ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಗೆ ಪ್ರಾಣ ಬೆದರಿಕೆ: ರಾಜ್ಯ ಒಲಂಪಿಕ್ ಅಸೋಸಿಯೇಷನ್ ಅಧ್ಯಕ್ಷ ಗೋವಿಂದರಾಜ್ ವಿರುದ್ಧ ದೂರು

Last Updated 20 ನವೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮಹಿಳೆಯೊಬ್ಬರಿಗೆ ಪ್ರಾಣ ಬೆದರಿಕೆ ಹಾಕಿದ ಆರೋಪದ ಮೇಲೆ ಕರ್ನಾಟಕ ಒಲಂಪಿಕ್ ಅಸೋಸಿಯೇಷನ್ ಅಧ್ಯಕ್ಷ ಕೆ. ಗೋವಿಂದರಾಜ್ ಅವರ ವಿರುದ್ಧ ನಗರದ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬಸವನಗುಡಿ ನಿವಾಸಿ ಸುಜಾತಾ ಸುರೇಶ್ ಎಂಬುವರು ಗೋವಿಂದರಾಜ್ ಹಾಗೂ ಇನ್ನಿಬ್ಬರು ಅಪರಿಚಿತರ ವಿರುದ್ಧ ದೂರು ನೀಡಿದ್ದಾರೆ. ನೆಟ್ಟಕಲ್ಲಪ್ಪ ವೃತ್ತದ ಸಮೀಪ ನ. 16ರಂದು ಹೋಗುತ್ತಿದ್ದಾಗ ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತ ದುಷ್ಕರ್ಮಿಗಳು ಅಡ್ಡಗಟ್ಟಿದರು. `ಗೋವಿಂದರಾಜ್ ಅವರ ವಿರುದ್ಧ ನಿನ್ನ ಗಂಡ ಈ ಹಿಂದೆ ನಗರದ ಬೇರೆ ಬೇರೆ ಠಾಣೆಗಳಲ್ಲಿ ದಾಖಲಿಸಿರುವ ಪ್ರಕರಣಗಳನ್ನು ಹಿಂದಕ್ಕೆ ಪಡೆಯಬೇಕು. ಇಲ್ಲದಿದ್ದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ~ ಎಂದು ಬೆದರಿಕೆ ಹಾಕಿ ಹೋದರು ಎಂದು ಸುಜಾತಾ ದೂರಿನಲ್ಲಿ ತಿಳಿಸಿದ್ದಾರೆ.

ಸುಜಾತಾ ಅವರ ಪತಿ ಸುರೇಶ್, ಗೋವಿಂದರಾಜ್ ಅವರ ವಿರುದ್ಧ ಈ ಹಿಂದೆ ಪ್ರಕರಣ ದಾಖಲಿಸಿದ್ದರು ಎಂದು ಗೊತ್ತಾಗಿದೆ. ಇದೇ ಕಾರಣಕ್ಕೆ ದುಷ್ಕರ್ಮಿಗಳು ಬೆದರಿಕೆ ಹಾಕಿದ್ದಾರೆ. ಗೋವಿಂದರಾಜು ಮತ್ತು ಇನ್ನಿಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ತನಿಖೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ದರೋಡೆ
ಸಿಹಿ ತಿಂಡಿ ಅಂಗಡಿ ನೌಕರನೊಬ್ಬ ಅಂಗಡಿ ಮಾಲೀಕನನ್ನು ಚಾಕುವಿನಿಂದ ಬೆದರಿಸಿ ಕೈ ಕಾಲು ಕಟ್ಟಿ ಹಾಕಿ ಹಣ ದರೋಡೆ ಮಾಡಿರುವ ಘಟನೆ ಜಯನಗರ ಒಂಬತ್ತನೇ ಬ್ಲಾಕ್‌ನ ಸೌತ್‌ಎಂಡ್ ರಸ್ತೆಯಲ್ಲಿ ಶನಿವಾರ ರಾತ್ರಿ ನಡೆದಿದೆ.

ಗಾಯಿತ್ರಿ ಸ್ವೀಟ್ ಸ್ಟಾಲ್ ಮಾಲೀಕರಾದ ಮಂಜುನಾಥ್ ದರೋಡೆಗೊಳಗಾದವರು. ಅವರ ಅಂಗಡಿಯಲ್ಲೇ ಕೆಲಸ ಮಾಡುತ್ತಿದ್ದ ಹೊನ್ನೂರು ಎಂಬಾತ ತನ್ನ ಸ್ನೇಹಿತನ ಜತೆ ಸೇರಿ ಈ ಕೃತ್ಯ ಎಸಗಿದ್ದಾನೆ. ರಾತ್ರಿ ಒಂಬತ್ತು ಗಂಟೆ ಸುಮಾರಿಗೆ ಅಪರಿಚಿತ ವ್ಯಕ್ತಿಯ ಜತೆ ಬಂದ ಹೊನ್ನೂರು `ನನ್ನ ಸಹೋದರ ತೀರಿ ಹೋಗಿದ್ದಾನೆ ಹಣ ಬೇಕು~ ಎಂದು ಕೇಳಿದ್ದಾನೆ. ಮಂಜುನಾಥ್ ಅವರ ಹಣ ಇಲ್ಲ ಎಂದಾಗ ಇಬ್ಬರೂ ಸೇರಿ ಅವರನ್ನು ಚಾಕುವಿನಿಂದ ಬೆದರಿಸಿ ಕೈಕಾಲು ಕಟ್ಟಿ ಹಾಕಿದ್ದಾರೆ.

ಅಲ್ಮೇರಾದಲ್ಲಿದ್ದ ಅರವತ್ತು ಸಾವಿರ ರೂಪಾಯಿ ಮತ್ತು ಮೊಬೈಲ್ ಫೋನ್ ದೋಚಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಜಯನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.

ಹಣ ಕಳವು
ಕಾರಿನ ಗಾಜು ಒಡೆದ ದುಷ್ಕರ್ಮಿಗಳು ವಾಹನದಲ್ಲಿದ್ದ ನಲವತ್ತು ಸಾವಿರ ರೂಪಾಯಿ ಕಳವು ಮಾಡಿರುವ ಘಟನೆ ವಿಜಯನಗರದ ಆದಿಚುಂಚನಗಿರಿ ಮಠದ ಮುಂಭಾಗ ಶನಿವಾರ ಮಧ್ಯರಾತ್ರಿ ನಡೆದಿದೆ.

ಚಿಕ್ಕಮಾವಳ್ಳಿ ನಿವಾಸಿ ಚಂದ್ರಶೇಖರ ಹಣ ಕಳೆದುಕೊಂಡವರು. ಸಹೋದರನ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡ ಅವರು ಉಡುಗೊರೆಯಾಗಿ ಬಂದಿದ್ದ ಹಣವನ್ನು ಕಾರಿನಲ್ಲಿ ಇಟ್ಟಿದ್ದರು. ಬೆಳಗಿನ ಜಾವ ಬಂದು ನೋಡಿದಾಗ ಹಣ ಕಳವಾಗಿದ್ದು ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT