ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆ ಮತ್ತು ವೈಚಾರಿಕತೆ

ಬೊಗಸೆಯಲ್ಲಿ ಹೊಳೆ ನೀರು
Last Updated 4 ಮೇ 2013, 19:59 IST
ಅಕ್ಷರ ಗಾತ್ರ

ಪರಸ್ಪರ ವಿರುದ್ಧವಾದ ಎಲ್ಲವೂ ಒಂದರ ಮಗ್ಗುಲಲ್ಲಿ ಒಂದು ಆರಾಮವಾಗಿ  ಇರುವಂಥ ಬಹುಮುಖಿ ಸಾಂಸ್ಕೃತಿಕ ಚಿಂತನೆ ಈ ದೇಶದ್ದು. ಆದ್ದರಿಂದ ಯಾವುದೋ ಒಂದನ್ನೇ ಇಡಿಯಾದ ಸಾಂಸ್ಕೃತಿಕ ಸತ್ಯವೆಂದು ತೀರ್ಮಾನಿಸುವುದು ಅಸಮಂಜಸ ಆಗಿಬಿಡಬಹುದು. ಉದಾಹರಣೆಗೆ `ಹೆಂಗಸರ ಬುದ್ಧಿ ಮೊಳಕಾಲ ಕೆಳಗೆ' ಅನ್ನುವವರ ಮಗ್ಗುಲಲ್ಲೇ `ಸ್ತ್ರೀ ಬುದ್ಧಿಃ ಪ್ರಳಯಾಂತಕಃ' ಎನ್ನುವುದೂ ಇದೆ. ಇವೆರಡೂ ನೇತ್ಯಾತ್ಮಕವೇ ಎಂದು ಆಕ್ಷೇಪಿಸಬಹುದು. ಆದರೆ ಹೆಣ್ಣಿನ ಹಿರಿಮೆಯನ್ನು ಬಲವಾಗಿ ಎತ್ತಿ ಹೇಳಿದ ವರಾಹ ಮಿಹಿರನಂಥ ಅನೇಕರ ವಿಚಾರಗಳನ್ನು ನಾವು ನೋಡದೆ  ಸ್ಮೃತಿಗ್ರಂಥಗಳು ಬೋಧಿಸುವ ನಿಯಮಗಳನ್ನು ಸಾರ್ವತ್ರಿಕವೆಂದೂ ಇಂಡಿಯಾದಲ್ಲಿ ಎಲ್ಲೆಡೆ ಸದಾ ಅಸ್ತಿತ್ವದಲ್ಲಿದ್ದು ಅವುಗಳೇ ಸಾಮಾಜಿಕ ಜೀವನದ ಗತಿಯನ್ನು ನಿರ್ಧರಿಸುತ್ತಿದ್ದವು ಎಂದೂ ಹೇಳುವುದು ಅಸಮಗ್ರ ತಿಳಿವಳಿಕೆಯೇ ಆಗುತ್ತದೆ. ಹೀಗಾಗಿ ನಮ್ಮ ದೇಶೀಯತೆಯ ನೆಲೆಯಿಂದ “ಭಾರತೀಯ” (ಸಾಮ್ರೋಜ್ಯಶಾಹಿ ಅಥವಾ ಏಕಾಧಿಪತ್ಯದ್ದಲ್ಲ) ಎನ್ನಬಹುದಾದ ಸ್ತ್ರೀವಾದದ ವೈಚಾರಿಕ ಲಕ್ಷಣಗಳನ್ನು ಕಟ್ಟಬೇಕಾದರೆ  ಸ್ತ್ರೀಶೋಷಕ ಅಂಶಗಳನ್ನು ಮಾತ್ರವಲ್ಲದೆ, ಸ್ತ್ರೀಸಬಲತೆಯ ಲಕ್ಷಣಗಳನ್ನೂ ಅವುಗಳ ಅನಂತ ಸಂಕೀರ್ಣ ರೂಪಗಳನ್ನೂ ಗುರುತಿಸಬೇಕಾಗುತ್ತದೆ.

ವೈಚಾರಿಕತೆಯ ವಿಷಯಕ್ಕೆ ಬರೋಣ. ಗಾರ್ಗಿ ಮತ್ತು ಮೈತ್ರೇಯಿಯರ ವೈದಿಕ ಮಾದರಿ ಮಾತ್ರವಲ್ಲ ಆದಿತೀರ್ಥಂಕರನ ಪುತ್ರಿಯರಾದ ಬ್ರಾಹ್ಮೀ ಮತ್ತು ಸುಂದರಿಯರ ಜೈನ ಮಾದರಿಗಳು, ಬೌದ್ಧ ಸ್ಥವಿರೆಯರ ಮಾದರಿಗಳಿಂದ ಹಿಡಿದು ಬಹು ದೀರ್ಘ ಕಾಲದ ಮಹಿಳಾ ತತ್ವಚಿಂತಕರ ಸರಣಿಯೇ ನಮ್ಮ ಬೆನ್ನಿಗಿರುತ್ತದೆ. ಆದರೆ ಅದನ್ನು ಯಾರೂ ಶೋಧಿಸಿಲ್ಲ ಅಷ್ಟೆ. ಮಧ್ಯಕಾಲೀನ ತಮಿಳು ಜೈನ ಕಾವ್ಯವಾದ “ನೀಲಕೇಶಿ“ಯಲ್ಲಿ ಕುಂಡಲ ಕೇಶೀ ಎಂಬ ಬೌದ್ಧ ತರ್ಕಶಾಸ್ತ್ರ ಪಂಡಿತೆಯು ಅನ್ಯ ದಾರ್ಶನಿಕ ಪಂಥಗಳ ಎಲ್ಲಾ ವಿದ್ವಾಂಸರನ್ನೂ ತರ್ಕದಿಂದ ಸೋಲಿಸಿದ್ದಳೆಂದೂ, ಆಕೆಯನ್ನು ಜೈನ ಆರ್ಯಿಕೆ ನೀಲಕೇಶಿಯು ತರ್ಕದಿಂದಲೇ ಸೋಲಿಸಿ ಜೈನ ದರ್ಶನದ ಶ್ರೇಷ್ಠತೆಯನ್ನು ಸಾರಿದಳೆಂದೂ ಚಿತ್ರಿಸಲಾಗಿದೆ (ಡಾ.ಪ್ರೀತಿ ಶುಭಚಂದ್ರ : ಸೃಜನೆಯ ಮೂಡು, ಪುಟ 20). ಇದನ್ನು ಕಾಲ್ಪನಿಕ ಕಾವ್ಯವೆಂದೇ ಇಟ್ಟುಕೊಂಡರೂ ಸ್ತ್ರೀಯರ ವೈಚಾರಿಕತೆಗೂ  ಈ ದೇಶದಲ್ಲಿ ಉನ್ನತವಾದ ಸ್ಥಾನ ಇದ್ದುದರಿಂದಲೇ ಅಂಥದೊಂದು ಕಲ್ಪನೆಯಾದರೂ ಹುಟ್ಟಿರುತ್ತದೆ  ಎನ್ನುವುದನ್ನು ಗಮನಿಸಬೇಕು. ಆದ್ದರಿಂದ ವೈಚಾರಿಕತೆ ಪುರುಷರಷ್ಟೇ  ಸ್ತ್ರೀಯರದೂ ಸೃಷ್ಟಿ ಎಂಬುದು ಸ್ವತಃ ಸಿದ್ಧವಾಗುತ್ತದೆ.

ವೈಚಾರಿಕತೆ, ತರ್ಕ, ತಾತ್ವಿಕ ಚಿಂತನೆಗಳಲ್ಲಿ ಮಹಿಳೆ ತೊಡಗಿರುವುದು ಮಾತ್ರವೇ ಅಲ್ಲ; ಅತ್ಯಂತ ಆಂತರಂಗಿಕ ಧ್ಯಾನ ಸಮಾಧಿಯನ್ನು ಬೋಧಿಸುವ ಯೋಗಶಾಸ್ತ್ರವನ್ನು ಪತಂಜಲಿಗೆ ಹೇಳಿಕೊಟ್ಟವಳು ಒಬ್ಬ ಯೋಗಿನಿಯೇ ಎಂದು ಪ್ರತಿಪಾದಿಸುವ ಒಂದು ಐತಿಹ್ಯವೂ ಇದೆ. ಅಂದರೆ ಗಹನವಾದ ಬೌದ್ಧಿಕತೆಗಾಗಲೀ ತತ್ವಚಿಂತನೆಗೇ ಆಗಲಿ ಮಹಿಳೆಗೆ ಅಡ್ಡಿಮಾಡದ ಇಂಥ ಆಲೋಚನೆಯ ಪರಂಪರೆಗಿಂತ ತೀರಾ ಭಿನ್ನವಾಗಿ ಹೆಣ್ಣನ್ನೂ ಅವೈಚಾರಿಕತೆಯನ್ನೂ ಸಮೀಕರಿಸುವ ಪಶ್ಚಿಮದ ತತ್ವಶಾಸ್ತ್ರದ ಪರಂಪರೆಯನ್ನು ಉದ್ದೇಶವಾಗಿಟ್ಟುಕೊಂಡು ಹೆಲೆನ್ ಸಿಕ್ಯೂ ಅಥವಾ ಜೂಲಿಯಾ ಕ್ರಿಸ್ತೇವಾ ಅವರುಗಳಂಥ  ಸ್ತ್ರೀವಾದಿಗಳು ಕಟ್ಟಿಕೊಡುವ 'ವಿಚಾರವಿರೋಧಿ ಸ್ತ್ರೀ ಬರಹ'ದ ಪರಿಗ್ರಹಿಕೆಯನ್ನು ಸುಮ್ಮನೆ ನಾವು ಒಪ್ಪಬೇಕಾಗಿಲ್ಲ. ಏಕೆ ಒಪ್ಪಬಾರದು ಎಂಬುದಕ್ಕಾಗಿ ಅವರುಗಳ ಅಥವಾ ಪಾಶ್ಚಾತ್ಯ ತೀವ್ರಗಾಮಿ ಸ್ತ್ರೀವಾದಿಗಳ ನಿಲುವನ್ನು ಕೊಂಚ ವಿವರವಾಗಿ ನೋಡಬಹುದು.

ಆ ತೀವ್ರಗಾಮಿ ಚಿಂತಕಿಯರು  ವೈಚಾರಿಕತೆ ಮತ್ತು ತತ್ವಶಾಸ್ತ್ರದಿಂದ ಹೊಮ್ಮುವ `ಸತ್ಯ' ಎನ್ನುವುದನ್ನೂ ಪುರುಷತ್ವವನ್ನೂ ಸಮೀಕರಿಸಿ ತಮ್ಮ ನಿಲುವನ್ನು ಮುಂದಿಡುತ್ತಾರೆ. ಪುರುಷಪ್ರಧಾನ ಚಿಂತನೆಗೆ ಮಹಿಳೆಯರ ವಿಚಾರ, ಚಿಂತನೆಗಳ ತರಂಗಾಂತರಕ್ಕೆ ಸ್ಪಂದಿಸುವುದೇ ತಿಳಿದಿಲ್ಲ. ಆದ್ದರಿಂದ ಮಹಿಳೆಯರು `ಅವರಿಗೆ' ತಮ್ಮನ್ನು ಅರ್ಥಮಾಡಿಸಲು ಈವರೆಗೂ ಅವರದೇ ಭಾಷೆಯಲ್ಲಿ ಅವರದೇ ಚಿಂತನಾ ವಿಧಾನಗಳ ಮೂಲಕವೇ ಬರೆಯುತ್ತಾ ಬಂದಿರುತ್ತಾರೆ.

ಆದರೆ ಇದರೊಳಗೆ ಹೆಣ್ಣು ತನ್ನನ್ನು ವಿಶಿಷ್ಟವೆಂದು ಸಾಬೀತು ಮಾಡಬಲ್ಲ ಲಕ್ಷಣಗಳೇನೂ ಇರುವುದಿಲ್ಲ. ಹಾಗಾಗಿ ಈ ಮಹಿಳಾ ಬರಹವನ್ನು ಪುರುಷಪರಂಪರೆ ನಿರ್ಲಕ್ಷಿಸುತ್ತದೆ ಇಲ್ಲವೆ ಅಂಚಿಗೆ ಒತ್ತರಿಸುತ್ತದೆ. ಗಂಡಾಳ್ತನದ ಈ ಶೋಷಕ ವ್ಯವಸ್ಥೆಯಿಂದ ಮಹಿಳೆಯ ಅಭಿವ್ಯಕ್ತಿಗೂ ಆ ಮೂಲಕ ಮಹಿಳೆಗೂ ವಿಮೋಚನೆ ಸಿಗಬೇಕೆಂದರೆ ವೈಚಾರಿಕತೆಯೇ ಲಕ್ಷಣವಾದ ಮತ್ತು ಅತಿಬೌದ್ಧಿಕತೆಯೇ ಮಾನದಂಡವಾಗಿರುವ ಆ ಪರಂಪರೆಯ ವಿರುದ್ಧ ಹೋರಾಟ ಮಾಡಬೇಕು.

ಆ ಹೋರಾಟವೆಂದರೆ ಅವೈಚಾರಿಕತೆಯ, ಭಾವೋದ್ರೇಕದ, ಸುತ್ತುಬಳಸಾದ ಏನನ್ನೂ ಸ್ಪಷ್ಟವಾಗಿ ಹೇಳದ ತಮ್ಮದೇ ಆದ ದೇಹ ಲಯದಿಂದ ಹೊಮ್ಮುವ ಸಂಜ್ಞೆಗಳನ್ನೇ ಬರಹದೊಳಗೆ ನುಡಿಸಬೇಕು. ಜೂಲಿಯ ಕ್ರಿಸ್ತೇವಾ ಹೇಳುವಂತೆ ವಿಜ್ಞಾನ, ತತ್ವಜ್ಞಾನ ಮತ್ತು ವೃತ್ತಿಪರತೆಗಳೆ ಮೌಲಿಕವೆಂದು ಭಾವಿಸುವ ಸ್ತ್ರೀಬರಹಗಾರರು ಅಂತಿಮವಾಗಿ ಗಂಡಾಳ್ತನವನ್ನೇ ಕೊಂಡಾಡುತ್ತಿರುತ್ತಾರೆ. ಪ್ರಚಲಿತ ಸಾಮಾಜಿಕ `ಕೋಡ್'ಗಳನ್ನು ಯಶಸ್ವಿಯಾಗಿ ಆಸ್ಫೋಟಿಸಲು ಬಯಸುವ ಲೇಖಕಿ ಪುರುಷಾಧಿಪತ್ಯವನ್ನು ಸಂಕೇತಿಸುವ, ಎತ್ತಿಹಿಡಿಯುವ ಎಲ್ಲದರಿಂದಲೂ ದೂರವಿರಬೇಕು. ಸ್ಪಷ್ಟತೆ, ಖಚಿತತೆ, ಸಂರಚನೆ ಮತ್ತು ಮೌಲ್ಯಭಾರವುಳ್ಳ ಎಲ್ಲವನ್ನೂ ತಿರಸ್ಕರಿಸುವುದೇ ಪುರುಷ ಪರಂಪರೆಯನ್ನು ಪ್ರತಿಭಟಿಸುವ ಅಭಿವ್ಯಕ್ತಿ ವಿಧಾನ.

ನಿರಚನವಾದಿಗಳ ಚರ್ಚೆಗಳಲ್ಲಿ ಭಾಷೆ, ಸಂಜ್ಞೆ ಗಳ ಮತ್ತು ಮಹಿಳಾ ಸಮಯದ ವಿಷಯಗಳಿಗಾಗಿ ಬಹುವಾಗಿ ಗಮನ ಸೆಳೆದದ್ದು ಜೂಲಿಯಾ ಕ್ರಿಸ್ತೇವಾ. ಆದರೆ ಸ್ತ್ರೀ ಭಾಷೆಯ ಲಯದ ವಿಷಯದಲ್ಲಿ 1990ರ ದಶಕದಲ್ಲಿ ಅತಿ ಹೆಚ್ಚು ಉಲ್ಲೇಖಗೊಂಡಿರುವ ಲೇಖಕಿ ಎಂಬ ಖ್ಯಾತಿ ಇರುವ ಹೆಲೆನ್ ಸಿಕ್ಯೂ ತನ್ನ ತರ್ಕವಿರೋಧಿ ಬರಹಗಾರಿಕೆಯಿಂದಾಗಿಯೇ ಜನಪ್ರಿಯತೆ ಪಡೆದಾಕೆ. ಪುರುಷಕೇಂದ್ರಿತ ಚಿಂತನಾಕ್ರಮವನ್ನು ನಿರಾಕರಿಸುವುದು ಎಂದರೆ ಮಹಿಳೆ ತನ್ನ ಹೆಣ್ತನವನ್ನೇ ನುಡಿಯಲ್ಲಿ ಕೊರೆದು ಕೆತ್ತಿಡಬೇಕು. ಪುರುಷಪರಂಪರೆಯ ರಚನಾಕ್ರಮ ಎನ್ನುವುದು ವಿಚಾರಕೇಂದ್ರಿತ ಚರಿತ್ರೆಯ ಫಲ. ಅದು ತನ್ನನ್ನೇ ಬೆಂಬಲಿಸಿ ಬೆಳೆಸುತ್ತದೆ. ಆದುದರಿಂದ ಸ್ತ್ರೀಸತ್ವವನ್ನು ಮೈಯ್ಯೊಗಿಸಿಕೊಳ್ಳುವ ಬರಹ ಈ ತರ್ಕ, ಅನುಮಾನಗಳ ವಿಚಾರಸರಣಿಗೆ ವಿರುದ್ಧವಾಗಿರಬೇಕು.

ಅರ್ಥಾತ್ ಯಾವುದೂ ಮೂರ್ತವಾಗಿರದ ಅಥವಾ ವಾಸ್ತವೀಕೃತವಾಗದ, ಖಚಿತವಾಗಿರದ, ಯಾವುದರಿಂದಲೂ ಪಳಗಿಸಲು ಒಗ್ಗದ, ಭಾವೋದ್ರೇಕದ ರಭಸವನ್ನು ನಿರಾಕರಿಸದ ನುಡಿಗಳಲ್ಲಿ ಬರೆಯುವ ಮೂಲಕ ಪುರುಷಕೇಂದ್ರಿತ  ಭಾಷೆಯ ಪರಂಪರೆಯಿಂದ ಹೊರಕ್ಕೆ ಸ್ವಾಯತ್ತ ವಿಮುಕ್ತ ನೆಲೆಯನ್ನು ಸೃಷ್ಟಿಸಿಕೊಳ್ಳಬಹುದು. ಹೀಗೆ ತನ್ನದಾಗಿಸಿಕೊಂಡ ನುಡಿಯಲ್ಲಿ ಮಾತ್ರ ಹೆಣ್ಣು ತನ್ನದೇ ಆದ 'ಸತ್ಯ'ವನ್ನು ಹೇಳಲು ಸಾಧ್ಯ. ಈ ಅಭಿವ್ಯಕ್ತಿಯೇ ಪುರುಷರೂಪಿತ ಪರಂಪರೆಯನ್ನು ಪ್ರತಿಭಟಿಸಿ ಹೋರಾಡಲು ಶಸ್ತ್ರವೂ ಆಗುತ್ತದೆ. ಪರ್ಯಾಯವನ್ನು ಸೃಷ್ಟಿಸುವ ವಿಧಾನವೂ ಈ ಸ್ತ್ರೀಸತ್ವದ ಬರಹಕ್ಕೆ ಸಾಧ್ಯ ಎನ್ನುವುದು ಸಿಕ್ಯೂ  ತಳೆಯುವ ನಿಲುವು.

ಈ ಬಗೆಯ ರ‌್ಯಾಡಿಕಲ್ ನಿಲುವನ್ನು ನಿಜವಾಗಿ ನಾವು ಬೆಂಬಲಿಸಬೇಕೆ ಎನ್ನುವುದು ನಮ್ಮ ಮುಂದಿರುವ ಪ್ರಶ್ನೆ.  ಸ್ತ್ರೀವಾದವು ಪುರುಷಾಧಿಪತ್ಯದ ವಿರುದ್ಧ ನಡೆಸಿದ ಹೋರಾಟ ಹೆಚ್ಚು ಫಲ ಕೊಟ್ಟಿರುವುದು ಅಮೆರಿಕಾ ಮತ್ತು ಯೂರೋಪಿನ ಕೆಲವು ದೇಶಗಳಲ್ಲಿ. ಆದರೆ ಮೂರನೆಯ ಜಗತ್ತಿನ (ಭಾರತ, ಪಾಕಿಸ್ತಾನ, ಶ್ರಿಲಂಕಾ, ಬಾಂಗ್ಲಾ ಸೇರಿದಂತೆ) ಬಹುಸಂಖ್ಯಾತ ದೇಶಗಳಲ್ಲಿ ಸ್ತ್ರೀಯರ ಶೋಷಣೆ ಬೃಹತ್ತಾದ ಅತಿಸಂಕೀರ್ಣವಾದ ರೀತಿಗಳಲ್ಲಿ ಇದ್ದು ಅದು ಜನರ ಸಹಜ ಬದುಕಿನ ರೀತಿಯಾಗಿ ಸೇರಿಹೋಗಿದೆ. ಇಲ್ಲಿ ಬಹುಸಂಖ್ಯಾತ ಮಹಿಳೆಯರ ವಿಮೋಚನಾ ಹೋರಾಟ ಎನ್ನುವುದು ಬದುಕಿ ಉಳಿಯುವ ಹಕ್ಕಿಗಾಗಿ ನಡೆಸುತ್ತಿರುವ ಹೋರಾಟದ ನೆಲೆಯಲ್ಲಿಯೇ ಇಂದಿಗೂ ಉಳಿದಿರುತ್ತದೆ. ಯೂರೋಕೇಂದ್ರಿತ ದೃಷ್ಟಿಯಿಂದ ಹುಟ್ಟಿಕೊಂಡ ವೈಚಾರಿಕತೆಯ ವಿರೋಧಿಯಾದ ಹೆಣ್ತನದ ಭಾಷೆಯ ಮೂಲಕ ಇಲ್ಲಿನ ಸಾಂಸ್ಕೃತಿಕ ವ್ಯವಸ್ಥೆಯನ್ನು ಬುಡಮೇಲು ಮಾಡಲು ಸಾಧ್ಯವೆ?

ರಾಜಕೀಯ, ಆರ್ಥಿಕ, ಸಾಮಾಜಿಕ ಮತ್ತು ಧಾರ್ಮಿಕ ಮೂಲದ ಶಕ್ತಿಯೆಲ್ಲವನ್ನೂ ಬಳಸುತ್ತಲೇ ವಿಕೃತ ರಾಕ್ಷಸೀ ರೀತಿಗಳಿಂದ ಹೆಣ್ಣನ್ನು ನಾಶಪಡಿಸಲು ಟೊಂಕಕಟ್ಟಿದಂತೆ ತೋರುವ ಬಂಡವಾಳದ ವಿಜೃಂಭಣೆಯಲ್ಲಿ ಮಾನವತೆಯನ್ನೇ ಮರೆತಿರುವ ಸಮಾಜಗಳಿಗೆ ಸಿಕ್ಯೂ ಆಗಲೀ ಕ್ರಿಸ್ತೇವಾ ಆಗಲೀ ಕಟ್ಟುವ ಮಾತಿನ ಮಂಟಪ ನವೀನ ಮಹಿಳೆಯರನ್ನು ಹೊಮ್ಮಿಸಲು ಉಪಯುಕ್ತವಾಗುವುದೇ? ಅವೈಚಾರಿಕತೆಯ ಬದಲಾಗಿ ವಿಚಾರಶಕ್ತಿಯನ್ನು ಬೆಳೆಸಬೇಕಾದದ್ದು ಇಲ್ಲಿನ ಇಂದಿನ ಸ್ತ್ರೀಧರ್ಮ ಮಾತ್ರವೇ ಅಲ್ಲ; ಪುರುಷಧರ್ಮವೂ ಆಗಿರುತ್ತದೆ.

ನಮ್ಮ ತಾತ್ವಿಕ ಪರಂಪರೆಯಲ್ಲಿ ನಿಜವಾಗಿ ಎಂದೂ ವೈಚಾರಿಕತೆ ಅಥವಾ ತತ್ವಜ್ಞಾನದಿಂದ ಹೊಮ್ಮುವ 'ಸತ್ಯ' ಎನ್ನುವುದನ್ನು ಗಂಡುತನದ ಜೊತೆ ಸಮೀಕರಿಸಿದ್ದಿಲ್ಲ. ಅಲ್ಲದೆ, ಸಿಕ್ಯೂ ಹೇಳುವಂಥ ಹೆಣ್ತನದ ದೇಹಜಾತ ಅನುಭವಗಳನ್ನು ಕೂಡ ಕೇವಲ ಅರಿವಿನ ನೆಲೆಯಿಂದ ಜ್ಞಾನದ ನೆಲೆಗೆ ತರುವುದಕ್ಕೂ ತರ್ಕ, ಅನುಮಾನಗಳು ಅವಶ್ಯಕ. ಜ್ಞಾನವಾದರೂ ನಿರ್ದಿಷ್ಟ ತಾತ್ವಿಕ ಚೌಕಟ್ಟನ್ನು ತಳೆದಾಗಲೇ ಸಿದ್ಧಾಂತವಾಗಬಲ್ಲದು.

ಸಿದ್ಧಾಂತವಾಗದ ವಿಚಾರವೂ ಆಗದ ಅಭಿವ್ಯಕಿಯೊಂದು ಸಾಮಾಜಿಕ ಸಂಜ್ಞೆಗಳ ಕಟ್ಟುಗಳನ್ನು ಕಿತ್ತುಹಾಕುತ್ತದೆ ಎಂದು ಒಪ್ಪೋಣ. ಆದರೆ ಅದನ್ನು ಗ್ರಹಿಸಲು, ಅದರಿಂದ ತನ್ನ ಅನುಭವವನ್ನು ಶೋಧಿಸಿಕೊಳ್ಳಲು ತನ್ನದೇ ಆದ ನುಡಿಯನ್ನು ಕಟ್ಟಲು ಯಾವ ರೀತಿಯಲ್ಲಿ ಇಂಥ ವಿಚಾರರಹಿತ ದಾರಿ ಲೇಖಕಿಯರಿಗೆ ಸಹಾಯ ಮಾಡಬಹುದು? ಅದರ ಸಂವಹನೆ ಅನುಸಂಧಾನಗಳು ಹೇಗೆ? ಇಂಥ ಅನೇಕ ಪ್ರಶ್ನೆಗಳು ಸೃಜನಶೀಲ ಬರಹಗಾರಿಕೆಯನ್ನೇ ತಾವು ಮಾಡುವ ಹೋರಾಟವೆಂದು ನಂಬಿರುವ  ಸಮಾಜದ ಒಂದು ಪದರದ ಮಹಿಳೆಯರನ್ನು ಕಾಡಿಸಬಹುದು. ಅಂಥವರು  ವೈಚಾರಿಕತೆ ಸ್ತ್ರೀತ್ವದ ಲಕ್ಷಣವೇ ಅಲ್ಲವೆನ್ನುವ ಸಿಕ್ಯೂ ನಿಲುವನ್ನೂ ಒಪ್ಪಬೇಕಾಗುತ್ತದೆ. ಏಕೆಂದರೆ ಇಂಥ ಚಿಂತನೆ ಕೇವಲ ಶಾಬ್ದಿಕ ಕಟ್ಟಡವೇ ಬದುಕು ಎಂದು ಭ್ರಮಿಸಿರುತ್ತದೆ.

ವೈಚಾರಿಕತೆಯನ್ನು ವಿರೋಧಿಸುವುದು ಎಂದರೆ ತಾನು ಮುಂದಿಡುವ ವಿಷಯವನ್ನು ಯಾರೂ ತಾರ್ಕಿಕವಾಗಿ ಪ್ರಶ್ನಿಸಲು ಆಗದಂತೆ ಮಾಡುವುದೂ ಹೌದು. ಹಾಗೆ ಮಾಡಿ ತಾನೊಬ್ಬ ವಿಮುಕ್ತ ಹೊಸ ಸ್ತ್ರೀವ್ಯಕ್ತಿ ಎಂದು ಲೇಖಕಿ ತನ್ನಷ್ಟಕ್ಕೇ ಹೇಳಿಕೊಳ್ಳಬಹುದು. ಆದರೆ ವೈಚಾರಿಕ  ಪರೀಕ್ಷೆಗೆ  ಒಡ್ಡಿಕೊಳ್ಳಲು ಸದಾ ಸಿದ್ಧರೇ ಇದ್ದ ತರ್ಕಪಂಡಿತೆಯರನ್ನು ಭಾವಿಸಬಲ್ಲ, ಮತ್ತು ದಾಖಲಿಸಬಲ್ಲ ಪರಂಪರೆಗಳಿರುವ ನಾವು ತರ್ಕಕ್ಕೆ ಅಂಜಬೇಕೇಕೆ?

ಅದನ್ನೂ ತನ್ನ ಉದ್ದೇಶಕ್ಕಾಗಿ ಮಣಿಸಲು ಮಹಿಳೆ ಯತ್ನಿಸಬಾರದೇಕೆ? ಮಾತೇ(ವಾಕ್) ಹೆಣ್ಣೆಂದಿರುವ ನಮ್ಮ ಪರಂಪರೆಯಲ್ಲಿ ತಾಯಿಯಿಂದ ನಾಲಿಗೆ ಮೇಲೆ ಅಕ್ಷರ ಬರೆಸಿಕೊಳ್ಳುವವರೇ ಮಹಾಕವಿಗಳು. ಅವರು ಬೆಳೆಸಿ ಬಳಸುತ್ತಿರುವ ನುಡಿಗಟ್ಟು ಇಂದು ನಮಗೆ ಅಪ್ರಯೋಜಕ ಆಗಿದ್ದರೆ ನಮ್ಮದೇ ಆದ ಈ ಇಡೀ ವಾಕ್ಸಂಪತ್ತನ್ನು ತುಂಬ ಎಚ್ಚರದಿಂದ ತುಂಬ ವೈಚಾರಿಕವಾಗಿ ನಮ್ಮ ವಿಮೋಚನೆಗಾಗಿ ಹೊಸದಾಗಿ ತಿದ್ದಲು, ಮತ್ತೆ ಕಟ್ಟಲು ಯಾರ ಅನುಮತಿಗಾಗಿ ನಾವು ಕಾಯುತ್ತಿದ್ದೇವೆ? ಹೊಳೆಯ ನೀರಿಗೆ ಇನ್ನೂ ದೊಣೆ ನಾಯಕನ ಅಪ್ಪಣೆ ಬೇಕಾಗಿದೆಯೆ?

ನನ್ನ ಪ್ರಕಾರ ನಮ್ಮ ನುಡಿ ಒಬ್ಬೊಬ್ಬ ಬರಹಗಾರಳ ಸ್ವಂತ ನುಡಿ ಆಗಬೇಕಿದ್ದಲ್ಲಿ ಅದು ಎಲ್ಲೆಲ್ಲಿ ಎಷ್ಟೆಷ್ಟು ಪರಾಧೀನವಾಗಿ ಉಳಿದಿದೆ, ಮತ್ತು ಸ್ವಾಧೀನವಾಗಿ ಎಲ್ಲಿ ತನ್ನೊಳಗೇ ಕಾಣಿಸುತ್ತದೆ ಎನ್ನುವುದನ್ನು ವಿಚಾರಮಾಡಲು ಲೇಖಕಿ ತೊಡಗಿದಲ್ಲಿ ತನ್ನದಾದ ನುಡಿಗಾಗಿ ಮೊದಲ ಹೆಜ್ಜೆಯನ್ನು ಇಟ್ಟಿರುತ್ತಾಳೆ. ತನ್ನ ಭಾಷೆಯಲ್ಲಿ ಹೆಣ್ಣಿರಲಿ, ಗಂಡಿರಲಿ ಅನುಭವಗಳನ್ನು (ಹೆಣ್ಣಿನದಿರಲಿ, ಗಂಡಿನದೇ ಇರಲಿ) ಹಿಡಿಯಲು ಹಿಂದಿನಿಂದ ಏನೇನು ಯತ್ನಗಳು ನಡೆದಿವೆ ಎನ್ನುವ ಸ್ವಲ್ಪವಾದರೂ ತಿಳಿವು ಅವಳನ್ನು ಮುನ್ನಡೆಸಬಲ್ಲದು. ಹೀಗೆ ಹೇಳಿದ್ದಾರಲ್ಲ, ಇದನ್ನು ಬೇರೆ ರೀತಿಯಲ್ಲಿ ಇನ್ನೂ ಚೆನ್ನಾಗಿ ಹೇಳಲು ಸಾಧ್ಯವೇ ಎನ್ನುವ ಶೋಧ ಒಳಗಿನಿಂದಲೇ ಹೊಮ್ಮದಿದ್ದರೆ ಆ ಬರಹದ ಉಪಯುಕ್ತತೆ ಕೂಡ ಅಲ್ಪವೇ ಸರಿ. ಸುಮ್ಮನೆ ಬರೆದದ್ದನ್ನೆಲ್ಲಾ ಪರಂಪರೆ ಗುರುತಿಸುತ್ತಿಲ್ಲವೆಂದು ಅಥವಾ ಮಾನ್ಯತೆ ಸಿಗುತ್ತಿಲ್ಲವೆಂದು ಹೊರಡುವ ಆಗ್ರಹವು  ವ್ಯವಸ್ಥೆಯನ್ನು ಪಲ್ಲಟಿಸಬಲ್ಲ ಹೋರಾಟದ ದಾರಿಯಂತೂ ಅಲ್ಲ.

ಕಳೆದ ಮೂರು ನಾಲ್ಕು ದಶಕಗಳಿಂದ ಹೊಮ್ಮಿರುವ, ಹೊಸ ನಿಟ್ಟಿನ ಸ್ತ್ರೀಕುರಿತ, ಇಲ್ಲಿಯದೇ ಆದ ಚಿಂತನೆ ಮಹಿಳಾ ಬರಹಗಾರಿಕೆಗೆ ಕೆಲವು ಶಕ್ತಿಗಳನ್ನು ಒದಗಿಸಿರುತ್ತದೆ.  ಲೇಖಕಿಯರು ತಮ್ಮದೇ ಅನುಭವಗಳನ್ನು, ಹೆಚ್ಚೆಂದರೆ ತಮ್ಮ ಆಸುಪಾಸಿನವರ ಮೂಲಕ ದೊರೆತ ಬಾಲ್ಯದ  ಸಾಮಾಜಿಕ ಅನುಭವಗಳನ್ನು, ಹಳ್ಳಿಯ ಅಥವಾ ನಗರದ ವಿದ್ಯಾವಂತ ವರ್ಗದವರ ಬದುಕಿನ ವೈವಿಧ್ಯಮಯ ಪದರಗಳನ್ನು ಶೋಧಿಸುವಷ್ಟರ ಮಟ್ಟಿಗೆ ವಿಶೇಷ ಸಾಮರ್ಥ್ಯವನ್ನು ತೋರಿಸಿರುತ್ತಾರೆ. ಆದರೆ ತನಗೆ ಗೊತ್ತಿಲ್ಲದ, ತನ್ನ ಬದುಕಿನ ಕ್ರಮಕ್ಕೆ ಹೊಂದದಂಥ ಅಥವಾ ಎಂದೂ ಅರಿವಿಗೇ ಬಂದಿರದಂಥ ಬದುಕಿನ ಮುಖಗಳನ್ನು ಮಾನವೀಯ ಕುತೂಹಲದಿಂದಲೋ ನಿಜವನ್ನು ಹುಡುಕಬೇಕೆನ್ನುವ ಶ್ರದ್ಧೆಯಿಂದಲೋ ಬರೆಯುವಂಥ ಯತ್ನಗಳು ಇಲ್ಲವೇ ಇಲ್ಲವೆಂಬಷ್ಟು ಅಪರೂಪ.

ಅನುಭವಕ್ಕೆ ನಿಷ್ಠವಾಗಿರುವುದು ಸರಿಯೇ. ಆದರೆ ಜಗತ್ತು ಬರಿಯ ಅನುಭವಗಳ ಭೂತಕಾಲದಲ್ಲಿ ತಂಗುವುದಿಲ್ಲ. ಕ್ಷಣ ಕ್ಷಣವೂ ಹೊಸದೊಂದು ಧುತ್ತೆಂದು ಎದುರಾಗುತ್ತದೆ ಎನ್ನುವಾಗ ಆ ಬದಲಾಗುವ ಬದುಕಿನ ಬಗ್ಗೆ `ಸ್ತ್ರೀಸಹಜ' ಕುತೂಹಲವೂ ಸೃಜನಾತ್ಮಕವಾಗಿ ಬರಹದೊಳಗೆ ತೊಡಗಿಸಬೇಕಲ್ಲವೆ?  ಯಾವುದೇ ಬರಹವೂ ಲೋಕಕ್ಕೆ ಉಪಯುಕ್ತವಾಗಬಲ್ಲ ರೀತಿ ಎಂದರೆ ಇದು. ಈ ನಿರಂತರ ಹೊಸತರ ಆವಿಷ್ಕಾರವನ್ನು ಮಹಿಳೆ ಮಾಡಲು ಹೊರಟಲ್ಲಿ ಅದೇ ನುಡಿಯನ್ನೂ ಚಿಂತನೆಯನ್ನೂ ಬದಲಾಯಿಸುವ ಶಕ್ತಿ ಆಗುವುದಿಲ್ಲವೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT