ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಗುಡಿಲು: ರಾವಳದೇವಿ ಶಿಲ್ಪ ಪತ್ತೆ

Last Updated 24 ಮೇ 2012, 8:35 IST
ಅಕ್ಷರ ಗಾತ್ರ

ಚಾಮರಾಜನಗರ: ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ ತಾಲ್ಲೂಕಿನ ಮಾಗುಡಿಲು ಗ್ರಾಮದಲ್ಲಿ ಕರ್ನಾಟಕದಲ್ಲಿಯೇ ಮೊದಲ ಬಾರಿಗೆ ವಿಶೇಷ ರಾವಳದೇವಿ ಹಾಗೂ ರಾವಣೇಶ್ವರ ಶಿಲ್ಪ ಪತ್ತೆಯಾಗಿದೆ.

ಜಿಲ್ಲಾ ಕೇಂದ್ರದಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿವಿಯ ಪ್ರಾದೇಶಿಕ ಕೇಂದ್ರದ ನಿರ್ದೇಶಕ ಡಾ.ಬಿ. ಬಸವರಾಜು ತಗರಪುರ ಹಾಗೂ ಚಿತ್ರಕಲಾ ಶಿಕ್ಷಕ ಆರ್. ರಘು ಅವರು ಈ ಶಿಲ್ಪಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಈ ಶಿಲ್ಪಗಳು ಗ್ರಾಮದ ದಲಿತರ ಬೀದಿಯಲ್ಲಿರುವ ರಾವಳದೇವಮ್ಮನ ದೇವಸ್ಥಾನದಲ್ಲಿವೆ.

ಈ ಪ್ರದೇಶ ಪೊನ್ನಾಟ ದೇಶದ ಪ್ರಾಂತ್ಯದ ನೆಲೆಯಾಗಿತ್ತು ಎಂದು ಕೆಲವು ಆಧಾರ ಹಾಗೂ ಶಾಸನಗಳಿಂದ ತಿಳಿದುಬರುತ್ತದೆ. ಈ ದೇವಾಲಯದಲ್ಲಿ ಹೆಚ್ಚು ಶಿಲ್ಪಗಳಿವೆ. ಈಗಾಗಲೇ ಚಾಮರಾಜನಗರ, ಮಂಡ್ಯ, ಮೈಸೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಹಾಗೂ ತಮಿಳುನಾಡಿನ ಕೆಲವು ಭಾಗಗಳಲ್ಲಿ 300ಕ್ಕೂ ಹೆಚ್ಚು ರಾವಳೇಶ್ವರ(ರಾವಣೇಶ್ವರ) ಶಿಲ್ಪಗಳನ್ನು ಗುರುತಿಸಲಾಗಿದೆ. ಆದರೆ, ಮಾಗುಡಿಲು ಗ್ರಾಮದಲ್ಲಿರುವ ಶಿಲ್ಪಗಳು ಜಾನಪದೀಯ ಶೈಲಿಯಲ್ಲಿವೆ ಎಂದು ಬಸವರಾಜು ತಿಳಿಸಿದ್ದಾರೆ.

`ಗ್ರಾಮದಲ್ಲಿ ದೊರೆತ ಒರಟು ಕಲ್ಲು ಹಾಗೂ ಬಳಪದ ಕಲ್ಲಿನಲ್ಲಿ ಶಿಲ್ಪಗಳನ್ನು ಕೆತ್ತಲಾಗಿದೆ. ಸ್ಥಳೀಯ ಕಲಾವಿದ ಆ ಕಾಲದ ಇತಿಹಾಸ, ಸತ್ಯಸಂಗತಿಯನ್ನು ಉದ್ದೇಶಪೂರ್ವಕವಾಗಿ ಶಿಲ್ಪಗಳಲ್ಲಿ ಕಥೆಯ ಸಾಂದರ್ಭಿಕ ಶಿಲ್ಪಗಳನ್ನಾಗಿ  ಸೆರೆ ಹಿಡಿದು ಕೆತ್ತಿರುವ ಸಾಧ್ಯತೆಯಿದೆ. ಜತೆಗೆ, ಪುರಾಣದ ರಾಮಾಯಣದಲ್ಲಿ ರಾವಣ ಏಕಪತ್ನಿ ಹೊಂದಿರುವುದು ತಿಳಿದುಬರುತ್ತದೆ. ಆದರೆ, ಈ ಪ್ರಾಂತ್ಯದಲ್ಲಿರುವ ರಾವಣನ ಶಿಲ್ಪದಲ್ಲಿ ದ್ವಿಪತ್ನಿ ಇರುವುದು ವಿಶೇಷವಾಗಿ ಕಂಡುಬರುತ್ತದೆ. ಜತೆಗೆ, ಸೂರ್ಯ- ಚಂದ್ರರ ಸಾಕ್ಷಿಯಾಗಿ ಸಹಗಮನ ಹೊಂದಿರುವ ಕಲ್ಲುಗಳು ಈ ಸ್ಥಳದಲ್ಲಿ ದೊರೆಯುತ್ತವೆ~ ಎಂದು ವಿವರಿಸಿದ್ದಾರೆ.

ಶಿಲ್ಪಗಳನ್ನು ಗಮನಿಸಿದಾಗ ರಾಮಾಯಣದ ರಾವಣನಿಗೂ ಹಾಗೂ ಇಲ್ಲಿ ದೊರೆತಿರುವ ಶಿಲ್ಪಗಳಿಗೆ ಯಾವುದೇ ಸಂಬಂಧ ಇಲ್ಲ. ಇವುಗಳು ಜಾನಪದೀಯ ವಿಚಾರ, ಇತಿಹಾಸ ತಿಳಿಸುವ ಶಿಲ್ಪಗಳಾಗಿವೆ. ರಾವಳದೇವಿ ಶಿಲ್ಪ ಗಮನಿಸಿದರೆ ಇದೊಂದು ಶಕ್ತಿ ಪ್ರಧಾನ ಸ್ತ್ರೀಶಿಲ್ಪ ಎಂದು ಪರಿಗಣಿಸಬಹುದು ಎಂದು ತಿಳಿಸಿದ್ದಾರೆ.

ರಾವಳದೇವಿ ದೇವತೆಯು ಸೊಂಟದ ಕೆಳಭಾಗದಲ್ಲಿ ವಸ್ತ್ರ ಧರಿಸಿದ್ದು, ವಸ್ತ್ರವು ನೆರಿಗೆಯಿಂದ ಕೂಡಿರುತ್ತದೆ. ದೇವಿಯು ಚತುರ್ಭುಜಧಾರಿಯಾಗಿದ್ದು, ಹತ್ತು ತಲೆ ಹೊಂದಿದ್ದಾಳೆ. ಪೀಠದಲ್ಲಿ ಸುಮಾರು 8 ಸೇವಕಿಯರ ಉಬ್ಬು  ಶಿಲ್ಪ ಕೆತ್ತಲಾಗಿದೆ. ದೇವಿಯ ಇಕ್ಕೆಲಗಳಲ್ಲಿ ಇಬ್ಬರು ಸೇವಕಿಯರು ಇದ್ದಾರೆ. ಇಂತಹ ಶಿಲ್ಪಗಳು ಹರಪ್ಪ ನಾಗರಿಕತೆಯಲ್ಲೂ ಮೂಡಿರುವುದನ್ನು ಗಮನಿಸಬಹುದಾಗಿದೆ. ಇಂದಿಗೂ ಗ್ರಾಮಸ್ಥರು ದೇವಿಯ ಆರಾಧನೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ ಎಂದು ಬಸವರಾಜು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT