ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಂಸದ ಅಂಗಡಿ ನಿರ್ವಹಿಸುವಲ್ಲಿ ಪಾಲಿಕೆ ವಿಫಲ

Last Updated 12 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: `ನಗರದಲ್ಲಿ ಸುಮಾರು 8,000 ಅಕ್ರಮ ಮಾಂಸದಂಗಡಿಗಳಿದ್ದು, ಈ ಮಳಿಗೆಗಳಿಗೆ ಪರವಾನಗಿ ನೀಡುವಲ್ಲಿ ಬಿಬಿಎಂಪಿ ವಿಫಲವಾಗಿದೆ. ಪರಿಣಾಮವಾಗಿ ಕೋಟ್ಯಂತರ ರೂಪಾಯಿ ಆದಾಯ ಕೈತಪ್ಪಿದೆ. ಅಲ್ಲದೇ ಮಾಂಸದಂಗಡಿಯವರು ತ್ಯಾಜ್ಯವನ್ನು ಎಲ್ಲೆಂದರಲ್ಲಿ ಸುರಿಯುವುದರಿಂದ ಬೀದಿನಾಯಿಗಳ ಹಾವಳಿ ತೀವ್ರವಾಗಿದೆ~ ಎಂದು ಜೆಡಿಎಸ್ ನಾಯಕ ಪದ್ಮನಾಭರೆಡ್ಡಿ ಆರೋಪಿಸಿದರು.

`ಪಾಲಿಕೆಯ 198 ವಾರ್ಡ್‌ಗಳ ವ್ಯಾಪ್ತಿಯಲ್ಲಿರುವ ಮಾಂಸದಂಗಡಿಗಳ ಬಗ್ಗೆ ಅಧಿಕಾರಿಗಳ ಬಳಿ ಸಮಗ್ರ ಮಾಹಿತಿಯೇ ಇಲ್ಲ. ಪಶುಪಾಲನಾ ವಿಭಾಗದ ಜಂಟಿ ನಿರ್ದೇಶಕರ ಕಚೇರಿಯಿಂದ ಪಡೆದ ಮಾಹಿತಿಯ ಪ್ರಕಾರ ನಗರದಲ್ಲಿ 2,109 ಮಾಂಸದಂಗಡಿಗಳಿವೆ. ಈ ಮಳಿಗೆಗಳಿಂದ 45.53 ಲಕ್ಷ ರೂಪಾಯಿ ಶುಲ್ಕ ಸಂಗ್ರಹವಾಗಿದೆ. ಆದರೆ ಪ್ರತಿ ವಾರ್ಡ್‌ನಲ್ಲಿ ಕನಿಷ್ಠ 50 ಮಾಂಸದಂಗಡಿಗಳಿವೆ (ಕುರಿ, ಕೋಳಿ, ಮೀನು, ಹಂದಿ, ಇತ್ಯಾದಿ., ) ಎಂದು ಭಾವಿಸಿದರೂ 10,000 ಮಳಿಗೆಗಳಿರಬೇಕು~ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

`ಮಹದೇವಪುರ ಮತ್ತು ಬೊಮ್ಮನಹಳ್ಳಿ ವಲಯದಲ್ಲಿ ಕ್ರಮವಾಗಿ 98 ಮತ್ತು 87 ಅಂಗಡಿಗಳಿವೆ ಎಂಬ ಮಾಹಿತಿ ಇದೆ. ಲಕ್ಷ್ಮಿದೇವಿನಗರ, ಅಗರಂ ವಾರ್ಡ್‌ನಲ್ಲಿ ತಲಾ 1, ಸಂಪಂಗಿರಾಮನಗರ, ದೊಮ್ಮಲೂರು ವಾರ್ಡ್‌ಗಳಲ್ಲಿ ತಲಾ 2 ಮಳಿಗೆಗಳಿವೆ ಎಂಬ ಮಾಹಿತಿ ಸತ್ಯಕ್ಕೆ ದೂರವಾದುದು~ ಎಂದು ದೂರಿದರು.

`ಪಶುಪಾಲನಾ ವಿಭಾಗದಲ್ಲಿ ಜಂಟಿ ನಿರ್ದೇಶಕರು, ಉಪ ನಿರ್ದೇಶಕರು, 10 ಮಂದಿ ಸಹಾಯಕ ನಿರ್ದೇಶಕರು, 13 ಮಂದಿ ನಿರೀಕ್ಷಕರು, ಕಸಾಯಿ ಖಾನೆಗಳ ಮೇಲ್ವಿಚಾರಣೆಗೆ 17 ಮಂದಿ ಇದ್ದಾರೆ. ಇಷ್ಟು ಮಂದಿ ಅಧಿಕಾರಿಗಳಿದ್ದರೂ  ಎಲ್ಲ ಮಳಿಗೆದಾರರಿಗೆ ಪರವಾನಗಿ ವಿತರಿಸುವಲ್ಲಿ ವಿಫಲರಾಗಿದ್ದಾರೆ. ಎಲ್ಲ ಮಾಂಸದಂಗಡಿಗಳಿಗೂ ಪರವಾನಗಿ ವಿತರಿಸಿದರೆ ಸುಮಾರು ಮೂರು ಕೋಟಿ ರೂಪಾಯಿ ಆದಾಯ ಸಂಗ್ರಹಣೆಯಾಗಲಿದೆ~ ಎಂದು ಹೇಳಿದರು.

`ಅನಧಿಕೃತ ಮಾಂಸದಂಗಡಿಗಳ ಮಾಲೀಕರು ತ್ಯಾಜ್ಯವನ್ನು ಮ್ಯಾನ್‌ಹೋಲ್ ಹಾಗೂ ಮಳೆ ನೀರು ಕಾಲುವೆಗಳಿಗೆ ಸುರಿಯುತ್ತಾರೆ. ಅಳಿದುಳಿದ ಹಸಿ ಮಾಂಸವನ್ನು ರಸ್ತೆಬದಿ ಹಾಕುತ್ತಾರೆ. ಇದರಿಂದ ಬೀದಿನಾಯಿಗಳ ಹಾವಳಿ ಹೆಚ್ಚಾಗಿದೆ. ಇಷ್ಟಾದರೂ ಪಶುಪಾಲನಾ ವಿಭಾಗ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ~ ಎಂದು ಆರೋಪಿಸಿದರು.

ಕಲಬೆರಕೆ ಪದಾರ್ಥ: `ನಗರದಲ್ಲಿ ಕಲಬೆರಕೆ ಆಹಾರ ಮತ್ತು ಆಹಾರ ಪದಾರ್ಥ ಮಾರಾಟ ವ್ಯಾಪಕವಾಗಿ ನಡೆಯುತ್ತಿದ್ದು, ಇದನ್ನು ತಡೆಗಟ್ಟುವಲ್ಲಿ ಆರೋಗ್ಯ ವಿಭಾಗ ವಿಫಲವಾಗಿದೆ. ಜನರು ನಿತ್ಯ ಬಳಸುವ ಅಡುಗೆ ಎಣ್ಣೆ, ತುಪ್ಪ, ಸಾಂಬಾರ ಪದಾರ್ಥ ಹಾಗೂ ಮಕ್ಕಳು ಹೆಚ್ಚಾಗಿ ಸೇವಿಸುವ ಐಸ್‌ಕ್ರೀಂಗಳಲ್ಲಿ ಕಲಬೆರಕೆ ದಂಧೆ ಹೆಚ್ಚಾಗಿದೆ~ ಎಂದು ದೂರಿದರು.

`ಮೇಯರ್ ಹಾಗೂ ಆಯುಕ್ತರು ಇತ್ತ ಗಮನ ಹರಿಸಬೇಕು. ಎಲ್ಲ ಮಾಂಸದಂಗಡಿಗಳಿಗೂ ಪರವಾನಗಿ ವಿತರಿಸಲು ಹಾಗೂ ತ್ಯಾಜ್ಯದ ಸಮರ್ಪಕ ವಿಲೇವಾರಿಗೆ ಕ್ರಮ ತೆಗೆದುಕೊಳ್ಳಬೇಕು. ಕಲಬೆರಕೆ ಪದಾರ್ಥಗಳ ಮಾರಾಟವನ್ನು ನಿಯಂತ್ರಿಸಲು ಆರೋಗ್ಯ ವಿಭಾಗ ಮುಂದಾಗಬೇಕು~ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT