ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಗಿಯ ಸೂರ್ಯ

Last Updated 20 ಜನವರಿ 2011, 19:30 IST
ಅಕ್ಷರ ಗಾತ್ರ

ಮಕ್ಕಳ ದತ್ತಕ ಹೊಸತೇನಲ್ಲ. ಪೋಷಕರ ದತ್ತಕ? ಹೊಸ ಯೋಚನೆಗೆ ಸಿನಿಮುನ್ನುಡಿ ಬರೆದಿದ್ದಾರೆ ಸದಭಿರುಚಿ ಚಿತ್ರಗಳಿಗೆ ಹೆಸರಾದ ನಿರ್ದೇಶಕ ಶಿವರುದ್ರಯ್ಯ. ಅವರ ನಿರ್ದೇಶನದ ಹೊಸಚಿತ್ರ ‘ಮಾಗಿಯ ಕಾಲ’ದ ಕಥಾವಸ್ತು ಪೋಷಕರ ದತ್ತಕಕ್ಕೆ ಸಂಬಂಧಿಸಿದ್ದು.

ಚಿತ್ರದ ನಾಯಕ ಓರ್ವ ಅನಾಥ. ವಾಸ್ತುಶಿಲ್ಪಿಯಾಗಿ ಯಶಸ್ಸು ಪಡೆಯುವ ಈ ಯುವಕ ಪೋಷಕರನ್ನು ದತ್ತು ಪಡೆಯುವುದರ ಸುತ್ತ ‘ಮಾಗಿಯ ಕಾಲ’ ಚಿತ್ರದ ಕಥೆಯಿದೆ. ದತ್ತಕದ ಕುರಿತ ಯೋಚನೆಗಳಿಗೆ ಹೊಸ ಆಯಾಮವನ್ನು ನೀಡುವುದು ಚಿತ್ರತಂಡದ ಪ್ರಯತ್ನ.

ಹಿರಿಯ ನಾಗರಿಕರು ಯುವ ಜನಾಂಗದ ನಿರ್ಲಕ್ಷ್ಯಕ್ಕೆ ಒಳಗಾಗಿರುವ ದಿನಗಳಿವು. ಇಂಥ ಸಂದರ್ಭದಲ್ಲಿ ಹಿರಿಯರ ಬಗ್ಗೆ ತರುಣ ತರುಣಿಯರನ್ನು ಮರಳಿ ಯೋಚಿಸುವ ಪ್ರಯತ್ನವಾಗಿ ‘ಮಾಗಿಯ ಕಾಲ’ ರೂಪುಗೊಂಡಿದೆ.

‘ಮಾಗಿಯ ಕಾಲ’ ಚಿತ್ರದ ಕಥೆಯಷ್ಟೇ ಭಿನ್ನವಾದುದಲ್ಲ. ಕಥೆಗಾರರು ಕೂಡ ಭಿನ್ನವೇ. ಕನ್ನಡದ ಹಿರಿಯ ಕಾದಂಬರಿಕಾರ ಈಶ್ವರಚಂದ್ರ ಅವರ ‘ಒಂದು ಸೂರಿನ ಕೆಳಗೆ’ ಕಾದಂಬರಿಯನ್ನು ಆಧರಿಸಿ ಶಿವರುದ್ರಯ್ಯ ಮಾಗಿಯನ್ನು ರೂಪಿಸಿದ್ದಾರೆ. ಈ ಚಿತ್ರಕ್ಕೆ ಹಣ ಹೂಡಿರುವ ಮೂಡ್ನಾಕೂಡು ಚಿನ್ನಸ್ವಾಮಿ ಹೆಸರಾಂತ ಕವಿ. ಸಾಹಿತ್ಯದ ಅಭಿರುಚಿಯುಳ್ಳ ತಂಡ ರೂಪಿಸಿರುವ ಚಿತ್ರ ಎನ್ನುವ ಕಾರಣದಿಂದಾಗಿಯೂ ‘ಮಾಗಿಯ ಕಾಲ’ ಭಿನ್ನ ಪ್ರಯತ್ನವಾಗಿದೆ.

ಶಿವರುದ್ರಯ್ಯನವರಿಗೆ ನಿರ್ದೇಶಕರಾಗಿ ‘ಮಾಗಿಯ ಕಾಲ’ ಖುಷಿ ಕೊಟ್ಟ ಚಿತ್ರವಂತೆ. ‘ಚೈತ್ರದ ಚಿಗುರು ನಂತರ ನನಗೆ ಪೂರ್ಣ ತೃಪ್ತಿ ತಂದುಕೊಟ್ಟ ಕೊಟ್ಟ ಚಿತ್ರ ಇದು’ ಎನ್ನುವ ಅವರು- ನೂರಾರು ಕಥೆ, ಕಾದಂಬರಿಗಳನ್ನು ಜಾಲಿಸಿದ ನಂತರ ಈ ಕಥನವನ್ನು ಶೋಧಿಸಿ ತೆಗೆದರಂತೆ.

ಮೂಡ್ನಾಕೂಡು ಅವರ ಮಗ ನಿಶಾಂತ್ ಚಿತ್ರದ ನಾಯಕ. ನೀನಾಸಂ ಗರಡಿಯಲ್ಲಿ ಪಳಗಿರುವ ನಿಶಾಂತ್‌ಗೆ ಸಿನಿಮಾ ಮಾಧ್ಯಮದಲ್ಲಿ ಏನನ್ನಾದರೂ ಸಾಧಿಸುವ ಕನಸು. ‘ಅಭಿನಯದಲ್ಲಿ ಅನುಭವ ಸಣ್ಣದಾದರೂ, ಚೊಚ್ಚಿಲ ಚಿತ್ರದ ಮೂಲಕ ಗಳಿಸಿದ ಅನುಭವ ಅಪಾರ’ ಎನ್ನುವುದು ನಿಶಾಂತ್ ಅನಿಸಿಕೆ. ನಿರ್ಮಾಪಕರಾದ ಮೂಡ್ನಾಕೂಡು ಅವರಿಗೆ ಕೂಡ ಸಿನಿಮಾ ಮಾಧ್ಯಮದ ಸಂವಹನ ಶಕ್ತಿಯ ಬಗ್ಗೆ ಅಪಾರ ನಂಬಿಕೆ. ಈ ಕನಸು-ನಂಬಿಕೆಗಳ ಮೊತ್ತವೇ ಮಾಗಿದೆ, ‘ಮಾಗಿಯ ಕಾಲ’ ಆಗಿದೆ.

ಮಾಗಿಯ ಕಾಲ ಸೆಟ್ಟೇರಿದ್ದು ಕಳೆದ ನವೆಂಬರ್‌ನಲ್ಲಿ. ಚಿತ್ರತಂಡ ಬೆಂಗಳೂರು, ಮೈಸೂರು, ಕುಶಾಲನಗರ, ಸೋಮವಾರಪೇಟೆ, ಮಂಗಳೂರುಗಳಲ್ಲಿ ಚಿತ್ರೀಕರಣ ನಡೆಸಿದೆ. ಚಿತ್ರೀಕರಣ ಮುಗಿಸಿ, ಡಿಸೆಂಬರ್‌ನಲ್ಲಿ ಸೆನ್ಸಾರ್ ಪ್ರಮಾಣಪತ್ರವನ್ನೂ ಪಡೆದಿರುವ ಚಿತ್ರ ರಾಷ್ಟ್ರಪ್ರಶಸ್ತಿ ಕಣದಲ್ಲಿ ಸ್ಪರ್ಧೆಗಿಳಿದಿದೆ.

ಚಿತ್ರದ ಪ್ರಮುಖ ಪಾತ್ರಗಳಲ್ಲಿ ನೂರರ ಅಂಚಿನಲ್ಲಿರುವ, ಅನಾಥಾಶ್ರಮದ ಇಬ್ಬರು ಹಿರಿಯ ನಾಗರಿಕರು ನಟಿಸಿರುವುದು ವಿಶೇಷ. ಅಂದಹಾಗೆ, ನಿಶಾಂತ್‌ಗೆ ನಾಯಕಿಯಾಗಿ ನಟಿಸುತ್ತಿರುವ ಹುಡುಗಿಯ ಹೆಸರು ಬಿಂದು. ನಾಯಕ-ನಾಯಕಿ ಇಬ್ಬರೂ, ಸುದ್ದಿಗೋಷ್ಠಿ ಸಂದರ್ಭದಲ್ಲಿ ಆಹ್ವಾನಿತರಿಗೆ ಎಳ್ಳುಬೆಲ್ಲ ನೀಡಿ ಸ್ವಾಗತಿಸಿದ್ದು ಕೂಡ ವಿಶೇಷವೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT