ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರ ಮರ್ಯಾದೆ ಉಳಿಸಿದ ಶೌಚಾಲಯ

Last Updated 7 ಮೇ 2012, 6:00 IST
ಅಕ್ಷರ ಗಾತ್ರ

ಹುಬ್ಬಳ್ಳಿ: `ಎನ್‌ಎಸ್‌ಎಸ್ ವಿದ್ಯಾರ್ಥಿಗಳು ನಮ್ಮ ಮರ್ಯಾದೆ ಉಳಿಸಿದ್ರು~ ಎಂದು ನಿಟ್ಟುಸಿರುಬಿಟ್ಟರು ಪಾರವ್ವ ಮೇಟಿ.

ಧಾರವಾಡ ತಾಲ್ಲೂಕಿನ ಕುರಬಗಟ್ಟಿ ಗ್ರಾಮದ ಅವರು, ತಮ್ಮೂರಿನ ಇತರರಂತೆ ಬೆಳಿಗ್ಗೆದ್ದು ಶೌಚಾಲಯ ಇಲ್ಲದೇ ಇರುವುದಕ್ಕೆ ಪಡಬಾರದ ಪಾಡು ಪಡುತ್ತಿದ್ದರು. ಆ ಗ್ರಾಮದಲ್ಲಿ ಸೇವಂತಿಗೆ ಹೂವುಗಳನ್ನೇ ಹೆಚ್ಚು ಬೆಳೆಯುತ್ತಾರೆ.

ಹೀಗಾಗಿ ನಿತ್ಯ ಬೆಳಿಗ್ಗೆ 6 ಗಂಟೆಗೇ ಹೂವಿನ ಆರೈಕೆಗೆ, ಹೂವು ಕೀಳಲು ಹೊಲಗಳಿಗೆ ಹೋಗುತ್ತಾರೆ. ಬೆಳಿಗ್ಗೆ 8.30 ಗಂಟೆಯವರೆಗೆ ಹೊಲದಲ್ಲಿ ದುಡಿದು ಮತ್ತೆ 9 ಗಂಟೆಗೆ ಹೊಲಗಳಿಗೆ ವಾಪಸಾಗಿ ಸಂಜೆಯವರೆಗೆ ಇರುತ್ತಾರೆ. ಹೀಗಾಗಿ ಬೆಳಿಗ್ಗೆ ಹೊತ್ತು ಮಹಿಳೆಯರಿಗೆ ಬಹಿರ್ದೆಸೆ ಕ್ರಿಯೆ ಮುಗಿಸುವುದೊಂದು ದೊಡ್ಡ ಸವಾಲಾಗಿತ್ತು.

ಹೊಲಗಳಲ್ಲಿ ಹೋದರೆ ಜನ ಇರುತ್ತಾರೆ. ರಸ್ತೆಗುಂಟ ಹೋದರೆ ವಾಹನಗಳ ಸದಾ ಸಂಚಾರ. ಇಂತಹ ಇಕ್ಕಟ್ಟಿನ ಸ್ಥಿತಿಯಲ್ಲಿ ಆ ಕ್ರಿಯೆಯನ್ನೇ ಮುಂದೆ ಹಾಕಿದರೆ ಆರೋಗ್ಯದ ಮೇಲೂ ಏರುಪೇರಾಗುತ್ತಿತ್ತು. ಇದನ್ನು ಮನಗಂಡ ಧಾರವಾಡದ ಕರ್ನಾಟಕ ಕಲಾ ಮಹಾವಿದ್ಯಾಲಯದ ಎನ್‌ಎಸ್‌ಎಸ್ (ರಾಷ್ಟ್ರೀಯ ಸೇವಾ ಯೋಜನೆ) 28 ವಿದ್ಯಾರ್ಥಿನಿಯರು ಸೇರಿದಂತೆ 140 ವಿದ್ಯಾರ್ಥಿಗಳು 63 ಶೌಚಾಲಯಗಳನ್ನು ಫೆಬ್ರುವರಿ ತಿಂಗಳಲ್ಲಿ ಕಟ್ಟಿದರು. ಅವು ಬಳಕೆಯಾಗುತ್ತಿರುವ ಕುರಿತು `ಪ್ರಜಾವಾಣಿ~ ಭಾನುವಾರ ಪರಿಶೀಲಿಸಿದಾಗ 52 ಶೌಚಾಲಯಗಳು ಪೂರ್ಣಗೊಂಡಿದ್ದು ಬಳಕೆಯಾಗುತ್ತಿರುವುದು ಗಮನಕ್ಕೆ ಬಂತು.

`ಎನ್‌ಎಸ್‌ಎಸ್ ಕ್ಯಾಂಪ್ ಎಂದರೆ ರಸ್ತೆ ದುರಸ್ತಿ, ಗಿಡಗಂಟಿ ಹಾಗೂ ಗಟಾರು ಸ್ವಚ್ಛಗೊಳಿಸುವುದು ಮಾತ್ರ ಆಗಬಾರದೆಂದು ಈ ಕ್ರಮ ಕೈಗೊಂಡೆವು~ ಎನ್ನುತ್ತಾರೆ ಕರ್ನಾಟಕ ಕಲಾ ಮಹಾವಿದ್ಯಾಲಯದ ಎನ್‌ಎಸ್‌ಎಸ್ ಅಧಿಕಾರಿ ಡಾ.ಮಹಾದೇವಪ್ಪ ದಳಪತಿ ಹಾಗೂ ಎಸ್.ಆರ್. ಗಣಿ. ಈ ಸಮಾಜ ಸೇವೆಗೆ ಮುಂದಾದ ತಂಡವನ್ನು ಪ್ರೋತ್ಸಾಹಿಸಿದವರು ಕಾಲೇಜಿನ ಪ್ರಾಚಾರ್ಯ ಎಸ್.ಎಸ್. ಕಟ್ಟಿಮನಿ.

`ಎನ್‌ಎಸ್‌ಎಸ್ ಕ್ಯಾಂಪಿಗೂ ಮೊದಲು ಕುರುಬಗಟ್ಟಿ ಗ್ರಾಮಕ್ಕೆ ತೆರಳಿ ಎಲ್ಲ ಮನೆಗೆ ಶೌಚಾಲಯ ಇಲ್ಲದಿರುವುದು ಗೊತ್ತಾಯಿತು. ನಮ್ಮಲ್ಲಿ ಗೌಂಡಿ ಕೆಲಸ ಮಾಡುವ ವಿದ್ಯಾರ್ಥಿಗಳಿದ್ದಾರೆ. ಅವರೊಂದಿಗೆ ಇತರರ ಶ್ರಮದಾನದ ಮೂಲಕ ಶೌಚಾಲಯಗಳನ್ನು ಕಟ್ಟಿಕೊಡೋಣವೆಂದು ನಿರ್ಧರಿಸಿದೆವು~ ಎಂದು ಅವರು ಹೇಳುತ್ತಾರೆ. ಕರ್ನಾಟಕ ಕಾಲೇಜಿನ ಎನ್‌ಎಸ್‌ಎಸ್ ಶಿಬಿರದಿಂದ ಇದೇ ಮೊದಲ ಬಾರಿಗೆ ಅಷ್ಟೊಂದು ಶೌಚಾಲಯ ಕಟ್ಟಿದೆ.
 
ಆದರೆ ಕಳೆದ ವರ್ಷ 2 ಶೌಚಾಲಯಗಳನ್ನು ಧಾರವಾಡ ತಾಲ್ಲೂಕಿನ ಮನಸೂರ ಗ್ರಾಮದಲ್ಲಿ, 2010ರಲ್ಲಿ ಹಳ್ಳಿಗೇರಿ ಗ್ರಾಮದಲ್ಲಿ 38, 2009ರಲ್ಲಿ ಸಲಕಿನಕೊಪ್ಪ ಗ್ರಾಮದಲ್ಲಿ 10 ಶೌಚಾಲಯಗಳನ್ನು ಕಟ್ಟಿದ್ದಿದೆ. 400 ಮನೆಗಳ ಕುರಬಗಟ್ಟಿ ಗ್ರಾಮದಲ್ಲಿ  ಸದ್ಯಕ್ಕೆ 280 ಮನೆಗಳವರು ಶೌಚಾಲಯ ಗಳನ್ನು ಕಟ್ಟಿಸಿಕೊಂಡಿದ್ದಾರೆ.

ಶೌಚಾಲಯ ಕಟ್ಟಿದ ಮೇಲೆ ಅದರ ಫೋಟೋ ತೋರಿಸ ಬೇಕು. ನಂತರ ಕಟ್ಟಡ  ಪರಿಶೀಲಿಸಿದ ನಂತರ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಬ್ಸಿಡಿ  ಬಿಡುಗಡೆ ಮಾಡು ತ್ತಾರೆ ತಾ.ಪಂ. ಸದಸ್ಯ ರುದ್ರಪ್ಪ ಅರಿವಾಳ.

`ಸಾರ್ವಜನಿಕ ಶೌಚಾಲಯ ಇಲ್ರಿ. ಹಿಂಗಾಗಿ ಬಯಲಿಗೆ ಹೋಗಬೇಕ್ರಿ. ಗಂಡಸರು ಬಂದ್ರ ಎದ್ದು ನಿಲ್ಲತಿದ್ವಿ. ಮಳೆಗಾಲದಲ್ಲಿ ಕೆಸರು ತುಳಕೊಂಡು ಹೋಗಬೇಕಿತ್ರಿ. ಆಮೇಲೆ ಕಾಲು ಸ್ವಚ್ಛಗೊಳಿಸಾಕ ಕೊಡಗಟ್ಟಲೆ ನೀರು ಬೇಕಿತ್ರಿ. ಈಗ ಶೌಚಾಲಯ ಕಟ್ಟಿದ್ದರಿಂದ ಛಲೋ ಆಗೇತ್ರಿ~ ಎಂದು ಖುಪಿಪಟ್ಟರು ಸುನಂದಮ್ಮ ಗುಡ್ಡಪ್ಪನವರ.

`ತಂಬಿಗೆ ಹಿಡಕೊಂಡು ಕಿಲೋಮೀಟರ್‌ಗಟ್ಟಲೆ ಹೋಗಬೇಕಿತ್ರಿ. ಅಲ್ಲದೇ ಹೊಲದಾಗ ಮಂದಿ ಬಹಿರ್ದೆಸೆ ಮಾಡೂದ್ರಿಂದ ಕೂಲಿ ಮಾಡಾಕ ಆಳುಗಳು ಬರ‌್ತಿರಲಿಲ್ರಿ. ಈಗ ಆ ಸಮಸ್ಯೆ ಇಲ್ರಿ~ ಎಂದು ಸಂತೋಷವಾಗಿ ಹೇಳಿದರು ದೇವವ್ವ ಹಿರೇಮಠ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT