ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಚನಾಯಕನಹಳ್ಳಿಗೆ ಸೌಲಭ್ಯ ಮರೀಚಿಕೆ

Last Updated 12 ಡಿಸೆಂಬರ್ 2012, 10:45 IST
ಅಕ್ಷರ ಗಾತ್ರ

ಎಚ್.ಡಿ.ಕೋಟೆ: 600ಕ್ಕೂ ಹೆಚ್ಚು ಜನಸಂಖ್ಯೆ ಇರುವ ತಾಲ್ಲೂಕಿನ ಮಾಚನಾಯಕನಹಳ್ಳಿಯು ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ.

ತಾಲ್ಲೂಕಿನ ನಾಗನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಈ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯು ತೀರ ಹದಗೆಟ್ಟಿರುವುದು ಪ್ರಮುಖ ಸಮಸ್ಯೆಯಾಗಿದೆ. ಕೆಲ ದಿನಗಳ ಹಿಂದೆ ಗ್ರಾಮಸ್ಥರೇ 2 ಲಕ್ಷದಷ್ಟು ವಂತಿಗೆ ಸಂಗ್ರಹಿಸಿ ಅಲ್ಪಮಟ್ಟಿಗೆ ರಸ್ತೆ ಸರಿಪಡಿಸಿಕೊಂಡು ಇತರರಿಗೆ ಮಾದರಿಯಾಗಿದ್ದಾರೆ.

ರಸ್ತೆಯ ತುಂಬ ಕಲ್ಲುಗಳು ಹರಡಿಕೊಂಡು ವಾಹನಗಳು ಸಂಚರಿಸುವುದು ಕಷ್ಟವಾಗಿದೆ. ಗುಂಡಿಗಳು ಬಿದ್ದು ವಾಹನ ಸಂಚಾರ ದುಸ್ತರವಾಗಿದೆ. ಗ್ರಾಮದ ರಸ್ತೆಗಳು ಡಾಂಬರ್ ಕಾಣದೆ ಹಳ್ಳಕೊಳ್ಳಗಳಿಂದ ಕೂಡಿವೆ. ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಜನ ಸಾಮಾನ್ಯರು ಓಡಾಡಲು ಪರದಾಡುವಂತಾಗಿದೆ.

ಕುಡಿಯುವ ನೀರು ಸರಿಯಾದ ಪ್ರಮಾಣದಲ್ಲಿ ಲಭ್ಯವಿಲ್ಲ, ಇಲ್ಲಿನ ಜನರು ವ್ಯವಸಾಯವನ್ನೇ ನಂಬಿಕೊಂಡು ಜೀವಿಸುತ್ತಿದ್ದಾರೆ. ಕಾಡಂಚಿನ ಗ್ರಾಮವಾಗಿದ್ದು, ಇಲ್ಲಿ ನಿರಂತರವಾಗಿ ಆನೆಗಳ ಹಾವಳಿ ಹಾಗೂ ಇನ್ನಿತರ ಕಾಡು ಪ್ರಾಣಿಗಳು ರೈತರ ಫಸಲಿನ ಮೇಲೆ ದಾಳಿ ಮಾಡಿ ನಷ್ಟವುಂಟು ಮಾಡುತ್ತವೆ. ರೈತರು ಬೆಳೆದ ಬೆಳೆಗಳು ಕೈ ಸೇರುತ್ತಿಲ್ಲ. ವ್ಯವಸಾಯಕ್ಕಾಗಿ ಮಾಡಿದ ಸಾಲಗಳನ್ನು ತೀರಿಸಲು ಸಾಧ್ಯವಿಲ್ಲದೆ ಪರದಾಡುತ್ತಿದ್ದಾರೆ.

ಇಲ್ಲಿನ ರಸ್ತೆ ವ್ಯವಸ್ಥೆಯಂತೂ ತೀರ ಹದಗೆಟ್ಟದೆ, ರಸ್ತೆಗಳಲ್ಲಿ ಗಿಡಗಂಟೆಗಳು ಬೆಳೆದು ರಸ್ತೆ ಕಾಲುದಾರಿಯಂತಾಗಿದೆ. ಪ್ರತಿ ದಿನ ಶಾಲಾ, ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಕಾಲುದಾರಿಯಲ್ಲೆ ನಡೆದುಕೊಂಡು ಪಟ್ಟಣಕ್ಕೆ ಹೋಗಬೇಕು. ರಾತ್ರಿ 7ಗಂಟೆಯ ನಂತರ ಆನೆಗಳು ಓಡಾಡುವುದರಿಂದ ದ್ವಿಚಕ್ರ ವಾಹನದಲ್ಲಿ ಸಂಚರಿಸುವವರು ಜೀವ ಭಯದಲ್ಲಿದ್ದಾರೆ.

ಗ್ರಾಮದಲ್ಲಿ ಚರಂಡಿ, ಶೌಚಾಲಯ ಸೇರಿದಂತೆ ಯಾವುದೇ ಮೂಲಭೂತ ಸೌಲಭ್ಯಗಳು ಇಲ್ಲದೆ ಅನೇಕ ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯಲ್ಲಿದ್ದಾರೆ.

ಗ್ರಾಮದ ಬಹುತೇಕ ಜನರು ಬಯಲು ಮಲ ವಿಸರ್ಜನೆಯನ್ನೇ ಅವಲಂಬಿಸಿದ್ದು, ಬೀದಿ ಬದಿಗಳು ಕೊಳಕಾಗಿವೆ. ಇಲ್ಲಿನ ಸಾರ್ವಜನಿಕರು ಜ್ವರ ಮತ್ತಿತರ ಕಾಯಿಲೆಗೆ ಆಗಾಗ ತುತ್ತಾಗುತ್ತಿರುತ್ತಾರೆ.

ಸಾರಿಗೆ ಬಸ್‌ಗಳು ಗ್ರಾಮದ ದಾರಿಯನ್ನೇ ಕಂಡಿಲ್ಲ. ಗ್ರಾಮದ ಜನರಿಗೆ ಆರೋಗ್ಯ ಸಮಸ್ಯೆ ಉಂಟಾದರೆ ಸಮೀಪದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಇಲ್ಲ. ಇಲ್ಲಿನ ಜನರು ಆಟೋ ರಿಕ್ಷಾ ಹಾಗೂ ಖಾಸಗಿ ವಾಹನಗಳನ್ನೇ ಅವಲಂಬಿಸಬೇಕಾದ ಸ್ಥಿತಿ ಉಂಟಾಗಿದೆ.

ಬೀದಿಯ ಬದಿಯಲ್ಲೂ ಚರಂಡಿಗಳು ಇಲ್ಲ, ಕೆಲ ಭಾಗಗಳಲ್ಲಿ ಇರುವ ಚರಂಡಿಗಳು ಕಟ್ಟಿಕೊಂಡಿವೆ. ಗ್ರಾಮದ ಚರಂಡಿಗಳು ನಿರ್ವಹಣೆಯಿಲ್ಲದೆ ಹಾಳಾಗಿವೆ. ಕೊಳಚೆ ನೀರಿನಿಂದ ಗ್ರಾಮದಲ್ಲಿ ಸೊಳ್ಳೆಗಳ ಕಾಟ ಮಿತಿಮೀರಿದೆ ಎಂದು ಗ್ರಾಮದ  ಗ್ರಾಮದ ಮುಖಂಡ ದಯಾನಂದ್ ಮತ್ತು ವಕೀಲರಾದ ಎಂ.ಎಸ್ ಮಹದೇವಸ್ವಾಮಿ ಆರೋಪಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT