ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯ ರೂಪಾಂತರಕ್ಕೆ ಕಕೂನ್

Last Updated 9 ಮಾರ್ಚ್ 2011, 19:30 IST
ಅಕ್ಷರ ಗಾತ್ರ

ವ್ಯಕ್ತಿಯೊಬ್ಬರನ್ನು ಮೊದಲ ಸಲ ನೋಡಿದಾಗ ಮೂಡುವ ಅಭಿಪ್ರಾಯ ಕೊನೆಯತನಕ ನಿಲ್ಲುತ್ತದಂತೆ. ‘ಫಸ್ಟ್ ಇಂಪ್ರೆಷನ್, ಬೆಸ್ಟ್ ಇಂಪ್ರೆಷನ್’ ಎಂಬುದು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅಕ್ಷರಶಃ ನಿಜ. ಆಕೆ ಮಾತನಾಡುವ ಶೈಲಿ, ಕುಳಿತುಕೊಳ್ಳುವ, ನಿಲ್ಲುವ ಭಂಗಿ, ಊಟ ಮಾಡುವ ರೀತಿ ಎಲ್ಲವೂ ಆಕೆಯ ಕುರಿತು ಅಭಿಪ್ರಾಯ ಮೂಡಿಸುತ್ತದೆ. 

ಮಹಿಳೆಯೊಬ್ಬಳು ಉದ್ಯೋಗದಲ್ಲಿ, ಉದ್ಯಮದಲ್ಲಿ ಅಥವಾ ಬದುಕಿನಲ್ಲಿ ಯಶಸ್ಸು ಸಾಧಿಸಬೇಕಾದರೆ ಆಕೆಯಲ್ಲಿ ಆತ್ಮವಿಶ್ವಾಸ ತುಂಬಿ ತುಳುಕುತ್ತಿರಬೇಕು. ಆಕೆಯ ನಡೆ, ನುಡಿ ಎಲ್ಲವೂ ಆಕೆಯ ವೃತ್ತಿಗೆ, ಪ್ರವೃತ್ತಿಗೆ ಪೂರಕವಾಗಿರಬೇಕು. ನಗರ ಪ್ರದೇಶದ ಉದ್ಯೋಗಸ್ಥ ಮಹಿಳೆಯರಲ್ಲಿ, ಸ್ವಯಂ ಉದ್ಯೋಗ ಕೈಗೊಳ್ಳುವ ಮಹಿಳೆಯರಲ್ಲಿ, ವಿದೇಶ ಪ್ರವಾಸ ಕೈಗೊಳ್ಳುವ ಮಹಿಳೆಯರಲ್ಲಿ ಆತ್ಮವಿಶ್ವಾಸ ಮೂಡಿಸಲು ‘ಕಕೂನ್’ ಈಗ ಮುಂದಾಗಿದೆ.

‘ಕಕೂನ್’ನಲ್ಲಿ (ರೇಷ್ಮೆಗೂಡು) ಸೇರಿಕೊಳ್ಳುವ ಕಂಬಳಿಹುಳು ರಂಗು ತುಂಬಿದ ಸುಂದರ ಚಿಟ್ಟೆಯಾಗಿ ರೂಪಾಂತರ ಹೊಂದಿ ಹೊರಬರುತ್ತದೆ. ಅದೇ ರೀತಿ ‘ಕಕೂನ್’ನಲ್ಲಿ ತರಬೇತಿ ಪಡೆದ ಮಹಿಳೆ ಆತ್ಮವಿಶ್ವಾಸದಿಂದ ರೂಪಾಂತರ ಹೊಂದಬೇಕು ಎಂಬುದು ಸಂಸ್ಥಾಪಕರ ಆಶಯ.

‘ಕಕೂನ್’ನ ಹುಟ್ಟು ಸಹ ಅಷ್ಟೇ ಕುತೂಹಲಕಾರಿ. ಫಿಟ್‌ನೆಸ್ ತಜ್ಞೆ  ವನಿತಾ ಅಶೋಕ್, ಸಂವಹನ ತಜ್ಞೆ ನಳಿನಿ ನಂಜುಂಡಯ್ಯ, ಪೌಷ್ಟಿಕಾಂಶ ತಜ್ಞೆ ಅವ್ರಿಲ್ ಕ್ವಾಡ್ರೋಸ್ ಈ ಮೂವರು ಸಾಹಸಿ, ಯಶಸ್ವಿ ಮಹಿಳೆಯರು ಒಗ್ಗೂಡಿ ಸಂಸ್ಥೆ ಆರಂಭಿಸಿದ್ದಾರೆ.

ವನಿತಾ ಅಶೋಕ್ ಖ್ಯಾತ ಫಿಟ್‌ನೆಸ್ ತಜ್ಞೆ. ಏರೋಬಿಕ್ಸ್, ಯೋಗ, ಉಸಿರಾಟದ ವ್ಯಾಯಾಮ ಮತ್ತಿತರ ವಿಧಾನದ ಮೂಲಕ ಹೊಳೆಯುವ ಚರ್ಮ, ಅಂಗಸೌಷ್ಟವ ಹೇಗೆ ಕಾಪಾಡಿಕೊಳ್ಳಬೇಕು ಎಂಬುದನ್ನು ಹೇಳಿಕೊಡುತ್ತಾರೆ. ದೇಹಕ್ಕೆ ಅಗತ್ಯ ಪೌಷ್ಟಿಕಾಂಶ ಹೇಗೆ ಪೂರೈಸಬೇಕು, ಇಎಫ್‌ಟಿ ಮತ್ತಿತರ ವಿಧಾನಗಳ ಮೂಲಕ ಒತ್ತಡ ಹೇಗೆ ನಿವಾರಿಸಿಕೊಳ್ಳಬೇಕು. ಖಿನ್ನತೆಗೆ ಜಾರದಂತೆ ಮನಸ್ಸು ಹೇಗೆ ಸಮತೋಲನದಲ್ಲಿ ಇಟ್ಟುಕೊಳ್ಳಬೇಕು ಎಂಬುದನ್ನೆಲ್ಲ ಅವ್ರಿಲ್ ಕ್ವಾಡ್ರೊಸ್ ತಿಳಿಸುತ್ತಾರೆ. ಸಂದರ್ಶನ ಅಥವಾ ಗಣ್ಯರ ಭೇಟಿಗೆ ಹೋಗುವ ಮುನ್ನ ನಮ್ಮ ಉಡುಪು ಹೇಗಿರಬೇಕು, ನಮ್ಮ ಮಾತುಕತೆ ಹೇಗಿರಬೇಕು, ಪಾರ್ಟಿಗಳಲ್ಲಿ ಊಟ, ತಿಂಡಿ ಸೇವಿಸುವ ಬಗೆ ಹೀಗೆ ಸಾಮಾಜಿಕ ಸಂವಹನದ ವಿಧಾನವನ್ನು ನಳಿನಿ ನಂಜುಂಡಯ್ಯ ವಿವರಿಸುತ್ತಾರೆ.

‘ಕಕೂನ್’ ಆಗಾಗ್ಗೆ ನಗರದ ವಿವಿಧ ಬಡಾವಣೆ, ಹೊಟೇಲ್‌ಗಳಲ್ಲಿ ಕಾರ್ಯಾಗಾರ ಏರ್ಪಡಿಸಲಿದೆ. ಮಹಿಳೆಯರನ್ನು ಗಮನದಲ್ಲಿಟ್ಟುಕೊಂಡು ಈ ಕಾರ್ಯಾಗಾರಗಳು ನಡೆಯಲಿವೆ. ಆದರೆ, ಪುರುಷರು, ವಿದ್ಯಾರ್ಥಿಗಳು ಕೂಡ ಇದರಲ್ಲಿ ಭಾಗವಹಿಸಬಹುದು. ಯುಬಿ ಸಿಟಿಯಲ್ಲಿ ಇತ್ತೀಚೆಗೆ ‘ಕಕೂನ್’ ಉದ್ಘಾಟನೆ ಹಾಗೂ ಕಾರ್ಯಾಗಾರ ನಡೆಯಿತು.
‘ಕಕೂನ್’ ಮುಂದಿನ ಕಾರ್ಯಾಗಾರ ಮಾರ್ಚ್ 23ರಂದು ನಡೆಯಲಿದೆ. ಶುಲ್ಕ ಮತ್ತಿತರ ವಿವರಗಳಿಗೆ: 98450 42179.                       

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT