ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರ ಮುಂದಾಳತ್ವ

ಚೆಲ್ಲಿದರು ಮಲ್ಲಿಗೆಯ.. ಭಾಗ-8
Last Updated 22 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಕರಗ ಶಕ್ತ್ಯೋತ್ಸವದಲ್ಲಿ ಮಹಿಳೆಯರೇ ಮುಂದಾಳತ್ವ ವಹಿಸಿ ದೇವಿ ಆರಾಧನೆ ಮಾಡುವ ಬಹು ಮುಖ್ಯವಾದ ಕಾರ್ಯವೇ ಪೊಂಗಲ್ ಸೇವೆ.  ಬೆಂಗಳೂರು ಧರ್ಮರಾಯಸ್ವಾಮಿ ದೇವಾಲಯದಲ್ಲಿ ನಡೆಯುತ್ತಿರುವ ಕರಗ ಉತ್ಸವದ ಎಂಟನೆಯ ದಿನ (ಏಪ್ರಿಲ್ 23) ತಿಗಳ ಸಮುದಾಯಕ್ಕೆ ಸೇರಿದ ಮಹಿಳೆಯರು ಇಡೀ ದಿನ ಉಪವಾಸವಿದ್ದು ದ್ರೌಪದಿಯನ್ನು ಶ್ರದ್ಧಾಭಕ್ತಿಗಳಿಂದ ಪೂಜಿಸುತ್ತಾರೆ.

ಆದಿಶಕ್ತಿಗೆ ಅತ್ಯಂತ ಪ್ರಿಯವಾದ ಖಾದ್ಯ ಪೊಂಗಲ್. ಅಕ್ಕಿ, ಹಾಲು ಮತ್ತು ಬೆಲ್ಲದಿಂದ ಈ ಖಾದ್ಯವನ್ನು ದೇವಾಲಯದ ಆವರಣದಲ್ಲಿಯೇ ಒಲೆ ಹಚ್ಚಿ ಸಿದ್ಧಮಾಡಲಾಗುವುದು. ಇದನ್ನು ದೇವಿಗೆ ಸ್ತ್ರೀಯರು ಸಮರ್ಪಿಸುವರು. 

ಕರಗ ಉತ್ಸವ ಭಾರತದ ಪ್ರಸಿದ್ಧ ಮಹಾಕಾವ್ಯಗಳಲ್ಲಿ ಒಂದಾದ ಮಹಾಭಾರತದ ಪ್ರಮುಖ ಘಟನೆಗಳನ್ನು ಒಳಗೊಂಡಿದೆ. ಈ ಉತ್ಸವ ಶಕ್ತಿದೇವತೆಯ ಆರಾಧನೆಗೆ ಸಂಬಂಧಿಸಿದ್ದು. ಸ್ತ್ರೀಶಕ್ತಿಯ ಹಾಗೂ ಮಾತದೇವತೆಯ ಪೂಜೆಗಳನ್ನು ಅಂತರ್ಗತ ಮಾಡಿಕೊಂಡ ಕರಗ ಶಕ್ತ್ಯೋತ್ಸವ ಚೈತ್ರ ಮಾಸದಲ್ಲಿ ಜರುಗುವುದು. 

ಮಹಾಭಾರತದ ಪ್ರಮುಖ ಘಟನೆಗಳು, ಅದರಲ್ಲೂ ವಿಶೇಷವಾಗಿ ದ್ರೌಪದಿಯನ್ನು ಕುರಿತ ವಿವರಣೆಗಳನ್ನು ಶಕ್ತ್ಯೋತ್ಸವದ ಎಲ್ಲಾ ದಿನ ಪೂಜಾರಿಗಳು ನೀಡುತ್ತಾರೆ. ಧ್ವಜಾರೋಹಣದಿಂದ ಹಿಡಿದು ಧ್ವಜ ಅವರೋಹಣದವರೆಗೆ ಭರತ ಪಠಣ ಬಹು ಮುಖ್ಯವಾಗಿ ನಡೆಯುವ ಕಾರ್ಯ. ತಿಗಳಾರ್ಯ ಭಾಷೆಯಲ್ಲಿ ಮಹಾಭಾರತದ ಅನೇಕ ಸಂಗತಿಗಳನ್ನು ವಿವರಿಸುತ್ತಾ ವಿಧಿ ವಿಧಾನಗಳನ್ನು ನಡೆಸಲು ಅನುವಾಗುವುದು ಪಠಣ ಪೂಜಾರಿಗಳ ಕರ್ತವ್ಯ. 

ಪೊಂಗಲ್ ಸೇವೆಯ ದಿನ ಸ್ತ್ರೀಯರು ಪೊಂಗಲ್ ನೈವೇದ್ಯವನ್ನು ಸಮರ್ಪಿಸುವ ಸಂದರ್ಭದಲ್ಲಿ ಭರತ ಪಠಣವು ನಿರಂತರವಾಗಿ ನಡೆಯುತ್ತದೆ.  ಪಠಣ ಮಾಡುವವರು ತಲತಲಾಂತರಗಳಿಂದ ಕುಟುಂಬ ಕರ್ತವ್ಯವಾಗಿ ಇದನ್ನು ನಿರ್ವಹಿಸುತ್ತಾರೆ. 

ದ್ರೌಪದಿ ಮೂಲದ ಕರಗವು ಕುಂಭ ಪ್ರಾಧಾನ್ಯದ ದುರ್ಗದ ಕತೆಯನ್ನು ಹೇಳುತ್ತದೆ. ಸ್ತ್ರೀ ಸಮಾನತೆಯನ್ನು ಸಾರುವ ಸಲುವಾಗಿ ಕರಗ ಶಕ್ತ್ಯೋತ್ಸವದಲ್ಲಿ ತಿಗಳ ಮಹಿಳೆಯರು ಆರತಿ ದೀಪ ಹಾಗೂ ಪೊಂಗಲು ಸೇವೆಯ ಕರ್ತವ್ಯವನ್ನು ನಡೆಸುವ ಹೊಣೆಗಾರಿಕೆಯನ್ನು ಹೊಂದಿರುವರು.

ಕರಗ ಕರ್ತರಾದ ಪೂಜಾರಿಗಳದ್ದು ಶಕ್ತ್ಯೋತ್ಸವದಲ್ಲಿ ಅತ್ಯಂತ ಮಹತ್ವದ ಪಾತ್ರ. ಕರಗ ಧರಿಸಲು ನಿಗದಿಯಾದ ಪೂಜಾರಿಗಳು ಶ್ರೀ ಧರ್ಮರಾಯಸ್ವಾಮಿ ದೇವಸ್ಥಾನದಲ್ಲಿ ಅರ್ಚಕರಾಗಿ ಕಾರ್ಯನಿರ್ವಹಿಸುವ ಜವಾಬ್ದಾರಿಯನ್ನು ಹೊತ್ತಿರುತ್ತಾರೆ. ಧ್ವಜಾರೋಹಣ ದಿನದಿಂದ ಉತ್ಸವದ ಕೊನೆಯ ದಿನದವರೆಗೆ ಕರಗ ಪೂಜಾರಿಗಳ ಉಪಸ್ಥಿತಿಯಲ್ಲಿಯೇ ಎಲ್ಲಾ ಕರಗದ ಧಾರ್ಮಿಕ ವಿಧಿ ವಿಧಾನಗಳು ನಡೆಯುತ್ತವೆ.

ಕರಗ ಹೊರುವುದು ವಂಶ ಪಾರಂಪರ್ಯವಾಗಿ ನಡೆದು ಬಂದಿರುವ ಹೊಣೆಗಾರಿಕೆ. ಬೆಂಗಳೂರು ಕರಗದಲ್ಲಿ ನಿರ್ದಿಷ್ಟ ಕುಟುಂಬಗಳವರು ಕರಗ ಧರಿಸುವ ಪವಿತ್ರ ಕಾರ್ಯವನ್ನು ನಿರ್ವಹಿಸುತ್ತಾ ಬಂದಿದ್ದಾರೆ. ಈ ಹಿಂದೆ ಶಿವಶಂಕರ್, ಅಭಿಮನ್ಯು ಹಾಗೂ ಚಿನ್ನಪ್ಪನವರು ತಲಾ ಹತ್ತಕ್ಕಿಂತ ಹೆಚ್ಚು ಬಾರಿ ಕರಗ ಧರಿಸಿರುತ್ತಾರೆ.

ಪ್ರಸ್ತುತ ಕರಗ ಪೂಜಾರಿಯಾಗಿರುವ ಸಿ.ಎಂ.ಲೋಕೇಶ್ ಈ ಸಾಲಿನಲ್ಲಿ, ಇದೇ 24ರಂದು ನಡೆಯುವ ಕರಗ ಶಕ್ತ್ಯೋತ್ಸವವನ್ನು ಧರಿಸಲಿದ್ದಾರೆ.  ಸಾಮಾನ್ಯವಾಗಿ ವಸಂತ ಋತುವಿನ ಚೈತ್ರ ಮಾಸದ ಶುಕ್ಲ ಪಕ್ಷದ ಕಡೆಯ ದಿನ ಹುಣ್ಣಿಮೆ ರಾತ್ರಿ ಕರಗ ಶಕ್ತ್ಯೋತ್ಸವ (ಹೂವಿನ ಕರಗ) ನಡೆಯುತ್ತದೆ.  ಆದರೆ ಈ ವರ್ಷ ಅದೇ ದಿನ ಏಪ್ರಿಲ್ 25ರಂದು ಚಂದ್ರಗ್ರಹಣವಿರುವುದರಿಂದ ಒಂದು ದಿನ ಮುಂಚಿತವಾಗಿ ಹೂವಿನ ಕರಗ ನಡೆಯಲಿದೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT