ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೋದಯ ಒಕ್ಕೂಟದ ಸಹಿ ಚಳವಳಿ

Last Updated 21 ಡಿಸೆಂಬರ್ 2012, 8:25 IST
ಅಕ್ಷರ ಗಾತ್ರ

ಚಾಮರಾಜನಗರ: ಕರ್ನಾಟಕ ಪಂಚಾಯತ್‌ರಾಜ್ ಕಾಯ್ದೆಗೆ ತಿದ್ದುಪಡಿ ತರುವುದು ಹಾಗೂ ಮಹಿಳಾ ದೌರ್ಜನ್ಯ ತಡೆಗೆ ಆಗ್ರಹಿಸಿ ನಗರದಲ್ಲಿ ಬುಧವಾರ ಜಿಲ್ಲಾ ಮಹಿ ಳೋದಯ ಮಹಿಳಾ ಒಕ್ಕೂಟದಿಂದ ಜನಜಾಗೃತಿ ಜಾಥಾ ನಡೆಯಿತು.

ಚಾಮರಾಜೇಶ್ವರ ದೇವಸ್ಥಾನದಿಂದ ಮೆರವಣಿಗೆ ಹೊರಟ ಕಾರ್ಯ ಕರ್ತೆಯರು ಸಹಿ ಸಂಗ್ರಹ ಚಳವಳಿ ನಡೆಸಿದರು. ಮಹಿಳಾ ದೌರ್ಜನ್ಯದ ವಿರುದ್ಧ ಘೋಷಣೆ ಕೂಗಿದರು. ಜಿಲ್ಲಾಡಳಿತ ಭವನಕ್ಕೆ ತೆರಳಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಗ್ರಾಮ ಪಂಚಾಯಿತಿ ಸದಸ್ಯರ ಅಧಿಕಾರ ಮೊಟಕುಗೊಳಿಸಿ ಅಧಿಕಾರಿ ವರ್ಗದವರಿಗೆ ಹಸ್ತಾಂತರಿಸುವುದು ಸರಿಯಲ್ಲ. ಗ್ರಾಮ ಪಂಚಾಯಿತಿ ವ್ಯಾಪ್ತಿ ವಾರ್ಡ್ ಮತ್ತು ಗ್ರಾಮ ಸಭೆಯನ್ನು 3 ತಿಂಗಳಿಗೊಮ್ಮೆ ನಡೆಸಬೇಕು.

ಮಹಿಳಾ ಗ್ರಾಮ ಸಭೆ ನಡೆಸುವಂತೆ ಸರ್ಕಾರ ಆದೇಶ ನೀಡಬೇಕು. ಜಿಲ್ಲಾ ಯೋಜನಾ ಸಮಿತಿಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರನ್ನು ಆಯ್ಕೆ ಮಾಡುವಾಗ ಶೇ. 50ರಷ್ಟು ಮಹಿಳಾ ಮೀಸಲಾತಿ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಪ್ರಸ್ತುತ ಮಹಿಳಾ ದೌರ್ಜನ್ಯ ಪ್ರಮಾಣ ಹೆಚ್ಚಾಗುತ್ತಿದೆ.  ಕೌಟುಂಬಿಕ ಹಿಂಸೆ ತಡೆ ಕಾಯ್ದೆ- 2005 ಜಾರಿಯಲ್ಲಿದೆ. ತಾಲ್ಲೂಕುಮಟ್ಟದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಹಿಳಾ ಸಾಂತ್ವನ ಕೇಂದ್ರ ಸೇರಿದಂತೆ ವಿವಿಧ ಸೇವಾ ಸಮಿತಿಗಳಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಆರೋಪಿಸಿದರು.

ತಾಲ್ಲೂಕುಮಟ್ಟದಲ್ಲಿ ಪ್ರತ್ಯೇಕ ಸಂರಕ್ಷಣಾಧಿಕಾರಿ ನೇಮಿಸಬೇಕು. ಅವರು ಕೌಟುಂಬಿಕ ಹಿಂಸೆ ತಡೆ ಕಾಯ್ದೆಯಡಿ ಕಾರ್ಯ ನಿರ್ವಹಿಸಬೇಕು. ಕಾಯ್ದೆಯಡಿ ಎರಡು ತಿಂಗಳೊಳಗೆ ದಾಖಲಾದ ದೂರುಗಳಿಗೆ ತೀರ್ಪು ಸಿಗುವಂತಾಗಬೇಕು ಎಂದು ಆಗ್ರಹಿಸಿದರು.

ಸರ್ಕಾರಿ ಹಾಗೂ ಖಾಸಗಿ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವ ದಿನಗೂಲಿ ಮಹಿಳಾ ನೌಕರರಿಗೆ ಲೈಂಗಿಕ ಕಿರುಕುಳ ನೀಡುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ನಡೆಯುವ ಹೆರಿಗೆ ಸಮಯದಲ್ಲಿ ಸೂಕ್ತ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.
ಜಾಗೃತಿ ಜಾಥಾದಲ್ಲಿ ಒಡಿಪಿ ವಲಯಾಧಿಕಾರಿ ಗಂಗಾಧರಸ್ವಾಮಿ, ರಾಮಕೃಷ್ಣ, ಪುಷ್ಪಲತಾ, ಚಿನ್ನಮ್ಮ, ಸ್ಟೆಲ್ಲಾಮೇರಿ, ಬಸಮ್ಮ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT