ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಟ- ಮಂತ್ರ ನೋಂದಣಿ ಕಡ್ಡಾಯ ಚಿಂತನೆ

Last Updated 27 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಬೆಂಗಳೂರು: `ಭವಿಷ್ಯ ಹೇಳುವ ಜ್ಯೋತಿಷಿಗಳು, ಮಾಟ - ಮಂತ್ರ, ಮಾಯೆ ಇತ್ಯಾದಿಗಳನ್ನು ಮಾಡುತ್ತೇವೆ ಎನ್ನುವವರು ತಮ್ಮ ವೃತ್ತಿಯ ಬಗ್ಗೆ ಮುಜರಾಯಿ ಇಲಾಖೆಯಲ್ಲಿ ನೋಂದಾಯಿಸುವುದನ್ನು ಶೀಘ್ರದಲ್ಲೇ ಕಡ್ಡಾಯ ಮಾಡಲಾಗುವುದು' ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಮೂಢನಂಬಿಕೆ, ಮಾಟ - ಮಂತ್ರದ ಹೆಸರಿನಲ್ಲಿ ಮುಗ್ಧ ಜನರನ್ನು ವಂಚಿಸುವುದಕ್ಕೆ ಸಂಪೂರ್ಣವಾಗಿ  ಕಡಿವಾಣ ಹಾಕಲು ಸಾಧ್ಯವಿಲ್ಲ. ಇಂತಹವರ ಬಗ್ಗೆ ನಿಗಾ ಇಡುವ ಉದ್ದೇಶದಿಂದ ನೋಂದಣಿ ಕಡ್ಡಾಯಗೊಳಿಸಲು ಸರ್ಕಾರ ಮುಂದಾಗಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.

ಗ್ರಾಮೀಣ ಪ್ರದೇಶಗಳಲ್ಲಿ ಮೂಢ ನಂಬಿಕೆ ಹೆಸರಿನಲ್ಲಿ ಅಮಾಯಕರನ್ನು ಶೋಷಿಸಲಾಗುತ್ತಿದೆ. ಹಾಳಾಗಿರುವ ವೈವಾಹಿಕ ಜೀವನ ಸರಿಪಡಿಸುತ್ತೇವೆ. ವ್ಯಾಪಾರದಲ್ಲಿ ನಷ್ಟವಾಗದಂತೆ ಮಾಡುತ್ತೇವೆ. ಮಾಟ - ಮಂತ್ರಗಳ ವ್ಯಾಧಿಗೆ ಒಳಗಾಗಿದ್ದರೆ ಅದರಿಂದ ಪಾರು ಮಾಡುತ್ತೇವೆ ಎಂದು ವಂಚಿಸುವವರ ಸಂಖ್ಯೆ ಈಚೆಗೆ ಹೆಚ್ಚಾಗಿದೆ. ಅಂತಹವರ ಮೇಲೆ ಕಣ್ಗಾವಲು ಇಡಲು ಸರ್ಕಾರ ನಿರ್ಧರಿಸಿದೆ ಎಂದರು.

ಜನವರಿ 3ರಂದು ನಡೆಯುವ ರಾಜ್ಯ ಧಾರ್ಮಿಕ ಪರಿಷತ್ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು. ಇದರಿಂದ ಶೋಷಣೆ ತಪ್ಪಿಸಲು ಅನುಕೂಲವಾಗಲಿದೆ ಎಂದು ತಿಳಿಸಿದರು.ಅಸಭ್ಯ ಚಿತ್ರಣಕ್ಕೆ ನಿಯಂತ್ರಣ: ಮದ್ಯದ ಬಾಟಲಿ, ಒಳ ಉಡುಪು, ದೇಹದ ಕೆಲವೊಂದು ಭಾಗಗಳ ಮೇಲೆ ಹಿಂದೂ ದೇವತೆಗಳನ್ನು ಅಸಭ್ಯವಾಗಿ ಚಿತ್ರಿಸುವುದರ ಮೇಲೂ ನಿಯಂತ್ರಣ ಹೇರಲಾಗುವುದು. ಇತಿಹಾಸ ಪುರುಷರು, ದೇವತೆಗಳು, ಧಾರ್ಮಿಕ ಕೇಂದ್ರಗಳನ್ನು ಕೆಟ್ಟದ್ದಾಗಿ ಬಿಂಬಿಸುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದರು.

ಹಿಂದೂ ದೇವ - ದೇವತೆಗಳ ಚಿತ್ರಗಳನ್ನು ಅಸಭ್ಯವಾಗಿ ಚಿತ್ರಿಸಿ, ಧಾರ್ಮಿಕ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡುವ ಪ್ರಯತ್ನಗಳು ಈಚೆಗೆ ಹೆಚ್ಚಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಸರ್ಕಾರ ಚಿಂತನೆ ನಡೆಸಿದೆ ಎಂದರು.ಮದ್ಯದ ಬಾಟಲಿಗಳ ಮೇಲೆ, ಒಳ ಉಡುಪುಗಳ ಮೇಲೆ ದೇವ - ದೇವತೆಗಳ ಚಿತ್ರಗಳನ್ನು ಚಿತ್ರಿಸುವ ಕೆಲಸ ವಿದೇಶಗಳಲ್ಲಿ ಅಷ್ಟೇ ಅಲ್ಲದೆ ನಮ್ಮಲ್ಲೂ ನಡೆಯುತ್ತಿದೆ. ಕೆಲವರು ಹಬ್ಬದ ದಿನದಂದು ದೇವ - ದೇವತೆಗಳ ವೇಷಧರಿಸಿ ಮದ್ಯಪಾನ ಮಾಡಿದ ನಂತರ ಬೀದಿಯಲ್ಲಿ ಬಿದ್ದು ಅವಮಾನ ಮಾಡುತ್ತಾರೆ. ಅಂತಹವರ ವಿರುದ್ಧ ಕ್ರಮಕೈಗೊಳ್ಳುವುದಕ್ಕೆ ಅಗತ್ಯ ಕಾನೂನು ಜಾರಿಗೊಳಿಸಲು ಚರ್ಚೆ ನಡೆದಿದೆ ಎಂದರು.

ಖಾಸಗೀಕರಣವಿಲ್ಲ: ಮುಜರಾಯಿ ಇಲಾಖೆಯ ಅಧೀನದಲ್ಲಿರುವ ದೇವಸ್ಥಾನಗಳನ್ನು ಖಾಸಗೀಕರಣಗೊಳಿಸುವ ಯಾವುದೇ ಉದ್ದೇಶ ಸರ್ಕಾರದ ಮುಂದೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.ದೇವಾಲಯ ಪ್ರವಾಸ ಕಾರ್ಯಕ್ರಮ ಆರಂಭವಾಗಿದೆ. `ಬಿ' ವರ್ಗದ ದೇವಾಲಯಗಳ ವ್ಯಾಪ್ತಿಗೆ ಬರುವ 25 ದೇವಸ್ಥಾನಗಳನ್ನು ಗುರುತಿಸಿ, ಅವುಗಳಿಗೆ ಮೂಲಸೌಕರ್ಯಗಳನ್ನು ಕಲ್ಪಿಸಿಕೊಡಲು ತಲಾ ಒಂದು ಕೋಟಿ ರೂಪಾಯಿ ನೀಡಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT