ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಜಿ ಅಧ್ಯಕ್ಷ ಮುಷರಫ್ ಬಂಧನ

Last Updated 19 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಇಸ್ಲಾಮಾಬಾದ್ (ಪಿಟಿಐ, ಐಎಎನ್‌ಎಸ್): ಪಾಕಿಸ್ತಾನದ  ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರನ್ನು ಶುಕ್ರವಾರ ಬೆಳಗಿನ ಜಾವ ಬಂಧಿಸಿದ ಪೊಲೀಸರು ಸ್ಥಳೀಯ ನ್ಯಾಯಾಲಯದಲ್ಲಿ ಹಾಜರು ಪಡಿಸಿದರು. ನ್ಯಾಯಾಧೀಶರು ಎರಡು ದಿನಗಳ ಕಾಲ ಅವರನ್ನು ಪೊಲೀಸ್ ವಶಕ್ಕೆ ನೀಡಿದ್ದಾರೆ.

ಗುರುವಾರವೇ ಪಾಕ್ ಸರ್ಕಾರ ಮುಷರಫ್ ಅವರ ತೋಟದ ಮನೆಯನ್ನು `ಉಪ ಕಾರಾಗೃಹ' ಎಂದು ಘೋಷಿಸಿತು. ಶುಕ್ರವಾರ ಬೆಳಿಗ್ಗೆ ಮುಷರಫ್ ಅವರನ್ನು ಗೃಹಬಂಧನದಲ್ಲಿ ಇರಿಸಲಾಯಿತಾದರೂ, ಮಧ್ಯಾಹ್ನ  ಕೋರ್ಟ್‌ಗೆ ಹಾಜರುಪಡಿಸುವ ತನಕ ಅವರನ್ನು ಪೊಲೀಸ್ ಠಾಣೆಯಲ್ಲೇ ಇರಿಸಿಕೊಳ್ಳುವಂತಹ ಆದೇಶ (ಈ ಆದೇಶದ ಪ್ರಕಾರ ಪೊಲೀಸ್ ಠಾಣೆಯಲ್ಲಿಯೇ ಅವರನ್ನು ಇರಿಸಬೇಕು) ನೀಡಿದ ಕಾರಣ ಮುಷರಫ್ ಅವರನ್ನು ಮನೆಯಿಂದ ಭಾರಿ ಭದ್ರತೆಯೊಂದಿಗೆ ಪೊಲೀಸ್ ಪ್ರಧಾನ ಕಚೇರಿಗೆ ಕರೆದೊಯ್ಯಲಾಯಿತು.

ಇಂತಹ ಆದೇಶ ನೀಡಿದ ಸಂದರ್ಭ ಕೋರ್ಟ್‌ಗೆ ಹಾಜರುಪಡಿಸುವ ತನಕ ಆರೋಪಿಯನ್ನು ಠಾಣೆಯಲ್ಲೇ ಇರಿಸಿಕೊಳ್ಳಬೇಕಾಗುತ್ತದೆ. ಆದಾಗ್ಯೂ ಭದ್ರತಾ ಕಾರಣಗಳಿಂದಾಗಿ ಮುಷರಫ್ ಕೋರ್ಟ್‌ಗೆ ಹಾಜರಾದ ನಂತರ ವಾಪಸ್ ಅವರ ತೋಟದ ನಿವಾಸಕ್ಕೆ ಕರೆದೊಯ್ಯಲಾಯಿತು.

ಶುಕ್ರವಾರ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ಹಾಜರು ಪಡಿಸಿದ ಸಂದರ್ಭದಲ್ಲಿ ಮಾಜಿ ಅಧ್ಯಕ್ಷರನ್ನು ಪೊಲೀಸ್ ವಶಕ್ಕೆ ನೀಡಲಾಯಿತು. ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಂತೆ ಕೋರಿದರಾದರೂ, `ಮುಷರಫ್ ಬಂಧನಕ್ಕೆ ಆದೇಶ ನೀಡಿರುವುದು ಇಸ್ಲಾಮಾಬಾದ್ ಹೈಕೋರ್ಟ್, ನಾವು ನಮ್ಮ ಮಿತಿಯಲ್ಲಿ ಆದೇಶ ನೀಡುತ್ತಿದ್ದೇವೆ. ಭಯೋತ್ಪಾದಕ ನಿಗ್ರಹ ನ್ಯಾಯಾಲಯದಲ್ಲಿ ಹಾಜರು ಪಡಿಸಿ ನ್ಯಾಯಾಂಗ ಬಂಧನಕ್ಕೆ ಪಡೆಯಬಹುದು' ಎಂದು ನ್ಯಾಯಾಧೀಶರು ಹೇಳಿದರು.

ಇಸ್ಲಾಮಾಬಾದ್‌ನಲ್ಲಿ ಭಯೋತ್ಪಾದಕ ನಿಗ್ರಹ ನ್ಯಾಯಾಲಯ ಇಲ್ಲದೇ ಇರುವುದರಿಂದ ಹಾಗೂ ರಾವಲ್ಪಿಂಡಿಯಲ್ಲಿರುವ ನ್ಯಾಯಾಲಯದಲ್ಲಿ ಭದ್ರತಾ ಕಾರಣಗಳಿಂದ ಹಾಜರು ಪಡಿಸಲು ಸಾಧ್ಯವಾಗಲಿಲ್ಲ.

ಶನಿವಾರ ಮುಷರಫ್ ಅವರನ್ನು ಈ ಕೋರ್ಟಿಗೆ ಹಾಜರು ಪಡಿಸುವ ಸಾಧ್ಯತೆ ಇದೆ. ಮುಷರಫ್ ಅಧ್ಯಕ್ಷರಾಗಿದ್ದ 2007ರ ತುರ್ತುಸ್ಥಿತಿ ಅವಧಿಯಲ್ಲಿ 60 ನ್ಯಾಯಾಧೀಶರನ್ನು ಪದಚ್ಯುತಗೊಳಿಸಿ ಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಂತರ ಜಾಮೀನು ವಿಸ್ತರಣೆ ಕೋರಿ ಸ್ಥಳೀಯ ಹೈಕೋರ್ಟ್‌ಗೆ ಗುರುವಾರ ಹಾಜರಾದ ಸಂದರ್ಭ ಅವರನ್ನು ಬಂಧಿಸಲು ನ್ಯಾಯಾಧೀಶರು ಆದೇಶ ಹೊರಡಿಸಿದ್ದರು. ಆದೇಶ ಪ್ರಕಟವಾಗುತ್ತಿದ್ದಂತೆಯೇ ಮುಷರಫ್ ತಮ್ಮ ಬೆಂಗಾವಲು ಪಡೆಯೊಂದಿಗೆ ಕೋರ್ಟ್‌ನಿಂದಲೇ ಪರಾರಿಯಾಗಿದ್ದರು.

ನಸುಕಿನಲ್ಲಿ ಬಂಧನ: ಶುಕ್ರವಾರ ಬೆಳಗಿನಜಾವ ಮುಷರಫ್ ನಿವಾಸಕ್ಕೆ ಧಾವಿಸಿದ ಪೊಲೀಸರ ತಂಡ ಅವರನ್ನು ಬಂಧಿಸಿ ನಂತರ ಇಸ್ಲಾಮಾಬಾದ್ ಜಿಲ್ಲಾ ಕೋರ್ಟ್‌ಗೆ ಹಾಜರುಪಡಿಸಿತು. ಎರಡು ದಿನಗಳ ಕಾಲ ಮುಷರಫ್ ಅವರನ್ನು ಪೊಲೀಸ್ ವಶಕ್ಕೆ ನೀಡಲು ನ್ಯಾಯಾಧೀಶರು ಆದೇಶಿಸಿದರು. ಎರಡು ದಿನದೊಳಗೆ ಮುಷರಫ್ ಅವರನ್ನು ಭಯೋತ್ಪಾದನಾ ತಡೆ  ಕೋರ್ಟ್‌ಗೆ ಹಾಜರುಪಡಿಸಲು ಸಹ  ನ್ಯಾಯಾಧೀಶರು ಪೊಲೀಸರಿಗೆ ನಿರ್ದೇಶನ ನೀಡಿದರು.

ಮುಷರಫ್ ಅವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸುವ ಸಂದರ್ಭದಲ್ಲಿ ಕೈಕೋಳ ತೊಡಿಸದೇ ಇರುವುದನ್ನು ಮುಷರಫ್ ವಿರುದ್ಧ ಅರ್ಜಿ ಸಲ್ಲಿಸಿದ ವಕೀಲರು ನ್ಯಾಯಾಲಯದಲ್ಲಿ ಪ್ರಶ್ನಿಸಿದರು. ಜತೆಗೆ ಪೊಲೀಸ್ ಕಸ್ಟಡಿಯಲ್ಲೇ ಅವರನ್ನು ಇರಿಸಬೇಕು ಎಂದು ಒತ್ತಾಯಿಸಿದರು.

2007ರ ತುರ್ತುಸ್ಥಿತಿಯ ಅವಧಿಯಲ್ಲಿ 60 ನ್ಯಾಯಾಧೀಶರ ವಜಾ ಮತ್ತು ಬಂಧನದ ಕುರಿತು ಪೊಲೀಸ್ ಅಧಿಕಾರಿಗಳು ಮುಷರಫ್ ಅವರನ್ನು ಪ್ರಶ್ನಿಸಿ ಅವರ ಹೇಳಿಕೆಯನ್ನು ಧ್ವನಿಮುದ್ರಿಸಿಕೊಂಡರು.

ಮುಷರಫ್ ಅವರನ್ನು ಬಂಧಿಸಲಾಗಿದ್ದು ಅವರೀಗ ಅಧಿಕಾರಿಗಳ ಕಸ್ಟಡಿಯಲ್ಲಿದ್ದಾರೆ ಎಂದು ಪಾಕ್ ಹಂಗಾಮಿ ಒಳಾಡಳಿತ ಸಚಿವ ಮಲಿಕ್ ಹಬೀಬ್ ಖಾನ್ ಸಂಸತ್ತಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT