ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾ.6ರಂದು ಮತ ಎಣಿಕೆ

Last Updated 9 ಜನವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ:  ಐದು ರಾಜ್ಯಗಳ ವಿಧಾನ ಸಭೆ ಚುನಾವಣೆಗಳ ಮತ ಎಣಿಕೆಯು ಮಾರ್ಚ್ 4ಕ್ಕೆ ಬದಲು ಮಾರ್ಚ್ 6ರಂದು ನಡೆಯಲಿದೆ.

ಉತ್ತರಪ್ರದೇಶದ ಮೊದಲ ಹಂತದ ಚುನಾವಣೆಯನ್ನು ಫೆ. 4ಕ್ಕೆ ಬದಲು ಮಾರ್ಚ್ 3ಕ್ಕೆ ಮುಂದೂಡಿರುವ ಕಾರಣ ಈ ಮಾರ್ಪಾಡು ಮಾಡಲಾಗಿದೆ. `ಐದು ರಾಜ್ಯಗಳ -ಮಣಿಪುರ, ಉತ್ತರಾಖಂಡ, ಗೋವಾ, ಪಂಜಾಬ್ ಮತ್ತು ಉತ್ತರ ಪ್ರದೇಶ- ವಿಧಾನಸಭೆ ಚುನಾವಣೆಯ ಮತ ಎಣಿಕೆಯನ್ನು ಮಾರ್ಚ್ 6ರಂದು ನಡೆಸಲು ನಿರ್ಧರಿಸಲಾಗಿದೆ~ ಎಂದು ಚುನಾವಣಾ ಆಯೋಗ ಹೇಳಿಕೆಯಲ್ಲಿ ತಿಳಿಸಿದೆ. ಪ್ರವಾದಿ ಮಹಮದ್ ಅವರ ಜನ್ಮ ದಿನಾಚರಣೆ  ಫೆ. 4ರಂದು ನಡೆಯಲಿರುವ ಕಾರಣ ಉತ್ತರಪ್ರದೇಶದ ಮೊದಲ ಹಂತದ ಚುನಾವಣೆಯನ್ನು ಮುಂದೂಡಲಾಗಿದೆ.

ಮುಸ್ಲಿಮರಿಗೆ ಶೇ9 ರಷ್ಟು ಮೀಸಲಾತಿ ಕಾಂಗ್ರೆಸ್ ಭರವಸೆ
ಫರೂಖಾಬಾದ್ (ಪಿಟಿಐ):
ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪಕ್ಷವು ಹಿಂದುಳಿದ ಮುಸ್ಲಿಮರಿಗೆ ಶೇ 9ರಷ್ಟು ಒಳಮೀಸಲಾತಿ ನೀಡಲಿದೆ ಎಂದು ಕೇಂದ್ರ ಕಾನೂನು ಸಚಿವ ಸಲ್ಮಾನ್ ಖುರ್ಷಿದ್ ಭರವಸೆ ನೀಡಿದ್ದಾರೆ.

ಫರೂಖಾಬಾದ್‌ನಲ್ಲಿ ಭಾನುವಾರ ನಡೆದ ಚುನಾವಣಾ ಸಭೆಯನ್ನು ಉದ್ದೇಶಿಸಿ ಮಾತನಾಡುವ ಸಂದರ್ಭದಲ್ಲಿ ಸಚಿವರು ಈ ಭರವಸೆ ನೀಡಿದ್ದಾರೆ. ಈ  ವಿಧಾನಸಭಾ ಕ್ಷೇತ್ರದಿಂದ ಖುರ್ಷಿದ್ ಪತ್ನಿ ಲೂಸಿ ಕಾಂಗ್ರೆಸ್‌ನಿಂದ ಸ್ಪರ್ಧಿಸುತ್ತಿದ್ದಾರೆ.

 ರಾಜ್ಯದ ಮತದಾರರು ಪಕ್ಷವನ್ನು ಗೆಲ್ಲಿಸಿದ್ದೇ ಆದರೆ ಈಗಾಗಲೇ ಇರುವ ಇತರ ಹಿಂದುಳಿದ ವರ್ಗಗಳ ಮೀಸಲಾತಿಯಲ್ಲಿ ಹಿಂದುಳಿತ ಮುಸ್ಲಿಮರಿಗೆ ಶೇ 9 ರಷ್ಟು ಒಳ ಮೀಸಲಾತಿ  ನೀಡಲಾಗುವುದು. ಇದರಿಂದಾಗಿ ಮನ್ಸೂರಿ, ಖುರೇಶಿ ಸೇರಿದಂತೆ ಎಂಟಕ್ಕೂ ಅಧಿಕ ಜಾತಿಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.

ಪಂಜಾಬ್: ಸ್ಪರ್ಧೆಯಲ್ಲಿ ಹಿರಿಯಜೀವಿಗಳದ್ದೇ ಕಾರುಬಾರು
ಚಂಡೀಗಡ:
ಪಂಜಾಬ್‌ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಹಿರಿ ಜೀವಗಳದ್ದೇ ಕಾರುಬಾರು. ಎಪ್ಪತ್ತು ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಬಾರಿಯ ಚುನಾವಣೆಯಲ್ಲಿ ಕಣಕ್ಕಿಳಿಯಲಿದ್ದಾರೆ.

ಆಡಳಿತಾರೂಢ ಅಕಾಲಿದಳ ಮತ್ತು ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್‌ನಿಂದಲೇ 35ಕ್ಕೂ ಅಧಿಕ ಹಿರಿಯ ಅಭ್ಯರ್ಥಿಗಳು ಈ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗೆ ತಮ್ಮನ್ನು ಒಡ್ಡಿಕೊಳ್ಳಲಿದ್ದಾರೆ. ನಾಲ್ಕು ಬಾರಿ ಮುಖ್ಯಮಂತ್ರಿಯಾಗಿದ್ದ  84 ವರ್ಷದ ಪ್ರಕಾಶ್ ಸಿಂಗ್ ಬಾದಲ್ ಚುನಾವಣಾ ಕಣದಲ್ಲಿರುವ ಅತಿ ಹಿರಿಯರು.

ಪಾಟಿಯಾಲ ವಿಧಾನಸಭಾ ಕ್ಷೇತ್ರದಿಂದ  ಸ್ಪರ್ಧಿಸಲಿರುವ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್‌ನ ರಾಜ್ಯ ಅಧ್ಯಕ್ಷ ಅಮರೀಂದರ್ ಸಿಂಗ್ ಈ ಬಾರಿ ಎಪ್ಪತ್ತರ ಹರೆಯದ ಅಭ್ಯರ್ಥಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಕಾಂಗ್ರೆಸ್ ಪಕ್ಷವೊಂದರಿಂದಲೇ 10ಕ್ಕೂ ಅಧಿಕ ಎಪ್ಪತ್ತು ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT