಗೆಲುವು ಸಾಧಿಸಿದೆ. ಆದರೆ, ಎದುರಾಳಿ ಪಾಕಿಸ್ತಾನ ಆಡಿದ ಮೂರು ಪಂದ್ಯಗಳಲ್ಲಿಯೂ ನಿರಾಸೆ ಅನುಭವಿಸಿದೆ. ಕೊನೆಯ ಪಂದ್ಯದಲ್ಲಿಯಾದರೂ ಗೆಲುವು ಸಾಧಿಸಬೇಕು ಎನ್ನುವ ಗುರಿ ಪಾಕ್ ಆಟಗಾರ್ತಿಯರದ್ದು.

ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಭಾರತದ ಆರಂಭಿಕ ಬ್ಯಾಟ್ಸ್‌ಮನ್‌ಗಳು ಪಾಕ್ ವಿರುದ್ಧವೂ ಅದೇ ರೀತಿಯ ಪ್ರದರ್ಶನ ನೀಡುವುದು ಅಗತ್ಯವಿದೆ. ಹಿಂದಿನ ಎರಡೂ ಪಂದ್ಯಗಳು ಸೇರಿದಂತೆ ಭಾರತದ ಬೌಲರ್‌ಗಳು ಒಟ್ಟು 550 ರನ್ ಬಿಟ್ಟುಕೊಟ್ಟಿದ್ದರು. ಆದ್ದರಿಂದ ಬೌಲಿಂಗ್ ವಿಭಾಗವೂ ಬಲಗೊಳ್ಳುವ ಅನಿವಾರ್ಯತೆಯಿದೆ.

ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲಿ ಸಮರ್ಥ ಪ್ರದರ್ಶನ ತೋರುವಲ್ಲಿ ಪಾಕ್ ತಂಡದವರು ವಿಫಲರಾಗಿದ್ದಾರೆ. ಬಿಸ್ಮಾಹ ಮರೂಫ್ ಮೂರು ಪಂದ್ಯಗಳಿಂದ ಒಟ್ಟು 67 ರನ್ ಗಳಿಸಿದ್ದು ಈ ತಂಡದ ವೈಯಕ್ತಿಕ ಒಟ್ಟು ಸ್ಕೋರು. ನಾಲ್ಕು ವಿಕೆಟ್ ಪಡೆದಿರುವ ಅಸ್ಮಾವಿಯಾ ಇಕ್ಬಾಲ್ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿದ್ದಾರೆ. ಈ ತಂಡ ಲೀಗ್ ಹಂತದಲ್ಲಿ ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ಎದುರು ಪರಾಭವಗೊಂಡಿತ್ತು

ತಂಡಗಳ ಇಂತಿವೆ:
ಭಾರತ: ಮಿಥಾಲಿ ರಾಜ್ (ನಾಯಕಿ), ಹರ್ಮನ್‌ಪ್ರೀತ್ ಕೌರ್, ಜೂಲನ್ ಗೋಸ್ವಾಮಿ, ಅಮಿತಾ ಶರ್ಮ, ಗೌಹಾರ್ ಸುಲ್ತಾನಾ, ಎಂ.ತಿರುಶ್ ಕಾಮಿನಿ, ಸುಲಕ್ಷಣಾ ನಾಯಕ್, ಎಕ್ತಾ ಬಿಸ್ತ್, ಮೋನಾ ಮೆಶ್ರಾಮ್, ರಸನರಾ ಪರ್ವೀನ್, ನಿರಂಜನಾ ನಾಗರಾಜನ್, ಪೂನಮ್ ರಾವುತ್, ರೀಮಾ ಮಲ್ಹೋತ್ರಾ, ಕರುಣಾ ಜೈನ್ ಹಾಗೂ ಶುಭಲಕ್ಷ್ಮಿ ಶರ್ಮ.

ಪಾಕಿಸ್ತಾನ: ಸನಾ ಮೀರ್ (ನಾಯಕಿ), ಜಾವೇರಿಯಾ ಖಾನ್, ಬತೂಲ್ ಫಾತಿಮಾ, ಎಲಿಜಬಿತ್ ಖಾನ್, ನೈನಾ ಅಬೀಬ್, ಕನಿತಾ ಜಲಿಲ್, ಸಾದಿಯಾ ಯೂಸುಫ್, ಸುಮಯಾ ಸಿದ್ದಿಕಿ, ಬಿಸ್ಮಾಹ ಮರೂಫ್, ಅಸ್ಮಾವಿಯಾ ಇಕ್ಬಾಲ್, ದಿಯಾನಾ   ಬೇಗ್, ನಹಿದಾ ಖಾನ್, ನಿದಾ ದಾರ್, ರಬಿಯಾ ಷಾ ಹಾಗೂ ಸಿದ್ರಾ ಅಮೀನ್.

ಅಂಪೈರ್‌ಗಳು: ಜಾರ್ಜ್ ಬ್ರಾತ್‌ವೈಟ್ (ವೆಸ್ಟ್ ಇಂಡೀಸ್), ಇಯಾನ್ ರಾಮಜಿ (ಸ್ಕಾಟ್ಲೆಂಡ್)
ರೆಫರಿ: ಡೇವಿಡ್ ಜುಕೆಸ್ (ಇಂಗ್ಲೆಂಡ್)

ಪಂದ್ಯ ಆರಂಭ: ಬೆಳಿಗ್ಗೆ 9ಕ್ಕೆ. ಸ್ಥಳ: ಬಾರಾಬತಿ ಕ್ರೀಡಾಂಗಣ, ಭುವನೇಶ್ವರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT