ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಜಿ ಟೆನಿಸ್ ಆಟಗಾರ ಸುಮಂತ್ ಮಿಶ್ರಾ ನಿಧನ

Last Updated 4 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): `ಭಾರತದ ಟೆನಿಸ್‌ನ ಪಿತಾಮಹ~ ಎಂದೇ ಖ್ಯಾತಿ ಪಡೆದಿದ್ದ ಸುಮಂತ್ ಮಿಶ್ರಾ (88) ಶನಿವಾರ ರಾತ್ರಿ ನಿಧನರಾದರು. ಅವರು 1946 ರಲ್ಲಿ ಮೊದಲ ರಾಷ್ಟ್ರೀಯ ಚಾಂಪಿಯನ್ ಎನಿಸಿದ್ದರು.

1947 ರಿಂದ 1956ರ ಅವಧಿಯಲ್ಲಿ ಡೇವಿಸ್ ಕಪ್ ಟೆನಿಸ್ ಟೂರ್ನಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಮಿಶ್ರಾ, ವಿಂಬಲ್ಡನ್ ಮತ್ತು ಯುಎಸ್ ನ್ಯಾಷನಲ್ಸ್ ಟೂರ್ನಿಯಲ್ಲೂ ಪಾಲ್ಗೊಂಡಿದ್ದರು. 1923 ರಲ್ಲಿ ಜನಿಸಿದ ಅವರು ದೇಶದಲ್ಲಿ ಟೆನಿಸ್‌ನ ಬೆಳವಣಿಗೆಗಾಗಿ ಸಾಕಷ್ಟು ಸೇವೆ ಸಲ್ಲಿಸಿದ್ದಾರೆ.

ಆರಂಭದಲ್ಲಿ ಕೋಲ್ಕತ್ತದ ಸೌತ್ ಕ್ಲಬ್ ಪರ ಆಡಿದ್ದ ಮಿಶ್ರಾ 1946-47ರ ಅವಧಿಯಲ್ಲಿ ಚೊಚ್ಚಲ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಜಯಿಸಿದ್ದರು. ಫೈನಲ್‌ನಲ್ಲಿ ಅವರು ಮನಮೋಹನ್ ವಿರುದ್ಧ ಗೆಲುವು ಪಡೆದಿದ್ದರು. ಆ ಬಳಿಕ 1952 ರಲ್ಲೂ ರಾಷ್ಟ್ರೀಯ ಚಾಂಪಿಯನ್ ಎನಿಸಿಕೊಂಡಿದ್ದರು.

ವೇಗದ ಸರ್ವ್‌ಗಳಿಗೆ ಹೆಸರುವಾಸಿಯಾಗಿದ್ದ ಸುಮಂತ್ 1952-53 ರ ಅವಧಿಯಲ್ಲಿ ಡೇವಿಸ್ ಕಪ್ ತಂಡವನ್ನು ಮುನ್ನಡೆಸಿದ್ದರು. 1947 ಮತ್ತು 48 ರಲ್ಲಿ ಜಿಮ್ಮಿ ಮೆಹ್ತಾ ಅವರ ಜೊತೆಗೂಡಿ ವಿಂಬಲ್ಡನ್ ಡಬಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದರು. 1947 ರಲ್ಲಿ ಯುಎಸ್ ನ್ಯಾಷನಲ್ಸ್ ಟೂರ್ನಿಯ ಡಬಲ್ಸ್ ವಿಭಾಗದ ಎಂಟರಘಟ್ಟ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದರು.

1963 ರಿಂದ 67ರ ಅವಧಿಯವರೆಗೆ ಅಖಿಲ ಭಾರತ ಟೆನಿಸ್ ಸಂಸ್ಥೆಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಅವರು, ಡೇವಿಸ್ ಕಪ್ ತಂಡದ ಆಯ್ಕೆ ಸಮಿತಿಯ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ್ದರು.
ಇವರ ಹಿರಿಯ ಮಗ ಗೌರವ್ ಮಿಶ್ರಾ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಜಯಿಸಿದ್ದರಲ್ಲದೆ, ಡೇವಿಸ್ ಕಪ್‌ನಲ್ಲೂ ಆಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT