ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆ ಮುಂದಿನ ಪೀಳಿಗೆಗೆ ಮಾದರಿಯಾಗಲಿ

Last Updated 10 ಮಾರ್ಚ್ 2011, 19:00 IST
ಅಕ್ಷರ ಗಾತ್ರ

ಬೆಂಗಳೂರು: ‘ಪ್ರಪಂಚದ ಹಲವೆಡೆ ಮಹಿಳೆಯರಿಗೆ ಮತದಾನದ ಹಕ್ಕು ಕೂಡ ದೊರೆಯದಿದ್ದ ಸಂದರ್ಭದಲ್ಲಿಯೇ ನಮ್ಮ ದೇಶದಲ್ಲಿ ಉಕ್ಕಿನ ಮಹಿಳೆಯೊಬ್ಬರು ಪ್ರಧಾನಿಯಾಗಿದ್ದರು’ ಎಂದು ಇಂಧನ ಸಚಿವೆ ಶೋಭಾ  ಕರಂದ್ಲಾಜೆ ಮೆಚ್ಚುಗೆ ವ್ಯಕ್ತಪಡಿಸಿದರು.ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (ಕೆಪಿಸಿಎಲ್) ವತಿಯಿಂದ ನಗರದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಶಿಕ್ಷಣ ಹಾಗೂ ಆರ್ಥಿಕ ಸದೃಢತೆ ಹೊಂದಿದ ಮಹಿಳೆಯರು ಸ್ವಾಭಿಮಾನದಿಂದ ಬದುಕಲು ಸಾಧ್ಯವಾಗಿದೆ. ಹೀಗೆ ಉತ್ತಮ ಸ್ಥಾನದಲ್ಲಿರುವ ಮಹಿಳೆಯರು ಮುಂದಿನ ಮಹಿಳಾ ಪೀಳಿಗೆಗೆ ಮಾದರಿಯಾಗಬೇಕಿದೆ’ ಎಂದರು.‘ಶೈಕ್ಷಣಿಕವಾಗಿ ಔದ್ಯೋಗಿಕವಾಗಿ ಸ್ವಾವಲಂಬಿಯಾದರೂ ಮಹಿಳೆಯರ ಶೋಷಣೆ ತಪ್ಪಿಲ್ಲ. ಮಹಿಳೆ ಮನೆಯ ಒಳಗೂ ಹೊರಗೂ ಸಂತೋಷದಿಂದ ದುಡಿಯುತ್ತಾಳೆ. ಅವಳ ತಾಳ್ಮೆ ಗಮನಾರ್ಹವಾದುದು’ ಎಂದರು.

‘ಪುರುಷರೊಡನೆ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುವ ಚೈತನ್ಯ ಮಹಿಳೆಯರಿಗೆ ಇದೆ. ಕೆಪಿಟಿಸಿಎಲ್‌ನಲ್ಲಿ ಶೇ 45ರಷ್ಟು ಮಹಿಳಾ ಉದ್ಯೋಗಿಗಳಿರುವುದು ಸಂತಸಕರ ಬೆಳವಣಿಗೆಯಾಗಿದೆ’ ಎಂದು ಅವರು ಹೇಳಿದರು. ಹಿರಿಯ ವಿದ್ವಾಂಸ ಮತ್ತೂರು ಕೃಷ್ಣಮೂರ್ತಿ ‘ಸ್ತ್ರೀಯರು ದುರ್ಬಲರಾಗಿರುವುದರಿಂದಲೇ ಅವರ ಮೇಲೆ ಅತ್ಯಾಚಾರ, ಲೈಂಗಿಕ ದೌರ್ಜನ್ಯದಂತಹ ಪ್ರಕರಣಗಳು ಹೆಚ್ಚಿವೆ. ಸೀತೆ, ಹಾಗೂ ದ್ರೌಪದಿಯಂತಹ ಮಹಿಳೆಯರು ಧರ್ಮ ಬೋಧನೆ ಮಾಡಿದ್ದರಿಂದ ಸಮಾಜ ಉತ್ತಮ ದಿಕ್ಕಿನಲ್ಲಿ ನಡೆಯುವುದು ಸಾಧ್ಯವಾಯಿತು’ ಎಂದರು.

ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ. ಕೆ.ಆರ್. ಸಂಧ್ಯಾರೆಡ್ಡಿ ಮಾತನಾಡಿ ‘ಹೆಣ್ಣು ಕೇವಲ ಹೆಣ್ಣು ಎಂಬ ಕಾರಣಕ್ಕಾಗಿಯೇ ಶೋಷಣೆಗೆ ಒಳಗಾಗುತ್ತಿದ್ದಾಳೆ. ಇಂತಹ ಸಂದರ್ಭದಲ್ಲಿ ಮಹಿಳಾ ದಿನಾಚರಣೆ ಕೇವಲ ಆಚರಣೆಯಾದರೆ ಸಾಲದು. ಮಹಿಳೆಯರ ಜೀವನದ ಸುಧಾರಣೆಗೆ ಎಲ್ಲರೂ ಮುಂದಾಗಬೇಕಿದೆ’ ಎಂದರು.‘ಹೆಣ್ಣುಮಕ್ಕಳು ಪ್ರಗತಿ ಹೊಂದಿದ್ದರೂ ಅವರಿಗೆ ಶಿಕ್ಷಣ ಅಥವಾ ಉದ್ಯೋಗವಾಗಲೀ ಒಂದು ಶಕ್ತಿಯಾಗಿದೆಯೇ ಎಂಬ ಪ್ರಶ್ನೆ ಮೂಡುತ್ತಿದೆ. ಹೆಣ್ಣಿನ ಕಷ್ಟಗಳಿಗೆ ಮತ್ತೊಬ್ಬ ಹೆಣ್ಣು ಸ್ಪಂದಿಸದೇ ಇರುವುದರಿಂದ ಮಹಿಳೆಯರಿಗೆ ಈಗಲೂ ಅಬಲೆ ಎಂಬ ಹಣೆಪಟ್ಟಿ ಇದೆ’ ಎಂದು ಹೇಳಿದರು.

ಉಪನ್ಯಾಸಕಿ ಡಾ. ಜಿ.ಎನ್. ಸಂಗೀತಾ ಮಾತನಾಡಿ ‘ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ಶೋಷಣೆ ಹಾಗೂ ಹೆಣ್ಣು ಭ್ರೂಣ ಹತ್ಯೆ ತಪ್ಪಬೇಕಿದೆ. ಶೇ 100ರಷ್ಟು ಹೆಣ್ಣುಮಕ್ಕಳು ಶಿಕ್ಷಣ ಪಡೆಯಬೇಕಿದೆ’ ಎಂದರು. ಕೆಪಿಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ಯೋಗೇಂದ್ರ ತ್ರಿಪಾಠಿ ಮಾತನಾಡಿ ‘ಕೆಪಿಟಿಸಿಎಲ್‌ನಲ್ಲಿ 6200 ಉದ್ಯೋಗಿಗಳಲ್ಲಿ 969 ಮಂದಿ ಮಹಿಳೆಯರಿದ್ದಾರೆ. ಕೆಪಿಸಿಎಲ್ ಇತ್ತೀಚೆಗೆ ನೇಮಕ ಮಾಡಿಕೊಂಡ 285 ಎಂಜಿನಿಯರ್‌ಗಳಲ್ಲಿ 102 ಮಂದಿ ಸ್ತ್ರೀಯರು ಉದ್ಯೋಗ ಪಡೆದಿದ್ದಾರೆ. ಮಹಿಳೆಯರ ಮುಂದಾಳತ್ವದಲ್ಲಿ ಇಲಾಖೆ ಉತ್ತಮ ಪ್ರಗತಿ ಸಾಧಿಸಿರುವುದು ಹೆಮ್ಮೆಯ ಸಂಗತಿ’ ಎಂದು ಹೇಳಿದರು.

ಡಾ. ಕೆ.ಆರ್. ಸಂಧ್ಯಾರೆಡ್ಡಿ, ಹಾಗೂ ಡಾ. ಜಿ.ಎನ್. ಸಂಗೀತಾ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಮೀಮ್ ಬಾನು, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕಿ ಜಿ. ಲತಾ ಕೃಷ್ಣರಾವ್ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT