ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಗಡಿಗೆ 1300, ಉತ್ತರ ಕರ್ನಾಟಕಕ್ಕೆ ಬರೀ 496

ಲೋಕೋಪಯೋಗಿ ಇಲಾಖೆ `ಕಾಮಗಾರಿ' ಅವ್ಯವಹಾರ
Last Updated 15 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಹಿಂದಿನ ಆರ್ಥಿಕ ವರ್ಷದಲ್ಲಿ (2011-12) ಲೋಕೋಪಯೋಗಿ ಇಲಾಖೆಯಿಂದ ಮಾಗಡಿ ತಾಲ್ಲೂಕು ಒಂದಕ್ಕೇ 1,300 ಕಾಮಗಾರಿ ಮಂಜೂರು ಮಾಡಲಾಗಿದ್ದರೆ, ಉತ್ತರ ಕರ್ನಾಟಕದ ಎಲ್ಲ ವಿಭಾಗಗಳಿಗೆ ಒಟ್ಟಾಗಿ ನೀಡಲಾದ ಕಾಮಗಾರಿಗಳ ಸಂಖ್ಯೆ ಕೇವಲ 496!

ಮಾಗಡಿ ತಾಲ್ಲೂಕಿನಲ್ಲಿ ಪಿಡಬ್ಲ್ಯುಡಿ ವತಿಯಿಂದ ಕೈಗೊಳ್ಳಲಾದ ಕಾಮಗಾರಿಗಳ ಅವ್ಯವಹಾರಕ್ಕೆ ಸಂಬಂಧಿಸಿದಂತೆ ತನಿಖೆಗೆ ರಚಿಸಲಾಗಿದ್ದ ವಿಧಾನಸಭೆಯ ಸದನ ಸಮಿತಿ ತನ್ನ ಅಂತಿಮ ವರದಿಯಲ್ಲಿ ಈ ವಿಷಯ ಬೆಳಕಿಗೆ ತಂದಿದೆ. ಸಮಿತಿಯ ಅಂತಿಮ ವರದಿ ಸೋಮವಾರ ವಿಧಾನಸಭಾ ಅಧ್ಯಕ್ಷರಿಗೆ ಸಲ್ಲಿಕೆಯಾಗಿದೆ.
ಸದನ ಸಮಿತಿ ತನ್ನ ವರದಿಯಲ್ಲಿ ಶಿಫಾರಸು ಮಾಡಿರುವ ಪ್ರಮುಖ ಅಂಶಗಳ ಮಾಹಿತಿ ಪಿಡಬ್ಲ್ಯುಡಿ ಮೂಲಗಳಿಂದ `ಪ್ರಜಾವಾಣಿ'ಗೆ ಲಭ್ಯವಾಗಿದೆ.

`ಮಾಗಡಿ ತಾಲ್ಲೂಕು ಒಂದಕ್ಕೇರೂ 600 ಕೋಟಿ ಮೊತ್ತದ ಕಾಮಗಾರಿ ನೀಡಲಾಗಿದ್ದರೆ, ಉತ್ತರ ಕರ್ನಾಟಕದ ಧಾರವಾಡ, ಬೆಳಗಾವಿ, ವಿಜಾಪುರ, ಬಾಗಲಕೋಟೆ, ಬೀದರ್, ಗುಲ್ಬರ್ಗ, ಕೊಪ್ಪಳ, ಗದಗ, ಹಾವೇರಿ, ಬಳ್ಳಾರಿ, ಕಾರವಾರ, ಶಿರಸಿ ಸೇರಿದಂತೆ 12 ವಿಭಾಗಗಳಲ್ಲಿ ಈ ಮೊತ್ತದ ಶೇ 40ರಷ್ಟು ಹಣವನ್ನೂ ಖರ್ಚು ಮಾಡಿಲ್ಲ' ಎಂಬ ವಿಷಯವನ್ನೂ ಸಮಿತಿ ಬಯಲಿಗೆ ಎಳೆದಿದೆ.

`ಮಾಗಡಿ ತಾಲ್ಲೂಕಿನ ಕಾಮಗಾರಿಗಳಿಗೆ ಅನುದಾನ ಬಿಡುಗಡೆಯಲ್ಲಿ ಸರ್ಕಾರದಲ್ಲಿದ್ದ ಪ್ರಭಾವಿಯೊಬ್ಬರು ನೇರವಾಗಿ ಕಾರ್ಯಾಚರಣೆ ನಡೆಸಿದ್ದಾರೆ. ರಾಜಕೀಯ ಹಸ್ತಕ್ಷೇಪವೂ ವ್ಯಾಪಕವಾಗಿದೆ. ಈ ನಿಟ್ಟಿನಲ್ಲಿ ವಿವರವಾದ ತನಿಖೆ ಅಗತ್ಯವಾಗಿದೆ' ಎಂಬ ಅಭಿಪ್ರಾಯಕ್ಕೆ ಸಮಿತಿ ಬಂದಿದೆ.

`ಪಿಡಬ್ಲ್ಯುಡಿ ಇತಿಹಾಸದಲ್ಲಿಯೇ ಒಂದು ತಾಲ್ಲೂಕಿಗೆರೂ 600 ಕೋಟಿ   ಮೊತ್ತದಷ್ಟು ಕಾಮಗಾರಿಗಳನ್ನು ಒಂದೇ ಆರ್ಥಿಕ ವರ್ಷದಲ್ಲಿ ಮಂಜೂರು ಮಾಡಿದ ಉದಾಹರಣೆ ಇಲ್ಲ. ಇಲಾಖೆ ಮುಖ್ಯಸ್ಥರು ಇಂತಹ ಸನ್ನಿವೇಶಕ್ಕೆ ಅವಕಾಶ ಮಾಡಿಕೊಟ್ಟಿದ್ದು ಹಲವು ಸಂಶಯಗಳಿಗೆ ಕಾರಣವಾಗಿದೆ' ಎನ್ನುವ ತಕರಾರನ್ನು ವ್ಯಕ್ತಪಡಿಸಲಾಗಿದೆ.
`ನಿಯಮಬಾಹಿರವಾಗಿ ಅನುದಾನ ಬಿಡುಗಡೆ ಮಾಡಲಾಗಿದ್ದು, ಕಾಮಗಾರಿಗಳಿಗೆ ಅನುಮೋದನೆ ನೀಡಿದ ಅಧಿಕಾರಿಗಳು ಕರ್ತವ್ಯಲೋಪ ಎಸಗಿರುವುದು ದೃಢಪಟ್ಟಿದೆ. ಟೆಂಡರ್ ಪಾರದರ್ಶಕ ನಿಯಮ ಉಲ್ಲಂಘಿಸಿರೂ 140 ಕೋಟಿ ಮೊತ್ತದ ಕಾಮಗಾರಿಗಳನ್ನು ತುಂಡು-ತುಂಡಾಗಿ ಕತ್ತರಿಸಿ ಗುತ್ತಿಗೆ ನೀಡುವಲ್ಲಿ ಸೂಪರಿಂಟೆಂಡಿಂಗ್ ಎಂಜಿನಿಯರ್ ಅವರೇ ನೇರವಾಗಿ ಹೊಣೆಯಾಗಿದ್ದು, ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು' ಎನ್ನುವ ಶಿಫಾರಸ್ಸನ್ನೂ ಮಾಡಲಾಗಿದೆ.

`ಕಾಮಗಾರಿ ನಿರ್ವಹಣೆ ಮಾಡದೆ, ನಡೆದ ಕಾಮಗಾರಿಗಳ ಕುರಿತು ದೃಢಪಡಿಸಿಕೊಳ್ಳದೆ ಬಿಲ್ ತಯಾರಿಸಿದ ಕಾರ್ಯನಿರ್ವಾಹಕ ಎಂಜಿನಿಯರ್, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್, ತಾಂತ್ರಿಕ ಸಹಾಯಕರು ಮತ್ತು ಲೆಕ್ಕ ಸಹಾಯಕರ ಕಾರ್ಯವೈಖರಿ ಆಕ್ಷೇಪಾರ್ಹವಾಗಿದ್ದು, ಅವರ ವಿರುದ್ಧವೂ ಶಿಸ್ತುಕ್ರಮ ಕೈಗೊಳ್ಳಬೇಕು' ಎನ್ನುವ ಶಿಫಾರಸು ಕೂಡ ಇದೆ ಎಂದು ಮೂಲಗಳು ತಿಳಿಸಿವೆ.

`ಲೆಕ್ಕಪತ್ರ ಇಲಾಖೆಯ ಜಂಟಿ ನಿಯಂತ್ರಕರ ಕಾರ್ಯನಿರ್ವಹಣೆ ಸಮರ್ಪಕವಾಗಿಲ್ಲ. ಅವರ ವಿರುದ್ಧವೂ ತನಿಖೆ ನಡೆಸಬೇಕು ಎನ್ನುವ ಅಭಿಪ್ರಾಯಕ್ಕೆ ಸದನ ಸಮಿತಿ ಸದಸ್ಯರು ಬಂದಿದ್ದಾರೆ. ಪಿಡಬ್ಲ್ಯುಡಿ ಇಲಾಖೆಯಿಂದ ಈಗಾಗಲೇ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ' ಎಂದು ಹೇಳಲಾಗಿದೆ.

`ಲೆಕ್ಕಪತ್ರ ಇಲಾಖೆಯಲ್ಲಿ ನಿಯೋಜನೆ ಮೇಲಿದ್ದ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಸಮರ್ಪಕವಾಗಿ ನಿಭಾಯಿಸಿದ್ದರೆ ಹಗರಣ ನಡೆಯುವ ಪ್ರಸಂಗವೇ ಬರುತ್ತಿರಲಿಲ್ಲ' ಎಂದು ಅಭಿಪ್ರಾಯಪಡಲಾಗಿದೆ. ಇನ್ನು ಮುಂದೆ ಇಲಾಖೆಯಿಂದ ಯಾವುದೇ ಕಾಮಗಾರಿಗಳನ್ನು ಕೈಗೊಂಡರೂ ಅವುಗಳ ಎಲ್ಲ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯಬೇಕು' ಎಂದು ತಿಳಿಸಲಾಗಿದೆ.

ಕಳೆದ ಹಣಕಾಸು ವರ್ಷದಲ್ಲಿ (2011-12) ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಅಡಿಯಲ್ಲಿ ರಾಜ್ಯದ ಯಾವ ಭಾಗಕ್ಕೂ ಸಿಗದಷ್ಟು ಅನುದಾನ ಮಾಗಡಿ ಉಪ ವಿಭಾಗಕ್ಕೆ ದೊರೆತಿತ್ತು. ಒಟ್ಟಾರೆರೂ 600 ಕೋಟಿ ಮೊತ್ತದ ಕಾಮಗಾರಿಗಳಲ್ಲಿ ಅರ್ಧದಷ್ಟನ್ನು ಈಗಾಗಲೇ ಪೂರೈಸಲಾಗಿದೆ ಎಂಬ ವರದಿ ಸಿದ್ಧಪಡಿಸಿದ ಮಾಗಡಿ ಉಪ ವಿಭಾಗ,ರೂ 341 ಕೋಟಿ ಮೊತ್ತವನ್ನು ಗುತ್ತಿಗೆದಾರರಿಗೆ ಬಿಡುಗಡೆ ಕೂಡ ಮಾಡಿತ್ತು.

`ಮಾಗಡಿ ಕಾಮಗಾರಿಗಳಿಗೆ ಬಜೆಟ್‌ನಲ್ಲಿ ಹಣ ಹಂಚಿಕೆ ಮಾಡಿರಲಿಲ್ಲ. ಕ್ರಿಯಾ ಯೋಜನೆಯಲ್ಲೂ ಸೇರ್ಪಡೆ ಆಗಿರಲಿಲ್ಲ. ಪ್ರಭಾವಿಯೊಬ್ಬರ ಶಿಫಾರಸಿನ ಮೇರೆಗೆ ಅನುಬಂಧ `ಇ'ನಲ್ಲಿ ಅವುಗಳನ್ನು ಸೇರಿಸಿ ತರಾತುರಿಯಲ್ಲಿ ಒಪ್ಪಿಗೆ ಪಡೆಯಲಾಗಿದೆ' ಎಂದು ದೂರಲಾಗಿತ್ತು. ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸದನದಲ್ಲಿ ಈ ವಿಷಯವಾಗಿ ಚರ್ಚೆ ನಡೆಸಿದ್ದರು.

ಇಬ್ಬರೇ ಗುತ್ತಿಗೆದಾರರು: ಎಲ್ಲ ಟೆಂಡರ್‌ಗಳಲ್ಲೂ ಶಂಕರ್ ಮಾಗಡಿ ಮತ್ತು ಕೆಂಪರಾಜು ಮಾಗಡಿ ಎಂಬ ಇಬ್ಬರೇ ಗುತ್ತಿಗೆದಾರರು ಸ್ಪರ್ಧೆ ಮಾಡಿರುವುದನ್ನು ಈ ಕುರಿತು ತನಿಖೆ ನಡೆಸಿದ್ದ ಪಿಡಬ್ಲ್ಯುಡಿ ಕಾಮಗಾರಿ ಉಸ್ತುವಾರಿ ಕೋಶ ಎತ್ತಿ ತೋರಿತ್ತು. ಉಸ್ತುವಾರಿ ಕೋಶದ ವರದಿ ಆಧಾರದ ಮೇಲೆ ಇಲಾಖೆ ಅಧೀನ ಕಾರ್ಯದರ್ಶಿಗಳು ರಾಮನಗರ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಆಗಿದ್ದ ಗಂಗಾಧರಯ್ಯ ಅವರನ್ನು ಅಮಾನತುಗೊಳಿಸಲಾಗಿದೆ. ಅವರ ವಿರುದ್ಧ ವಿಚಾರಣೆಗೂ ಆದೇಶಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT