ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಜಿ ಮೇಯರ್ ಬಂಡಾಯ ಬಾವುಟ

Last Updated 17 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಕಾಂಗ್ರೆಸ್ ಧೋರಣೆಯಿಂದ ಸ್ವಾಭಿಮಾನಕ್ಕೆ ಪೆಟ್ಟು ಬಿದ್ದಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಬಸವನಗುಡಿ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಶಾಸಕ ಕೆ. ಚಂದ್ರಶೇಖರ್ ಪಕ್ಷದ ಬಂಡಾಯ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕೆ ಧುಮುಕಿದ್ದಾರೆ.

ಸಾವಿರಾರು ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ಆಗಮಿಸಿ ಅವರು ಬುಧವಾರ ಬೆಳಿಗ್ಗೆ 11.15ರ ವೇಳೆ ನಾಮಪತ್ರ ಸಲ್ಲಿಸಿದ್ದರು. ಮಾಜಿ ಮೇಯರ್ ಹಾಗೂ ಬಿಬಿಎಂಪಿ ಹಾಲಿ ಸದಸ್ಯರಾಗಿರುವ ಅವರು ಕಾಂಗ್ರೆಸ್ ಟಿಕೆಟ್‌ಗೆ ಪ್ರಬಲ ಆಕಾಂಕ್ಷಿಯಾಗಿದ್ದರು. ಆದರೆ, ಕಾಂಗ್ರೆಸ್ ಪಕ್ಷ ಕ್ಷೇತ್ರದಲ್ಲಿ ಮಾಜಿ ಸಚಿವ ಪ್ರೊ.ಬಿ.ಕೆ. ಚಂದ್ರಶೇಖರ್ ಅವರನ್ನು ಕಣಕ್ಕೆ ಇಳಿಸಲು ತೀರ್ಮಾನಿಸಿತು. ಇದರಿಂದ ಆಕ್ರೋಶಗೊಂಡ ಚಂದ್ರಶೇಖರ್ ಅವರು, ಪಕ್ಷದ ನಾಯಕರ ವಿರುದ್ಧ ತಿರುಗಿ ಬಿದ್ದಿದ್ದಾರೆ. ಇದೇ ಸಂದರ್ಭದಲ್ಲಿ ಅವರು ಬಿ.ಕೆ. ಚಂದ್ರಶೇಖರ್ ವಿರುದ್ಧವೂ ಕಿಡಿಕಾರಿದ್ದಾರೆ.

`30 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದೇನೆ. ಹನುಮಂತನಗರ ವಾರ್ಡ್‌ನಲ್ಲಿ ಸತತ ನಾಲ್ಕು ಬಾರಿ ಪಾಲಿಕೆ ಸದಸ್ಯನಾಗಿ ಆಯ್ಕೆಯಾಗಿದ್ದೇನೆ. ಬಸವನಗುಡಿ ಕ್ಷೇತ್ರದಲ್ಲಿ ಸ್ವಾತಂತ್ರ್ಯನಗರ ಕಾಂಗ್ರೆಸ್ ಅಭ್ಯರ್ಥಿಯಾಗಿ ಜಯ ಗಳಿಸಿದ ಹೆಗ್ಗಳಿಕೆ ನನ್ನದು. ಖಚಿತ ಗೆಲುವಿನ ನಿರೀಕ್ಷೆಯಲ್ಲಿದ್ದ ನನ್ನನ್ನು ಅಭ್ಯರ್ಥಿಯನ್ನಾಗಿ ಘೋಷಿಸದೆ ಕಾಂಗ್ರೆಸ್ ಅನ್ಯಾಯ ಮಾಡಿದೆ' ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

`ಪಕ್ಷದ ಅತಿ ಕಷ್ಟದ ದಿನಗಳಲ್ಲಿ ಪಕ್ಷದ ಸಂಘಟನೆಗಾಗಿ ಶ್ರಮಿಸಿದ್ದೇನೆ. ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಸೀತಾರಾಮ್ ಕೇಸರಿ ಅವರು ರಾಜ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ನಗರದಲ್ಲಿ ಬೃಹತ್ ಸಮಾವೇಶ ಸಂಘಟಿಸಿದ್ದೆ. ಆರ್.ವಿ.ದೇಶಪಾಂಡೆ ಹಾಗೂ ಡಿ.ಕೆ. ಶಿವಕುಮಾರ್ ರಾಜ್ಯ ಘಟಕದ ಅಧ್ಯಕ್ಷರಾಗಿದ್ದ ಅವಧಿಯಲ್ಲೂ ದೊಡ್ಡಬಳ್ಳಾಪುರದಲ್ಲಿ ಬೃಹತ್ ಸಮಾವೇಶ ನಡೆಸಿದ್ದೆ. ಪ್ರಾಮಾಣಿಕತೆ, ದಕ್ಷತೆ ಹಾಗೂ ಪಾರದರ್ಶಕವಾಗಿ ಕಾರ್ಯನಿರ್ವಹಿಸಿದ್ದರಿಂದ ಸದಾ ಕಾಂಗ್ರೆಸ್ ವಿರೋಧಿ ಅಲೆ ಇರುವ ಬಸವನಗುಡಿ ಕ್ಷೇತ್ರದಲ್ಲಿ ಪಕ್ಷಕ್ಕೆ ನೆಲೆ ದೊರಕುವಂತೆ ಮಾಡಿದ್ದೇನೆ' ಎಂದು ಅವರು ನೆನಪಿಸಿಕೊಂಡರು.

`ಕಳೆದ ಚುನಾವಣೆಯಲ್ಲಿ ಬಿಜೆಪಿ ಅಲೆ ಹಾಗೂ ಬಸವನಗುಡಿ ಕ್ಷೇತ್ರದ ಮರುವಿಂಗಡಣೆಯಿಂದಾಗಿ ನನಗೆ ಸೋಲು ಉಂಟಾಯಿತು. ಸೋಲಿನಿಂದ ಧೃತಿಗೆಡದೆ 5 ವರ್ಷಗಳಿಂದ ಕ್ಷೇತ್ರದಲ್ಲಿ ಪಕ್ಷವನ್ನು ಸಂಘಟಿಸುತ್ತಾ ಬಂದಿದ್ದೇನೆ. ಒಂದು ವರ್ಷದಿಂದ ಕ್ಷೇತ್ರಕ್ಕೆ ಪಕ್ಷದ ಅಧಿಕೃತ ಅಭ್ಯರ್ಥಿಯಾಗಲು ಸಕಲ ಸಿದ್ಧತೆ ನಡೆಸಿದ್ದೇನೆ. ಪಕ್ಷ ಕೂಡಾ ಪರೋಕ್ಷವಾಗಿ ನನ್ನ ಬೆಂಬಲಕ್ಕೆ ನಿಂತಿತ್ತು. ಆದರೆ, ಇದ್ದಕ್ಕಿದ್ದಂತೆ ಬಿ.ಕೆ.ಚಂದ್ರಶೇಖರ್ ಅವರನ್ನು ಅಧಿಕೃತ ಅಭ್ಯರ್ಥಿ ಎಂದು ಘೋಷಿಸಲಾಗಿದೆ. ಇದರಿಂದಾಗಿ ಪ್ರಾಮಾಣಿಕವಾಗಿ ದುಡಿಯುತ್ತಾ ಬಂದಿರುವ ನನಗೆ ಹಾಗೂ ಪಕ್ಷದ ಸಾವಿರಾರು ಕಾರ್ಯಕರ್ತರಿಗೆ ನೋವು-ಆಘಾತ ಉಂಟಾಗಿದೆ' ಎಂದು ಅವರು ತಿಳಿಸಿದರು. 

`ಬಿ.ಕೆ.ಚಂದ್ರಶೇಖರ್ ಅವರ ಬಗ್ಗೆ ಅಪಾರ ಗೌರವ ಇದೆ. ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಕಾಲದಲ್ಲಿ ಅವರು ಥಿಂಕ್ ಟ್ಯಾಂಕ್ ಬಳಗದಲ್ಲಿ ಗುರುತಿಸಿಕೊಂಡವರು. ಆಗ ಅವಕಾಶ ಸಿಕ್ಕಿದಾಗಲೆಲ್ಲಾ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕಿ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅವರನ್ನು ಟೀಕಿಸಿ ರಾಜಕಾರಣ ಮಾಡಿಕೊಂಡಿದ್ದರು. ಆದರೂ, ಕಾಂಗ್ರೆಸ್ ಪಕ್ಷ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಅವರನ್ನು ಕರೆದು ವಿವಿಧ ಹುದ್ದೆಗಳನ್ನು ನೀಡಿತು' ಎಂದು ಅವರು ಸ್ಮರಿಸಿದರು.

`ಅವರು ಶಿಕ್ಷಣ ಸಚಿವರಾಗಿದ್ದಾಗ ಬಸವನಗುಡಿಯಲ್ಲಿ ಸರ್ಕಾರಿ ಶಾಲಾ-ಕಾಲೇಜುಗಳನ್ನು ತೆರೆಯಬಹುದಾಗಿತ್ತು. ವಿಧಾನ ಪರಿಷತ್ತಿನ ಸದಸ್ಯರಾಗಿದ್ದಾಗಲೂ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಬಹುದಾಗಿತ್ತು. ಆದರೂ, ಅವರು ಯಾವ ಕೆಲಸ ಮಾಡಿಲ್ಲ. ಕಾರ್ಯಕರ್ತರನ್ನು ಸಂಘಟಿಸಿಲ್ಲ. ಪಕ್ಷಕ್ಕಾಗಿ ದುಡಿದಿಲ್ಲ. ಕ್ಷೇತ್ರದಲ್ಲಿ ಯಾವತ್ತು ಸಕ್ರಿಯವಾಗಿ ತೊಡಗಿಸಿಕೊಂಡಿಲ್ಲ' ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

`ಚುನಾವಣೆಗೆ ನಿಲ್ಲುವುದು ಖಾತ್ರಿಯಾದ ಮೇಲಾದರೂ ಸೌಜನ್ಯಕ್ಕಾದರೂ ನನ್ನನ್ನು ಹಾಗೂ ಕಾರ್ಯಕರ್ತರನ್ನು ಭೇಟಿ ಮಾಡಿ, ಬೆಂಬಲ ಕೋರಬಹುದಿತ್ತು. ನಮ್ಮಂದಿಗೆ ಸೇರಿ ಪ್ರಚಾರ ಆರಂಭಿಸಬಹುದಿತ್ತು. ಹೀಗೆ ಯಾರನ್ನು ಭೇಟಿಯಾಗದೆ, ಕಾರ್ಯಕರ್ತರಿಗೆ ಗೌರವ ನೀಡದೆ ಪ್ರಚಾರ ಆರಂಭಿಸಿದ್ದಾರೆ. ನನ್ನೊಂದಿಗೆ ಕುಳಿತು ಇದುವರೆಗೆ ಯಾವುದೇ ಬೆಳವಣಿಗೆಯನ್ನೂ ಚರ್ಚಿಸಿಲ್ಲ. ಚುನಾವಣೆ ಸ್ಪರ್ಧಿಸಿರುವ ವಿಷಯ ತಿಳಿಸಿದ್ದರೆ ನಾವು ಅವರ ಪರ ಕೆಲಸ ಮಾಡುತ್ತಿದ್ದೆವು. ಕ್ಷೇತ್ರದಲ್ಲಿ ಪಕ್ಷಕ್ಕೆ ಗೆಲುವು ತರಬಹುದಿತ್ತು' ಎಂದು ಅವರು ಹೇಳಿದರು.

`ಕಾಂಗ್ರೆಸ್ ನನ್ನನ್ನು ಕೈಬಿಟ್ಟಿದೆ. ನಾನು ಕಾಂಗ್ರೆಸ್ ಪಕ್ಷದ ಕೈಬಿಟ್ಟಿಲ್ಲ. ಪಕ್ಷ ಏಕಾಏಕಿ ನನ್ನನ್ನು ದೂರ ಮಾಡಿದೆ. ಹಿರಿಯ ನಾಯಕರು ಸಹ ನನಗೆ ಧ್ವನಿ ಕೊಟ್ಟಿಲ್ಲ. ಪ್ರಾಥಮಿಕ ಹಂತದಿಂದಲೂ ಚುನಾವಣಾ ಕಣದಲ್ಲಿ ನನ್ನ ಹೆಸರು ಇತ್ತು. ಈಗ ನಿಷ್ಠಾವಂತ ನಾಯಕನಾದ ನನ್ನನ್ನು ಉದ್ದೇಶಪೂರ್ವಕವಾಗಿ ತುಳಿದಿದ್ದಾರೆ. ಪ್ರೊ.ಬಿ.ಕೆ.ಸಿ. ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ನಾನು ನಿಲ್ಲುತ್ತೇನೆ ಎಂದು ಹೇಳಿದ್ದರೆ ನಾನೇ ಸ್ವ ಇಚ್ಛೆಯಿಂದ ಬಿಟ್ಟು ಕೊಡುತ್ತಿದ್ದೆ. ಅವರ ಬದಲು ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ನಿಲ್ಲಿಸಿದ್ದರೆ ಬೆಂಬಲಿಸುತ್ತಿದ್ದೆ' ಎಂದು ಅವರು ಘೋಷಿಸಿದರು.

`ಕ್ಷೇತ್ರದ ಮತದಾರರು ಎಂದೆಂದಿಗೂ ನನ್ನ ಜೊತೆಗೆ ಇರುತ್ತಾರೆ. ಕಾರ್ಯಕರ್ತರು ನನ್ನ ಜೊತೆಗೆ ಇರುತ್ತೇವೆ ಎಂದು ಘೋಷಿಸಿದ್ದಾರೆ. ಪಕ್ಷದ ಹಲವಾರು ಪದಾಧಿಕಾರಿಗಳು ಈಗಾಗಲೇ ನನ್ನ ಬಳಿ ರಾಜೀನಾಮೆ ಪತ್ರ ನೀಡಿದ್ದಾರೆ. ಅದನ್ನು ಪಕ್ಷದ ಅಧ್ಯಕ್ಷರಿಗೆ ಸಲ್ಲಿಸುತ್ತೇನೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT