ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ವಿಶ್ವವಿದ್ಯಾಲಯ ಸಾಧಕಿಯರಿಗೆ ಪುರಸ್ಕಾರ

Last Updated 20 ಜನವರಿ 2012, 19:30 IST
ಅಕ್ಷರ ಗಾತ್ರ

ಮಹಿಳೆಯರಿಗೆ ಉನ್ನತ ಶಿಕ್ಷಣ ಮತ್ತು ತರಬೇತಿ ನೀಡುವ ಮೂಲಕ ಮಹಿಳಾ ಸಬಲೀಕರಣ ಸಾಧಿಸುವ ಉದ್ದೇಶದಿಂದ 2003ರಲ್ಲಿ ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯವನ್ನು ಸ್ಥಾಪನೆ ಮಾಡಲಾಯಿತು. ಈ ವಿಶ್ವವಿದ್ಯಾಲಯ, ರಾಜ್ಯದ ಏಕೈಕ ಮಹಿಳಾ ವಿಶ್ವವಿದ್ಯಾಲಯವಾಗಿದ್ದು ದೇಶದಲ್ಲಿ ಏಳನೇ ವಿಶ್ವವಿದ್ಯಾಲಯವಾಗಿದೆ.

ಮಹಿಳೆಯರಿಗೆ ಸುಲಭವಾಗಿ ಉನ್ನತ ಶಿಕ್ಷಣದ ಅವಕಾಶಗಳು ಲಭ್ಯವಾಗಬೇಕು ಎಂಬ ಆಶಯಕ್ಕನುಗುಣವಾಗಿ ಏಕಕಾಲಕ್ಕೆ ಎರಡು ಪದವಿ ನೀಡುವ ಕಾರ್ಯಕ್ರಮದ ಅಂಗವಾಗಿ ಮಹಿಳಾ ವಿಶ್ವವಿದ್ಯಾಲಯ, ವಿದ್ಯಾರ್ಥಿನಿಯರಿಗೆ ಸ್ನಾತಕೋತ್ತರ ಪದವಿ ಜತೆಜತೆಗೇ ಸ್ನಾತಕೋತ್ತರ ಡಿಪ್ಲೊಮಾ, ಸರ್ಟಿಫಿಕೇಟ್ ಕೋರ್ಸ್‌ಗಳಿಗೂ ಪ್ರವೇಶ ನೀಡುತ್ತಿದೆ. ಪ್ರತಿಯೊಬ್ಬ ವಿದ್ಯಾರ್ಥಿನಿಯೂ ನಾಲ್ಕನೇ ಸೆಮಿಸ್ಟರ್‌ನಲ್ಲಿ ಪ್ರಾಜೆಕ್ಟ್ ವರ್ಕ್ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಮಹಿಳೆ ಮತ್ತು ಪಶುಸಂಗೋಪನೆ

ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ, ಮಹಿಳೆ ಮತ್ತು ಪಶುಸಂಗೋಪನೆ ಅಭಿವೃದ್ಧಿ ವಿಷಯವನ್ನು 2010ರಲ್ಲಿ ಮಹಿಳಾ ಅಧ್ಯಯನ ಪಠ್ಯಕ್ರಮದಲ್ಲಿ ಸೇರ್ಪಡೆ ಮಾಡಿರುವ ಶ್ರೇಯಸ್ಸು ಈ ವಿಶ್ವವಿದ್ಯಾಲಯದ್ದು. ಈ ಪಠ್ಯವನ್ನು ಇಂಗ್ಲೆಂಡ್‌ನ ಡೆಲ್‌ಪಿಎಚ್‌ಇ-ಡೆವೆಲಪ್‌ಮೆಂಟ್‌ನವರ ಸಹಯೋಗದಲ್ಲಿ ರೂಪಿಸಲಾಗಿದೆ.

ಮಹಿಳೆಯರು ಸುಲಭವಾಗಿ ಮತ್ತು ಕೈಗೆಟುಕುವ ದರದಲ್ಲಿ ಉನ್ನತ ಶಿಕ್ಷಣ ಪಡೆಯಲು ಸೂಕ್ತ ವಾತಾವರಣ ನಿರ್ಮಾಣ ಮಾಡುವಲ್ಲಿ ಮಹಿಳಾ ವಿಶ್ವವಿದ್ಯಾಲಯ ಹಲವಾರು ಕ್ರಮ ಕೈಕೊಂಡಿದೆ. ಅತ್ಯಂತ ಕಡಿಮೆ ಪ್ರವೇಶ ಮತ್ತು ಪರೀಕ್ಷಾ ಶುಲ್ಕ ನಿಗದಿಗೊಳಿಸಲಾಗಿದೆ.

ಅನಿವಾರ್ಯ ಕಾರಣಗಳಿಂದ ವಿದ್ಯಾಭ್ಯಾಸ ಮೊಟಕುಗೊಳಿಸಿ ನಂತರ ವಿದ್ಯಾಭ್ಯಾಸ ಮುಂದುವರೆಸಲು ಬಯಸುವ ವಿದ್ಯಾರ್ಥಿನಿಯರಿಗೆ ವಯೋಮಿತಿ ಸೀಮಿತಗೊಳಿಸದೇ ಅವರು ಹಿಂದೆ ಗಳಿಸಿರುವ ಕ್ರೆಡಿಟ್‌ಗಳನ್ನು ಗಣನೆಗೆ ತೆಗೆದುಕೊಂಡು ವಿದ್ಯಾಭ್ಯಾಸ ಮುಂದುವರೆಸಲು ಅವಕಾಶ ಕಲ್ಪಿಸಲಾಗಿದೆ.
 
ಯಾವುದೇ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸವನ್ನು ಅರ್ಧಕ್ಕೆ ಬಿಟ್ಟ ವಿದ್ಯಾರ್ಥಿನಿಯರು ಮಹಿಳಾ ವಿಶ್ವವಿದ್ಯಾಲಯದಲ್ಲಿ ತಮ್ಮ ಶಿಕ್ಷಣವನ್ನು ಮುಂದುವರೆಸಬಹುದು. ಮತ್ತು ಅವರಿಗೆ ಸುಲಭವಾಗಿ ಉನ್ನತ ಶಿಕ್ಷಣದ ಅವಕಾಶಗಳು ದೊರೆಯುವಂತಹ ಕ್ರಮಗಳನ್ನು ಮಹಿಳಾ ವಿವಿ ಕೈಗೊಂಡಿದೆ.

ಪ್ರತಿ ವರ್ಷ ನಡೆಯುವ ಘಟಿಕೋತ್ಸವದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರು ಮಾಡಿರುವ ಸಾಧನೆಯನ್ನು ಗುರುತಿಸಿ ಗೌರವ ಡಾಕ್ಟರೇಟ್ ಪದವಿ ನೀಡಲಾಗುತ್ತಿದೆ. ಈ ವರ್ಷದ ಘಟಿಕೋತ್ಸವ ನಾಳೆ (ಜನವರಿ 22) ನಡೆಯಲಿದ್ದು, ರಾಜಕೀಯ ನಾಯಕಿ ನಾಗಮ್ಮ ಕೇಶವಮೂರ್ತಿ, ರಂಗಕರ್ಮಿ ಅರುಂಧತಿ ನಾಗ್, ಕ್ರೀಡಾಪಟು ಅಶ್ವಿನಿ ನಾಚಪ್ಪ ಮತ್ತು ರಾಜ್ಯದ ಪ್ರಥಮ ಮಹಿಳಾ ಹೃದಯರೋಗತಜ್ಞೆ ಡಾ.ವಿಜಯಲಕ್ಷ್ಮಿ ಬಾಳೇಕುಂದ್ರಿ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT