ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹೀಷೂರಲ್ಲಿ ಮತ್ತೆ ಸಂಸ

ರಂಅಗ ಬಿನ್ನಹ
Last Updated 13 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

`ಒಂದು ದೇಶದ ಪ್ರಜಾಲೋಕದ ಐಶ್ವರ‌್ಯವು ಮಾನವು ಗೌರವವು ಧರ್ಮವು ಶಕ್ತಿಯು ಸತ್ವವು ಕಲಿತನವು ಸ್ವತಂತ್ರತೆಯು ಅದರ ರಾಜನಲ್ಲಿ ಮೆಯ್ಗ್‌ಂಡಿರುವುವು; ಆ ರಾಜನಿಗಡಸಿದ ಭಂಗವು ದುಃಖವು ಸಂಕಟವು ಅಪಮಾನವು ಆ ಪ್ರಜಾವಳಿಗಾದಂತೆ'.

ಇದು ಕನ್ನಡದ ಪ್ರಸಿದ್ಧ ನಾಟಕಕಾರ ಸಂಸರ `ವಿಗಡ ವಿಕ್ರಮರಾಯ' ನಾಟಕದಲ್ಲಿ ಬರುವ ಮಾತು. ಪ್ರಭುತ್ವದ ಬಗ್ಗೆ ಅಪಾರವಾದ ಅಭಿಮಾನ ನಂಬಿಕೆಯನ್ನು ಇರಿಸಿಕೊಂಡ ಪ್ರಜಾವರ್ಗದಿಂದ ಈ ಮಾತನ್ನು ಆಡಿಸುತ್ತಾರೆ ಸಂಸ. ಅಥವಾ ಅವರ ಕಾಲದ ಮಹೀಷೂರ ರಾಜಪ್ರಭುತ್ವದ ಸುಖ ಲೋಲುಪತೆ ಆಡಳಿತ ಯಂತ್ರದ ಭ್ರಷ್ಟಾಚಾರಗಳನ್ನು ಕಣ್ಣಾರೆ ಕಂಡು ಬೇಸತ್ತ ಪ್ರಜ್ಞಾವಂತ ಪ್ರಜೆಯ ಅಭಿವ್ಯಕ್ತಿ.

ಭಾರತದಲ್ಲಿ ರಾಜಪ್ರಭುತ್ವ, ಪರಕೀಯರ ಆಳ್ವಿಕೆ ಕೊನೆಗೊಂಡು ಪ್ರಜಾಪ್ರಭುತ್ವ ಸ್ಥಾಪನೆಯಾಗಿದೆ. ಈ ಸ್ವತಂತ್ರ ಭಾರತವನ್ನು ಅಥವಾ ನಮ್ಮನ್ನು, ನಾವೇ ಆಳಿಕೊಳ್ಳುತ್ತಿದ್ದೇವೆ. ನಮ್ಮನ್ನಾಳುವ ನಮ್ಮವರೇ ನಮ್ಮ ಸ್ವಾತಂತ್ರ್ಯವನ್ನು ಕಸಿದುಕೊಂಡರೆ ನಾವು ನಮ್ಮ ವಿರುದ್ಧವೇ ಹೋರಾಡಬೇಕು. ಇಂತಲ್ಲಿ ನಮ್ಮ ಶತ್ರು ಯಾರೆಂದು ಗುರುತಿಸುವುದು ಕಷ್ಟದ ಕೆಲಸ. ನಮ್ಮಳಗಿನ ಶತ್ರುವನ್ನು ಹಣಿಯಲು ನಾವು ರೂಪಿಸಿಕೊಂಡ ತಂತ್ರ ನಮಗೇ ಪ್ರತಿತಂತ್ರವಾಗಿಬಿಡಬಹುದು. ಹೀಗಾದಾಗ ಜಾಗರೂಕತೆಯಿಂದ ಹೆಜ್ಜೆಯಿಟ್ಟು ಕಾರ‌್ಯಸಾಧಿಸಿಕೊಳ್ಳಬೇಕು. ಇಂತಹ ಸೂಕ್ಷ್ಮ ತಂತ್ರಗಾರಿಕೆಗಳು ರಾಜಕೀಯದಲ್ಲಿ ಮಾಮೂಲು.

ಹಿಂದೊಮ್ಮೆ ಮಹೀಷೂರ ದೇಶದೊಳಗೆ ನಡೆದ ದಳವಾಯಿ ವಿಕ್ರಮರಾಯನ ರಾಜಕೀಯದ ಪಗಡೆಯಾಟವನ್ನು ಅಪೂರ್ವ ನಾಟಕ ಕೃತಿಯನ್ನಾಗಿಸಿದ್ದು ಸಂಸ. ಇತ್ತೀಚೆಗೆ ಸಂಸರ ಆ `ವಿಗಡ ವಿಕ್ರಮರಾಯ'ನನ್ನು ಅದೇ ಸಂಸರ ಮಹೀಷೂರಪುರದಲ್ಲಿ ರಂಗದ ಮೇಲೆ ಅರಳಿಸಿದ್ದು `ನೀನಾಸಂ' ತಿರುಗಾಟದ ನಟರು. ಕನ್ನಡ ರಂಗಭೂಮಿಯಲ್ಲಿ ತನ್ನದೇ ಆದ ಪ್ರಯೋಗಶೀಲ ರಂಗಕೃತಿಗಳನ್ನು ನೀಡುತ್ತಾ ಬಂದಿರುವ ನೀನಾಸಂ ತಿರುಗಾಟ ಈ ಬಾರಿ `ವಿಗಡ ವಿಕ್ರಮರಾಯ' ನಾಟಕದ ಮೂಲಕ ಅಂಥದ್ದೊಂದು ಹೊಸ ಪ್ರಯೋಗವನ್ನು ಕನ್ನಡದ ರಂಗಪ್ರೇಮಿಗಳ ಮುಂದಿಟ್ಟಿದೆ. ತಿರುಗಾಟದಲ್ಲಿ ಕನ್ನಯ್ಯಲಾಲರ `ಕಾಲದಿವ್ಯ', ಶ. ರಘುನಂದನರ `ಈ ನರಕ ಈ ಪುಲಕ' ನಾಟಕಗಳಾದ ಮೇಲೆ ಆಂಗಿಕಾಭಿನಯಕ್ಕೆ ಬಹಳ ಪ್ರಾಮುಖ್ಯತೆ ನೀಡಿದ ರಂಗಕೃತಿ `ವಿಗಡ ವಿಕ್ರಮರಾಯ'.

ಮಹೀಷೂರಪುರದ ರಂಗಪ್ರೇಮಿಗಳ ಮುಂದೆ ತೆರೆದುಕೊಂಡ (ವಿಗಡ) ದಳವಾಯಿ ವಿಕ್ರಮರಾಯ ಮಹಾರಾಜನ ಬಗೆಗಿನ ಅಸಹನೆಯೊಂದಿಗೆ ಪ್ರಕಟಗೊಳ್ಳುತ್ತಾನೆ. ಆ ಅಸಹನೆ ಮೊದಲ ಮಾತೆಂಬುದು ರಂಗದ ಮೇಲಾಡುವುದಕ್ಕಿಂತ ಮುಂಚೆಯೇ ಪ್ರೇಕ್ಷಕರನ್ನು ತಲುಪಿರುತ್ತದೆ. ನಟನ ಚಲನೆಯ ಮೂಲಕವೇ ಆ ಪಾತ್ರದ ಮನಸ್ಥಿತಿಯನ್ನು ನಿರ್ದೇಶಕರು ಕಟ್ಟಿಕೊಡುತ್ತಾರೆ; ಇದು ಇಡೀ ರಂಗಕೃತಿಯ ಎಲ್ಲಾ ಪಾತ್ರಗಳಿಗೂ ಅನ್ವಯಿಸುವುದು. ಪಾತ್ರಗಳು ರಂಗಕ್ಕಾಗಮಿಸುವ ಮೊದಲು ಅದರ ಭಾವ ಮನಸ್ಥಿತಿ ಮತ್ತು ಅದಕ್ಕನ್ವಯಿಸುವ ವಿಶಿಷ್ಟ ರಂಗಚಲನೆಯೊಂದಿಗೆ ಪ್ರವೇಶಿಸಿ ಪ್ರೇಕ್ಷಕರನ್ನು ಬೆರಗುಗೊಳಿಸುತ್ತವೆ. ಅಳಗರಾಜಯ್ಯ ಎಂಬ ಚಿಕ್ಕ ಪಾತ್ರ ಹೀಗೆ ಬಂದು ಹಾಗೆ ಹೋಗುವ ನಡುವೆ ಪ್ರೇಕ್ಷಕನ ಎದೆಯಾಳದಲ್ಲಿ ನೆಲೆನಿಂತು ಬಿಡುತ್ತದೆ; ಅಂತಹ ಅದ್ಭುತ ಸೃಷ್ಟಿಯಾಗುವುದು ನಿರ್ದೇಶಕ ನಟನನ್ನು ದುಡಿಸಿಕೊಂಡಾಗ. ಮಂಜು ಕೊಡಗು ಅವರು ಈ ರಂಗಕೃತಿಯನ್ನು ಕಟ್ಟುವ ಪ್ರಕ್ರಿಯೆಯಲ್ಲಿ ನಾಟಕದ ಪ್ರತಿ ಕ್ಷಣಕ್ಕೂ ನೀಡಿದ ಪ್ರಾಮುಖ್ಯತೆ ರಂಗದ ಮೇಲೆ ಹರಳುಗಟ್ಟಿಕೊಂಡಿದೆ.

ಸಂಸರ ಭಾಷೆ ಹಿಂದಣ ಮಹೀಷೂರ ಕನ್ನಡ. ನೀನಾಸಂ ನಟರು ಕನ್ನಡನಾಡಿನ ಮೂಲೆ ಮೂಲೆಯಿಂದ ಬಂದವರು. ಸಂಸರ ವಿಶಿಷ್ಟ ಕನ್ನಡವನ್ನ, ನಟರ ದೇಹದ ಲಯವನ್ನ, ರಾಜಕೀಯದ ತಂತ್ರ-ಪ್ರತಿತಂತ್ರಗಳ ಜಾಣ್ಮೆಯನ್ನ, ಸಾಂಕೇತಿಕ ನಿಲ್ಲುವುದು ದೇಹ-ಭಾವ-ಚಲನೆಗಳು ಸಾಕಾರಗೊಂಡ ರಂಗಕೃತಿಯಾಗಿ.

ಪ್ರಜೆಗಳು ತಮ್ಮನ್ನಾಳುವವರಿಂದಲೇ ಕಳೆದುಕೊಂಡ ಸ್ವಾತಂತ್ರ್ಯವನ್ನು ಮರಳಿ ಪಡೆಯುವುದಕ್ಕೆ ದಂಗೆಯೇಳುವುದು ನಾಟಕದ ಅದ್ಭುತ ದೃಶ್ಯ. ಗೊತ್ತುಗುರಿಯಿಲ್ಲದ ಅವರ ಹೋರಾಟಕ್ಕೆ ತಾತ್ವಿಕರೂಪ ಕೊಡುವುದು ನಿರೀಶ. ಜನಾಂದೋಲನಗಳು ಯಶಸ್ವಿಯಾಗುವುದು ಒಂದು ಖಚಿತವಾದ ಸೈದ್ಧಾಂತಿಕ ತಳಹದಿ ಮತ್ತು ಬದ್ಧತೆಯುಳ್ಳ ನಾಯಕನ ನೆರವಿನಿಂದ. ಇತಿಹಾಸದುದ್ದಕ್ಕೂ ಜನಾಂದೋಲನಗಳು ರೂಪುಗೊಂಡು ಕೆಲವು ಯಶಸ್ವಿಯಾದರೆ ಕೆಲವನ್ನು ಪ್ರಭುತ್ವ ತನ್ನ ಶಕ್ತಿಯಿಂದ ನಾಶಗೊಳಿಸಿದೆ. ಆದರೆ ಆಯಾಯ ಕಾಲಗಳಲ್ಲಿನ ದಬ್ಬಾಳಿಕೆಗಳನ್ನು ವಿರೋಧಿಸಿ ಜನ ದಂಗೆಯೇಳುತ್ತಲೇ ಇರುತ್ತಾರೆ.

ಸ್ತ್ರಿಲೋಲುಪನಾಗಿ, ಭೋಗಲಾಲಸೆಯೇ ರಾಜತ್ವವೆಂದು ನಂಬಿಕೊಂಡ ಇಮ್ಮಡಿರಾಜ ಒಡೆಯರಿಗೆ ಕರ್ತವ್ಯಪ್ರಜ್ಞೆ ಮರುಕಳಿಸುವಾಗ ಮನವು ಗೊಂದಲದ ಗೂಡಾಗಿರುತ್ತದೆ. ರಾಜನ ಈ ದುರ್ಬಲತೆಯನ್ನು ಬಳಸಿಕೊಳ್ಳುವ ಜಾಣ ದಳವಾಯಿ ವಿಕ್ರಮರಾಯ ಇಮ್ಮಡಿರಾಜ ಒಡೆಯರು ಸಾಯುವುದಕ್ಕೂ ಮೊದಲೇ ಮರಣವಾರ್ತೆ ಸಿದ್ಧಪಡಿಸುತ್ತಾನೆಂದರೆ ಅವನ ರಾಜಕೀಯ ಲೆಕ್ಕಾಚಾರಗಳು ಅಷ್ಟು ಸೂಕ್ಷ್ಮ ಮತ್ತು ನಿಶ್ಚಿತವಾದಂತದ್ದು. ವಿಕ್ರಮರಾಯನ ಕುತಂತ್ರ, ಸೂಕ್ಷ್ಮ ಮನಸ್ಥಿತಿಗಳನ್ನು ತನ್ನ ಅದ್ಭುತ ಆಂಗಿಕ ವಾಚಿಕ ಅಭಿನಯದ ಮೂಲಕ ಅನಾವರಣಗೊಳಿಸಿದ್ದು ಎನ್.ಎ. ಪ್ರವೀಣ್ ಕುಮಾರ್. ವಿಕ್ರಮರಾಯನ ಸಂಚಿನಂತೆ ಬೊಮ್ಮರಸ ಪಂಡಿತ ನೀಡಿದ ವಿಷದ ಚೂರ್ಣವನ್ನು ತನ್ನ ಕಯ್ಯಾರೆ ಪುಟ್ಟಸ್ವಾಮಿಗೆ ಕುಡಿಸಿ ದುಕ್ಕಿಸುವ ಮಹಾಮಾತೃಶ್ರಿ, ವಿಕ್ರಮರಾಯನ ರುಂಡವನ್ನು ಚೆನ್ನ-ರಂಗರು ತಂದು ರಣಧೀರ ಕಂಠೀರವನ ಮುಂದಿರಿಸಿದ ಸನ್ನಿವೇಶದಲ್ಲಿ `ಅವನು ಸತ್ತನೇ...' ಎಂದು ತನ್ನ ಹಿಂದಣ ನೋವು, ಅಸಹಾಯಕತೆಗಳನ್ನು ಕಾಣಿಸುವ ಕಲಾವಿದೆ ಆರ್. ಚಂದ್ರಮ್ಮ ಅವರ ಅಭಿನಯ ಪ್ರೇಕ್ಷಕನನ್ನು ತಲ್ಲಣಗೊಳಿಸಿಬಿಡುತ್ತದೆ.
ತುಂಗರಾಯ (ದೇವರಾಜು ಎಂ.ಆರ್.), ಬೊಮ್ಮರಸ ಪಂಡಿತ (ಜಯರಾಮು ಕೆ.ಎನ್.), ರಣಧೀರ ಕಂಠೀರವ (ಮಂಜುನಾಥ್ ಸಿ.ಜೆ.), ನಿರೀಶ (ವಿನೀತ್ ಕುಮಾರ್ ಎಂ.), ಸಕ್ಕ (ಶಿವಶಂಕರ್), ಅಳಗರಾಜಯ್ಯ (ಸತೀಶ್ ಪಿ.ಬಿ.), ಇಮ್ಮಡಿರಾಜ (ಸೂರಜ್ ಬಿ.ಆರ್.), ರುದ್ರವ್ವೆ (ಶೀಲಾ ಎನ್.), ಚಂದವ್ವೆ (ಚಂದ್ರಕಲಾ ಗಟ್ಟಿ ಎ.ವಿ.), ಜಟ್ಟಿಗಳಾದ (ಬಸವರಾಜು ಎಸ್., ಮಹೇಶ್ ಭರಮಾಜಪ್ಪ ಕುಂಚೂರ‌್ಕರ್) ಹೀಗೆ ಎಲ್ಲಾ ನಟರು ಈ ರಂಗಕೃತಿಯ ತುಂಬಾ ನಟಿಸಿದರು.

ವಂಧಿಮಾಗದರು ಮಹಾರಾಜನ ಬಿರುದಾವಳಿಗಳನ್ನು ಹಾಡಿ ಅಭಿನಯಿಸುವುದೊಂದು ಮನೋಹರ ದೃಶ್ಯ. ರಣಧೀರ ಕಂಠೀರವನ ಗರಡಿಯೆಂಬುವುದಂತೂ ನಿಜಕ್ಕೂ ಮಹೀಷೂರ ರಾಜರ ದಸರೆಯನ್ನು ನೆನಪಿಸಿಬಿಟ್ಟಿತು. ನಟರ ಚಾಕಚಕ್ಯತೆ ಆ ದೃಶ್ಯ ಸಂಯೋಜನೆ ರೋಮಾಂಚನಗೊಳ್ಳುವಂತೆ ಮಾಡುತ್ತದೆ. `ವಿಗಡ ವಿಕ್ರಮರಾಯ'ಗೆ ಸಂಗೀತದ ಹಿನ್ನೆಲೆ ನೀಡಿದವರು ಕಲ್ಯಾಣಿ ಭಜಂತ್ರಿ ಮತ್ತು ಎಂ.ಆರ್. ಧನಂಜಯ, ಬೆಳಕಿನ ಸಹಯೋಗ ಮಂಜುನಾಥ್ ಹಿರೇಮಠ್.

ರಣಧೀರ ಕಂಠೀರವನು ವರ್ತಮಾನವನ್ನು ಅರಿಯಲು ಪತ್ರಿಕೆಯನ್ನು ಓದುತ್ತಾ ಕುಳಿತಿರುವುದು, ಪ್ರೇಕ್ಷಕರನ್ನು ನಾಟಕದ ಕಾಲಘಟ್ಟದಿಂದಾಚೆ ತಳ್ಳಿಬಿಡುತ್ತದೆ. ಮರುಕ್ಷಣವೇ ಪ್ರೇಕ್ಷಕರನ್ನು ಒಳಗೊಳಿಸಿಕೊಳ್ಳುವ ನಾಟಕ ಕೊನೆಯಲ್ಲಿ ಕಾರಣವ ಬಿಚ್ಚಿಡುತ್ತದೆ. ಸತ್ತುಹೋದ ವಿಕ್ರಮರಾಯ ರಕ್ತ ಸುರಿಸಿಕೊಂಡು ತನ್ನ ಇರುವಿಕೆಯನ್ನು ವರ್ತಮಾನದಲ್ಲೂ ಸ್ಥಾಪಿಸಿಬಿಡುತ್ತಾನೆ. ಭೂತ ವರ್ತಮಾನವನ್ನು ಸಣ್ಣದೊಂದು ಸಂಜ್ಞೆಯ ಮೂಲಕ ಮಿಳಿತಗೊಳಿಸುವ ನಿರ್ದೇಶಕ ಏಕಕಾಲಕ್ಕೆ ಸಂಸರ ಐತಿಹಾಸಿಕ ದೃಷ್ಟಿಕೋನವನ್ನು ಸಮಕಾಲೀನ ರಾಜಕೀಯ ಸಂದರ್ಭದಲ್ಲಿ ತಮ್ಮ ಕೃತಿಯ ಮೂಲಕ ಒರೆಗೆ ಹಚ್ಚುತ್ತಾರೆ.

ನೀನಾಸಂ ತಿರುಗಾಟದ ಈ `ವಿಗಡ ವಿಕ್ರಮರಾಯ' ರಂಗಪ್ರಯೋಗ ನಟರ ನಟನೆಯಿಂದ ಕಟ್ಟಿದ ಕೃತಿ. ಒಳ್ಳೆಯ ನಟರೂ ಆದ ನಿರ್ದೇಶಕ ಮಂಜು ಕೊಡಗು ನಟರೂ ಆಗಿ ನಿರ್ದೇಶಕರೂ ಆಗಿ ಇಂಥದ್ದೊಂದು ಒಳ್ಳೆಯ ರಂಗಕೃತಿಯ ಮಹೀಷೂರ ಪುರದ ರಂಗಪ್ರೇಮಿಗಳ ಮನವ ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT