ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಸಬಲೀಕರಣ ಭಾಷಣಕ್ಕೆ ಸೀಮಿತ

Last Updated 11 ಮಾರ್ಚ್ 2011, 6:10 IST
ಅಕ್ಷರ ಗಾತ್ರ

ಶಿವಮೊಗ್ಗ: ಈಗಲೂ ಮಹಿಳಾ ಸಬಲೀಕರಣ ಎನ್ನುವುದು ಭಾಷಣ ಮತ್ತು ಬರವಣಿಗೆಗೆ ಮಾತ್ರ ಸೀಮಿತವಾಗಿದೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ವಿ. ತಿಮ್ಮಯ್ಯ ಬೇಸರ ವ್ಯಕ್ತಪಡಿಸಿದರು. ನಗರದ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನಲ್ಲಿ ಮಂಗಳವಾರ ಮಹಿಳಾ ದಿನಾಚರಣೆ ಅಂಗವಾಗಿ ಎಫ್‌ಪಿಎ ಇಂಡಿಯಾ ‘ಸ್ತ್ರೀ- ವಾಸ್ತವ ಮತ್ತು ಪ್ರಾತಿನಿಧಿಕತೆ’ ಕುರಿತು ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಇಂದು ಪುರುಷನಿಗೆ ಸರಿಸಮಾನವಾಗಿ ಮಹಿಳೆ ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾಳೆ. ಆದರೂ ಸಮಾಜದಲ್ಲಿ ಸಮಾನ ಪ್ರಾತಿನಿಧ್ಯ ದೊರೆತಿಲ್ಲ. ಸಬಲೀಕರಣ ಬರೀ ಭಾಷಣ ಮತ್ತು ಬರವಣಿಗೆಯಲ್ಲಿಯೇ ಉಳಿದುಕೊಂಡಿದೆ. ಕಾರ್ಯರೂಪಕ್ಕೆ ಬಂದಿಲ್ಲ. ಹಾಗಾಗಿ, ಮಹಿಳೆಯರ ಶೋಷಣೆ ಇನ್ನೂ ಅಲ್ಲಲ್ಲಿ ಜೀವಂತವಾಗಿದೆ. ಹುಟ್ಟಿನಿಂದಲೇ ಮಹಿಳೆ ಬಗ್ಗೆ ತಾರತಮ್ಯ ಶುರುವಾಗುತ್ತದೆ ಎಂದು ವಿಷಾದಿಸಿದರು.

ಸಮಾಜದಲ್ಲಿ ಸಮಾನ ಸ್ಥಾನಮಾನ ನೀಡಬೇಕು. ಹೆಣ್ಣನ್ನು ನೋಡುವ ದೃಷ್ಟಿಕೋನ ಬದಲಾಗಬೇಕು. ಸಮಾನ ಸ್ಥಾನಮಾನ ನೀಡಬೇಕು. ಅಂದಾಗ ಸಬಲೀಕರಣ ಸಾಧ್ಯ ಎಂದು ತಿಳಿಸಿದರು. ಎಫ್‌ಪಿಎ ಇಂಡಿಯಾ ಉಪಾಧ್ಯಕ್ಷೆ ಎಚ್. ವಿಶಾಲಾಕ್ಷಿ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿ, ಮಧ್ಯಕಾಲೀನ ಯುಗದಲ್ಲಿ ಸಾಹಿತಿಗಳೂ ಸ್ತ್ರೀ ಸಮಾನತೆಗೆ ಪ್ರಾತಿನಿಧ್ಯ ನೀಡಿರಲಿಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಮಹಿಳೆಯರಿಗೂ ಪ್ರಾಧಾನ್ಯತೆ ದೊರೆತಿರಲಿಲ್ಲ. ಆದರೆ, ಗಾಂಧೀಜಿ ಪ್ರತಿಪಾದನೆ, ಸ್ವಾತಂತ್ರ್ಯಾನಂತರದ ಹೋರಾಟಗಳಿಂದಾಗಿ ಇಂದು ಸಾಕಷ್ಟು ಸುಧಾರಣೆ ಕಂಡಿದೆ ಎಂದರು.

ಮಧ್ಯಕಾಲೀನ ಯುಗದಲ್ಲಿ ನಿರ್ಲಕ್ಷಿಸಲ್ಪಟ್ಟ ಮಹಿಳೆ ಇಂದು ಹೋರಾಟದ ಫಲವಾಗಿ ಔದ್ಯೋಗಿಕ ಮತ್ತು ಶೈಕ್ಷಣಿಕವಾಗಿ ಪುರುಷನಿಗೆ ಸರಿಸಮನಾಗಿ ನಿಲ್ಲುವಂತಾಗಿದ್ದಾಳೆ. ಸಾಕಷ್ಟು ಅವಕಾಶಗಳನ್ನು ಪಡೆದುಕೊಂಡಿದ್ದಾಳೆ ಎಂದು ತಿಳಿಸಿದರು. ಎಫ್‌ಪಿಎ ಇಂಡಿಯಾ ಅಧ್ಯಕ್ಷ ಡಿ. ಹನುಮಂತರಾವ್, ಪ್ರಾಂಶುಪಾಲರಾದ ಪ್ರೊ.ಎನ್.ಬಿ. ತುಳಜಪ್ಪ ಉಪಸ್ಥಿತರಿದ್ದರು. ಲಲಿತಾ ಪ್ರಾರ್ಥಿಸಿದರು. ಚೈತ್ರಾ ಸ್ವಾಗತಿಸಿದರು. ಮಧ್ಯಾಹ್ನ ನಡೆದ ಗೋಷ್ಠಿಗಳಲ್ಲಿ ಮಾಧ್ಯಮಗಳಲ್ಲಿ ಮಹಿಳೆ ಕುರಿತು ಪ್ರೊ.ಶೈಲಜಾ ಮಾತನಾಡಿದರು. ಟಿ.ಎ. ಶಶಿರೇಖಾ, ಪ್ರೊ.ಡಿ.ಎಸ್. ಮಂಜುನಾಥ್ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT