ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಗಳ ಬಸ್ತಿ ಓಣಿಗೆ ಎಸಿ ಭೇಟಿ: ಪರಿಶೀಲನೆ

Last Updated 16 ಸೆಪ್ಟೆಂಬರ್ 2013, 6:06 IST
ಅಕ್ಷರ ಗಾತ್ರ

ಹೂವಿನಹಡಗಲಿ: ತಾಲ್ಲೂಕಿನ ಮಾಗಳ ಗ್ರಾಮಕ್ಕೆ ಸಹಾಯಕ ಆಯುಕ್ತ ಸುನೀಲ್ ಕುಮಾರ್ ಭಾನುವಾರ ಭೇಟಿ ನೀಡಿ, ಬಸ್ತಿ ಓಣಿ ಮತ್ತು ಬ್ಯಾಡರಗೇರಿಯ ಬಸಿನೀರಿನ ಸಮಸ್ಯೆಯನ್ನು  ಪರಿಶೀಲಿಸಿದರು. ಸಂತ್ರಸ್ತರ ಮನೆ ಮನೆಗಳಿಗೆ ತೆರಳಿ ಪರಿಶೀಲನೆ ನಡೆಸಿದ ಎಸಿ, ತೋಟರ ಶಿವಪ್ಪ ಎಂಬುವವರ  ಮನೆಯೊಳಗೆ ನೀರು ಜಿನುಗುವುದನ್ನು ಕಂಡು ಅವಕ್ಕಾದರು. ಇಲ್ಲಿನ ಸಮಸ್ಯೆ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಸಿಂಗಟಾಲೂರು ಏತ ನೀರಾವರಿ ಯೋಜನೆಯ ಹಿನ್ನೀರು ಗ್ರಾಮ ಠಾಣಾ ಹತ್ತಿರಕ್ಕೆ ನುಗ್ಗುತ್ತಿದೆ. ಆದರೆ ಈ ಹಿಂದೆ ಸಮರ್ಪಕ ಸರ್ವೇ ಮಾಡದ ಕಾರಣ ಗ್ರಾಮ ಮುಳುಗಡೆ ಪಟ್ಟಿಗೆ ಸೇಪರ್ಡೆಗೊಳ್ಳದೇ ಇರುವುದು ಪುನರ್ವಸತಿ ಸಮಸ್ಯೆ ಜಟಿಲವಾಗುಲು ಕಾರಣವಾಗಿದೆ ಎಂದು ಸಂತ್ರಸ್ತರು ಅಧಿಕಾರಿಯ ಗಮನಕ್ಕೆ ತಂದರು.

‘ಬಸಿ ನೀರಿನ ಸಮಸ್ಯೆಯಿಂದ ಇಲ್ಲಿ ವಾಸ ಮಾಡಲು ಸಾಧ್ಯವಿಲ್ಲದಂತಾಗಿದೆ. ಮನೆಯಲ್ಲಿ ನಿತ್ಯ ನೆಲಕ್ಕೆ ಒಣ ಮಣ್ಣು ಹಾಕಿಕೊಂಡರೆ ಮಾತ್ರ ನಿದ್ರಿಸಲು ಸಾಧ್ಯ,  ಅನೇಕ ಅಧಿಕಾರಿಗಳು, ಜನಪ್ರತಿನಿಧಿಗಳು ಬಂದು ನೋಡಿಕೊಂಡು ಹೋಗ್ಯಾರ. ಆದ್ರ ನಮ್ಮ ಸಮಸ್ಯೆ ಮಾತ್ರ ನೀಗಿಲ್ಲ ’ಎಂದ ದಾರಿಯುದ್ದಕ್ಕೂ ಮಹಿಳೆಯರು ಅಧಿಕಾರಿಗೆ ತಮ್ಮ ಅಳಲು ತೋಡಿಕೊಂಡರು.

ಅಲ್ಲಿನ ನವಗ್ರಾಮದಲ್ಲಿ ಆಸರೆ ಮನೆಗಳೂ ಪೂರ್ಣಗೊಂಡಿಲ್ಲ. ಇಲ್ಲಿ ಸ್ಥಳಾಂತರ ನೆಪದಲ್ಲಿ ಯಾವುದೇ ಮೂಲಸೌಕರ್ಯ ಕಲ್ಪಿಸಲಾಗುತ್ತಿಲ್ಲ. ಪ್ರತಿನಿತ್ಯ ಜಿನುಗುವ ನೀರಿನಲ್ಲೇ ಸಾಂಕ್ರಾಮಿಕ ರೋಗ ಭೀತಿಯಲ್ಲಿ ಜೀವನ ನಡೆಸಬೇಕಾಗಿದೆ ಎಂದು ಹೇಳಿಕೊಂಡರು. ಆಲಮಟ್ಟಿ ಯೋಜನೆಯ ಹಿನ್ನೀರಿನಲ್ಲಿ ಮುಳುಗಡೆಯಾಗಿರುವ ಬಾಗಲಕೋಟಿ ಸ್ಥಳಾಂತರಕ್ಕೆ ಅನುಸರಿಸಿರುವ ನಿಯಮಗಳನ್ನು ಇಲ್ಲಿಯೂ ಅನುಸರಿಸುವ ಮೂಲಕ ಪುನರ್ವಸತಿ ಮತ್ತು ಪರಿಹಾರ ನೀಡಿ ಗ್ರಾಮ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು.

ಸಂತ್ರಸ್ತರ ಸಮಸ್ಯೆಗಳನ್ನು ಸಮಚಿತ್ತದಿಂದ ಆಲಿಸಿದ ಸಹಾಯಕ ಅಯುಕ್ತರು, ಇಲ್ಲಿನ ವಾಸ್ತವ ಸಂಗತಿಯನ್ನು ಜಿಲ್ಲಾಡಳಿತಕ್ಕೆ ತಿಳಿಸಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು. ನಂತರ ನವಗ್ರಾಮಕ್ಕೆ ತೆರಳಿ ಕೊಳಗೇರಿ ಅಭಿವೃದ್ಧಿ ಮಂಡಳಿ ನಿರ್ಮಿಸುತ್ತಿರುವ ಆಸರೆ ಮನೆಗಳನ್ನು ಪರಿಶೀಲಿಸಿದರು.

ಈ ಸಂದರ್ಭದಲ್ಲಿ  ತಹಶೀಲ್ದಾರ್ ಎ.ಬಿ.ವಿಜಯಕುಮಾರ, ಶಿರಸ್ತೇದಾರ ಪ್ರಭಾಕರಗೌಡ, ಕಂದಾಯ ನಿರೀಕ್ಷಕ ಕೊಟ್ರೇಶ, ಗ್ರಾ.ಪಂ. ಅಧ್ಯಕ್ಷ ಎಚ್.ಬಸವರಾಜ, ಸದಸ್ಯರಾದ ಡಿ.ರಮೇಶ, ಹನುಮಂತಪ್ಪ, ಪಿಡಿಓ ವೀರಣ್ಣ, ಮಲ್ಲಿಕಾರ್ಜುನ, ಎಎಸ್ಐ ದೇವೀಂದ್ರನಾಯ್ಕ, ರಾಜೇಂದ್ರನಾಯ್ಕ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT