ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಜಿ ನಕ್ಸಲ್‌ರ ಮನದಾಳದ ಮಾತುಗಳು...

Last Updated 14 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ನೆಮ್ಮದಿಯ ಬದುಕಿಗೆ ಶರಣು

ಮಾಜಿ ನಕ್ಸಲ್ ಜಯಾ

2010ರಲ್ಲಿ ಜಿಲ್ಲಾಡಳಿತ ನಕ್ಸಲ್ ಶರಣಾಗತಿ ಪ್ಯಾಕೇಜ್ ಘೋಷಿಸಿದಾಗ  ಶಸಸ್ತ್ರ ಹೋರಾಟ ತೊರೆದು ಸಮಾಜದ ಮುಖ್ಯವಾಹಿನಿಗೆ ಸೇರಿದ ಹೊರಲೆ ಜಯ, ಕುಂದೂರಿನ ಮಲ್ಲಿಕಾ, ಯಡಗುಂದದ ಕೋಮಲಾ, ಹಾಗಲಗಂಚಿಯ ವೆಂಕಟೇಶ್‌ಗೆ  ಕಳೆದುಹೋದ ಕುಟುಂಬ ನೆಮ್ಮದಿ ಮತ್ತೆ ಸಿಕ್ಕಿದೆ.

ನಕ್ಸಲ್ ಸಂಘಟನೆಯ `ಭದ್ರಾ~ ತಂಡದ ಸದಸ್ಯೆಯಾಗಿದ್ದ ಹೊರಲೆ ಜಯ ಶರಣಾಗತಿ ನಂತರ ಎಲ್ಲ ಪ್ರಕರಣಗಳಿಂದ ಮುಕ್ತವಾಗುವ ಹಂತದಲ್ಲಿದ್ದು, ಸುಖ ಸಂಸಾರ ನಡೆಸುತ್ತಿದ್ದಾರೆ. ಸರ್ಕಾರಿ ಕೆಲಸ ನಿರಾಕರಿಸಿ, ತನ್ನ ಹುಟ್ಟೂರು ಕುದುರೆಮುಖ ರಾಷ್ಟ್ರೀಯ ಉದ್ಯಾನಕ್ಕೆ ಹೊಂದಿಕೊಂಡಿರುವ ಹೊರಲೆಯಲ್ಲೇ ನೆಲೆಸಿದ್ದಾರೆ. ಸರ್ಕಾರಿ ಕೆಲಸದ ಬದಲು ಇವರು ಎರಡು ಎಕರೆ ಭೂಮಿಯನ್ನು ಜಿಲ್ಲಾಡಳಿತದಿಂದ ಪಡೆದಿದ್ದಾರೆ.

`ಕಾಡಲ್ಲೇ ಉಳಿದಿದ್ದರೆ ಇಂತಹದೊಂದು ನೆಮ್ಮದಿ, ಗೌರವದ ಬದುಕು ಖಂಡಿತಾ ಸಿಗುತ್ತಿರಲಿಲ್ಲ. ಬಂದೂಕು ಹೆಗಲಿಗೇರಿಸಿಕೊಂಡಿದ್ದರೆ ಮದುವೆ, ಗಂಡ, ಮಗು, ಸಂಸಾರ...ಯಾವುದೂ ಇರುತ್ತಿರಲಿಲ್ಲ~ ಎಂದು ಜಯಾ ನೆಮ್ಮದಿಯ ನಿಟ್ಟುಸಿರು ಬಿಟ್ಟರು.

`ಜಿಲ್ಲಾಡಳಿತದ ಪ್ಯಾಕೇಜ್‌ಗಾಗಿ ನಾವು ಶರಣಾಗಲಿಲ್ಲ. ಕೆಲ ಬೇಡಿಕೆಗಳನ್ನು ಮುಂದಿಟ್ಟಿದ್ದೆವು. ಅವುಗಳನ್ನು ಈಡೇರಿಸುವ ಭರವಸೆ ನೀಡಿದ ಮೇಲೆಯೇ ಶರಣಾಗಿದ್ದು. ಒಕ್ಕಲೆಬ್ಬಿಸಬಾರದೆಂಬ ಷರತ್ತಿನೊಂದಿಗೆ ಊರಿಗೆ ರಸ್ತೆ, ಸೇತುವೆ, ವಿದ್ಯುತ್, ಅಂಗನವಾಡಿ, ಬಡವರಿಗೆ ಪಡಿತರ ಚೀಟಿ ಬೇಡಿಕೆ ಇಟ್ಟಿದ್ದೆ. ಇದರಲ್ಲಿ ಸೇತುವೆ ಹೊರತುಪಡಿಸಿ ಎಲ್ಲ ಬೇಡಿಕೆಗಳು ಈಡೇರಿವೆ~ ಎನ್ನುವುದು ಜಯಾನುಡಿ.

`ನನಗೆ ತಿಳಿವಳಿಕೆ ಬಂದಾಗಿನಿಂದಲೂ ನೋಡುತ್ತಿದ್ದೇನೆ. ನಮ್ಮೂರಿಗೆ ಯಾವೊಬ್ಬ ಅಧಿಕಾರಿಯೂ ಬಂದಿರಲಿಲ್ಲ. ಚನ್ನಪ್ಪಗೌಡ್ರು (ಈ ಹಿಂದಿನ ಜಿಲ್ಲಾಧಿಕಾರಿ) ನಮ್ಮ ಹಳ್ಳಿಗೆ ಬಂದು, ತಾವೇ ನಿಂತು ರಸ್ತೆ ಮಾಡಿಸಿದರು. ಎಲ್ಲ ಅಧಿಕಾರಿಗಳಿಗೂ ಇಷ್ಟೇ ಕಾಳಜಿ ಇದ್ದರೆ ಯಾರಾದರೂ ಯಾಕೆ ನಕ್ಸಲ್ ಹಾದಿ ಹಿಡಿಯುತ್ತಾರೆ? ನೀವೇ ಹೇಳಿ.
 
ಹಿಂಸಾತ್ಮಕ ಹೋರಾಟವನ್ನು ಮತ್ತೆಂದಿಗೂ ಬೆಂಬಲಿಸುವುದಿಲ್ಲ. ಶರಣಾಗತಿಗೆ ಸಿದ್ಧವಿದ್ದರೆ ಅಂತಹವರ ಪ್ರಾಣಕ್ಕೆ ಅಪಾಯ ಎದುರಾಗದಂತೆ ಜಿಲ್ಲಾಡಳಿತದ ಮುಂದೆ ಶರಣಾಗತಿಗೆ ವ್ಯವಸ್ಥೆ ಮಾಡುತ್ತೇನೆ~ ಎನ್ನುತ್ತಾರೆ.

- - - - -

ಹಾಗಲಗಂಚಿ ವೆಂಕಟೇಶನದು ಹಾಲುಜೇನು ಸಂಸಾರ

ಮಾಜಿ ನಕ್ಸಲ್ ವೆಂಕಟೇಶ್

`ಪಶ್ಚಿಮಘಟ್ಟದಲ್ಲಿ ನಕ್ಸಲರಿದ್ದಾರೆ~ ಎನ್ನುವುದು ಹೊರಜಗತ್ತಿಗೆ ತಿಳಿದ ಮೊದಲ ಪ್ರಕರಣದ (ನಕ್ಸಲರು ಗುರಿ ಅಭ್ಯಾಸ ನಡೆಸುವಾಗ ವೆುಣಸಿನಹಾಡ್ಯದ ಬಳಿ ವೃದ್ಧೆ ಚೀರಮ್ಮ ಕಾಲಿಗೆ ಗುಂಡು ತಗುಲಿದ ಘಟನೆ) ಆರೋಪಿಯೇ ಶೃಂಗೇರಿ ತಾಲ್ಲೂಕಿನ ಹಾಗಲಗಂಚಿ ವೆಂಕಟೇಶ್. ನಜಿರ್ ಎಂಬಾತನಿಗೆ ಜಿಲೆಟಿನ್ ಒದಗಿಸಿದ ಮತ್ತು ಕರಪತ್ರ ಹಂಚಿದ ಆರೋಪ ಈತನ ಮೇಲಿದೆ.
 
`ಕೆಂಪು ಪಟ್ಟಿ~ಯಲ್ಲಿದ್ದ ಮಾಜಿ ನಕ್ಸಲ್ ಕಮಾಂಡೊಗೆ ಶರಣಾಗತಿ ಪ್ಯಾಕೇಜ್ ಹೊಸ ಜೀವನ ಕಲ್ಪಿಸಿದೆ. ಮೂರು ಎಕರೆ ಭೂಮಿಯಲ್ಲಿ ಕಾಫಿ, ಏಲಕ್ಕಿ, ಮೆಣಸು, ಅಡಿಕೆ ಬೆಳೆಯುತ್ತಿದ್ದಾರೆ. ಆದರೆ ತಿಂಗಳಿಗೊಂದು ಬರುತ್ತಿರುವ ಕೋರ್ಟ್ ಸಮನ್ಸ್ ಇನ್ನೂ ಅವರ ಆತಂಕ ದೂರ ಮಾಡಿಲ್ಲ.

`ಜಿಲ್ಲಾಡಳಿತ ನೀಡಲು ಸಿದ್ಧವಿದ್ದ ಎರಡು ಎಕರೆ ಭೂಮಿ, ನಿವೇಶನ, ಉದ್ಯೋಗ ಅಥವಾ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವನ್ನು ಬೇಡವೆಂದೆ. ಹಿತೈಷಿಗಳ ಒತ್ತಡಕ್ಕೆ ಕಟ್ಟುಬಿದ್ದು ಒಂದು ಲಕ್ಷ ರೂಪಾಯಿ ಪರಿಹಾರ ಹಣ ಸ್ವೀಕರಿಸಿದೆ. ನಮ್ಮ ಹಳ್ಳಿಗಳಿಗೆ ಮೂಲ ಸೌಕರ್ಯ ಕಲ್ಪಿಸುವ ಜತೆಗೆ ಎಲ್ಲ ಆರೋಪಗಳಿಂದ ಮುಕ್ತಗೊಳಿಸುವ ಭರವಸೆಯನ್ನು ಜಿಲ್ಲಾಡಳಿತ ನೀಡಿದೆ.

ನಕ್ಸಲ್ ಹಾದಿಯಿಂದ ವಾಪಸ್ ಬರದಿದ್ದರೆ ಪೊಲೀಸರ ಎನ್‌ಕೌಂಟರ್‌ಗೆ ಬಲಿ ಆಗಬೇಕಿತ್ತು. ಇಲ್ಲವೆಂದರೆ ಜಾಮೀನು ಸಿಗದೆ ಜೈಲಿನಲ್ಲಿ ಕೊಳೆಯಬೇಕಿತ್ತು~ ಎನ್ನುತ್ತಾರೆ ವೆಂಕಟೇಶ್.

`ಮುಂಡಗಾರಿನಿಂದ ಹಿಡಿದು ಹಾಗಲಗಂಚಿ ಸೇರಿದಂತೆ ಎಲ್ಲ ಹಳ್ಳಿಗಳೂ ಅಭಿವೃದ್ಧಿಯಾಗಬೇಕು. ಯಾರನ್ನೂ ಒಕ್ಕಲೆಬ್ಬಿಸಬಾರದೆಂಬ ಷರತ್ತನ್ನು ಜಿಲ್ಲಾಡಳಿತದ ಮುಂದಿಟ್ಟಿದ್ದೇವೆ. ನಿರುದ್ಯೋಗವಷ್ಟೇ ನಕ್ಸಲ್ ಚಳವಳಿಗೆ ಕಾರಣವಲ್ಲ;

ಅನಾದಿಕಾಲದಿಂದಲೂ ಭೂಮಿ ಜತೆಗೆ ಹೊಂದಿರುವ ಅವಿನಾಭಾವ ಸಂಬಂಧ ಕಡಿಯಲು ಸರ್ಕಾರ ಮುಂದಾದಾಗ ಇಂತಹ ಚಳವಳಿ ಹುಟ್ಟುತ್ತವೆ. ರಾಷ್ಟ್ರೀಯ ಉದ್ಯಾನ, ಹುಲಿ ಯೋಜನೆ, ಇತ್ಯಾದಿ ಹೆಸರಿನಲ್ಲಿ ಬಹುರಾಷ್ಟ್ರೀಯ ಕಂಪೆನಿಗಳಿಗೆ ಅನುಕೂಲ ಕಲ್ಪಿಸಲು ಹೊರಟರೆ ಮಲೆನಾಡಿನ ಈಗಿನ ಚಿತ್ರಣ ಮತ್ತೆ ಬದಲಾದರೂ ಆಗಬಹುದು~ ಎನ್ನುವ ಆತಂಕ ವೆಂಕಟೇಶ್ ಅವರದ್ದು.

ಶತಮಾನಗಳಿಂದ ರಸ್ತೆಯನ್ನೇ ಕಾಣದ ಹಾಗಲಗಂಚಿಗೆ 16 ಲಕ್ಷ ರೂಪಾಯಿ ವೆಚ್ಚದಲ್ಲಿ 4 ಕಿ.ಮೀ. ರಸ್ತೆ ಆಗಿದೆ. ಅಕ್ಕಪಕ್ಕದ ಹಳ್ಳಿಗಳಿಗೂ ವಿದ್ಯುತ್ ಬಂದಿದೆ. ನಕ್ಸಲ್ ಪೀಡಿತ ಹಳ್ಳಿಗಳಲ್ಲಿ ಆಗುತ್ತಿರುವ ಅಭಿವೃದ್ಧಿಯ ಬದಲಾವಣೆ ಅವರಿಗೆ ಪೂರ್ಣವಲ್ಲದಿದ್ದರೂ ಕೊಂಚ ಸಮಾಧಾನ ತಂದಿದೆ.

- - - - -

`ಹಳೆಯದೆಲ್ಲ ಮುಗಿದ ಅಧ್ಯಾಯ~

 ಮಾಜಿ ನಕ್ಸಲ್ ಮಲ್ಲಿಕಾ

ಕೊಪ್ಪ ತಾಲ್ಲೂಕಿನ ಕುಂದೂರು ಗ್ರಾಮದ ಮಾಜಿ ನಕ್ಸಲ್ ಮಲ್ಲಿಕಾ ಶರಣಾಗತಿ ನಂತರ ಜಯಪುರ ನಾಡ ಕಚೇರಿಯಲ್ಲಿ ಗ್ರಾಮ ಸಹಾಯಕಿ. 7ನೇ ತರಗತಿ ಓದಿರುವ 26 ಹರೆಯದ ಮಲ್ಲಿಕಾ ಈಗ ತಾಯಿ ಮತ್ತು ಅಣ್ಣನೊಂದಿಗೆ ನೆಲೆ ನಿಂತಿದ್ದಾರೆ.

`ಹಳೆಯದೆಲ್ಲ ಮುಗಿದ ಅಧ್ಯಾಯ. ಎಲ್ಲ ಮರೆತು ನೆಮ್ಮದಿ ಬದುಕು ಕಂಡುಕೊಂಡಿದ್ದೇನೆ. ಜಿಲ್ಲಾಡಳಿತ ನೀಡಿದ 50 ಸಾವಿರ ರೂಪಾಯಿ ಭವಿಷ್ಯಕ್ಕಾಗಿ ಬ್ಯಾಂಕ್ ಖಾತೆಯಲ್ಲಿಟ್ಟಿದ್ದೇನೆ. ಕೆಲಸ ಇನ್ನು ಕಾಯಂ ಆಗಿಲ್ಲ. ಜಿಲ್ಲಾಡಳಿತ ಕಾಯಂ ಕೆಲಸ ನೀಡುವ ಭರವಸೆ ಕೊಟ್ಟಿದೆ. ಪ್ರತಿ ತಿಂಗಳು 3,500 ರೂಪಾಯಿ ಸಂಬಳ ಸಿಗುತ್ತಿದೆ. ಈಗಿನ ವೃತ್ತಿಯೂ ತೃಪ್ತಿ ನೀಡಿದೆ~ ಎನ್ನುತ್ತಾರೆ ಮಲ್ಲಿಕಾ. 

ಜಯ ಮತ್ತು ಮಲ್ಲಿಕಾ ಜತೆಗೆ ಶರಣಾದ ಕೋಮಲಾ ಈಗ ತಾಯಿ ಮತ್ತು ಅಣ್ಣನೊಂದಿಗೆ ಕೊಪ್ಪ ತಾಲ್ಲೂಕಿನ ಯಡಗುಂದದಲ್ಲಿ ನೆಲೆಸಿದ್ದಾರೆ. ಸಮೀಪದ ಎತ್ತಿನಹಟ್ಟಿಯಲ್ಲಿ ಅಕ್ಕನ ಮನೆಯಲ್ಲಿದ್ದುಕೊಂಡು, ಶೃಂಗೇರಿಯ ಕೈಮಗ್ಗದಲ್ಲಿ ಕೆಲಸ ಮಾಡುತ್ತಿದ್ದರು. ವೇತನ ವಿಳಂಬ, ಕೆಲಸ ತೃಪ್ತಿ ನೀಡದ ಕಾರಣ ಕೆಲಸ ತೊರೆದಿದ್ದಾರೆ ಎನ್ನಲಾಗುತ್ತಿದೆ. ಮನೆಗೆ ಬಂದಿರುವುದನ್ನು ಖಚಿತಪಡಿಸಿರುವ ಅವರ ಸಹೋದರ ರಂಗಪ್ಪ, ಕೆಲಸ ಬಿಟ್ಟ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸುತ್ತಾರೆ.

ಸರ್ಕಾರ ಎಚ್ಚೆತ್ತುಕೊಂಡ ಪರಿಣಾಮವೋ ಅಥವಾ ನಾಲ್ವರು ನಕ್ಸಲರು ನ್ಯಾಯಯುತ ಬೇಡಿಕೆಗಳ ಈಡೇರಿಕೆ ಭರವಸೆ ಮೇರೆಗೆ ಜಿಲ್ಲಾಡಳಿತದ ಮುಂದೆ ಶರಣಾದ ಪರಿಣಾಮವೋ ನಕ್ಸಲ್‌ಬಾಧಿತ ತಾಲ್ಲೂಕುಗಳ ಹಳ್ಳಿಗಳಲ್ಲಿ ಅಭಿವೃದ್ಧಿಯ ಚಕ್ರಕ್ಕೆ ಚಾಲನೆ ಸಿಕ್ಕಿದೆ. ಆದರೆ, ಅದು ಚಲಿಸುತ್ತಿರುವ ವೇಗ ಮಾತ್ರ ಅರಣ್ಯವಾಸಿಗಳು ಮತ್ತು ಗಿರಿಜನರಲ್ಲಿ ಸಮಾಧಾನ ನೀಡಿಲ್ಲ.

 ಈಗ ಶರಣಾಗಿರುವ ಮಾಜಿ ನಕ್ಸಲರನ್ನು ಎಲ್ಲ ಆರೋಪಗಳಿಂದ ಮುಕ್ತಗೊಳಿಸಿ ಸಮಾಜದ ಮುಖ್ಯವಾಹಿನಿಯಲ್ಲಿ ಘನತೆಯಿಂದ ಬದುಕಲು ಅವಕಾಶ ಮಾಡಿಕೊಡುವ ಜವಾಬ್ದಾರಿ ಸರ್ಕಾರದ ಮೇಲಿದೆ. ಜತೆಗೆ ಯುವಕ, ಯುವತಿಯರ ಮನಸ್ಸು ನಕ್ಸಲ್ ಚಳವಳಿಯತ್ತ ಸುಳಿಯದಂತೆ ಮಾಡುವ ಹೊಣೆಗಾರಿಕೆ ಸಮಾಜದ ಮೇಲೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT