ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರಿಂದ ಬೃಹತ್ ಪ್ರತಿಭಟನೆ

Last Updated 15 ಅಕ್ಟೋಬರ್ 2011, 10:10 IST
ಅಕ್ಷರ ಗಾತ್ರ

ಮಂಡ್ಯ: ನಿವೇಶನ ರಹಿತ ಎಲ್ಲ ಕಡುಬಡವರಿಗೆ ನಿವೇಶನ, ಹಕ್ಕುಪತ್ರ ವಿತರಿಸಲು ಆಗ್ರಹಪಡಿಸಿ ವಿವಿಧ ಗ್ರಾಮಗಳಿಂದ ಆಗಮಿಸಿದ ಅಸಂಖ್ಯ ಮಹಿಳೆಯರು ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿಗೆ ಘೇರಾವ್ ಮಾಡಿ ಪ್ರತಿಭಟಿಸಿದರು.

ಸಿಐಟಿಯು, ಜನವಾದಿ ಮಹಿಳಾ ಸಂಘಟನೆ, ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ ನೇತೃತ್ವದಲ್ಲಿ ಸಿಲ್ವರ್ ಜ್ಯೂಬಿಲಿ ಪಾರ್ಕ್ ಬಳಿ ಸೇರಿದ ಮಹಿಳೆಯರು ಹೆದ್ದಾರಿಯ ರಸ್ತೆಯ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ಮೆರವಣಿಗೆ ತೆರಳಿ ಅಲ್ಲಿ ಧರಣಿ ಪ್ರತಿಭಟನೆಯನ್ನು ನಡೆಸಿದರು.

ಸಿಐಟಿಯು ಬಾವುಟಗಳನ್ನು ಹಿಡಿದಿದ್ದ ಮಹಿಳೆಯರು, ಗ್ರಾಮಗಳಲ್ಲಿ  ನಡೆಯುತ್ತಿರುವ ಭೂಸ್ವಾಧೀನ ಕೈಬಿಡಬೇಕು. ಸುದೀರ್ಘ ಕಾಲದಿಂದ ವಾಸವಿರುವ ಕುಟುಂಬಗಳಿಗೆ ಹಕ್ಕುಪತ್ರ ನೀಡಬೇಕು. ಉದ್ಯೋಗಖಾತ್ರಿ ಯೋಜನೆಯನ್ನು ಪರಿಣಾಮಕಾರಿ ಯಾಗಿ ಜಾರಿಗೊಳಿಸಬೇಕು; ಕೂಲಿಕಾರರಿಗೆ ಬ್ಯಾಂಕ್ ಸಾಲ ಸೌಲಭ್ಯವನ್ನು ಒದಗಿಸಬೇಕು ಎಂದು ಆಗ್ರಹಪಡಿಸಿದರು.

ಜಿಲ್ಲೆಯಾದ್ಯಂತ ಸರ್ಕಾರಿ ಭೂಮಿಯಲ್ಲಿ ಬಡಜನರು ಗುಡಿಸಲು ಹಾಕಿ ವಾಸಿಸುತ್ತಿರುವ ಪ್ರಕರಣಗಳಲ್ಲಿ ಅವರಿಗೆ ನಿವೇಶನದ ಹಕ್ಕುಪತ್ರ ವಿತರಿಸಬೇಕು. ಈ ಕುರಿತ ಮನವಿಗಳನ್ನು ಆದ್ಯತೆಯ ಮೇರೆಗೆ ಪುರಸ್ಕರಿಸಬೇಕು ಎಂದು ಕೋರಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಮುಖಂಡರು, ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವ ಮೂಲಕ ಹೆಚ್ಚಿನ ಜನರಿಗೆ ಉದ್ಯೋಗದ ಭರವಸೆ ನೀಡಬೇಕು ಎಂದರು.

ಬಗರ್ ಹುಕುಂ ಮತ್ತು ಅರಣ್ಯಭೂಮಿ ಸಕ್ರಮ ಅರ್ಜಿಗಳನ್ನು ತ್ವರಿತಗತಿಯಲ್ಲಿ ಇತ್ಯರ್ಥಪಡಿಸಬೇಕು, ಕೃಷಿ ಕಾರ್ಮಿಕರು, ಮಹಿಳೆಯರಿಗೆ ಬ್ಯಾಂಕ್ ಸಾಲ ನೀಡಬೇಕು; ತಹಶೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಿರುವ ಸಾವಿರಾರು ರೈತರು, ಕೂಲಿಕಾರರು, ಮಹಿಳೆಯರ ಸಮಸ್ಯೆಗಳ ನ್ನು ಪರಿಹರಿಸುವಲ್ಲಿ ನಿರ್ಲಕ್ಷ್ಯ ತೋರಿರುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮುಖಂಡರಾದ ಪುಟ್ಟಮಾಧು ಕೃಷ್ಣೇಗೌಡ, ಜಿ.ರಾಮಕೃಷ್ಣ, ದೇವಿ, ಕುಮಾರಿ, ಯಶವಂತ್ ಮಾತನಾಡಿದರು. ಪ್ರತಿಭಟನೆಯ ಹಿನ್ನೆಲೆಯಲ್ಲಿ ಮೈಸೂರು- ಬೆಂಗಳೂರು ಹೆದ್ದಾರಿಯಲ್ಲಿ ಕೆಲಹೊತ್ತು ವಾಹನ ಸಂಚಾರಕ್ಕೆ ತೊಂದರೆಯಾಯಿತು. ಜಿಲ್ಲಾಧಿಕಾರಿಗಳ ಕಚೇರಿ ಎದುರು ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT