ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರ ಮೇಲಿನ ಹಿಂಸೆ ಕೊನೆಗೊಳಿಸಲು ಸಾಧ್ಯ

ಅಕ್ಷರ ಗಾತ್ರ

ಮಹಿಳೆಯರ ಮೇಲೆ ನಡೆಯುವ ಹಿಂಸೆ ಇಡೀ ವಿಶ್ವವನ್ನು ಕಾಡುವ ಪಿಡುಗು. ಯಾವುದೇ ದೇಶ ಅಥವಾ ಪ್ರದೇಶ ಇದಕ್ಕೆ ಹೊರತಲ್ಲ.  ಇಂತಹ ಭಯಾನಕ ಘಟನೆಗಳ ಮಾಹಿತಿ­­ಯನ್ನು ಪತ್ರಿಕೆಗಳು ನಿಯಮಿತವಾಗಿ ಒದಗಿಸುತ್ತವೆ.  ಆದರೂ, ಮಾಧ್ಯಮಗಳ ಮುಂಬೆಳ­ಕಿ­ನಾಚೆಗೆ, ಪ್ರತೀ ದಿನ, ಎಲ್ಲೆಡೆ ಲಕ್ಷಾಂತರ ಮಂದಿ ಲಿಂಗಾಧಾರಿತ ಹಿಂಸೆಗೆ ಒಳಗಾಗುತ್ತಲೇ ಇದ್ದಾರೆ.  ಒಂದು ಅಂದಾಜಿನ ಪ್ರಕಾರ, ವಿಶ್ವದಲ್ಲಿ ಪ್ರತಿ ಮೂವರಲ್ಲಿ ಒಬ್ಬ ಮಹಿಳೆ ಬಲಾತ್ಕಾರಕ್ಕೆ ಒಳಗಾಗುತ್ತಾಳೆ ಇಲ್ಲವೇ, ಅವರನ್ನು ನಿಂದಿಸಲಾಗುತ್ತದೆ.  ನಾವು, ನಮ್ಮ ಸಮುದಾಯ ಮತ್ತು ಕುಟುಂಬಗಳಲ್ಲಿರುವ ಪ್ರತಿ ಮೂವರು ಮಹಿಳೆ ಹಾಗೂ ಬಾಲಕಿಯರಲ್ಲಿ ಒಬ್ಬರು ಲಿಂಗಾಧಾರಿತ ಹಿಂಸೆ ಸಂತ್ರಸ್ತರು ಎಂಬು­ದನ್ನು ಮನಗಂಡು, ಅಂತಹ ಹಿಂಸೆಯನ್ನು ತಡೆ­ಯಲು ಎಲ್ಲರೂ ಒಂದಾಗಿ ದುಡಿಯಬೇಕಾದ ಅಗತ್ಯವನ್ನು ಅರ್ಥ ಮಾಡಿಕೊಳ್ಳಬೇಕಿದೆ.

ಹಿಂಸೆಯು ಮುಚ್ಚಿದ ಬಾಗಿಲುಗಳ ಹಿಂದೆ­ಯಾದರೂ ಆಗಿರಬಹುದು. ಇಲ್ಲವೇ, ಸಾರ್ವ­ಜನಿಕ­ವಾಗಿ ಬೆದರಿಸುವ ತಂತ್ರವೂ ಆದೀತು. ಅಂತಹ ಹಿಂಸೆಯಿಂದ ಮಹಿಳೆಯರು ಹಾಗೂ ಬಾಲಕಿಯರನ್ನು ಮುಕ್ತಗೊಳಿಸುವ ಜಾಗತಿಕ ಬದ್ಧತೆಯನ್ನು ಪುನರ್‌ ಪ್ರದರ್ಶಿಸಲು, ನವೆಂಬರ್ 25ರಿಂದ ಆರಂಭವಾಗಿರುವ ಲಿಂಗಾ­ಧಾರಿತ ಹಿಂಸೆಯ ವಿರುದ್ಧದ 16 ದಿನಗಳ ಜಾಗೃತಿ ಆಂದೋಲನ ಅವಕಾಶ ಕಲ್ಪಿಸುತ್ತದೆ.  ತನ್ನ ಅರ್ಧದಷ್ಟು ಜನಸಂಖ್ಯೆಯನ್ನು ಮೂಲೆ­ಗುಂಪು ಮಾಡಿ, ತುಳಿತಕ್ಕೀಡು ಮಾಡಿ ಹಾಗೂ ತಾರತಮ್ಯಕ್ಕೆ ಒಳಪಡಿಸುವ ಯಾವ ದೇಶವೂ ತನ್ನ ಪೂರ್ಣ ಸಾಮರ್ಥ್ಯಕ್ಕೆ ತಕ್ಕ ಸಾಧನೆಯನ್ನು ಮಾಡಲು ಸಾಧ್ಯವಿಲ್ಲ.  ಇದೇ ಕಾರಣಕ್ಕಾಗಿ, ಲೈಂಗಿಕ ಸಮಾನತೆ ಹಾಗೂ ಮಹಿಳಾ ಸಬಲೀಕರಣ­ವನ್ನೂ ತನ್ನ ವಿದೇಶಾಂಗ ನೀತಿಯ ಪ್ರಮುಖ ಭಾಗವನ್ನಾಗಿ ಅಮೆರಿಕ  ರೂಪಿಸಿಕೊಂಡಿದೆ.

ಮಹಿಳೆಯರ ವಿರುದ್ಧದ ಹಿಂಸೆಗೆ ಮನೆಯೇ  ಸಾಮಾನ್ಯವಾದ ತಾಣ ಆಗಿರುವುದರಿಂದ, ಅನೇಕ ಮಹಿಳೆಯರಿಗೆ ಆ ಭಯ ದೊರಕದು.  ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ದೈಹಿಕ ಗಾಯದಿಂದ ಹಿಡಿದು, ತೀವ್ರ ಖಿನ್ನತೆವರೆಗಿನ ಮಹಿಳೆಯರ ಅನೇಕ ಅನಾರೋಗ್ಯಗಳಿಗೆ ಕೌಟುಂಬಿಕ ದೌರ್ಜನ್ಯವೇ ಕಾರಣ.  ಉದಾ­ಹರಣೆ ಎಂದರೆ, ಮಗು ಗರ್ಭದಲ್ಲಿ­ರುವಾಗ ಕೌಟುಂಬಿಕ ದೌರ್ಜನ್ಯದ ಫಲವಾಗಿ ತಾಯಿಗೆ ಉಂಟಾಗುವ ತೀವ್ರ ಒತ್ತಡ ಹಾಗೂ  ಉದ್ವಿಗ್ನತೆ, ಕಡಿಮೆ ತೂಕದ ಶಿಶುಗಳ ಜನನಕ್ಕೆ ಕಾರಣ­ವಾಗುತ್ತದೆ.  ಮಹಿಳೆಯರು ಕೊಲೆಯಾ­ದಲ್ಲಿ, ಶೇಕಡ 38ರಷ್ಟು ಪ್ರಕರಣಗಳಲ್ಲಿ ಅದಕ್ಕೆ ಕಾರಣ  ಕೌಟುಂಬಿಕ ದೌರ್ಜನ್ಯವೇ ಆಗಿರುತ್ತದೆ.

ಲಿಂಗಾಧಾರಿತ ಹಿಂಸೆಯು ಕೇವಲ ದೈಹಿಕ ಪರಿಣಾಮಗಳಲ್ಲಿ ಕೊನೆಗೊಳ್ಳುವುದಿಲ್ಲ.  ಅದು ಆರ್ಥಿಕವಾಗಿಯೂ ಪರಿಣಾಮ ಬೀರಬಹುದು.  ಅದು ಮಹಿಳೆಯ ಗಳಿಕೆ, ಸಾಧನೆ ಹಾಗೂ ಉದ್ಯೋಗವನ್ನು ಉಳಿಸಿಕೊಳ್ಳುವ ಸಾಮರ್ಥ್ಯದ ಮೇಲೂ ಪರಿಣಾಮ ಬೀರಬಲ್ಲದು. ಇದ­ರಿಂದಾಗಿ ಏಕಾಂಗಿತನ, ದುಡಿಯಲು ಅಸಮರ್ಥ­ರಾಗುವುದು, ನಿಯಮಿತವಾಗಿ ಚಟುವಟಿಕೆ­ಯಲ್ಲಿ ಪಾಲ್ಗೊಳ್ಳದಿರುವುದು ಹಾಗೂ ತಮ್ಮನ್ನು ತಾವು ಮತ್ತು ತಮ್ಮ ಮಕ್ಕಳನ್ನು ಕಾಪಾಡಿ­ಕೊಳ್ಳುವ ಸಾಮರ್ಥ್ಯ ಕಡಿಮೆಯಾಗುವಂಥ ಲಕ್ಷಣಗಳು ಮಹಿಳೆಯರನ್ನು ಬಾಧಿಸಬಹುದು.

ಮಹಿಳೆಯರ ಮೇಲಣ ಹಿಂಸೆಯನ್ನು ತಡೆ­ಯುವುದು ಹಾಗೂ ಅಂಥ ಹಿಂಸೆಗೆ ಕಾರಣ­ರಾದವರ ವಿರುದ್ಧ ಕಾನೂನು ಕ್ರಮ ಜರುಗಿಸು­ವುದು ದೂರಗಾಮಿಯಾಗಿ ಧನಾತ್ಮಕ ಪರಿ­ಣಾಮ ಬೀರುತ್ತದೆ. ಇಂಥ ಅಪರಾಧ­ಗಳನ್ನು ತನಿಖೆ ಮಾಡಿ, ಕಾನೂನು ಕ್ರಮ ಕೈಗೊಳ್ಳುವು­ದಕ್ಕೆ ಅನುಕೂಲವಾಗುವಂತೆ ಮಹಿಳೆ­ಯರ ವಿರುದ್ಧ ಹಿಂಸೆ ತಡೆ ಕಾಯ್ದೆಯನ್ನು ಅಮೆರಿಕ  ಬಲಪಡಿಸಿತು.  ಈ ಕಾಯ್ದೆ  1994ರಲ್ಲಿ  ಜಾರಿ­ಯಾ­­ದಾ­ಗಿನಿಂದ 16 ಶತಕೋಟಿ ಡಾಲರು­ಗಳಿಗೂ ಹೆಚ್ಚು (ರೂ.1,00,000 ಕೋಟಿ) ಹಣ ಉಳಿತಾಯವಾಗಿದೆ ಎಂದು ಅಂದಾಜಿಸಲಾಗಿದೆ.

ಲಿಂಗಾಧಾರಿತ ಹಿಂಸೆ ಕುರಿತ ಸಮಸ್ಯೆಯನ್ನು ಬಗೆಹರಿಸಲು ಅನೇಕ ರಾಷ್ಟ್ರಗಳು ಕಾಯ್ದೆಯನ್ನು ರೂಪಿಸಿವೆ.  ಮುಂದಿನ ಮಹತ್ವದ ಹೆಜ್ಜೆ ಎಂದರೆ, ಜವಾಬ್ದಾರಿಯನ್ನು ಹೆಚ್ಚಿಸಲು ಹಾಗೂ ಕಾನೂನು­­­ ಪರಿಣಾಮಕಾರಿಯಾಗಿ ಜಾರಿ­ಗೊಳಿ­ಸಲು ಒಟ್ಟಾಗಿ ಕೆಲಸ ಮಾಡುವುದು. ಈ ವರ್ಷಾ­ರಂಭದಲ್ಲಿ ವರ್ಮಾ ಆಯೋಗದ ವರದಿ ಹೊರ­ಬಂದ ಬಳಿಕ ಹಾಗೂ ‘ಕೆಲಸದ ಸ್ಥಳದಲ್ಲಿ ಮಹಿಳೆ­ಯರ ಮೇಲಣ ಲೈಂಗಿಕ ಕಿರುಕುಳ (ತಡೆ) ಕಾಯ್ದೆ– 2013’ ಮೂಲಕ, ಭಾರತ ಲಿಂಗಾ­ಧಾರಿತ ಹಿಂಸೆ ನಿವಾರಣೆ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಿಟ್ಟಿದೆ.

ಜಾಗತಿಕ ಮಟ್ಟದಲ್ಲಿ ಲಿಂಗಾ­ಧಾರಿತ ಹಿಂಸೆಯನ್ನು ತಡೆ­ಗಟ್ಟಲು ಹಾಗೂ ಈ ಸಮಸ್ಯೆಗೆ ಸ್ಪಂದಿಸಲು ಅಮೆ­ರಿಕ 2012ರ ಆಗಸ್ಟ್‌­ನಲ್ಲಿ ಕಾರ್ಯತಂತ್ರ­ವೊಂದನ್ನು ಪ್ರಕಟಿ­ಸಿತು. ಇದರಲ್ಲಿ ನಿಖರವಾದ ಧ್ಯೇಯಗಳನ್ನು ಗುರುತಿಸುವುದರ ಜೊತೆಗೆ, ಲಿಂಗಾ­ಧಾರಿತ ಹಿಂಸೆ ನಿವಾರಿಸುವ ನಿಟ್ಟಿನಲ್ಲಿ ಅಮೆರಿಕದ ನೈಪುಣ್ಯ­ ಹಾಗೂ ಸಾಮರ್ಥ್ಯವನ್ನು ಕ್ರೋಡೀಕರಿಸುವುದರ ಕುರಿತೂ ಪ್ರಸ್ತಾಪಿಸಲಾಗಿದೆ.

ಅದೇ ವೇಳೆಯಲ್ಲಿ, ನಮಗೀಗ ಪ್ರತಿಪಾದಕರು ಹೆಚ್ಚಿನ ಸಂಖ್ಯೆಯಲ್ಲಿ ಬೇಕಿದ್ದಾರೆ. ಅಲ್ಲದೇ, ನೀತಿ ನಿರೂಪಕರು ಹಾಗೂ ಕಾರ್ಯಕ್ಷೇತ್ರದಲ್ಲಿ ಕೆಲಸ ಮಾಡುವವರ ನಡುವೆ ಹೆಚ್ಚಿನ ಸಂವಾದ ನಡೆ­ಯುವ ಅಗತ್ಯವಿದೆ. ತಮ್ಮ ಕುರಿತು ತಾವು ಮಾತ­­­ನಾಡಲು ಸಮರ್ಥರಾಗುವಂತೆ ಬಾಲಕಿ­ಯರನ್ನು ನಾವು ಸಬಲಗೊಳಿಸಬೇಕಿದೆ. ತಮ್ಮ ಸಹೋದರಿಯರ ಪರವಾಗಿ ಮಾತನಾಡುವಷ್ಟು ಶಕ್ತರಾಗಲು ಬಾಲಕರಿಗೆ ಶಿಕ್ಷಣ ಒದಗಿಸಬೇಕಿದೆ.

  ಹಿಂಸೆಯನ್ನು ತಡೆಯಲು ಹಾಗೂ ಈ ಸಮಸ್ಯೆ­ಯನ್ನು ನಿಭಾಯಿಸಲು ಮಾತ್ರವಲ್ಲದೇ,  ಲಿಂಗಾ­­ಧಾರಿತ ತಾರತಮ್ಯಕ್ಕೆ ಕಾರಣವಾಗುವ ಸಂಪ್ರ­ದಾಯ­ಗಳು ಹಾಗೂ ಧೋರಣೆಗಳನ್ನು ಬದಲಿ­ಸಲು  ಪುರುಷರು, ಬಾಲಕರು ಹಾಗೂ ಸಮು­ದಾಯದ ನಾಯಕರನ್ನೂ ಸೇರಿಸಿಕೊಳ್ಳ­ಬೇಕಿದೆ. ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಹಿಂಸೆ ಹಾಗೂ ತಾರತಮ್ಯಕ್ಕೆ ಎಡೆಮಾಡುವ ಆಚರಣೆ­ಗಳಿಗೆ ಪ್ರೋತ್ಸಾಹ ನೀಡುವ, ಆಳವಾಗಿ ಬೇರೂರಿದ ಲಿಂಗಾಧಾರಿತ ಅಸಮಾನತೆಯನ್ನು ನಾವು ನಿವಾರಿಸಬೇಕಿದೆ.

ಸುಸ್ಥಿರ ಪ್ರಜಾತಾಂತ್ರಿಕ ಸಮಾಜಗಳ ನಿರ್ಮಾಣ, ಮುಕ್ತ ಹಾಗೂ ಜವಾಬ್ದಾರಿಯುತ ಆಳ್ವಿಕೆ, ಅಂತರರಾಷ್ಟ್ರೀಯ ಶಾಂತಿ ಹಾಗೂ ಭದ್ರತೆ­ಯನ್ನು ಬಲಗೊಳಿಸುವುದು, ಸ್ಪಂದನಶೀಲ ಮಾರುಕಟ್ಟೆಯ ಬೆಳವಣಿಗೆ ಹಾಗೂ ಆರೋಗ್ಯ ಮತ್ತು ಶೈಕ್ಷಣಿಕ ಸವಾಲುಗಳನ್ನು ಎದುರಿಸುವಲ್ಲಿ ಮಹಿಳಾ ಸಬಲೀಕರಣ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ.  ಹಿಂಸೆಯಿಂದ ಮುಕ್ತರಾಗಿ, ಶೈಕ್ಷಣಿಕ, ಆರೋಗ್ಯ, ಉದ್ಯೋಗ ಕ್ಷೇತ್ರ ಹಾಗೂ ರಾಜ­ಕಾರಣ­­ದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಸಮಾನ ಅವಕಾಶಗಳನ್ನು ಮಹಿಳೆಯರಿಗೆ ನೀಡಿ­ದಲ್ಲಿ, ಅವರು ತಮ್ಮ ಕುಟುಂಬಗಳನ್ನು, ತಮ್ಮ ಸಮುದಾಯಗಳನ್ನು ಹಾಗೂ ತಮ್ಮ ರಾಷ್ಟ್ರ­ಗಳನ್ನು ಮೇಲೆತ್ತಬಲ್ಲರು.

ಜೊತೆಗೆ ಬದಲಾವ­ಣೆಯ ಹರಿಕಾರರಾಗಬಲ್ಲರು.  ಅಮೆರಿಕದ ವಿದೇ­ಶಾಂಗ ಸಚಿವ ಜಾನ್‌ ಕೆರ್ರಿ ಅವರು ಹೇಳು­ವಂತೆ “ಸಮೃದ್ಧಿ, ರಕ್ಷಣೆ ಹಾಗೂ ವಿಶ್ವಶಾಂತಿ­ಯನ್ನು ಹೆಚ್ಚಿಸುವ ನಿಟ್ಟಿನಲ್ಲಿ, ನಾವು ಬಾಲಕಿ­ಯರ ಸಬಲೀಕರಣಕ್ಕೆ  ಹೂಡಿಕೆ ಮಾಡು­ವುದು ನಮ್ಮ ಕರ್ತವ್ಯದ ಮಹತ್ವದ ಭಾಗ... ಆಗ ಅವರು ಶಕ್ತಿಯುತ ತಾಯಂದಿರು, ನಾಯಕರು ಹಾಗೂ ಪರಿವರ್ತನಕಾರರಾಗಿ ಹೊರಹೊಮ್ಮುತ್ತಾರೆ’’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT