ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಷಿ ವರದಿ ತಿದ್ದುಪಡಿ ಅಗತ್ಯ: ಚಂದ್ರು

Last Updated 5 ಡಿಸೆಂಬರ್ 2012, 19:34 IST
ಅಕ್ಷರ ಗಾತ್ರ

ಬೆಂಗಳೂರು: `ಸ್ಥಳೀಯರಿಗೆ ಉದ್ಯೋಗಾವಕಾಶವನ್ನು ನೀಡಲು ರಾಷ್ಟ್ರೀಯ ನೀತಿಯನ್ನು ಜಾರಿಗೊಳಿಸಬೇಕು' ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ `ಮುಖ್ಯಮಂತ್ರಿ' ಚಂದ್ರು ಹೇಳಿದರು.

ಕನ್ನಡ ಗೆಳೆಯರ ಬಳಗವು ಇತ್ತೀಚೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಆಯೋಜಿಸಿದ್ದ `ಕನ್ನಡ ಚಿಂತನೆ, ಕನ್ನಡ ಚಿರಂಜೀವಿ, ಕನ್ನಡ ಅರವಿಂದ ಪ್ರಶಸ್ತಿಗಳ ಪ್ರದಾನ ಹಾಗೂ ಪುಸ್ತಕ ಲೋಕಾರ್ಪಣೆ' ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

`ಆಯಾ ರಾಜ್ಯದ ಭಾಷೆಯು ತಿಳಿದವರಿಗೆ ಅಲ್ಲಿ ಕೆಲಸ ಸಿಗುವಂತಾಗಬೇಕು. ತಮಿಳನು ನಮ್ಮ ರಾಜ್ಯದಲ್ಲಿ ನೆಲೆಸಿ ಕನ್ನಡ ಭಾಷೆಯು ಬಂದರೆ ಅವನಿಗೆ ನಮ್ಮ ರಾಜ್ಯದಲ್ಲಿ ಕೆಲಸ ಮತ್ತು ಕನ್ನಡಿಗನಿಗೆ ತಮಿಳು ಭಾಷೆ ಬಂದರೆ ಅಲ್ಲಿ ಕೆಲಸ ಮಾಡಲು ಅವಕಾಶ ನೀಡಬೇಕು. ಇಂತಹ ಸ್ಥಿತಿ ನಿರ್ಮಾಣವಾಗಬೇಕು' ಎಂದರು.

`ಸರೋಜಿನಿ ಮಹಿಷಿ ವರದಿಗೆ 26 ವರ್ಷಗಳು ಕಳೆದಿವೆ. ಈಗ ವರದಿಯನ್ನು ಯಥಾವತ್ತಾಗಿ ಜಾರಿಗೆ ತರಲು ಸಾಧ್ಯವಿಲ್ಲ. ಏಕೆಂದರೆ, 26 ವರ್ಷಗಳ ಹಿಂದಿನ ಪರಿಸ್ಥಿತಿಯೇ ಬೇರೆ ಇಂದಿನ ಪರಿಸ್ಥಿತಿಯೇ ಬೇರೆಯಾಗಿದೆ. ಈಗ ಅದನ್ನು ಪರಿಷ್ಕರಿಸಿ, ತಿದ್ದುಪಡಿ ಮಾಡಿ ಅನುಷ್ಠಾನಗೊಳಿಸಬೇಕು. ಈ ಕುರಿತು ಸರ್ಕಾರಕ್ಕೆ ನಾಲ್ಕೈದು ಬಾರಿ ಪತ್ರವನ್ನು ಕಳುಹಿಸಲಾಗಿದೆ. ಆದರೆ, ಸರ್ಕಾರದಿಂದ ಯಾವ ಉತ್ತರವೂ ಬಂದಿಲ್ಲ' ಎಂದು ಅಸಮಾಧಾನ ವ್ಯಕ್ತಪಡಿಸಿದರು.

`ಇಂಗ್ಲಿಷಿನಿಂದ ಪ್ರಾದೇಶಿಕ ಭಾಷೆಗಳು ದುರಂತದ ದಾರಿಯನ್ನು ಹಿಡಿಯುತ್ತಿವೆ. ಒಂದನೇ ತರಗತಿಯಿಂದ ಐದನೇ ತರಗತಿಯವರೆಗೆ ಆಯಾ ರಾಜ್ಯದ ಭಾಷೆಯಲ್ಲಿಯೇ ಶಿಕ್ಷಣವನ್ನು ನೀಡಬೇಕು. ಇದು ನಮ್ಮ ರಾಜ್ಯಕ್ಕೆ ಮಾತ್ರವಲ್ಲ, ಉಳಿದ ಎಲ್ಲ ರಾಜ್ಯಗಳಿಗೂ  ಅನ್ವಯವಾಗುವಂತಿರಬೇಕು. ಆದ್ದರಿಂದ ಶಿಕ್ಷಣಕ್ಕೆ ರಾಷ್ಟ್ರೀಯ ನೀತಿ ಜಾರಿಗೊಳಿಸಬೇಕು' ಎಂದರು.

ಸಾಹಿತಿ ಚಿದಾನಂದ ಮೂರ್ತಿ ಮಾತನಾಡಿ, `ಇಂದಿನ ಚಳವಳಿಗಳು ಅರ್ಥವನ್ನು ಕಳೆದುಕೊಳ್ಳುತ್ತಿವೆ. ಚಳವಳಿಗಳು ಇಂದು ತಮಾಷೆಯ ಮತ್ತು ವಿದೂಷಕತನದಿಂದ ಕೂಡಿವೆ' ಎಂದು ವಿಷಾದಿಸಿದರು.

`ಯಾವುದೇ ಚಳವಳಿ ಅಥವಾ ಸಂಶೋಧನೆಯು ಸತ್ಯದ ಪರವಾಗಿರಬೇಕು. ಸತ್ಯವನ್ನು ಹೇಳುವ ಎದೆಗಾರಿಕೆಯನ್ನು ಬೆಳೆಸಿಕೊಳ್ಳಬೇಕು' ಎಂದರು.

ಕನ್ನಡ ಶ್ರೀಸಾಮಾನ್ಯರ ಕೂಟದ ಅಧ್ಯಕ್ಷ ಶ್ರ.ದೇ.ಪಾರ್ಶ್ವನಾಥ ಅವರಿಗೆ `ಕನ್ನಡ ಚಿರಂಜೀವಿ' ಹಾಗೂ ಎನ್.ಶಂಕರಪ್ಪ ತೋರಣಗಲ್ಲು ಅವರಿಗೆ `ಕನ್ನಡ ಅರವಿಂದ' ಪ್ರಶಸ್ತಿ ನೀಡಿ ಗೌರವಿಸಲಾಯಿತು.

9ರಂದು ದೆಹಲಿಗೆ
`ರಾಜ್ಯದ ಎಲ್ಲ ಸಮಸ್ಯೆಗಳ ಬಗ್ಗೆ ಚರ್ಚಿಸಲು ಡಿ.9 ಕ್ಕೆ ದೆಹಲಿಗೆ ನಿಯೋಗ ಭೇಟಿ ನೀಡಲಿದೆ. ಶಿಕ್ಷಣ, ಜಲ ಮತ್ತು ಸ್ಥಳೀಯರಿಗೆ ಉದ್ಯೋಗ ಇವುಗಳನ್ನು ರಾಷ್ಟ್ರೀಕರಣಗೊಳಿಸುವಂತೆ ಕೇಂದ್ರ ಸರ್ಕಾರವನ್ನು ನಿಯೋಗ ಒತ್ತಾಯಿಸಲಿದೆ. ನಿಯೋಗದಲ್ಲಿ ಸಾಹಿತಿಗಳು, ಚಳವಳಿಗಾರರು, ಕನ್ನಡ ಪರ ಚಿಂತಕರು, ನೀರಾವರಿ ತಜ್ಞರು ಮುಂತಾದವರು ಬರಲಿದ್ದಾರೆ' ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ `ಮುಖ್ಯಮಂತ್ರಿ' ಚಂದ್ರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT