ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಂತ್ರಿಕ ಸಂಖ್ಯೆಗೆ ಕಾತರಿಸುವ ಮನಸುಗಳು...

Last Updated 11 ಡಿಸೆಂಬರ್ 2012, 19:39 IST
ಅಕ್ಷರ ಗಾತ್ರ

ಬೆಂಗಳೂರು:  ಬುಧವಾರ ಅನೇಕರ ಪಾಲಿಗೆ ವಿಶಿಷ್ಟ ದಿನ. ತಿಂಗಳ ಹನ್ನೆರಡನೇ ದಿನ, ಹನ್ನೆರಡನೇ ತಿಂಗಳು ಮತ್ತು ಎರಡು ಸಾವಿರದ ಹನ್ನೆರಡನೇ ವರ್ಷ. ಈ `12.12.12' ರಂತಹ ಹಲವು ಮಾಂತ್ರಿಕ ಸಂಖ್ಯೆಯ ಬಗ್ಗೆ ಜನರಲ್ಲಿ ಅದೇನೋ ವಿಚಿತ್ರ ವ್ಯಾಮೋಹ ಬೆಳೆಯುತ್ತಿದೆ.

ವಿಶಿಷ್ಟ ದಿನ ಅಪ್ಪ- ಅಮ್ಮನಾಗುವ, ಪ್ರೇಮ ನಿವೇದಿಸುವ, ಬಾಳ ಸಂಗಾತಿಗಳಾಗುವ, ಮಗುವಿಗೆ ನಾಮಕರಣ ಮಾಡುವ, ವಾಹನ ಖರೀದಿ ಸೇರಿದಂತೆ ಬಹುತೇಕ ಶುಭ ಸಮಾರಂಭಗಳಿಗೆ  ದಿನ ಗೊತ್ತು ಮಾಡುವ ಹೊಸ ಪರಂಪರೆ ಜನಪ್ರಿಯಗೊಳ್ಳುತ್ತಿದ್ದು, `12-12-12' ಅಂತಹ ಮತ್ತೊಂದು ಅವಕಾಶ ಒದಗಿಸಿದೆ.

ಸಹಜವಾಗಿ ಶುಭಸಮಾರಂಭಗಳನ್ನು ಸುಲಭವಾಗಿ ನೆನಪಿನಲ್ಲಿ ಇಟ್ಟುಕೊಳ್ಳುವಂತೆ ಮಾಡಬೇಕು ಎಂಬ ಆಸೆ ಎಲ್ಲರಿಗೂ ಇದ್ದೇ ಇರುತ್ತದೆ. ಈ ವರ್ಷದ ಕೊನೆಯ ಮಾಂತ್ರಿಕ ಸಂಖ್ಯೆಯ ದಿನದಂದು ಶುಭಸಮಾರಂಭಗಳನ್ನು ಹಮ್ಮಿಕೊಂಡರೆ ಅದು ಜೀವನ ಪೂರ್ತಿ ನೆನಪಿನಲ್ಲಿ ಉಳಿಯುತ್ತದೆ ಎಂಬುದು ಹಲವರ ಲೆಕ್ಕಾಚಾರ.

ಪ್ರತಿ ನೂರು ವರ್ಷಗಳಿಗೊಮ್ಮೆ ಬರುವ ಮಾಂತ್ರಿಕ ಸಂಖ್ಯೆಯ ದಿನಗಳೆಡೆಗಿನ ಒಲವು ಇಂದು ನಿನ್ನೆಯದಲ್ಲ. 2001 ರಿಂದ 2012ರವರೆಗೆ ಪ್ರತಿ ವರ್ಷವು ಕಂಡುಬಂದ ಮಾಂತ್ರಿಕ ಸಂಖ್ಯೆಯ ದಿನ ತಮ್ಮದಾಗಿಸಿಕೊಳ್ಳಲು ಅನೇಕರು ಹಲವಾರು ಬಗೆಗಳಲ್ಲಿ ಪ್ರಯತ್ನಿಸುತ್ತಿದ್ದಾರೆ. ಅನೇಕರು ಈ ಮಾಂತ್ರಿಕ ಸಂಖ್ಯೆಯ ದಿನವೇ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.

ಈ ಬಗ್ಗೆ `ಪ್ರಜಾವಾಣಿ'ಯೊಂದಿಗೆ ಮಾತನಾಡಿದ ಬೆಂಗಳೂರಿನ ಕ್ಲೌಡ್‌ನೈನ್ ಆಸ್ಪತ್ರೆಯ ಮುಖ್ಯಸ್ಥ ಡಾ.ಕಿಶೋರ್‌ಕುಮಾರ್, `ಈವರೆಗೆ ಸುಮಾರು 15 ಮಂದಿಯ ಹೆರಿಗೆಗಳನ್ನು ಇದೇ ದಿನದಂದು ನಿಗದಿಪಡಿಸಲಾಗಿದೆ. ಇದರಲ್ಲಿ 4 ಮಂದಿಯ ಹೆರಿಗೆಯ ದಿನ ಸಹಜತೆಯಿಂದ ಕೂಡಿದ್ದು, ಉಳಿದ 11 ಮಂದಿ ಶಸ್ತ್ರಚಿಕಿತ್ಸೆಯ ಮೂಲಕ ಹೆರಿಗೆ ಮಾಡಿಸಿಕೊಳ್ಳಲಿದ್ದಾರೆ. ಇವರಲ್ಲಿ ಇಬ್ಬರೂ ಮಧ್ಯಾಹ್ನ 12ಗಂಟೆ 12 ನಿಮಿಷಕ್ಕೆ ಹೆರಿಗೆ ಆಗಬೇಕೆಂದು ಬಯಸಿದ್ದಾರೆ' ಎಂದರು.

`ಈ ದಿನವೇ ಆಗಬೇಕೆಂದಾಕ್ಷಣ ಹೆರಿಗೆ ಮಾಡಿಸುವುದಿಲ್ಲ. ಮಗು ಹಾಗೂ ತಾಯಿಯ ಆರೋಗ್ಯಕ್ಕೆ ಯಾವುದೇ ತೊಂದರೆಯಾಗದೇ 38 ವಾರಗಳು ಪೂರ್ಣಗೊಂಡಿದ್ದರೆ ಮಾತ್ರ ಹೆರಿಗೆ ಮಾಡಿಸಲಾಗುತ್ತದೆ.

ಅಮಾವಾಸ್ಯೆಯ ಮುನ್ನಾದಿನ ಅಷ್ಟೇನು ಶುಭವಲ್ಲ ಎಂಬ ನಂಬಿಕೆ ಇರುವುದರಿಂದ ಕಳೆದ ಬಾರಿ 11.11.11 ಮಾಂತ್ರಿಕ ಸಂಖ್ಯೆಯ ದಿನಕ್ಕೆ ಹೋಲಿಸಿದರೆ ಈ ಬಾರಿ  ಹೆರಿಗೆ ನಿಗದಿಪಡಿಸಿದವರ ಸಂಖ್ಯೆ ಕಡಿಮೆಯಿದೆ' ಎಂದು ಅಭಿಪ್ರಾಯಪಟ್ಟರು.

ಕಳೆದ ಬಾರಿಯೂ 11.11.11ರ ಸಂದರ್ಭದಲ್ಲಿ ಇಂತಹುದ್ದೇ  ಉತ್ಸಾಹ ಕಂಡುಬಂದಿತ್ತು. ಬಾಲಿವುಡ್ ನಟಿ ಐಶ್ವರ್ಯಾ ರೈ ಇದೇ ದಿನ ಮಗು ಹೆರುತ್ತಾರೆ ಎಂಬ ಗುಲ್ಲು ಎದ್ದಿತ್ತು.

ಇದಕ್ಕಾಗಿ ಕೋಟ್ಯಂತರ ರೂಪಾಯಿಗಳ ಬಾಜಿ ಕಟ್ಟಲಾಗಿತ್ತು. ನೂರು ವರ್ಷಕೊಮ್ಮೆ ಬರಲಿರುವ 11.11.11 ಅಪರೂಪದ ದಿನದಂದು ಒಟ್ಟೂ 62 ಕ್ಕಿಂತ ಹೆಚ್ಚು ನವಜಾತ ಶಿಶುಗಳು ನಗರದ ವಿವಿಧೆಡೆ ಇರುವ ಆಸ್ಪತ್ರೆಗಳಲ್ಲಿ ಒತ್ತಾಯಕ್ಕೋ, ಕಾಕತಾಳೀಯವೆಂಬಂತೆ ಜನ್ಮತಾಳಿದ್ದವು.

ಸಂಖ್ಯಾಶಾಸ್ತ್ರ ಕರಾಮತ್ತು?: ಸಂಖ್ಯಾಶಾಸ್ತ್ರದ ಕರಾಮತ್ತಿನಿಂದ ಹಲವು ತಾಯಂದಿರು ಇದೇ ದಿನದಂದು ಒತ್ತಾಯಪೂರ್ವಕ ಹೆರಿಗೆಗೆ ತಯಾರಿ ನಡೆಸಿದ್ದಾರೆ. ಸಂಖ್ಯಾಶಾಸ್ತ್ರದ ಪ್ರಕಾರ 9 ಶ್ರೇಷ್ಠ ಸಂಖ್ಯೆಯಾಗಿದ್ದು, 12.12.12ರನ್ನು ಕೂಡಿದಾಗ ಸಂಖ್ಯೆ 9 ಬರುತ್ತದೆ. ಈ ದಿನದಂದು ಜನಿಸಿದ ಮಕ್ಕಳಿಗೆ ಕಾಲ ದೋಷಗಳು ತಟ್ಟುವುದಿಲ್ಲ.

ಈ ದಿನದಂದು ಜನಿಸುವ ಮಕ್ಕಳು ಅಪರೂಪದ ವ್ಯಕ್ತಿಗಳಾಗುತ್ತಾರೆ ಎನ್ನುವ ನಂಬಿಕೆ ಹುಟ್ಟಿಕೊಂಡಿದೆ. ಜನನ ಗಳಿಗೆ ಮತ್ತು ದಿನವನ್ನು ಸಂಖ್ಯಾಶಾಸ್ತ್ರ, ಜೋತಿಷದಂತಹ ನಂಬಿಕೆಗಳು ಪೂರ್ಣವಾಗಿ ಆವರಿಸಿರುವ ಹಿನ್ನೆಲೆಯಲ್ಲಿ ಡಿಸೆಂಬರ್ 12, 2012ರ ದಿನವು ಶ್ರೇಷ್ಠತೆ ಪಡೆದಿದೆ ಎನ್ನಲಾಗಿದೆ.

`ಈ ಮಾಂತ್ರಿಕ ಸಂಖ್ಯೆಯ ದಿನದಂದೇ ನನ್ನ ಹುಡುಗಿಯ ಮುಂದೆ ಪ್ರೀತಿಯ ಪ್ರಸ್ತಾಪ ಮಾಡಬೇಕೆಂದಿದ್ದೇನೆ. ಒಂಬತ್ತು ನನ್ನ ಅದೃಷ್ಟದ ಸಂಖ್ಯೆ. ಜನ್ಮದಿನಾಂಕವೂ 9 ಆಗಿದೆ. ಹಾಗಾಗಿ ಈ ದಿನ ಪ್ರೀತಿಯ ಪ್ರಸ್ತಾಪ ಮಾಡಿ ಅದೃಷ್ಟವನ್ನು ಒಲಿಸಿಕೊಳ್ಳಬೇಕೆಂದಿರುವೆ'
-ಸುಪ್ರೀತ್ ಸೃಜನ್, ಜೈನ್ ಕಾಲೇಜು

`ಜಯನಗರದ ಕ್ಲೌಡ್‌ನೈನ್ ಆಸ್ಪತ್ರೆಯಲ್ಲಿ ಇದೇ ದಿನದಂದು ಹೆರಿಗೆಗೆ ದಿನ ನಿಗದಿಯಾಗಿದೆ. ಹಾಗಾಗಿ ಒಂದು ಅಪರೂಪದ ದಿನದಂದು ಮಗು ಜನಿಸುವ ಖುಷಿ ಇದೆ. ಅಲ್ಲದೇ ಒತ್ತಾಯಪೂರ್ವಕವಾಗಿ ದಿನ ನಿಗದಿ ಮಾಡದೇ ಸಹಜವಾಗಿರುವುದರಿಂದ ಸಂತಸ ಇಮ್ಮಡಿಸಿದೆ'
-ಸವಿತಾ, ಗರ್ಭಿಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT