ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾ. 31ಕ್ಕೆ ಭೂಹಗರಣ ತನಿಖಾ ವರದಿ ಸಲ್ಲಿಕೆ

Last Updated 10 ಫೆಬ್ರುವರಿ 2011, 20:25 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ನಡೆದ ಭೂಹಗರಣ ಕುರಿತಂತೆ ಲೋಕಾಯುಕ್ತ ಸಂಸ್ಥೆಯು ನಡೆಸಿದ ತನಿಖೆಯ ವರದಿಯನ್ನು ಮಾರ್ಚ್ 31ಕ್ಕೆ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಪ್ರಕಟಿಸಿದರು.ನಗರದಲ್ಲಿ ಗುರುವಾರ ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ನ ವ್ಯಂಗ್ಯಚಿತ್ರಕಾರ ಪಿ.ಮಹಮ್ಮದ್ ಅವರ ಆಯ್ದ ವ್ಯಂಗ್ಯಚಿತ್ರಗಳ ಸಂಕಲನ ‘ವ್ಯಂಗ್ಯ (ವಿ)ಚಿತ್ರ’ ಪುಸ್ತಕವನ್ನು ಬಿಡುಗಡೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

‘ಭೂಹಗರಣಗಳ ಕುರಿತು ಈಗಾಗಲೇ ಲೋಕಾಯುಕ್ತವೇ ತನಿಖೆ ನಡೆಸುತ್ತಿದ್ದರೂ ಕೂಡಾ ಇನ್ನೊಂದು ಆಯೋಗ ರಚಿಸಿ ತನಿಖೆ ನಡೆಸಲು ಹೊರಟಿರುವ ಸರ್ಕಾರದ ಕ್ರಮ ಕಾನೂನು ವಿರೋಧಿಯಾಗುತ್ತದೆ. ಈ ಕ್ರಮವನ್ನು ವಿರೋಧಿಸುತ್ತೇನೆ. ಹಗರಣವನ್ನು ನಾವೇ ತನಿಖೆ ಮಾಡಬೇಕು ಎಂಬ ಉದ್ದೇಶವೇನೂ ನಮಗೆ ಇರಲಿಲ್ಲ. ಲೋಕಾಯುಕ್ತವನ್ನು ಹೊರತುಪಡಿಸಿ ಇನ್ನೊಂದು ಆಯೋಗವನ್ನು ರಚನೆ ಮಾಡುವ ಉದ್ದೇಶವಿದ್ದರೆ ಮುಖ್ಯಮಂತ್ರಿಗಳು ನನ್ನೊಂದಿಗೆ ಚರ್ಚೆ ನಡೆಸಬಹುದಿತ್ತು’ ಎಂದು ಹೇಳಿದರು.

ಸರ್ಕಾರದ ಹಣ ತಲುಪುತ್ತಿಲ್ಲ: ಘಟನೆಯೊಂದನ್ನು ಸ್ಮರಿಸಿಕೊಂಡ ಲೋಕಾಯುಕ್ತರು, ‘ರಾಜಕಾರಣಿಗಳು ಭಾಗಹಿಸುವ ಕಾರ್ಯಕ್ರಮಗಳಲ್ಲಿ ನಾನು ಭಾಗವಹಿಸಲು ಇಷ್ಟಪಡುವುದಿಲ್ಲ. ಆದರೆ ಒಂದು ಕಾರ್ಯಕ್ರಮದಲ್ಲಿ ರಾಜಕಾರಣಿಯೊಂದಿಗೆ ಸಭೆಯಲ್ಲಿ ಪಾಲ್ಗೊಳ್ಳಬೇಕಾಗಿ ಬಂತು. ನನಗಿಂತ ಮುಂಚೆಯೇ ಮಾತನಾಡಿದ ಅವರು, ಕಾಮಗಾರಿಯೊಂದಕ್ಕೆ 5 ಕೋಟಿ ಹಣ ಖರ್ಚು ಮಾಡಿದ್ದೇನೆ ಎಂದು ಹೇಳಿ ನಿರ್ಗಮಿಸಿದರು.

ಆದರೆ ಆ ಹಣ ಸರಿಯಾದ ಉದ್ದೇಶಕ್ಕೆ ಬಿಡುಗಡೆಯಾಗಿದೆಯೇ ಎಂದು ಕೇಳೋಣವೆಂದರೆ ಅವರೇ ಇರಲಿಲ್ಲ. ಹಣ ಬೊಕ್ಕಸದಿಂದ ಹೋಗಿರುತ್ತದೆ. ಆದರೆ ಅದು ತಲುಪಬೇಕಾದವರಿಗೆ ತಲುಪಿರುವುದಿಲ್ಲ’ ಎಂದರು. ಚಿನಕುರಳಿ ನೋಡಿದಿರಾ?: ಮೊದಲಿನಿಂದಲೂ ‘ಪ್ರಜಾವಾಣಿ’ಯ ಓದುಗನಾಗಿದ್ದೇನೆ ಎಂದ ಅವರು, ಲೋಕಾಯುಕ್ತಕ್ಕೆ ನೇಮಕವಾದ ಮೇಲೆ ಮಹಮ್ಮದರ ವ್ಯಂಗ್ಯಚಿತ್ರಗಳನ್ನು ಗಂಭೀರವಾಗಿ ಗಮನಿಸುತ್ತಿದ್ದೇನೆ.

ಆಗ ಉಪ ಲೋಕಾಯುಕ್ತರಾಗಿದ್ದ ಪತ್ರಿ ಬಸವನಗೌಡರು ತಾವು ರಜೆ ಇದ್ದರೂ ಕಚೇರಿಗೆ ಫೋನ್ ಮಾಡಿ, ಅಂದು ಪ್ರಕಟವಾದ ಚಿನಕುರಳಿ ಬಗ್ಗೆ ನನ್ನೊಂದಿಗೆ ಚರ್ಚಿಸುತ್ತಿದ್ದರು ಎಂದು ನೆನಪಿಸಿಕೊಂಡರು. ವ್ಯಂಗ್ಯಚಿತ್ರ ಬರೀ ಕಲೆಯಲ್ಲ. ವ್ಯಂಗ್ಯಚಿತ್ರಕಾರ ಸಮಕಾಲೀನ ರಾಜಕೀಯ, ಆರ್ಥಿಕ ಬೆಳವಣಿಗೆಗಳ ಬಗ್ಗೆ ತಿಳಿದವನಾಗಿರಬೇಕು ಎಂದರು.

ವ್ಯಂಗ್ಯಚಿತ್ರವೊಂದನ್ನು ಪ್ರಸ್ತಾಪಿಸಿದ ಅವರು, ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ರಚನೆಗೆ ಅಗತ್ಯ ಸಂಖ್ಯೆಯನ್ನು ಹೊಂದಿಸಲು ಬಿಜೆಪಿ ಯತ್ನಿಸುತ್ತಿದ್ದಾಗಲೇ, ಟಿಪ್ಪರ್‌ವೊಂದರಲ್ಲಿ ಶಾಸಕರನ್ನು ತುಂಬಿಕೊಂಡು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮುಂದೆ ಸುರಿದ ವ್ಯಕ್ತಿ, ಸಾಕಾ ಇನ್ನೂ ಬೇಕಾ? ಎಂದು ಪ್ರಶ್ನಿಸುವ ಚಿತ್ರವು, ಶಾಸಕರ ಆಯಾರಾಂ ಗಯಾರಾಂ ಸಂಸ್ಕೃತಿಯನ್ನು ಸಮರ್ಥವಾಗಿ ಬಿಂಬಿಸಿದೆ ಎಂದು ಶ್ಲಾಘಿಸಿದರು.

ಕಿರುತೆರೆ ನಿರ್ದೇಶಕ ಬಿ.ಸುರೇಶ್ ಮಾತನಾಡಿ, ‘ತಳಪಾಯ ಜನಾಂಗವನ್ನು ಕಣ್ಣಾರೆ ನೋಡಿದ ವ್ಯಂಗ್ಯಚಿತ್ರಕಾರನಿಂದ ಮಾತ್ರ ಅವರ ಬವಣೆಗಳನ್ನು ಸರಿಯಾಗಿ ಬಿಂಬಿಸಲು ಸಾಧ್ಯ. ಅಂಥ ಹಲವಾರು ವ್ಯಂಗ್ಯಚಿತ್ರಗಳನ್ನು ಮಹಮ್ಮದ್ ಅವರ ಚಿನಕುರಳಿಯಲ್ಲಿ ಗಮನಿಸಿದ್ದೇನೆ’ ಎಂದರು. ನಗರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಕಾರ್ಟೂನಿಸ್ಟ್ಸ್ ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ ವಿ.ಜಿ.ನರೇಂದ್ರ ಮಾತನಾಡಿ, ‘ವ್ಯಂಗ್ಯಚಿತ್ರಕಾರರು ವಿರೋಧಪಕ್ಷದ ಸ್ಥಾನವನ್ನು ನಿರ್ವಹಿಸಬೇಕು.

ಆ ಮೂಲಕ ಜನಸಾಮಾನ್ಯರ ಜೀವನವನ್ನು, ಸಮಸ್ಯೆಗಳನ್ನು ಬಿಂಬಿಸಬೇಕು’ ಎಂದರು. ಈ ಮಾತಿಗೆ ಸಮ್ಮತಿಸಿ ಮಾತನಾಡಿದ ಪಿ.ಮಹಮ್ಮದ್, ‘ವ್ಯಂಗ್ಯಚಿತ್ರಕಾರನೊಬ್ಬ ವ್ಯವಸ್ಥೆಯ ವಿರೋಧಿಯಾದಾಗಲೇ ಆ ಚಿತ್ರಗಳಿಗೆ ಬೆಲೆ ಬರುತ್ತದೆ.ಜನರ ಬವಣೆಯನ್ನು ಸಾತ್ವಿಕ ಸಿಟ್ಟನ್ನಾಗಿ ಈ ಮೂಲಕ ಅಭಿವ್ಯಕ್ತಿ ಮಾಡಲು ಸಾಧ್ಯವಾಗುತ್ತದೆ’ ಎಂದರು.‘ಪ್ರಜಾವಾಣಿ’ಯಲ್ಲಿ ಪ್ರಕಟವಾಗಿದ್ದ ವ್ಯಂಗ್ಯಚಿತ್ರವೊಂದರ ಪ್ರತಿಯನ್ನು ಸಂತೋಷ್ ಹೆಗ್ಡೆ ಅವರಿಗೆ ನೀಡಿದರು. ಪ್ರಕಾಶ್ ಶೆಟ್ಟಿ ಅವರು ಲೋಕಾಯುಕ್ತರ ವ್ಯಂಗ್ಯಚಿತ್ರವನ್ನು ಸ್ಥಳದಲ್ಲಿಯೇ ರಚಿಸಿ ಅವರಿಗೆ ಹಸ್ತಾಂತರಿಸಿದರು. ಪತ್ರಕರ್ತ ಶಶಿಧರ ಭಟ್, ಚಿಂತನ ಪ್ರಕಾಶನದ ಮುಖ್ಯಸ್ಥ ವಸಂತರಾಜ್ ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT