ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹೀಂದ್ರಾ ಎಕ್ಸ್‌ಯುವಿ V/s ರಿನೋ ಡಸ್ಟರ್

Last Updated 23 ಜನವರಿ 2013, 19:59 IST
ಅಕ್ಷರ ಗಾತ್ರ

ಒಂದು ಹೊಸ ಪರಿಚಯವಾದರೂ ಸೂಜಿಗಲ್ಲಿನಂತೆ ಸೆಳೆಯುವ ನೋಟ, ಮತ್ತೊಂದು ಜನ ಮುಗಿಬೀಳುವಷ್ಟು ಪರಿಚಿತ ಈ ಎರಡರಲ್ಲಿ ಯಾವುದು ನಮಗೆ ಹಿತ? ಒಂದು ಫ್ರಾನ್ಸ್‌ನ ರಿನೋ ಡಸ್ಟರ್ ಹಾಗೂ ಮತ್ತೊಂದು ಭಾರತದ ಮಹೀಂದ್ರಾ ಎಕ್ಸ್‌ಯುವಿ 500.

ಬೃಹದಾಕರವಾಗಿ ಬೆಳೆಯುತ್ತಿರುವ ಭಾರತದ ವಾಹನ ಕ್ಷೇತ್ರದಲ್ಲಿ ಹೊಸ ಮಾದರಿಯ ಕಾರುಗಳು ಲಗ್ಗೆ ಇಡುತ್ತಲೇ ಇವೆ. ಇವುಗಳ ಆಯ್ಕೆ ವಿಚಾರದಲ್ಲಿ ಗ್ರಾಹಕರು ಸಾಕಷ್ಟು ಗೊಂದಲ ಅನುಭವಿಸುತ್ತಿದ್ದಾರೆ. ಇತ್ತೀಚೆಗೆ ಅತಿ ಹೆಚ್ಚು ಮಾರಾಟವಾಗುತ್ತಿರುವ ಹಾಗೂ ಅತಿ ಹೆಚ್ಚು ಬೇಡಿಕೆಯ ಎರಡು ಆರಂಭಿಕ ಶ್ರೇಣಿಯ ಎಸ್‌ಯುವಿಗಳಲ್ಲಿ ರಿನೋ ಡಸ್ಟರ್ ಹಾಗೂ ಎಕ್ಸ್‌ಯುವಿ 500 ಹೋಲಿಸಿ ನೋಡಿದಲ್ಲಿ ಮೇಲ್ನೋಟಕ್ಕೆ ಎರಡೂ ಕಾರುಗಳಲ್ಲಿ ಸಾಕಷ್ಟು ಅಂಶಗಳು ಹೊಂದಾಣಿಕೆಯಾಗುತ್ತವೆ.

ಸುಮಾರು 12ಲಕ್ಷಕ್ಕೆ ಎಕ್ಸ್‌ಯುವಿ ಡಬ್ಲೂ6  ಮಾದರಿ ಲಭ್ಯವಿದ್ದರೆ, ಇದೇ ಬೆಲೆಗೆ ಡಸ್ಟರ್‌ನ ಟಾಪ್ ಎಂಡ್ 110 ಆರ್‌ಎಕ್ಸ್‌ಝಡ್ ಲಭ್ಯ. ಎರಡೂ ಕಾರುಗಳ ರಚನಾ ವಿನ್ಯಾಸ ಒಂದೇ ರೀತಿಯದ್ದಾಗಿರುವುದರಿಂದ ತೂಕಕ್ಕೆ ತಕ್ಕ ಶಕ್ತಿ ಉತ್ಪಾದನೆಯೂ ಒಂದೇ ತೆರನಾಗಿದೆ. ಆದರೆ ಡಸ್ಟರ್ ಕೊಂಚ ಚಿಕ್ಕದಾಗಿರುವುದರಿಂದ ಗಿಜಿಗಿಡುವ ಟ್ರಾಫಿಕ್‌ನಲ್ಲೂ ಸರಾಗವಾಗಿ ಓಡುತ್ತದೆ.

ದೊಡ್ಡದಾಗಿರುವ ಎಕ್ಸ್‌ಯುವಿಯಲ್ಲಿ ಏಳು ಆಸನಗಳು ಇರುವುದರಿಂದ  ಕುಟುಂಬದ ಅಷ್ಟೂ ಸದಸ್ಯರೂ ಜತೆಗೂಡಿ ಪ್ರಯಾಣಿಸಬಹುದಾಗಿದೆ. ವ್ಯತ್ಯಾಸಗಳು ಮತ್ತು ಹೋಲಿಕೆಗಳ ಪಟ್ಟಿ ಇನ್ನೂ ದೊಡ್ಡದಿದೆ. ಅವುಗಳನ್ನು ವಿಶ್ಲೇಷಣಾತ್ಮಕವಾಗಿ ನೋಡೋಣ.

ವಿನ್ಯಾಸ
ಎರಡೂ ಎಸ್‌ಯುವಿಗಳು ಕಚ್ಚಾ ರಸ್ತೆಯಲ್ಲೂ ಹೆಚ್ಚು ದೃಢವಾಗಿ ಚಲಿಸುವ ಸಾಮರ್ಥ್ಯ ಹೊಂದಿವೆ. ಈ ಮೂಲಕ ತನ್ನ ಹಾದಿಯಲ್ಲಿ ಎದುರಾಗುವ ಯಾವುದೇ ರೀತಿಯ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸುವಷ್ಟು ಕಟ್ಟುಮಸ್ತಾಗಿವೆ. ಇದರಲ್ಲಿ ಡಸ್ಟರ್‌ಗೆ ಹೋಲಿಸಿದಲ್ಲಿ ಎಕ್ಸ್‌ಯುವಿ ಹಿರಿಯಣ್ಣನಂತೆ ಕಂಡರೂ ಸಣ್ಣದರಲ್ಲೇ ದೊಡ್ಡದನ್ನು ನೀಡುವ ತಾಕತ್ತನ್ನು ರಿನೋ ತುಂಬಿದೆ.

ಚೌಕಾಕಾರದ ಮುಂಭಾಗ, ಚಕ್ರದ ಮೇಲೆ ಬಲಿಷ್ಠವಾದ ತೋಳುಗಳಂತಿರುವ ಕಮಾನು ಹಾಗೂ ದಪ್ಪದಾದ ಡಿ-ಪಿಲ್ಲರ್‌ಗಳಿಂದ ಡಸ್ಟರ್ ಆತ್ಮಸ್ಥೈರ್ಯದಿಂದ ಮುನ್ನುಗುತ್ತಿರುವಂತೆ ಕಾಣುತ್ತಿದೆ. ಹೊಳೆಯುವ ಕ್ರೋಂ ಬಣ್ಣದ ಗ್ರಿಲ್ ಕಾರಿಗೊಂದು ಮೆರುಗು ನೀಡಿದೆ. ಆದರೂ, ಡೋರಿನ ಹ್ಯಾಂಡಲ್ ಹಾಗೂ ಬಾಗಿಲು ಹಾಕಿಕೊಳ್ಳುವಾಗ ಹೊರಹೊಮ್ಮುವ ಶಬ್ದ ಎಸ್‌ಯುವಿ ಮಟ್ಟಕ್ಕಿಲ್ಲ ಎಂಬುದಷ್ಟೇ ಬೇಸರ.

ಮತ್ತೊಂದೆಡೆ ಮಹೀಂದ್ರಾ ಎಕ್ಸ್‌ಯುವಿ ಶರವೇಗದ ಚಿರತೆಯಿಂದ ಪ್ರೇರಣೆ ಪಡೆದಿದ್ದು. ಅವುಗಳ ಬಾಗಿಲುಗಳ ಹಿಡಿ ಕೂಡಾ ಚಿರತೆಯ ಬಲಿಷ್ಟ ಮುಷ್ಠಿಯನ್ನೇ ಹೋಲುವುದರಿಂದ ಹೊಸ ರೂಪ ಪಡೆದಿದೆ. ಹೀಗಾಗಿ ಎಕ್ಸ್‌ಯುವಿ ಒಂದು ಪರಿಪೂರ್ಣ ಎಸ್‌ಯುವಿಗೆ ಇರಬೇಕಾದ ಗುಣಲಕ್ಷಣಗಳನ್ನು ಹೊಂದಿದೆ. ಅದರ ನೋಟ, ವಿನ್ಯಾಸ, ಗತ್ತು ಹಾಗೂ ಗೈರತ್ತು ಮೊದಲ ನೋಟದಲ್ಲೇ ಸೆಳೆಯುತ್ತದೆ.

ಹೆಡ್‌ಲೈಟ್ ಕೆಳಭಾಗದಲ್ಲಿರುವ ಗಾಳಿ ಜಾಲರಿಗಳು, ಉಬ್ಬಿರುವ ಎರಡೂ ಬದಿಯ ಪಟ್ಟಿ, ಚಕ್ರದ ಅಳತೆಗೂ ತುಸು ಹೆಚ್ಚೆನಿಸಿದ ಚಕ್ರದ ಕಮಾನು, ಹಿಂಬದಿಯ ದೀಪದ ಮೇಲಿನ ಸಣ್ಣ ಗೆರೆಗಳು ಮೂಲ ವಿನ್ಯಾಸದೊಂದಿಗೆ ಬರೆಯದು. ಆದರೂ ಈಗಾಗಲೇ 35 ಸಾವಿರಕ್ಕೂ ಅಧಿಕ ಮಂದಿ ಇದನ್ನು ಖರೀದಿಸಿರುವುದರಿಂದ ಎಕ್ಸ್‌ಯುವಿ ವಿನ್ಯಾಸ ಬಹಳಷ್ಟು ಜನಕ್ಕೆ ಒಪ್ಪಿಗೆಯಾಗಿದೆ ಎಂದೇ ಅರ್ಥ.

ಒಳಾಂಗಣ
ಹೊರಗಿನ ನೋಟದ್ಲ್ಲಲೇ ಮನಸೂರೆಗೊಳ್ಳುವ ಈ ಕಾರುಗಳ ಬಾಗಿಲನು ತೆರೆದು ಒಳ ಹೊಕ್ಕರೆ ಅಲ್ಲಿ ಎರಡರ ನಡುವಿನ ಪೈಪೋಟಿ ಮತ್ತೂ ಹೆಚ್ಚುತ್ತದೆ. ಎಕ್ಸ್‌ಯುವಿ ಡ್ಯಾಷ್‌ಬೋರ್ಡ್ ಹೆಚ್ಚು ವಿಲಾಸಿಯಾಗಿದ್ದರೆ, ಡಸ್ಟರ್ ಅದನ್ನು ಬಹಳ ಸರಳವಾಗಿ ಚೊಕ್ಕವಾಗಿ ವಿನ್ಯಾಸ ಮಾಡಿದೆ. ಮ್ಯೂಸಿಕ್ ಸಿಸ್ಟಂನ ಎರಡೂ ಬದಿಯಲ್ಲಿ ಎಸಿ ವೆಂಟ್‌ಗಳನ್ನು ನೀಡಿರುವುದು ಹಾಗೂ ಅವುಗಳ ಜೋಡಣೆ ಗಮನ ಸೆಳೆಯುತ್ತದೆ.

ಜತೆಗೆ ಡ್ರೈವರ್ ಅಥವಾ ಪಕ್ಕದ ಆಸನದಲ್ಲಿ ಕುಳಿತು ಇವುಗಳ ಗುಂಡಿಗಳನ್ನು ಸುಲಭವಾಗಿ ನಿಯಂತ್ರಿಸಬಹುದಾಗಿದೆ. ಆದರೆ ಇವುಗಳ ತಯಾರಿಕೆಗೆ ಬಳಸಿರುವ ಪ್ಲಾಸ್ಟಿಕ್ ಗುಣಮಟ್ಟ ಅಷ್ಟಾಗಿ ಹೇಳಿಕೊಳ್ಳುವಂತಿಲ್ಲ. ಜತೆಗೆ ನಿಯಂತ್ರಣ ಗುಂಡಿಗಳನ್ನು ಒತ್ತುವಾಗ ಒರಟು ಅನುಭವವಾಗುತ್ತದೆ. ಜತೆಗೆ ಕೆಲವೊಂದು ವಿಭಾಗಗಳಿಗೆ ಅಗತ್ಯಕ್ಕಿಂತ ಹೆಚ್ಚಿನ ಸ್ಥಳಾವಕಾಶ ನೀಡಿರುವುದರಿಂದ ಅಳತೆ ಹೊಂದಾಣಿಕೆಯಾಗದು.

ಅದೇ ಡಸ್ಟರ್‌ನಲ್ಲಿ ಟಾಪ್‌ಎಂಡ್ ಹ್ಯಾಟ್‌ಬ್ಯಾಕ್ ಮಾದರಿಯಲ್ಲಿ ಬಳಸಲಾದ ಒಳಾಂಗಣ ವಿನ್ಯಾಸದ ವಸ್ತುಗಳು ಇದರಲ್ಲಿ ಲಭ್ಯ. ಲೆದರ್ ಸೀಟ್‌ಗಳು ಕಾರಿಗೊಂದು ವಿಲಾಸಿ ರೂಪ ನೀಡಿದೆ. ಸ್ಟಿಯರಿಂಗ್‌ನಲ್ಲಿರುವ ನೀಡಲಾಗಿರುವ ಆಡಿಯೋ ಕಂಟ್ರೋಲ್ ಗುಂಡಿಗಳನ್ನು ಕಣ್ಣಿಗೆ ಕಾಣುವಂತೆ ಜೋಡಿಸಿದರೆ ಉತ್ತಮ ಎನಿಸುತ್ತದೆ. ಸಾಮಾನ್ಯವಾಗಿ ಡ್ರೈವರ್ ಬದಿಯ ಬಾಗಿಲ ಹಿಡಿಯಲ್ಲಿರುವ ಸೈಡ್ ಮಿರರ್‌ಗಳ ನಿಯಂತ್ರಣ ಗುಂಡಿ ಇದರಲ್ಲಿ ಹ್ಯಾಂಡ್‌ಬ್ರೇಕ್ ಬದಿಯಲ್ಲಿರುವುದರಿಂದ ಇದರ ಬಳಕೆಗೆ ತುಸು ಹೆಚ್ಚು ಕಾಲ ಬೇಕು. ಜತೆಗೆ ಡಸ್ಟರ್ ದೇಹ ಎಕ್ಸ್‌ಯುವಿಗಿಂತ ಹೆಚ್ಚು ಬಲಿಷ್ಠವಾಗಿದೆ ಹಾಗೂ ಅದು ಅನುಭವಕ್ಕೂ ಬರುತ್ತದೆ.

ಡಸ್ಟರ್‌ನಲ್ಲಿ ಆಸನ ವ್ಯವಸ್ಥೆ ಎಕ್ಸ್‌ಯುವಿಗಿಂತ ಕೆಳಮಟ್ಟದಲ್ಲಿದ್ದರೂ ಗ್ರೌಂಡ್ ಕ್ಲಿಯರೆನ್ಸ್ ಉತ್ತಮವಾಗಿದೆ. ಕಾರು ಹತ್ತಲು ಹಾಗೂ ಇಳಿಯಲು ಇದು ಉಪಯೋಗಿ. ಆದರೆ ಎತ್ತರದ ಎಕ್ಸ್‌ಯುವಿಯಲ್ಲಿ ಚಾಲಕನಿಗೆ ಕಾಣಿಸುವಷ್ಟು ಸ್ಪಷ್ಟವಾಗಿ ಇದರಲ್ಲಿ ರಸ್ತೆ ಕಾಣದು. ಇದರಿಂದ ರಸ್ತೆ ಹಿಡಿತ ಸಾಧಿಸಿ ಚಲಿಸುವುದು ಕಷ್ಟ. ಮುಂಭಾಗದ ಆಸನದಲ್ಲಿ ಎರಡೂ ಕಾರುಗಳು ಉತ್ತಮವಾಗಿದ್ದರೂ ಎಕ್ಸ್‌ಯುವಿ ತುಸು ಎತ್ತರದಲ್ಲಿದೆ. ಭುಜಗಳಿಗೆ ಹಾಗೂ ಕುತ್ತಿಗೆ ಭಾಗಕ್ಕೆ ಹೆಚ್ಚು ಆರಾಮ ಎನಿಸುತ್ತದೆ.

ಆದರೆ ಹಿಂಬದಿಯ ಆಸನ ವ್ಯವಸ್ಥೆ ಎಕ್ಸ್‌ಯುವಿಯಲ್ಲಿ ಅತ್ಯುತ್ತಮವಾಗಿದೆ. ಆದರೆ ಡಸ್ಟರ್‌ನಲ್ಲಿ ಕಾಲು ಇಟ್ಟುಕೊಳ್ಳಲು ಸ್ಥಳಾವಕಾಶ ಕಡಿಮೆ ಇದ್ದರೂ ಕೂರಲು ಹೆಚ್ಚು ಸ್ಥಳಾವಕಾಶ ಕಲ್ಪಿಸಲಾಗಿದೆ. ಮೂವರು ಅಥವಾ ಅದಕ್ಕಿಂತ ಹೆಚ್ಚು ಮಂದಿ ಹಿಂಬದಿಯ ಆಸನದಲ್ಲಿ ಕೂತಲ್ಲಿ ಕಾಲು ಇಟ್ಟುಕೊಳ್ಳಲು ಸ್ಥಳವಕಾಶದ ಕೊರತೆ ಡಸ್ಟರ್‌ನಲ್ಲಿ ಎದುರಾಗಲಿದೆ. ಎಲ್ಲಕ್ಕಿಂತ ಮಿಗಿಲಾಗಿ ಎಕ್ಸ್‌ಯುವಿ ಏಳು ಜನರನ್ನು ಹೊತ್ತೊಯ್ಯಬಲ್ಲದು.

ಹೀಗಾಗಿ ಹೆಚ್ಚು ಸದಸ್ಯರಿರುವ ಕುಟುಂಬಕ್ಕೆ ಇದು ಹೇಳಿ ಮಾಡಿಸಿದ ಕಾರು. ಹೆಚ್ಚು ಪ್ರಯಾಣಿಕರು ಇಲ್ಲದಿದ್ದಾಗ ಹಿಂಬದಿಯ ಆಸನವನ್ನು ಸಾಮಾನು ಸರಂಜಾಮು ಸಾಗಿಸಲು ಬಳಸಬಹುದು. ಡಸ್ಟರ್‌ನಲ್ಲಿ ಈ ಅನುಕೂಲ ಇಲ್ಲ. ಆದರೆ ಡಸ್ಟರ್‌ನಲ್ಲಿ ಕಾರಿನಲ್ಲಿರುವ ವಸ್ತುಗಳು ಹೊರಕ್ಕೆ ಕಾಣದಂತೆ ಇಡಲು ಅನುಕೂಲ ಮಾಡಿದೆ.

ಎಕ್ಸ್‌ಯುವಿ ಡಬ್ಲೂ6 ಹಾಗೂ ಡಸ್ಟರ್ 110ಆರ್‌ಎಕ್ಸ್‌ಝಡ್ ಮಾದರಿಯಲ್ಲಿ ಯುಎಸ್‌ಬಿ/ಆಕ್ಸಿಲರಿ ಸೌಲಭ್ಯವಿರುವ ಆಡಿಯೋ ಪ್ಲೇಯರ್, ಬ್ಲೂಟೂತ್ ದೂರವಾಣಿ ಸೌಲಭ್ಯ, ಸ್ಟಿಯರಿಂಗ್‌ನಲ್ಲಿ ಇವುಗಳ ನಿಯಂತ್ರಣ ಗುಂಡಿ, ರಿವರ್ಸ್ ಪಾರ್ಕಿಂಗ್ ಸೆನ್ಸರ್, ಕೀ ಇಲ್ಲದೆ ಪ್ರವೇಶ ಸೌಲಭ್ಯ ಹಾಗೂ ಡ್ಯುಯಲ್ ಏರ್‌ಬ್ಯಾಗ್‌ಗಳು ಎರಡೂ ಕಾರಿನಲ್ಲಿ ಲಭ್ಯ.

ಇವುಗಳೊಂದಿಗೆ ಎರಡೂ ಕಾರುಗಳಲ್ಲಿ ಸ್ವಯಂ ನಿಯಂತ್ರಿತ ಹೆಡ್‌ಲ್ಯಾಂಪ್ ಹಾಗೂ ವೈಪರ್ ಮತ್ತು ಹವಾಮಾನಕ್ಕನುಗುಣವಾದ ಎಸಿ ಸೌಲಭ್ಯವಿದೆ. ಡಸ್ಟರ್‌ನ ಈ ಮಾದರಿಯಲ್ಲಿ ಅಲಾಯ್ ವೀಲ್ ಹಾಗೂ ಲೆದರ್ ಸೀಟ್‌ಗಳು ಲಭ್ಯ. ಆದರೆ ಇದೇ ಸೌಲಭ್ಯವಿರುವ ಎಕ್ಸ್‌ಯುವಿಗಾಗಿ ಹೆಚ್ಚುವರಿ ರೂ. 1.5ಲಕ್ಷ ಪಾವತಿಸಿ ಎಕ್ಸ್‌ಯುವಿ ಡಬ್ಲೂ8 ಮಾದರಿ ಖರೀದಿಸಬೇಕಾಗುತ್ತದೆ. ಈ ಮಾದರಿಯಲ್ಲಿ ಟೈರ್‌ನಲ್ಲಿ ಗಾಳಿಯ ಒತ್ತಡ ತಿಳಿಸುವ ಸೆನ್ಸರ್, ಟಚ್‌ಸ್ಕ್ರೀನ್ ಸೌಲಭ್ಯವಿರುವ ಜಿಪಿಎಸ್, ಇಎಸ್‌ಪಿ, ಕಡಿದಾದ ರಸ್ತೆಗಳನ್ನು ಹತ್ತುವ ನಿಯಂತ್ರಣ ಹಾಗೂ ಆರು ಏರ್ ಬ್ಯಾಗ್‌ಗಳು ಲಭ್ಯ.

ನಿಯಂತ್ರಣ ಹಾಗೂ ಕಾರ್ಯಕ್ಷಮತೆ
ಚಾಲಕನ ಆಸನದಲ್ಲಿ ಕುಳಿತರೆ ಎಕ್ಸ್‌ಯುವಿಗಿಂತ ಡಸ್ಟರ್ ಕೊಂಚ ಮುಂದೆ ಎಂದರೆ ತಪ್ಪಾಗಲಾರದು. ಏಕೆಂದರೆ ಕೆಲವೆಡೆ ಎಕ್ಸ್‌ಯುವಿ ಕೊರತೆ ಡಸ್ಟರ್‌ನ ಲಾಭವಾಗಿ ಪರಿಣಮಿಸಿದೆ. ಅದರಲ್ಲಿ ಮುಖ್ಯವಾಗಿ ಎಕ್ಸ್‌ಯುವಿ ಕಾರು 140ಬಿಎಚ್‌ಪಿ, 2.2 ಲೀಟರ್ ಎಂಹಾಕ್ ಟರ್ಬೋ ಡೀಸಲ್ ಎಂಜಿನ್ ಹೊಂದಿದ್ದು ಬಾಟಂ ಎಂಡ್ ಟಾರ್ಕ್‌ನೊಂದಿಗೆ ಆರು ಗೇರ್‌ಗಳ ಗೇರ್‌ಬಾಕ್ಸ್ ಹೊಂದಿದೆ. ಭಾರವಾದ ಕ್ಲಚ್ ನಗರ ಸಂಚಾರದಲ್ಲಿ ಬೆವರಿಳಿಸುತ್ತದೆ. ಇದಕ್ಕೆ ಮುಖ್ಯ ಕಾರಣ ಡುಯಲ್ ಮಾಸ್ ಫ್ಲೈವೀಲ್ ಇರುವುದರಿಂದ ಕಡಿಮೆ ವೇಗದಲ್ಲಿ ಚಲಿಸುವುದು ತುಸು ಕಷ್ಟ.

ಡಸ್ಟರ್‌ನ ಕ್ಲಚ್ ಕೂಡಾ ಹೆಚ್ಚು ಬಿಗಿಯಾಗಿದೆ ಹಾಗೂ ಆರು ಗೇರ್‌ಗಳ ಗೇರ್‌ಬಾಕ್ಸ್ ಹಿಡಿದಂತಹ ಅನುಭವವಾದರೂ ಎಕ್ಸ್‌ಯುವಿಯಷ್ಟಿಲ್ಲ ಎನ್ನುವುದು ಇದರ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿ. 1.5ಲೀ ಸಾಮರ್ಥ್ಯದ ಕೆ9ಕೆ ಎಂಜಿನ್ 0ಯಿಂದ 100 ಕಿ.ಮೀ ವೇಗದತ್ತ ಚಲಿಸುವಾಗ 2000ದಿಂದ 4000 ಆರ್‌ಪಿಎಂನಷ್ಟು ವೇಗದಲ್ಲಿ ಎಂಜಿನ್ ಚಲಿಸಿದರೂ ಚಾಲನೆ ಕಷ್ಟವೆನಿಸದು.

ಅದರಂತೆ 470 ಕಿ.ಗ್ರಾಂ ತೂಗುವ ಡಸ್ಟರ್ ಇದೇ ವೇಗ ಕ್ರಮಿಸಲು ಹೆಚ್ಚು ಆಕ್ಸಲರೇಟರ್ ಹಿಂಡುವ ಅವಶ್ಯಕತೆ ಇರುವುದೇ ಇವುಗಳ ಸಾಮರ್ಥ್ಯದಲ್ಲಿರುವ ವ್ಯತ್ಯಾಸ. ಅದರಲ್ಲೂ ಎರಡೂ ಕಾರಿನಲ್ಲಿರುವ ಅಷ್ಟೂ ಆಸನಗಳು ಪ್ರಯಾಣಿಕರಿಂದ ತುಂಬಿದಾಗ ಈ ವ್ಯತ್ಯಾಸ ಹೆಚ್ಚಾಗಿ ಕಂಡುಬರುತ್ತದೆ.

ಇನ್ನು ಸಸ್ಪೆನ್ಷನ್ ವಿಭಾಗಕ್ಕೆ ಬಂದಲ್ಲಿ ಡಸ್ಟರ್ ಎಕ್ಸ್‌ಯುವಿಗಿಂತ ಉತ್ತಮವಾಗಿದೆ. ಮುಂಭಾಗದಲ್ಲಿ ಹೆಚ್ಚು ಆರಾಮ ನೀಡುವ ಮ್ಯಾಕ್‌ಫೆರ್ಸನ್ ಸ್ಟ್ರಟ್ ಹಾಗೂ ಹಿಂಬದಿಯಲ್ಲಿ ಮಲ್ಟಿಲಿಂಕ್ ಬಾರ್ ಇರುವುದರಿಂದ ಪ್ರಯಾಣಿಕರಿಗೆ ಹೆಚ್ಚಿನ ಆರಾಮ ಸಿಗಲಿದೆ. ಹೀಗಾಗಿ ಎಕ್ಸ್‌ಯುವಿಗೆ ಹೋಲಿಸಿದಲ್ಲಿ ಕಚ್ಚಾ ರಸ್ತೆ, ಗುಂಡಿ ಹಾಗೂ ರಸ್ತೆ ಉಬ್ಬು ರಸ್ತೆಯಲ್ಲೂ ಹೆಚ್ಚು ಕುಲುಕದ ಪ್ರಯಾಣದಲ್ಲಿ ಡಸ್ಟರ್ ಮುಂದಿದೆ.

ಕಚ್ಚಾ ರಸ್ತೆಯಲ್ಲಿ ಎಕ್ಸ್‌ಯುವಿ ಸ್ಟಿಯರಿಂಗ್ ಹೆಚ್ಚು ಆರಾಮವಾಗಿಲ್ಲ. ಡಸ್ಟರ್‌ನ ಸ್ಟಿಯರಿಂಗ್ ಹಿಡಿತ, ರಸ್ತೆ ಹಿಡಿತ ಹಾಗೂ ಕಾರಿನ ನಿಯಂತ್ರಣ ಶಕ್ತಿಯಿಂದಾಗಿ ತಿರುವಿನ ರಸ್ತೆಗಳಲ್ಲೂ ಆರಾಮವಾಗಿ ಚಲಿಸಬಹುದಾಗಿದೆ. ಇದನ್ನು ಸರಿದೂಗಿಸಲು ಎಕ್ಸ್‌ಯುವಿ ತನ್ನ ಹಿಂಬದಿಯ ಚಕ್ರಗಳಿಗೂ ಡಿಸ್ಕ್ ಬ್ರೇಕ್ ಸೌಲಭ್ಯ ನೀಡಿದೆ.

ಅಂತಿಮವಾಗಿ ಕೊಟ್ಟ ಹಣಕ್ಕೆ ಹೆಚ್ಚಿನದನ್ನು ಎಕ್ಸ್‌ಯುವಿಯಲ್ಲಿ ಬಯಸಬಹುದು. ಗಟ್ಟಿಮುಟ್ಟಾದ ಎಸ್‌ಯುವಿ ನೋಟ, ಶಕ್ತಿಶಾಲಿ ಎಂಜಿನ್ ಹೊಂದಿರುವ ಎಕ್ಸ್‌ಯುವಿ ತನ್ನ ಹೊರನೋಟದಷ್ಟೇ ಕಾರ್ಯಕ್ಷಮತೆಯನ್ನೂ ವೃದ್ಧಿಸಿಕೊಂಡರೆ ಭಾರತದ ಸರ್ವಶ್ರೇಷ್ಟ ಎಸ್‌ಯುವಿ ಆಗಲಿದೆ.

ಇದರೊಂದಿಗೆ ಹಲವು ಬಳಕೆದಾರರು ಕಾರಿನ ಒಳಭಾಗದಲ್ಲಿ ಬಳಸಿರುವ ಪ್ಲಾಸ್ಟಿಕ್ ಕುರಿತು, ಬ್ರೇಕ್ ಶಬ್ದ, ಎಲೆಕ್ಟ್ರಾನಿಕ್ಸ್ ಉಪಕರಣಗಳ ಸಮಸ್ಯೆಗಳ ಕುರಿತು ಹಲವರು ಬ್ಲಾಗ್‌ಗಳಲ್ಲಿ ಹೇಳಿಕೊಂಡಿದ್ದಾರೆ. ಇದಕ್ಕೆ ತದ್ವಿರುದ್ಧವಾದದ್ದು ಡಸ್ಟರ್. ಚಾಲನೆಯಲ್ಲಿ ಹೆಚ್ಚಿನ ಹಿಡಿತ, ಅಧಿಕ ಇಂಧನ ಕ್ಷಮತೆ, ಉತ್ತಮ ದೇಹ ರಚನೆ ಇದರ ತಾಕತ್ತು. ಒಳ ಭಾಗದಲ್ಲಿ ಒಂದಿಷ್ಟು ಸಣ್ಣಪುಟ್ಟ ನ್ಯೂನತೆಗಳನ್ನು ಹೊರತುಪಡಿಸಿದರೆ ಡಸ್ಟರ್ ಉತ್ತಮ ಆಯ್ಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT