ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯನ್ನು ಘನತೆಯಿಂದ ನಡೆಸಿಕೊಳ್ಳುವ ಸಮಾಜ ಸೃಷ್ಟಿಯಾಗಿಲ್ಲ

Last Updated 21 ಜನವರಿ 2011, 19:30 IST
ಅಕ್ಷರ ಗಾತ್ರ

ಮ ಹಿಳೆ ಹೇಗೆ ಬದಲಾಗಿದ್ದಾಳೆ? ಇದು ಬಹಳ ದೊಡ್ಡ ಪ್ರಶ್ನೆ. ಅಮೂರ್ತ ಪ್ರಶ್ನೆ ಕೂಡ. ಮಹಿಳೆ ಎನ್ನುವಾಗ ಯಾವ ವರ್ಗದ ಮಹಿಳೆ, ಯಾವ ಸಮುದಾಯದ ಮಹಿಳೆ ಎಂಬ ಪ್ರಶ್ನೆಯೂ ಬರುತ್ತದೆ. ಮಹಿಳೆಯ ಪ್ರಶ್ನೆಯನ್ನು ನಿರ್ದಿಷ್ಟ ಚೌಕಟ್ಟಿನಲ್ಲಿ ಇಡದೆ ಜನರಲೈಜ್ ನೆಲೆಯಲ್ಲಿ ಉತ್ತರ ಕೊಡುವುದು ಕಷ್ಟ. ಇದರ ಜತೆಗೆ ಭಾರತದ ಬೇರೆ ಬೇರೆ ಭಾಗದಲ್ಲಿ ಮಹಿಳೆಯರ ಸ್ಥಿತಿಗತಿ ಏನಿದೆ, ಅವರ ಬದುಕಿನಲ್ಲಿ ಬದಲಾವಣೆ ಹೇಗಾಗಿದೆ ಎಂಬುದರ ಬಗ್ಗೆ ಆಳವಾದ ಅಧ್ಯಯನವಾಗಲಿ, ತಿಳಿವಳಿಕೆಯಾಗಲಿ ನನ್ನಲ್ಲಿ ಇಲ್ಲ.
 

ಪುರುಷವಾದಿಗಳ ಅಸಹನೆ

ಸಾರ್ವಜನಿಕ ಬದುಕಿನಲ್ಲಿ ಮಹಿಳೆಯ ಭಾಗವಹಿಸುವಿಕೆಯು ಈ ಸಮಾಜ ಸಣ್ಣಮಟ್ಟದಲ್ಲಿ ಚಲನೆ ಮಾಡುತ್ತಿರುವುದನ್ನು ಸೂಚಿಸುತ್ತಿದೆ. ಈ ಚಲನೆಯ ಹಂತದಲ್ಲಿ ಸಹಜವಾಗಿ ಪುರುಷವಾದಿಗಳ ಅಸಹನೆ ಪ್ರಕಟವಾಗುವುದಕ್ಕೆ ಕಾರಣವಾಗಿದೆ.

ವಿಸ್ಮಯ ಮತ್ತು ಅಸೂಯೆ

ಮಹಿಳೆಯರು ಸಾರ್ವಜನಿಕ ಜೀವನದಲ್ಲಿ ಭಾಗವಹಿಸುತ್ತಿರುವ ಬಗ್ಗೆ ಪುರುಷ ಸಮಾಜದಲ್ಲಿ ಒಂದು ಬಗೆಯ ವಿಸ್ಮಯ ಮತ್ತು ಅಸೂಯೆ ಎರಡೂ ಇದ್ದಂತಿದೆ. ನಾನು ಅನೇಕ ಸಲ ನನ್ನ ಮಡದಿ ಚಾಲನೆ ಮಾಡುವ ಸ್ಕೂಟರಿನಲ್ಲಿ ಹಿಂದೆ ಕೂತುಕೊಂಡು ಪೇಟೆಗೆ ಹೋಗುವುದುಂಟು. ಅದನ್ನು ವಿಚಿತ್ರವೆಂಬಂತೆ ನೋಡುತ್ತಾರೆ.

ಆದರ್ಶ ಮಾದರಿ ಯಾವುದು?

ನಮ್ಮ ಸಾಂಪ್ರದಾಯಿಕ ಕುಟುಂಬ ರಚನೆಯೇ ಮಹಿಳೆಯರ ಸ್ವಾತಂತ್ರ್ಯದ ಬಹುದೊಡ್ಡ ಅಡ್ಡಿ. ಆದರೆ ಹಾಗೆ ಸಂಸಾರದಿಂದ ಆಚೆ ಇರುವವರಿಗೆ ಸ್ವಾತಂತ್ರ್ಯ ಇರಬಹುದು. ಬದುಕಿನಲ್ಲಿ ಬೇರುಗಳಿರುವುದಿಲ್ಲ. ಸಂಸಾರ ಕುಟುಂಬದೊಳಗಿದ್ದೂ ತನ್ನ ಧೀಮಂತಿಕೆಯನ್ನು ಬಿಟ್ಟುಕೊಡದ ಮಹಿಳೆಯನ್ನು ಕಾಣಬೇಕಾದರೆ, ಈ ಸಾಂಪ್ರದಾಯಿಕ ಕುಟುಂಬ ಕಲ್ಪನೆಯಲ್ಲಿಯೇ ಬಹಳ ದೊಡ್ಡ ಪಲ್ಲಟಗಳಾಗಬೇಕೋ ಏನೊ? ಅದಕ್ಕೆ ಬೇಕಾದ ಆದರ್ಶ ಮಾದರಿಯೊಂದು ಯಾವುದು?

ಪಟ್ಟಾಂಗ

ನಮ್ಮ ಕಡೆ ಬೀಡಿ ಸೇದುತ್ತ ಕಟ್ಟೆಯ ಮೇಲೆ ಕುಳಿತು ಪಟ್ಟಾಂಗ ಹೊಡೆಯುವ ಗಂಡಸರನ್ನು ಕಾಣಬಹುದು. ಆದರೆ ಹಾಗೆ ವಿಶ್ರಾಂತಿ ಪಡೆಯುತ್ತಿರುವ ಮಹಿಳೆಯನ್ನು ನಾನು ಕಂಡಿಲ್ಲ.

ಆದರೆ ನಾನು ತಿರುಗಿದ ಕರ್ನಾಟಕದಲ್ಲಿ, ನಾನು ಬದುಕುತ್ತಿರುವ ಊರಿನಲ್ಲಿ, ನನ್ನ ಬೀದಿಯಲ್ಲಿ ಹಾಗೂ ನನ್ನ ಮನೆಯಲ್ಲಿ ನಾನು ಕಂಡಿರುವ ಮಹಿಳೆಯರ ಚಿತ್ರಗಳ ಮೂಲಕವೇ ಈ ಪ್ರಶ್ನೆಗೆ ಉತ್ತರಿಸಲು ಯತ್ನಿಸುತ್ತೇನೆ.

ನಾನು ಹೊಸಪೇಟೆ ಎಂಬ ಚಿಕ್ಕಪಟ್ಟಣದಲ್ಲಿ ವಾಸವಾಗಿದ್ದೇನೆ. ಅಲ್ಲಿ ಅನೇಕ ಬಗೆಯ ಮಹಿಳೆಯರಿದ್ದಾರೆ. ನನಗೆ ಎದ್ದು ಕಾಣುವುದು, ಅಲ್ಲಿನ ಕೆಳವರ್ಗದ ಮಹಿಳೆಯರ ಬದುಕು. ನಮ್ಮಂತಹ ಮೇಲ್ಮಧ್ಯಮ ವರ್ಗದ ಮನೆಗಳಿಗೆ ಮನೆಗೆಲಸಕ್ಕೆ ಬರುವ ಮಹಿಳೆಯರ ಬದುಕು. ಇವರಲ್ಲಿ ಬಹಳಷ್ಟು ಜನ ಚಿಕ್ಕವಯಸ್ಸಿನಲ್ಲೇ ವಿಧವೆಯರಾದವರು ಇಲ್ಲವೇ ಗಂಡ ಬಿಟ್ಟವರು. ಮೂಲಶೋಧ ಮಾಡಿದಾಗ, ಇವರ ಗಂಡಂದಿರು ಕುಡಿತಕ್ಕೆ ಬಿದ್ದು ಆರೋಗ್ಯ ಕೆಡಿಸಿಕೊಂಡು ಅಕಾಲ ಮೃತ್ಯುವಿಗೆ ಈಡಾಗಿರುವುದು ತಿಳಿಯಿತು.

ಬೇಜವಾಬ್ದಾರಿತನ ತೋರಿರುವ ಈ ಗಂಡಸರನ್ನು ಅಪರಾಧಿಗಳಾಗಿಸುವುದು ಸುಲಭ. ಆದರೆ ಅವರನ್ನು ಕುಡಿತಕ್ಕೆ ದೂಡಿದ ಸಂಗತಿ ಯಾವುದು? ಅವರ ಬಡತನವೇ? ಅವರ ವೈಯಕ್ತಿಕ ದುರ್ಬಲತೆಯೇ? ಅವರ ಕೈಗೆ ದುಡಿಮೆ ಸರಿಯಾಗಿ ಸಿಗದಿದ್ದರೂ ಮದ್ಯ ಸಲೀಸಾಗಿ ಸಿಗುವಂತೆ ಮಾಡಿರುವ ನಮ್ಮ ಸರ್ಕಾರವೇ? ಅವರು ವಾಸಿಸುವ ಸನ್ನಿವೇಶವೇ? ಕೋಟ್ಯಧಿಪತಿಗಳು ಮತ್ತು ಗತಿಯಿಲ್ಲದವರು ಎಂಬ ಎರಡು ತುದಿಯಲ್ಲಿ ವಿಭಜಿತವಾಗಿರುವ ಆರ್ಥಿಕ ತರತಮವೇ? ಏನಿರಬಹುದು ಎಂದು ಆಲೋಚನೆ ಮಾಡಿದ್ದೇನೆ. ಸರಿಯಾದ ಉತ್ತರ ಸಿಕ್ಕಿಲ್ಲ.

ಆದರೆ ಅವರ ಮಡದಿಯರು ಸೀಮೆ ಎಣ್ಣೆ ಪಡೆಯಲು, ತಮ್ಮ ಮಕ್ಕಳನ್ನು ಓದಿಸಲು, ಹೆಣ್ಣುಮಕ್ಕಳಿಗೆ ಮದುವೆ ಮಾಡಿಸಲು, ಸಣ್ಣದೊಂದು ಗುಡಿಸಲು ಕಟ್ಟಿಕೊಳ್ಳಲು ಮಾಡುವ ಹೋರಾಟವು ಬಹಳ ಭೀಷಣವಾಗಿದೆ. ಧೀಮಂತವಾಗಿದೆ.

ಈ ಬಗೆಯಲ್ಲಿ ಹೋರಾಡುತ್ತಿರುವ ನೂರಾರು ಮಹಿಳೆಯರನ್ನು ಕಂಡಿದ್ದೇನೆ. ನಮ್ಮ ಕಡೆ ಬೀಡಿ ಸೇದುತ್ತ ಕಟ್ಟೆಯ ಮೇಲೆ ಕುಳಿತು ಪಟ್ಟಾಂಗ ಹೊಡೆಯುವ ಗಂಡಸರನ್ನು ಕಾಣಬಹುದು. ಆದರೆ ಹಾಗೆ ವಿಶ್ರಾಂತಿ ಪಡೆಯುತ್ತಿರುವ ಮಹಿಳೆಯನ್ನು ನಾನು ಕಂಡಿಲ್ಲ.

ಹಿಮಾಲಯದ ಚಾರಣ ಮಾಡುವಲ್ಲಿಯೂ ಆಲೂಗೆಡ್ಡೆ ಹೊಲದಲ್ಲಿ ಕೆಲಸ ಮಾಡುವ ಮಹಿಳೆಯರನ್ನೇ ಕಂಡೆ. ಪ್ರವಾಹದಲ್ಲಿ ಕೊಚ್ಚಿಹೋದ ಹಳ್ಳಿಗಳಲ್ಲಿ ಪ್ರವಾಸ ಮಾಡುವಾಗಲೂ, ಬಿದ್ದ ಮನೆಯನ್ನು ಕಟ್ಟಿಕೊಳ್ಳುವಲ್ಲಿ ಮಹಿಳೆಯರು ಪಾಡುಪಡುತ್ತಿರುವುದು ಕಂಡಿತು. ಭಾರತದ ಬಹಳ ದೊಡ್ಡ ಶ್ರಮಜೀವಿಯೆಂದರೆ ಕೆಳವರ್ಗದ ಮಹಿಳೆಯೇ ಇರಬೇಕು.

ಪ್ರಶ್ನೆಯೆಂದರೆ, ತಮ್ಮ ಬದುಕನ್ನು ಕಟ್ಟಿಕೊಳ್ಳಲು ಹೋರಾಡುವ ಈ ಗುಣ ಜೈವಿಕವಾಗಿ ಮಹಿಳೆಯಲ್ಲಿಯೇ ಇದೆಯೊ ಅಥವಾ ಇವೆಲ್ಲ ನಿನ್ನ ಕೆಲಸ ಎಂಬ ಪುರುಷ ಮನೋಭಾವದಿಂದ ಅವರು ಈ ಕೆಲಸಕ್ಕೆ ದೂಡಲ್ಪಟ್ಟಿದ್ದಾರೊ? ಎರಡನೆಯದೇ ನಿಜವಿರಬೇಕು.

ಆದರೆ ಇದಕ್ಕೆ ಪ್ರತಿಯಾಗಿ ಬುರ್ಖಾ ತೊಡಿಸುವ, ಶಾಲೆಗೆ ಕಳಿಸದಿರುವ, ಸಮಾನ ಅವಕಾಶಗಳನ್ನು ನಿರಾಕರಿಸುವ ನೂರಾರು ತೊಡಕು ಅವಳ ಮೇಲೆ ಹೇರಲ್ಪಟ್ಟಿವೆ. ಇಷ್ಟಾಗಿಯೂ ಈ ಮಹಿಳೆಯರು ತೋರುವ ಚೈತನ್ಯಶೀಲತೆ ಅಪಾರ. ಈಗೀಗ ಗ್ರಾಮೀಣ ಮಹಿಳೆಯರು ದೊಡ್ಡ ಪ್ರಮಾಣದಲ್ಲಿ ಪ್ರವೇಶ ಪಡೆಯುತ್ತಿದ್ದಾರೆ. ಆಧುನಿಕ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ಆದರೂ ಮಹಿಳೆಯನ್ನು ಘನತೆಯಿಂದ ನಡೆಸಿಕೊಳ್ಳುವ ಸಮಾಜವಿನ್ನೂ ಸೃಷ್ಟಿಯಾಗಿಲ್ಲ. ಅದಕ್ಕಾಗಿ ನಾವು ಇನ್ನೂ ದೂರ ನಡೆಯಬೇಕಿದೆ.

ವಿಸ್ಮಯ ಮತ್ತು ಅಸೂಯೆ...
ಮಹಿಳೆಯರು ಸಾರ್ವಜನಿಕ ಜೀವನದಲ್ಲಿ ಭಾಗವಹಿಸುತ್ತಿರುವ ಬಗ್ಗೆ ಪುರುಷ ಸಮಾಜದಲ್ಲಿ ಒಂದು ಬಗೆಯ ವಿಸ್ಮಯ ಮತ್ತು ಅಸೂಯೆ ಎರಡೂ ಇದ್ದಂತಿದೆ. ನಾನು ಅನೇಕ ಸಲ ನನ್ನ ಮಡದಿ ಚಾಲನೆ ಮಾಡುವ ಸ್ಕೂಟರಿನಲ್ಲಿ ಹಿಂದೆ ಕೂತುಕೊಂಡು ಪೇಟೆಗೆ ಹೋಗುವುದುಂಟು. ಅದನ್ನು ವಿಚಿತ್ರವೆಂಬಂತೆ ನೋಡುತ್ತಾರೆ. ಹೀಗೂ ಉಂಟೆ? ಹೀಗೂ ಆಗಬಹುದಲ್ಲ? ಹೀಗೇಕೆ ಆಗಬಾರದು?- ಎಂದು ಏನೆಲ್ಲ ಭಾವಿಸುತ್ತಿರಬಹುದು ಎಂದು ಆಲೋಚಿಸುತ್ತೇನೆ.

ಇದು ಬಹಳ ಸಣ್ಣ ಸಂಗತಿ ಇರಬಹುದು. ಆದರೆ ಜನರ ಆಲೋಚನಾ ಕ್ರಮದಲ್ಲಿ ಸಣ್ಣ ಮಟ್ಟದ ತಿರುವು ಕೊಡುತ್ತಿರಬಹುದು. ಮಹಿಳೆಯರು ಜಿಲ್ಲಾ ಪಂಚಾಯ್ತಿ ತಾಲೂಕು ಪಂಚಾಯ್ತಿ ಅಧ್ಯಕ್ಷರೋ ಸದಸ್ಯರೊ ಆಗಿ ಸ್ವತಂತ್ರವಾಗಿ ನಿರ್ಣಯ ತೆಗೆದುಕೊಳ್ಳಲು ಇನ್ನೂ ಸಾಧ್ಯವಾಗದೆ ಇರಬಹುದು. ಆದರೆ ಅವರು ಜಿಲ್ಲಾಧಿಕಾರಿ ಮಂತ್ರಿಗಳ ಜತೆ ಕೂತು ಕಾರ್ಯ ನಿರ್ವಹಿಸುವ ಚಿತ್ರ ಯಾವ ಸಂದೇಶ ಕೊಡುತ್ತಿರಬಹುದು ಎಂದೆಲ್ಲ ಆಲೋಚಿಸುತ್ತೇನೆ.

ಸೋನಿಯಾ ಗಾಂಧಿಯಂತಹ ಮಹಿಳೆ ರಾಷ್ಟ್ರದ ರಾಜಕಾರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದರೂ, ನಿತ್ಯಜೀವನದಲ್ಲಿ ಮಹಿಳೆಯರ ಮೇಲಿನ ಸಮಾಜದ ನಡವಳಿಕೆ ಬದಲಾಗಿಲ್ಲ ಎನ್ನುವುದು ನಿಜ. ಆದರೂ ಮಹಿಳೆಯ ಸಾರ್ವಜನಿಕ ಬದುಕಿನಲ್ಲಿ ಭಾಗವಹಿಸುವಿಕೆಯು ಈ ಸಮಾಜ ಸಣ್ಣಮಟ್ಟದಲ್ಲಿ ಚಲನೆ ಮಾಡುತ್ತಿರುವುದನ್ನು ಸೂಚಿಸುತ್ತಿದೆ. ಈ ಚಲನೆಯ ಹಂತದಲ್ಲಿ ಸಹಜವಾಗಿ ಪುರುಷವಾದಿಗಳ ಅಸಹನೆ ಪ್ರಕಟವಾಗುವುದಕ್ಕೆ ಕಾರಣವಾಗಿದೆ.  

ನಾನು ಇಬ್ಬರು ಹೆಣ್ಣುಮಕ್ಕಳ ತಂದೆ. ನನ್ನ ಜೀವನಸಂಗಾತಿ ಬಾನು ಮತ್ತು ನನ್ನ ಮಕ್ಕಳು ಆಲೋಚಿಸುವ ರೀತಿ, ಕೆಲಸ ಮಾಡುವ ಬಗೆ ಕಂಡರೆ, ನಾನಿನ್ನೂ ಎಷ್ಟೊಂದು ಅವರಿಂದ ಕಲಿಯಬೇಕಿದೆ ಎಂದು ಏಕಾಂತದಲ್ಲಿ ಪರಿಭಾವಿಸುತ್ತೇನೆ. ಮಹಿಳೆ ಪುರುಷರ ಮನೋಭಾವದಲ್ಲಿ ಇರುವ ಸಮಾಜದ ಆಲೋಚನಾ ಕ್ರಮದಿಂದಲೇ ಬಂದಿರುವ ಅಮಾನುಷತೆಯ ಅಂಶಗಳನ್ನು ಕಳೆದು ಮಾನವೀಯಗೊಳಿಸಬಲ್ಲ ವಿಚಿತ್ರ ಶಕ್ತಿಯೂ ಅವರಿಗಿದೆ.

ನನ್ನ ತಿರುಗಾಟ ಮತ್ತು ಅಧ್ಯಯನದಲ್ಲಿ ಅತ್ಯಂತ ಧೀಮಂತ ಸ್ವತಂತ್ರ ಮನೋವೃತ್ತಿಯ ಮಹಿಳೆಯರು ಎಂದರೆ, ಪುರುಷರನ್ನು ತಮ್ಮ ಬಾಳಿಗೆ ಅವಲಂಬನೆ ಮಾಡದೆ ಇರುವವರು. ಸಂಸಾರದಿಂದ ಹೊರಗಿರುವವರು.

ಸಾಂಪ್ರದಾಯಿಕ ಕುಟುಂಬ ಕಲ್ಪನೆಪಲ್ಲಟವಾಗಬೇಕೇನೋ...

ಅಂದರೆ ನಮ್ಮ ಸಾಂಪ್ರದಾಯಕ ಕುಟುಂಬ ರಚನೆಯೇ ಮಹಿಳೆಯರ ಸ್ವಾತಂತ್ರ್ಯದ ಬಹುದೊಡ್ಡ ಅಡ್ಡಿ. ಆದರೆ ಹಾಗೆ ಸಂಸಾರದಿಂದ ಆಚೆ ಇರುವವರಿಗೆ ಸ್ವಾತಂತ್ರ್ಯ ಇರಬಹುದು. ಬದುಕಿನಲ್ಲಿ ಬೇರುಗಳಿರುವುದಿಲ್ಲ. ಸಂಸಾರ ಕುಟುಂಬದೊಳಗಿದ್ದೂ ತನ್ನ ಧೀಮಂತಿಕೆಯನ್ನು ಬಿಟ್ಟುಕೊಡದ ಮಹಿಳೆಯನ್ನು ಕಾಣಬೇಕಾದರೆ, ಈ ಸಾಂಪ್ರದಾಯಿಕ ಕುಟುಂಬ ಕಲ್ಪನೆಯಲ್ಲಿಯೇ ಬಹಳ ದೊಡ್ಡ ಪಲ್ಲಟಗಳಾಗಬೇಕೋ ಏನೊ? ಅದಕ್ಕೆ ಬೇಕಾದ ಆದರ್ಶ ಮಾದರಿಯೊಂದು ಯಾವುದು? ತಿಳಿಯದು.

ಸುನಂದಾ ಕಡಮೆ, ವಿನಯಾ, ನಾಗವೇಣಿ ಅವರ ಕತೆಗಳನ್ನು ಓದುವಾಗ, ಶರೀಫಾ ಅವರ ಕವಿತೆಯ ನಾಯಕಿಯರನ್ನು ನೋಡುವಾಗ, ಅವರು ಚಿತ್ರಿಸುವ ಮಹಿಳೆಯರ ಬದುಕಿನ ಚಿತ್ರಗಳು, ಸಣ್ಣಪುಟ್ಟ ಸಂಗತಿಗಳಿಗೆ ಮಾಡುವ ಹೋರಾಟ ಇವು ಹಿಂದಿನ ಲೇಖಕರ ಬರೆಹಗಳಲ್ಲಿ ಇಷ್ಟು ಶಕ್ತವಾಗಿ ಬಂದಿಲ್ಲವೆಂದೇ ನನಗೆ ಅನಿಸುತ್ತದೆ. ಇದು ಹಿಂದಿನ ಲೇಖಕರು ದುರ್ಬಲರು ಅಂತ ಅರ್ಥ ಅಲ್ಲ. ಮಹಿಳಾ ಸಂವೇದನೆಯು ಈಗ ಹೆಚ್ಚು ಸೂಕ್ಷ್ಮತೆಯನ್ನು ಪಡೆದಿರುವುದೇ ಇದಕ್ಕೆ ಕಾರಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT