ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಜಿ ಶಾಸಕ ತಮ್ಮಣ್ಣ ವಿರುದ್ಧ ಮೊಕದ್ದಮೆ

Last Updated 25 ಫೆಬ್ರುವರಿ 2011, 16:35 IST
ಅಕ್ಷರ ಗಾತ್ರ

ಬೆಂಗಳೂರು: ಕೆಐಎಡಿಬಿಯಲ್ಲಿ ಮುಖ್ಯ ಅಭಿವೃದ್ಧಿ ಅಧಿಕಾರಿ (ಸಿಡಿಓ) ಹುದ್ದೆಯಲ್ಲಿದ್ದ ಅವಧಿಯಲ್ಲಿ ಭಾರಿ ಅವ್ಯವಹಾರ ನಡೆಸಿ, ಅಕ್ರಮ ಆಸ್ತಿ ಸಂಪಾದಿಸಿರುವ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಶಾಸಕ ಡಿ.ಸಿ.ತಮ್ಮಣ್ಣ ವಿರುದ್ಧ ಲೋಕಾಯುಕ್ತ ಪೊಲೀಸರು ಶುಕ್ರವಾರ ಎಫ್‌ಐಆರ್ ದಾಖಲಿಸಿದ್ದಾರೆ.

‘ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ’ (ಲೋಕಾಯುಕ್ತ) ಬೆಂಗಳೂರು ಗ್ರಾಮಾಂತರ ವಿಶೇಷ ನ್ಯಾಯಾಲಯದ ಆದೇಶದಂತೆ ಈ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಲಾಗಿದೆ. ಬೆಂಗಳೂರು ಗ್ರಾಮಾಂತರ ಲೋಕಾಯುಕ್ತ ಎಸ್‌ಪಿ ಕೆ.ಶ್ರೀಕಂಠ ಎಫ್‌ಐಆರ್ ದಾಖಲಿಸಿದ್ದು, ತನಿಖೆಯ ನೇತೃತ್ವ ವಹಿಸಿದ್ದಾರೆ.

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಸಿಡಿಓ ಹುದ್ದೆಯಲ್ಲಿದ್ದ ಅವಧಿಯಲ್ಲಿ ತಮ್ಮಣ್ಣ ಅಕ್ರಮವಾಗಿ 193.15 ಕೋಟಿ ರೂಪಾಯಿ ಆಸ್ತಿ ಸಂಪಾದಿಸಿದ್ದಾರೆ ಎಂಬ ಆರೋಪದ ಮೇಲೆ ಈ ಎಫ್‌ಐಆರ್ ದಾಖಲಾಗಿದೆ. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಸೆಕ್ಷನ್ 13(1)(ಡಿ), 13(1)(ಇ) ಮತ್ತು 13(2) ಅಡಿಯಲಿ ಮೊಕದ್ದಮೆ ದಾಖಲಿಸಲಾಗಿದೆ.

1989ರಿಂದ 1999ರ ಅವಧಿಯಲ್ಲಿ ಕೆಐಎಡಿಬಿ ಸಿಡಿಓ ಆಗಿದ್ದ ತಮ್ಮಣ್ಣ ನಡೆಸಿರುವ ಅಕ್ರಮಗಳ ಕುರಿತು ಲೋಕಾಯುಕ್ತ ಪೊಲೀಸ್ ತನಿಖೆಗೆ ಆದೇಶಿಸಬೇಕು ಎಂದು ಕೋರಿ ಮಂಡ್ಯದ ಮಾಜಿ ಸಂಸದ ಜಿ.ಮಾದೇಗೌಡ ಬುಧವಾರ ಬೆಂಗಳೂರು ಗ್ರಾಮಾಂತರ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಖಾಸಗಿ ಮೊಕದ್ದಮೆ ಹೂಡಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶ ಚಂದ್ರಶೇಖರ್, ತಮ್ಮಣ್ಣ ವಿರುದ್ಧ ತನಿಖೆ ನಡೆಸುವಂತೆ ಗುರುವಾರ ಲೋಕಾಯುಕ್ತ ಪೊಲೀಸರಿಗೆ ಆದೇಶ ನೀಡಿದ್ದರು.

ಶುಕ್ರವಾರ ಬೆಳಿಗ್ಗೆ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಅವರನ್ನು ಭೇಟಿಮಾಡಿದ್ದ ಮಾದೇಗೌಡ, ತಮ್ಮಣ್ಣ ವಿರುದ್ಧ ತಕ್ಷಣ ಎಫ್‌ಐಆರ್ ದಾಖಲಿಸುವಂತೆ ಮನವಿ ಸಲ್ಲಿಸಿದ್ದರು. ನ್ಯಾಯಾಲಯದ ಆದೇಶದ ಪ್ರಕಾರ ಬೆಂಗಳೂರು ಗ್ರಾಮಾಂತರ ಲೋಕಾಯುಕ್ತ ಎಸ್‌ಪಿ ಕೆ.ಶ್ರೀಕಂಠ ಅವರು ಎಫ್‌ಐಆರ್ ದಾಖಲಿಸಿದ್ದು, ಅದನ್ನು ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

ಗಂಭೀರ ಆರೋಪ: ‘ತಮ್ಮಣ್ಣ ಕೆಐಎಡಿಬಿ ಸಿಡಿಓ ಹುದ್ದೆಯಲ್ಲಿದ್ದಾಗ ದೊಡ್ಡ ಪ್ರಮಾಣದಲ್ಲಿ ಅಕ್ರಮ ನಡೆಸಿದ್ದಾರೆ. ತಮ್ಮ ಸಂಬಂಧಿಕರ ಹೆಸರಿನಲ್ಲಿ ರೈತರಿಂದ ಭೂಮಿ ಖರೀದಿಸಿ ಹೆಚ್ಚಿನ ದರಕ್ಕೆ ಕೆಐಎಡಿಬಿಗೆ ಮಾರಾಟ ಮಾಡಿದ್ದಾರೆ. ಅಧಿಕಾರ ದುರ್ಬಳಕೆ ಮಾಡಿಕೊಂಡು ಸರ್ಕಾರದ ಬೊಕ್ಕಸಕ್ಕೆ ವಂಚಿಸಿದ್ದಾರೆ’ ಎಂದು ಮಾದೇಗೌಡ ಅರ್ಜಿಯಲ್ಲಿ ಆರೋಪಿಸಿದ್ದರು.

ಆರೋಪಿತರು ರೂ 1,000 ಕೋಟಿಗೂ ಹೆಚ್ಚು ಅಕ್ರಮ ಆಸ್ತಿ ಹೊಂದಿದ್ದಾರೆ ಎಂದು ಆರೋಪಿಸಿದ್ದ ಅವರು, 13 ವ್ಯಕ್ತಿಗಳನ್ನು ತಮ್ಮಣ್ಣ ಅವರ ಬೇನಾಮಿ ಆಸ್ತಿದಾರರು ಎಂದು ದಾಖಲೆ ಸಲ್ಲಿಸಿದ್ದರು. 193.15 ಕೋಟಿ ರೂಪಾಯಿ ಮೌಲ್ಯದ ಆಸ್ತಿಗೆ ಸಂಬಂಧಿಸಿದ ದಾಖಲೆಗಳ ಆಧಾರದಲ್ಲಿ ಶುಕ್ರವಾರ ಎಫ್‌ಐಆರ್ ದಾಖಲಿಸಲಾಗಿದೆ. ತನಿಖೆ ಪೂರ್ಣಗೊಳಿಸಲು ನ್ಯಾಯಾಲಯ ಮೇ 31ರ ಗಡುವು ವಿಧಿಸಿದೆ.

ವಿಶೇಷ ತಂಡ ರಚನೆ: ಪ್ರಕರಣ ಕುರಿತು ‘ಪ್ರಜಾವಾಣಿ’ ಜೊತೆ ಮಾತನಾಡಿದ ಲೋಕಾಯುಕ್ತದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ರೂಪಕ್‌ಕುಮಾರ್ ದತ್ತ, ‘ನ್ಯಾಯಾಲಯದ ಆದೇಶದ ಪ್ರಕಾರ ಮೊಕದ್ದಮೆ ದಾಖಲಿಸಲಾಗಿದೆ.

ಇದೊಂದು ಗಂಭೀರ ಪ್ರಕರಣ. ದೊಡ್ಡ ಪ್ರಮಾಣದ ದಾಖಲೆಗಳನ್ನು ಪರಿಶೀಲಿಸಬೇಕಾಗುತ್ತದೆ. ಆದ್ದರಿಂದ ಪ್ರಕರಣದ ತನಿಖೆಗೆ ನಮ್ಮ ಪೊಲೀಸರ ವಿಶೇಷ ತಂಡ ರಚಿಸಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT