ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಜಿ ಮಂತ್ರಿಗೆ ಎದುರಾಳಿಗಳ ಚಿಂತೆ

Last Updated 25 ಜನವರಿ 2013, 19:59 IST
ಅಕ್ಷರ ಗಾತ್ರ

ಗುಲ್ಬರ್ಗ:  ರಾಜ್ಯಕ್ಕೆ ವೀರೇಂದ್ರ ಪಾಟೀಲರನ್ನು ಎರಡು ಬಾರಿ ಮುಖ್ಯಮಂತ್ರಿಯಾಗಿ ನೀಡಿದ ಪ್ರಮುಖ ಮತಕ್ಷೇತ್ರ ಚಿಂಚೋಳಿ. ಈ ವಿಧಾನಸಭೆ ಕ್ಷೇತ್ರದಲ್ಲಿ ಈಗ ರಾಜಕೀಯ ಚಟುವಟಿಕೆಗಳು ಚುರುಕುಗೊಳ್ಳುತ್ತಿದೆ.

ಕಾಂಗ್ರೆಸ್‌ನ ಭದ್ರಕೋಟೆ ಎನಿಸಿದ ಕ್ಷೇತ್ರವಿದು. 1985ರಲ್ಲಿ ಹೊರತುಪಡಿಸಿದರೆ ಉಳಿದೆಲ್ಲ ಚುನಾವಣೆಗಳಲ್ಲಿ ಚಿಂಚೋಳಿಯಲ್ಲಿ ಯಾವ ಪಕ್ಷದ ಅಭ್ಯರ್ಥಿ ಗೆಲ್ಲುತ್ತಾರೋ ಅದೇ ಪಕ್ಷ ಅಧಿಕಾರಕ್ಕೆ ಬಂದಿದ್ದವು ಎಂಬುದೂ ಗಮನಾರ್ಹ ವಿಚಾರ.

ಕ್ಷೇತ್ರ ಪುನರ್‌ವಿಂಗಡಣೆ ನಂತರ ಪರಿಶಿಷ್ಟ ಜಾತಿಗೆ ಮೀಸಲು ಕ್ಷೇತ್ರವಾಗಿ ಮಾರ್ಪಟ್ಟ ಐದು ವರ್ಷಗಳ ನಂತರವೂ ಇಲ್ಲಿ ಮಾಜಿ ಸಚಿವ ವೈಜನಾಥ ಪಾಟೀಲ ಮತ್ತು ವೀರೇಂದ್ರ ಪಾಟೀಲರ ಪುತ್ರರಾದ ಮಾಜಿ ಶಾಸಕ ಕೈಲಾಸನಾಥ ಪಾಟೀಲರು ನಿರ್ಣಾಯಕ ಶಕ್ತಿಯಾಗಿ ಉಳಿದಿದ್ದಾರೆ.

ಮೀಸಲು ಕ್ಷೇತ್ರವಾದ ನಂತರ 2008ರ ಚುನಾವಣೆಯಲ್ಲಿ ಮೊದಲ ಬಾರಿಗೆ ಬಿಜೆಪಿಗೆ ಗೆಲುವು ತಂದಿತ್ತ ಸುನೀಲ ವಲ್ಯಾಪುರೆ ಅವರು ಜಗದೀಶ ಶೆಟ್ಟರ್ ಸಂಪುಟದಲ್ಲಿ ಕ್ಯಾಬಿನೆಟ್ ದರ್ಜೆಯ ಸಚಿವರಾಗಿದ್ದರು. ಅವರು ಅವರು ಡಿ.9ರಂದು ಹಾವೇರಿಯಲ್ಲಿ ಕೆಜೆಪಿ ಸಮಾವೇಶದ ಸಂದರ್ಭದಲ್ಲಿ ಸಚಿವ ಸ್ಥಾನ ತ್ಯಜಿಸಿ ಕೆಜೆಪಿ ಸೇರಿದ ಬಳಿಕ ರಾಜಕೀಯದ ಬಿಸಿ ಗಾಳಿ ಹೆಚ್ಚತೊಡಗಿದೆ. ಅವರೀಗ ಕೆಜೆಪಿ ಅಭ್ಯರ್ಥಿಯಾಗುವುದು ಖಚಿತವಾಗಿದೆ. ಜಿಲ್ಲಾ ಪಂಚಾಯಿತಿಯ ಒಬ್ಬ ಸದಸ್ಯ, ತಾಲ್ಲೂಕು ಪಂಚಾಯಿತಿಯ ಕೆಲವು ಸದಸ್ಯರು ಅವರ ಜೊತೆಗೆ ಗುರುತಿಸಿಕೊಂಡಿದ್ದಾರೆ. ಆದರೂ, ಎದುರಾಳಿಗಳು ಯಾರಾಗಬಹುದು ಎಂಬ ಆತಂಕ ವಲ್ಯಾಪುರೆ ಅವರನ್ನು ಕಾಡುತ್ತಿದೆ.

ಬಿಜೆಪಿಯಿಂದ ಯಾಕಾಪುರ?: ಬಿಜೆಪಿಯಲ್ಲಿದ್ದ ಮಾಜಿ ಸಚಿವ ವೈಜನಾಥ ಪಾಟೀಲ ತಟಸ್ಥರಾಗಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಬಿಜೆಪಿಯ ಟಿಕೆಟ್ ನಿರೀಕ್ಷೆಯಲ್ಲಿ ದಲಿತ ಮುಖಂಡ, ಸಹಕಾರಿ ಧುರೀಣ ರಮೇಶ ಯಾಕಾಪುರ ಇದ್ದಾರೆ. ಲಂಬಾಣಿ ಸಮುದಾಯದ (ಬೇರೆ ಪಕ್ಷಗಳ) ಕೆಲವು ಮುಖಂಡರು ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ. 2008ರ ಪೂರ್ವದಲ್ಲಿದ್ದ ಬಿಜೆಪಿಯ ಸ್ಥಿತಿ ಮತ್ತೆ ಮರುಕಳಿಸಿದೆ. ರಮೇಶ ಯಾಕಾಪುರ ಪುತ್ರ ಸಂಜೀವನ್ ಜಿ.ಪಂ ಸದಸ್ಯರಾಗಿದ್ದಾರೆ.  

ಕಾಂಗ್ರೆಸ್ ದೊಡ್ಡ ಪಟ್ಟಿ: ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಗಳ ದೊಡ್ಡ ಪಟ್ಟಿಯೇ ಇದ್ದು, ಮಾಜಿ ಸಚಿವ ಬಾಬುರಾವ್ ಚವ್ಹಾಣ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಶಾಮರಾವ್ ರಾಠೋಡ್, ಡಾ. ಉಮೇಶ ಜಾಧವ್ ಟಿಕೆಟ್‌ಗಾಗಿ ತೀವ್ರ ಪ್ರಯತ್ನ ನಡೆಸುತ್ತಿದ್ದಾರೆ.

ಈ ಪೈಕಿ ಬಾಬುರಾವ್ ಚವ್ಹಾಣ ಕಳೆದ ಬಾರಿ ಆರು ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಸೋತಿದ್ದರು. ಶಾಮರಾವ್ ರಾಠೋಡ್ ಹಳೆಯ ಕಾಂಗ್ರೆಸ್ ಮುಖಂಡ ಮಾತ್ರವಲ್ಲದೆ ಮತ್ತು ಸ್ಥಳೀಯರು ಎಂಬ ಪೂರಕ ಅಂಶವನ್ನು ಹೊಂದಿದ್ದಾರೆ.

ಜೆಡಿಎಸ್: ಚುನಾವಣೆ ಘೋಷಣೆಗೆ ಮೊದಲೇ ಇಲ್ಲಿಂದ 2008ರಲ್ಲಿ ಪಕ್ಷದ ಅಭ್ಯರ್ಥಿಯಾಗಿದ್ದ ಗೋಪಾಲರಾವ್ ಕಟ್ಟೀಮನಿ ಉಚ್ಚಾಟಿತರಾಗಿದ್ದಾರೆ. ಆದ್ದರಿಂದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಗಾಜರೆ ಮತ್ತು ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಹಾಗೂ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಸುಭಾಷ್ ರಾಠೋಡ್ ಪೈಪೋಟಿ ಮುಂದುವರಿಯಲಿದೆ.

ಬಿಎಸ್‌ಪಿ, ಬಿಎಸ್‌ಆರ್ ಕಾಂಗ್ರೆಸ್, ಸಮಾಜವಾದಿ ಪಕ್ಷ, ಸಿಪಿಐಎಂ ಪಕ್ಷಗಳು ಸಕ್ರಿಯವಾಗಿದ್ದು ಅವುಗಳು ಅಭ್ಯರ್ಥಿಯನ್ನು ಸ್ಪರ್ಧೆಗಿಳಿಸಿದರೆ ಕಣ ಇನ್ನಷ್ಟು ರಂಗು ಪಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT