ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಜಿ ಮುಖ್ಯಮಂತ್ರಿ ಎಚ್‌ಡಿಕೆಗೆ ಪುಟ್ಟಣ್ಣಯ್ಯ ತಿರುಗೇಟು

Last Updated 7 ಫೆಬ್ರುವರಿ 2012, 7:25 IST
ಅಕ್ಷರ ಗಾತ್ರ

ಮಂಡ್ಯ: ಭ್ರಷ್ಟಾಚಾರ ಚರ್ಚೆಗೆ ಬಹಿರಂಗ ಚರ್ಚೆ ಕುರಿತ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಹ್ವಾನವನ್ನು ಸ್ವೀಕರಿಸಿರುವ ರೈತ ಸಂಘದ ಅಧ್ಯಕ್ಷ ಕೆ.ಎಸ್.ಪುಟ್ಟಣ್ಣಯ್ಯ ಅವರು, ಸ್ಥಳ ಮತ್ತು ದಿನವನ್ನು ಅವರೇ ನಿಗದಿಪಡಿಸಲಿ. ಅವರು ಎಷ್ಟು `ಸಭ್ಯರು~ ಎಂಬುದನ್ನು ಬಹಿರಂಗಪಡಿಸುತ್ತೇನೆ ಎಂದಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು, ರೈತರು ಸ್ವಯಂ ಪ್ರೇರಿತವಾಗಿ ನೀಡುವ ಹಣದಿಂದಲೇ ಚಳವಳಿ ಸಂಘಟಿಸಲಿದ್ದು, ಯಾರಿಂದಲೂ ವಸೂಲಿ ಮಾಡುವುದಿಲ್ಲ. ಆದರೆ, ಕುಮಾರಸ್ವಾಮಿಗೆ ರಾಜಕಾರಣಕ್ಕೆ  ಹಣ ಎಲ್ಲಿಂದ ಬರುತ್ತದೆ. ಹಾಸನದಲ್ಲಿ ಕಬ್ಬು, ಆಲೂಗಡ್ಡೆ ಬೆಳೆದು ಸಂಪಾದನೆ ಮಾಡಿದ್ದಾರೆಯೇ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದರು.

ಕುಮಾರಸ್ವಾಮಿಗೆ ನೈತಿಕತೆ ಇದ್ದರೆ, ತಮ್ಮ ಪಕ್ಷದ ಶಾಸಕರ ವರ್ತನೆಯಿಂದ (ಮುಡಾ ನಿವೇಶನ ಅಕ್ರಮ ಹಂಚಿಕೆ ಪ್ರಕರಣ)  ಪಕ್ಷಕ್ಕೆ ಮುಜುಗರವಾಗಿದೆ, ಅಪಮಾನವಾಗಿದೆ ಎಂದು ತಿಳಿ ಹೇಳುವ ವರ್ತನೆ ತೋರಲಿ ಎಂದು ಸಲಹೆ ನೀಡಿದರು. ಅವರು ಆಕಸ್ಮಿಕವಾಗಿ ಮುಖ್ಯಮಂತ್ರಿಯಾದರು.

ಸಂಸತ್‌ಗೆ ಹೋದರೂ ಜನರ ಸಮಸ್ಯೆ ಚರ್ಚಿಸುತ್ತಿಲ್ಲ. ನಕಲಿ ಮಣ್ಣಿನ ಮಕ್ಕಳು. ರೈತ ಸಂಘ ಹಾಗೂ ಚಳವಳಿಯ ಬಗ್ಗೆ ಮಾತನಾಡುವಾಗ ನಾಲಿಗೆ ಮೇಲೆ ಹತೋಟಿ ಇಟ್ಟುಕೊಂಡರೆ ಒಳ್ಳೆಯದು, ಇಲ್ಲದಿದ್ದರೆ ಪರಿಣಾಮ ಎದುರಿಸಬೇಕಾದಿತು ಎಂದು ಎಚ್ಚರಿಸಿದರು.

ಸೇವೆ ಒಳಗೂ ಕಚ್ಚಾಟ!: ರೈತ ಸಂಘದ ಪದಾಧಿಕಾರಿಗಳನ್ನು ರಾಜ್ಯ ಸಮಿತಿಯೇ ನಿರ್ಧರಿಸುತ್ತದೆ. ಇದಕ್ಕೆ ಎಲ್ಲರೂ ಬದ್ಧರಾಗಬೇಕು. ಸೇವಾ ಸಂಸ್ಥೆಯಾದ ಸಂಘದೊಳಗೆ ಅಧಿಕಾರಕ್ಕಾಗಿ ಕಿತ್ತಾಟ ನಡೆದಿರುವುದು ಅಸಹ್ಯಕರ ಬೆಳವಣಿಗೆ. ಇದರಲ್ಲಿ ರಾಜಕಾರಣಿಗಳ ಷಡ್ಯಂತ್ರವಿದ್ದರೆ ಅದು ಫಲಿಸುವುದಿಲ್ಲ ಎಂದು ತಿಳಿಸಿದರು.

ಜ್ಯೋತಿ ಭತ್ತವನ್ನೂ ಖರೀದಿಸಿ: ಭತ್ತ ಖರೀದಿ ಕೇಂದ್ರಗಳಲ್ಲಿ ಜ್ಯೋತಿ ಭತ್ತವನ್ನು ಖರೀದಿಸದೆ ಇರುವುದರಿಂದ ರೈತರಿಗೆ ತೊಂದರೆಯಾಗಿದೆ. ಈ ತಳಿಯನ್ನು ತೆಗೆದುಕೊಳ್ಳುವುದಿಲ್ಲ ಎನ್ನುವುದು ಸರಿಯಲ್ಲ. ಜಿಲ್ಲಾಧಿಕಾರಿಇತ್ತ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ರೈತ ಸಂಘದ ಅಧ್ಯಕ್ಷ ಕೋಣಸಾಲೆ ನರಸರಾಜು, ಮುಖಂಡರಾದ ಕೆ.ಎಸ್.ನಂಜುಂಡೇಗೌಡ, ಎಸ್.ಸುರೇಶ್, ಹನಿಯಂಬಾಡಿ ನಾಗರಾಜು, ಬಾಲಚಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT