ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಕುಂದ: ವಿನಾಶದ ಅಂಚಿನಲ್ಲಿ ಇತಿಹಾಸದ ಕುರುಹು

Last Updated 1 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ರಾಮನಗರ: ಎಲ್ಲೆಂದರಲ್ಲಿ, ಹೇಗೆಂದರೆ ಹಾಗೆ ಬಿದ್ದಿರುವ ಗತಕಾಲದ ಕುರುಹುಗಳು...  ಸಂರಕ್ಷರೇ ಇಲ್ಲದೆ ಸೊರಗಿರುವ ಹತ್ತಾರು ವೀರಗಲ್ಲು, ಮಹಾಸತಿ ಕಲ್ಲುಗಳು... ಸರಿಯಾದ ನಿರ್ವಹಣೆ ಇಲ್ಲದೆ ವಿನಾಶದ ಅಂಚು ತಲುಪುತ್ತಿರುವ ಸ್ಮಾರಕಗಳು... ಗ್ರಾಮದ ಜನತೆ ಮತ್ತು ಪ್ರಾಚ್ಯ ವಸ್ತು ಇಲಾಖೆಯ ತಾತ್ಸಾರ, ನಿರ್ಲಕ್ಷ್ಯದಿಂದ ಬೀದಿ ಪಾಲಾಗಿರುವ ಗತಕಾಲದ ಸಾಧಕರ ಹೆಜ್ಜೆ ಗುರುತುಗಳು... ಇದರಿಂದ ಕಣ್ಮರೆಯಾಗುತ್ತಿರುವ ಇತಿಹಾಸ ರಚನೆಯ ಮೂಲ ಆಕಾರಗಳು...

ಇದು ಚನ್ನಪಟ್ಟಣ ತಾಲ್ಲೂಕಿನ ಮಂಕುಂದ ಅಥವಾ ಮಾಕುಂದ ಗ್ರಾಮದಲ್ಲಿನ ಇತಿಹಾಸದ ಕುರುಹುಗಳಿಗೆ ಎದುರಾಗಿರುವ ದುಃಸ್ಥಿತಿ.

ರಾಜ್ಯದ ಇತಿಹಾಸದ ಪುಟಗಳಲ್ಲಿ ತನ್ನದೇ ಆದ ಮಹತ್ವದ ಸ್ಥಾನ ಹೊಂದಿರುವ ಗಂಗರ ಸಾಮ್ರಾಜ್ಯದ ನಾಲ್ಕು ರಾಜಧಾನಿಗಳಲ್ಲಿ ಒಂದಾಗಿದ್ದ ಮಾಕುಂದಕ್ಕೆ ಇಂದು ಮಂಕು ಕವಿದಿದೆ. ಹಾಗಾಗಿ ಇಲ್ಲಿ ತನ್ನ ಪೂರ್ವಿಕರ ಇತಿಹಾಸವನ್ನು ಸಾರುವ ಹಲವಾರು ವೀರಗಲ್ಲುಗಳು ಮತ್ತು ಮಹಾಸತಿ ಕಲ್ಲುಗಳು ಸರಿಯಾಗಿ ರಕ್ಷಣೆ ಇಲ್ಲದೆ, ನಾಶವಾಗುತ್ತಿವೆ.

ಕ್ರಿ.ಶ 350ರಿಂದ 999ರವರೆಗೆ ರಾಜ್ಯವಾಳಿದ ಗಂಗರು ರಾಜ್ಯದಲ್ಲಿ ಕೋಲಾರ, ತಲಕಾಡು, ಮಾಕುಂದ ಹಾಗೂ ಮಣ್ಣೆ (ನೆಲಮಂಗಲ ಬಳಿ)ಯನ್ನು ರಾಜಧಾನಿಯಾಗಿ ಮಾಡಿಕೊಂಡು ಆಳ್ವಿಕೆ ನಡೆಸಿದ್ದರು. ಗಂಗರು ಹೆಚ್ಚು ಕಾಲ ತಲಕಾಡಿನಲ್ಲಿ ಆಡಳಿತ ನಡೆಸಿದರಾದರೂ ಹಲವು ರಾಜರು ಉಳಿದ ಮೂರು ರಾಜಧಾನಿಗಳಲ್ಲಿ ಆಳ್ವಿಕೆ ನಡೆಸಿದ್ದರು.

ಈ ಬಗ್ಗೆ ಇತಿಹಾಸ ತಜ್ಞರು, ಶಾಸನ ತಜ್ಞರು ಮತ್ತು ಪುರಾತತ್ವ ಇಲಾಖೆಯವರು ಹಲವು ಸಂಶೋಧನೆಗಳನ್ನು ಕೈಗೊಂಡು ಲಭ್ಯ ಆಕರಗಳ ನೆರವಿನಿಂದ ಕೆಲ ರಾಜರುಗಳ ಆಳ್ವಿಕೆಯ ಇತಿಹಾಸವನ್ನು ಬರೆದಿದ್ದಾರೆ. ಈಗಲೂ ಸಂಶೋಧನೆಗಳು ನಡೆಯುತ್ತಲೇ ಇವೆ. ಆಕರಗಳ ಕೊರತೆಯಿಂದ ಸಂಪೂರ್ಣ ಮತ್ತು ಸಮಗ್ರ ಇತಿಹಾಸ ರಚನೆ ಇಲ್ಲಿಯವರೆಗೂ ಸಾಧ್ಯವಾಗಿಲ್ಲ ಎಂಬ ಕೊರಗು ತಜ್ಞರಲ್ಲಿದೆ.

ಇಂತಹ ಸಂದರ್ಭದಲ್ಲಿ ತನ್ನ ಊರಿನ ಇತಿಹಾಸ ಸಾರುವ ಮೂಲ ಆಕರಗಳನ್ನು ಸಂರಕ್ಷಿಸಿಕೊಳ್ಳಬೇಕಾದ ಗ್ರಾಮದ ಜನತೆ, ಮುಖಂಡರು ಮತ್ತು ಸ್ಥಳೀಯ ಆಡಳಿತ ಸಂಸ್ಥೆಗಳು ಇವುಗಳ ರಕ್ಷಣೆಗೆ ಕಿಮ್ಮತ್ತು ನೀಡದೆ ನಿರ್ಲಕ್ಷಿಸಿದ್ದಾರೆ ಎಂಬ ದೂರುಗಳು ವ್ಯಾಪಕವಾಗಿವೆ. ಅದಕ್ಕೆ ಮಾಕುಂದ ಗ್ರಾಮದಲ್ಲಿನ ವೀರಗಲ್ಲು, ಮಹಾಸತಿ ಕಲ್ಲುಗಳಿಗೆ ಒದಗಿರುವ ದುಃಸ್ಥಿತಿಯೇ ಸಾಕ್ಷಿ.

ಗ್ರಾಮದಲ್ಲಿ ಎಂಟರಿಂದ ಹತ್ತು ವೀರಗಲ್ಲುಗಳು, ಎರಡು ಮಹಾಸತಿ ಕಲ್ಲುಗಳು ದೊರೆತಿವೆ. ಹಲವು ವೀರಗಲ್ಲುಗಳನ್ನು ಶಾಲೆ ಆವರಣದ ಹಿಂಭಾಗದಲ್ಲಿ ಹೇಗೆಂದರೆ ಹಾಗೆ ಇಡಲಾಗಿದೆ. ಗಂಗರ ಆನೆಯ ಲಾಂಛನ ಹೊಂದಿರುವ ಶಾಸನ ಕೂಡ ಇಲ್ಲಿದೆ. ಶಾಲಾ ಬಳಿ ಇರುವ ವೀರಗಲ್ಲುಗಳ ಸುತ್ತ ಗಿಡಗಂಟಿಗಳು ಬೆಳೆದು ನಿಂತಿವೆ. ಕೆಲ ಕಲ್ಲುಗಳಂತೂ ಕೆಳಗೆ ಬಿದ್ದು ನಾಶವಾಗಿವೆ. ಇನ್ನೂ ಕೆಲವು ನಾಶವಾಗುವ ಅಂಚಿನಲ್ಲಿವೆ. ಅವುಗಳ ರಕ್ಷಣೆಗೆ ಸೂಕ್ತ ಕ್ರಮ ತೆಗೆದುಕೊಳ್ಳಲು ಗ್ರಾಮದ ಜನತೆ, ಗ್ರಾಮ ಪಂಚಾಯಿತಿ ಅಥವಾ ಶಾಲೆಯ ಎಸ್‌ಡಿಎಂಸಿ ಸದಸ್ಯರು ಮುಂದಾಗಿಲ್ಲ ಎಂಬ ದೂರು ಇದೆ.

ಮಾಕುಂದ/ಮಂಕುದದ ಇತಿಹಾಸ:
ಗಂಗರ ಮೂರನೇ ರಾಜಧಾನಿಯಾಗಿದ್ದ ಮಾಕುಂದದಲ್ಲಿ ಗಂಗರ ರಾಜರು ಸುಮಾರು 150 ವರ್ಷಗಳ ಕಾಲ ಆಳ್ವಿಕೆ ನಡೆಸಿದ್ದರು. ಗಂಗರ ಪ್ರಸಿದ್ಧ ದೊರೆ ದುರ್ವಿನೀತನ ನಂತರ ಬಂದ ಭೂ ವಿಕ್ರಮ ಮತ್ತು ಶಿವಮಾರ ರಾಜರು ಮಾಕುಂದವನ್ನು ರಾಜಧಾನಿಯನ್ನಾಗಿಸಿಕೊಂಡು ಆಳ್ವಿಕೆ ನಡೆಸಿದ. ಕ್ರಿ.ಶ.7ನೇ ಶತಮಾನದಲ್ಲಿ ಈ ಇಬ್ಬರು ರಾಜರು ಇಲ್ಲಿ ಆಳ್ವಿಕೆ ನಡೆಸಿದರು.
 
ಈ ಪ್ರದೇಶವನ್ನು ಚೋಳರು ನಾಶಪಡಿಸಿರಬಹುದು. ಕ್ರಿ.ಶ 913ರಲ್ಲಿ ಮಂಕುಂದ ಎಂಬುದರ ಉಲ್ಲೇಖ ಗಂಗರ ದಾಖಲೆಗಳಲ್ಲಿ ಕಂಡು ಬರುತ್ತದೆ ಎಂಬ ಅಂಶವನ್ನು  ಕರ್ನಾಟಕ ಗೆಜೆಟ್‌ನಲ್ಲಿ ಪ್ರಕಟಿಸಲಾಗಿದೆ.

ಇವರ ನಂತರ ಅಧಿಕಾರಕ್ಕೆ ಬಂದ ಗಂಗರ ಮತ್ತೊಬ್ಬ ಪ್ರಮುಖ ದೊರೆ ಶ್ರೀಪುರುಷ ರಾಜಧಾನಿಯನ್ನು ನೆಲಮಂಗಲ ಬಳಿ ಇರುವ ಮಣ್ಣೆಗೆ ವರ್ಗಾಯಿಸಿದ. ಸುಮಾರು 150 ವರ್ಷಗಳ ಕಾಲ ಮಾಕುಂದ ಗಂಗರ ರಾಜಧಾನಿಯಾಗಿ ದರ್ಬಾರು ನಡೆಸಿತ್ತು ಎಂಬುದು ಇತಿಹಾಸ ತಜ್ಞರ ವಿಶ್ಲೇಷಣೆ.

ಅನ್ವೇಷಣೆ ಆಗಬೇಕು: `ಸುದೀರ್ಘ ಕಾಲ ರಾಜಧಾನಿಯಾಗಿದ್ದ ಮಾಕುಂದ ಭಾಗದ ಸುತ್ತಮುತ್ತ ದೊಡ್ಡ ಪ್ರಮಾಣದಲ್ಲಿ ಶೋಧನೆ ಮತ್ತು ಅನ್ವೇಷಣೆ ನಡೆದರೆ ಇನ್ನಷ್ಟು ದಾಖಲೆಗಳು ದೊರೆಯಬಹುದು~ ಎಂದು ಕನಕಪುರ ಗ್ರಾಮೀಣ ಕಾಲೇಜಿನ ಇತಿಹಾಸ ಪ್ರಾಧ್ಯಾಪಕ ಡಾ. ಮುನಿರಾಜಪ್ಪ `ಪ್ರಜಾವಾಣಿ~ಗೆ ತಿಳಿಸಿದರು.
`ಈಗಾಗಲೇ ಮಾಕುಂದದಲ್ಲಿ ದೊರೆತಿರುವ ಎರಡು ಮೂರು ಶಾಸನಗಳ ಅಧ್ಯಯನ ನಡೆದಿದೆ.
 
ಆದರೆ ಅದರಿಂದ ಅಂತಹ ಮಹತ್ತರ ಮಾಹಿತಿಗಳೇನೂ ಬೆಳಕಿಗೆ ಬಂದಿಲ್ಲ. ಆದ್ದರಿಂದ ಈ ಸ್ಥಳದಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರಾಕ್ತನ ಶೋಧನೆ ನಡೆಯಬೇಕಿದೆ~ ಎಂದು ಅವರು ಹೇಳುತ್ತಾರೆ.

ಗ್ರಾಮದಲ್ಲಿ ವೀರಭದ್ರಸ್ವಾಮಿ, ಆಂಜನೇಯಸ್ವಾಮಿ, ದಂಡಿನಮ್ಮ, ಮಾರಮ್ಮ, ಮಾಸ್ತಮ್ಮ, ಹುಚ್ಚಮ್ಮ, ಚಿಕ್ಕಮ್ಮ, ಬಸವೇಶ್ವರ ದೇವಾಲಯಗಳು ಇವೆ.  ಅಣ್ಣ-ತಮ್ಮನ ಗುಡ್ಡ ಎಂಬ ಬೆಟ್ಟ ಕೂಡ ಇದೆ ಎಂದು ಗ್ರಾಮದ ನಿವೃತ್ತ ಶಿಕ್ಷಕ ಎನ್. ರಾಮಲಿಂಗಯ್ಯ ಹೇಳುತ್ತಾರೆ.

ಕೆಲ ವರ್ಷಗಳ ಹಿಂದೆ ಗಂಗೋತ್ಸವ ಆಚರಿಸಲಾಗಿತ್ತು. ಆದರೆ ಗಂಗೋತ್ಸವ ಆಚರಣೆಗೆ ಗ್ರಾಮದ ಜನತೆಯಲ್ಲಿ ಹೆಚ್ಚಾಗಿ ಆಸಕ್ತಿ ಇಲ್ಲದ ಕಾರಣ ಮುಂದುವರೆಸಲಾಗಲಿಲ್ಲ ಎಂಬುದ ಅವರ ಅಳಲು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT