ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಟ, ಮಂತ್ರಕ್ಕೆ ಅಷ್ಟು ಶಕ್ತಿ ಇದೆಯೆ?

Last Updated 7 ಫೆಬ್ರುವರಿ 2011, 18:30 IST
ಅಕ್ಷರ ಗಾತ್ರ

ನನ್ನ ಪಕ್ಕದ ಮನೆಯ ರೈತರೊಬ್ಬರು ಒಂದು ದಿನ ಬೆಳಗ್ಗೆ ಏಳುವಾಗ ಕಂಡ ದೃಶ್ಯ ಹಟ್ಟಿಯಲ್ಲಿದ್ದ ಹೊಲ ಉಳುವ ಎರಡು ಎತ್ತುಗಳು, ಸ್ವಲ್ಪ ದೂರದಲ್ಲಿ ಮನೆಯ ನಾಯಿ, ಅಂಗಳದಲ್ಲಿ ನಾಲ್ಕು ಕೋಳಿಗಳು ಸತ್ತು ಬಿದ್ದಿರುವುದನ್ನು ಅವರು ನೆಟ್ಟಗೆ ಪಶುವೈದ್ಯರನ್ನು ಕರೆತಂದು ಇದರ ನಿಖರವಾದ ಕಾರಣ ತಿಳಿಯಬಹುದಿತ್ತು. ಆದರೆ ಮೊದಲು ಓಡಿದ್ದು ಜೋತಿಷಿಗಳ ಬಳಿಗೆ. ಅವರು, ‘ಕೆಲವು ದಿನಗಳ ಹಿಂದೆ ನಿನಗೆ ಒಬ್ಬರಲ್ಲಿ ಜಗಳವಾಗಿದೆ. ಅವರು ಕೇರಳದ ಮಾಂತ್ರಿಕರಿಂದ ಮಾಟ ಮಾಡಿಸಿದ್ದಾರೆ’ ಎಂದರು. ಹೀಗೆ ಜಗಳ ಮಾಡಿಕೊಂಡ ವ್ಯಕ್ತಿಯನ್ನು ಏನೇನೂ ವಿಚಾರಿಸದೆ ಹಿಗ್ಗಾ ಮುಗ್ಗಾ ಥಳಿಸಿ, ಠಾಣೆಗೂ ಹೋದದ್ದಾಯಿತು. ಒಂದು ಹೊಲವನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿ ಮಾಟಕ್ಕೆ ಪರಿಹಾರವನ್ನು ಮಾಡಿಸಿದರು.

ಕೆಲವು ದಿನಗಳಾದ ಮೇಲೆ ಈ ರೈತರಲ್ಲಿ ಎಂಡೋಸಲ್ಫಾನ್ ಇದೆಯೇ ಎಂದು ಕೇಳಿಕೊಂಡು ಒಬ್ಬ ರೈತರು ಹೋದಾಗ ನಿಜದ ಮುಖಕ್ಕೆ ಹೊಡೆಯುವಂತೆ ಮಾಟದ ಸತ್ಯ ಬೆಳಕಿಗೆ ಬಂತು. ಎಂಡೋಸಲ್ಫಾನ್ ಸ್ವಲ್ಪ ಬಳಸಿದ ಮೇಲೆ ಅದರ ಶೀಸೆ ಯಾರ ಕೈಗೂ ಸಿಗಬಾರದೆಂದು ಹಟ್ಟಿಯ ಅಟ್ಟದಲ್ಲಿ ಬಚ್ಚಿಟ್ಟಿದ್ದರು. ಎತ್ತುಗಳು ತಿನ್ನುವ ಒಣಹುಲ್ಲು ಅಟ್ಟದಲ್ಲೇ ಇತ್ತು. ಹುಲ್ಲಿನಲ್ಲಿರುವ ಬತ್ತ ತಿನ್ನಲು ಹೋದ ಇಲಿಗಳು ವಿಷದ ಶೀಸೆಯನ್ನುರುಳಿಸಿದ ಕಾರಣ, ಹುಲ್ಲು ವಿಷದಿಂದ ನೆನೆಯಿತು. ಹಟ್ಟಿಯಲ್ಲಿರಿಸಿದ್ದ ನಾಯಿ ಅನ್ನ ತಿನ್ನುವ ಬಟ್ಟಲಿಗೂ ಎಂಡೋಸಲ್ಫಾನ್ ಬಿದ್ದುದು ತಿಳಿಯದೆ ಅದೇ ಬಟ್ಟಲಿನಲ್ಲಿ ಅನ್ನ ಹಾಕಿದರು. ಅನ್ನ ತಿಂದು ನಾಯಿ ವಾಂತಿ ಮಾಡಿ ಸತ್ತಿತು. ವಾಂತಿಯನ್ನು ತಿಂದ ಕೋಳಿಗಳು, ಹುಲ್ಲು ತಿಂದ ಎತ್ತುಗಳು ಸತ್ತೇ ಹೋದವು. ಆದರೆ ಮಾಟ ಮಾಡಿದವನೆಂದು ಗುರುತಿಸಲಾದ ವ್ಯಕ್ತಿ ಅಂದು ತಿಂದ ಹೊಡೆತದಿಂದಾಗಿ ಇಂದಿಗೂ ಸರಿಯಾಗಿ ನಡೆದಾಡುವ ಸ್ಥಿತಿಯಲ್ಲಿ ಇಲ್ಲ.

ಮಾಟ-ಮಂತ್ರ ಅನ್ನುವ ಪದಗಳು ಬೇರೆಯವರ ಬದುಕನ್ನು ನುಂಗಿ ನೀರು ಕುಡಿಯುತ್ತಿದ್ದರೂ ಅದನ್ನು ಇನ್ನೂ ಜನ ನಂಬುತ್ತಿದ್ದಾರೆ. ಎಲ್ಲ ಬಿಟ್ಟು ರಾಜ್ಯದ ಮುಖ್ಯಮಂತ್ರಿ ಒಂದಿಷ್ಟು ಕುಂಕುಮ, ಕುಂಬಳಕಾಯಿ, ತಾಮ್ರದ ತಗಡು ನೋಡಿ ತನಗೆ ವಿರೋಧ ಪಕ್ಷದವರು ಮಾಟ ಮಾಡಿದ್ದಾರೆಂಬ ಭ್ರಾಂತಿಗೊಳಗಾಗಿದ್ದಾರೆ. ಅವರ ಮಾತನ್ನು ಜವಾಬ್ದಾರಿಯುತವಾದ ಪಕ್ಷದ ರಾಜ್ಯಾಧ್ಯಕ್ಷರು ಬಲವಾಗಿ ಸಮರ್ಥಿಸಿದ್ದಾರೆ. ತಾನು ಮಾಟ ಮಾಡಿಲ್ಲ ಎಂಬ ಮಾತಿಗೆ ಸಮರ್ಥನೆ ನೀಡಲು ವಿರೋಧ ಪಕ್ಷದ ನಾಯಕರು ಮಾನನಷ್ಟ ಮೊಕದ್ದಮೆಯ ಮಾತೆತ್ತಿದ್ದಾರೆ.

ಮಾಂತ್ರಿಕ ವಿಧಾನಗಳಿಂದ ಒಬ್ಬ ಮುಖ್ಯಮಂತ್ರಿಯನ್ನು ಸ್ಥಾನಪಲ್ಲಟಗೊಳಿಸಲು ಸಾಧ್ಯವಿದೆ ಎಂದು ಅವರೇ ನಂಬಿದರೆ ಬುದ್ಧಿಭ್ರಮಣೆಯ ಪ್ರಾರಂಭಿಕ ಹಂತ ತಲುಪಿದ್ದಾರೆ. ನಮ್ಮ ಯೋಧರು ಸಿಯಾಚಿನ್‌ನ ಕಡು ಚಳಿಯಲ್ಲಿ ಗನ್ನು ಹಿಡಿದು ಗಡಿ ನುಸುಳುವ ವಲಸೆಕೋರರನ್ನು ತಡೆಯಲು ರಾತ್ರಿ ಹಗಲು ಯಾಕೆ ಕಾಯಬೇಕಿತ್ತು? ಇಂಥ ಒಬ್ಬ ಮಾಟಗಾರನ ಮೂಲಕ ಪಾಕಿಸ್ತಾನದ ಮೇಲೆ ಮಾಟ ಮಾಡಿಸಿದರೆ ಬಹುಕಾಲದ ಒಂದು ತಲೆಸಿಡಿತದ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತಿತ್ತು. ಈ ದೇಶಕ್ಕೆ ಮತದಾನದ ಕಸರತ್ತು ಬೇಕಿಲ್ಲ. ಮಾಟ ಮಂತ್ರ ಮಾಡಿಯೇ ಬೇಕಾದವರು ಅಧಿಕಾರಕ್ಕೆ ಬರಬೇಕಿತ್ತು.

ಎಲ್ಲರ ಭವಿಷ್ಯ ಹೇಳಬಲ್ಲ ಜೋತಿಷಿಗಳಿಗೇ ‘ತಾವು ವಾಹನ ಅವಘಡದಲ್ಲಿ ಸಾಯುತ್ತೇವೆ’ ಎಂಬುದು ಗೊತ್ತಿರದೆ ಹೋಗುವುದುಂಟು. ಇಂಥವರು ರಾಜಕಾರಣಿಗಳ ಸ್ಥಾನಮಾನದ ನಿರ್ಣಾಯಕರಾಗುತ್ತಾರೆ ಎನ್ನುವುದು ತಮಾಷೆಯ ಸಂಗತಿ. ಧರಂಸಿಂಗ್ ಮುಖ್ಯಮಂತ್ರಿಯಾದ ಕೂಡಲೇ ಒಂದು ದೇವಾಲಯದ ಸಾಮಾನ್ಯ ಅರ್ಚಕರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದರು. ಈ ಪ್ರಶಸ್ತಿಗೆ ಈಗ ಅರ್ಹತೆ ಮುಖ್ಯವಲ್ಲ, ವಶೀಲಿ ಸಾಕು. ಆದರೂ ಆ ಅರ್ಚಕರು ಅದಕ್ಕೂ ಪ್ರಯತ್ನಿಸಿದವರಲ್ಲ. ಚುನಾವಣೆಯ ಕಾಲದಲ್ಲಿ ಧರಂಸಿಂಗ್ ದೇವಾಲಯಕ್ಕೆ ಬಂದಾಗ ಅವರು, ‘ಈ ಸಲ ನೀವು ಸಿಎಂ ಆಗುತ್ತೀರಿ’ ಎಂದು ಹರಸಿದರಂತೆ. ಅವರು ಯಾರಿಗೆಲ್ಲ ಈ ಮಾತು ಹೇಳಿದ್ದರೋ ಗೊತ್ತಿಲ್ಲ. ಆದರೆ ಅದು ಈಡೇರಿದ್ದು ಧರಂಸಿಂಗ್‌ಗೆ. ಪರಮಾನಂದಭರಿತರಾದ ಅವರು ಈ ಹರಕೆ ಹಾರೈಕೆಯ ಋಣ ತೀರಿಸಿ ಪ್ರಶಸ್ತಿಗೇ ಅಪಖ್ಯಾತಿ ಬಳಿದುಬಿಟ್ಟರು.

ಜನಸಾಮಾನ್ಯರಲ್ಲಿರುವ ಜಾಡ್ಯಗಳನ್ನು ಮೂಢನಂಬಿಕೆಗಳನ್ನು ನಿವಾರಿಸಬೇಕಾದದ್ದು ಸರ್ಕಾರದ ಮಂತ್ರಿಗಳ ಮೊದಲ ಕರ್ತವ್ಯ. ಹೀಗೊಂದು ನಂಬಿಕೆಯಿಂದಾಗಿ ಎಷ್ಟೋ ಮಂದಿಯ ಮಾನಸಿಕ ಸ್ಥಿರತೆ, ಬದುಕಿನ ನೆಮ್ಮದಿ ಹಾಳಾಗುತ್ತದೆ. ಕೌಟುಂಬಿಕ ದ್ವೇಷಗಳು ಬೆಳೆಯುತ್ತವೆ. ಮಂತ್ರಸಿದ್ಧಿಗಾಗಿ ಮಕ್ಕಳನ್ನು ಬಲಿ ಕೊಡುವ ದಾನವರಿದ್ದಾರೆ. ಇಂಥ ಕೆಲಸದಲ್ಲಿ ತೊಡಗುವವರಿಗೆ ತ್ವರಿತ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ, ಮರಣದಂಡನೆ ವಿಧಿಸಬೇಕು. ಬದಲಾಗಿ ತನ್ನ ಮೇಲೆ ಮಾಟ ಮಾಡಿದ್ದಾರೆಂದು ಅಳುವ ಮುಖ್ಯಮಂತ್ರಿಯ ಅಪ್ರಬುದ್ಧತೆಗೆ ಏನೆನ್ನೋಣ!

ಕೆಲವು ಶಾಲೆಗಳಲ್ಲಿ ಈಜಿಪ್ಟಿನ ಪಿರಮಿಡ್‌ನಂತಿರುವ ಕಟ್ಟಡಗಳನ್ನು ನಿರ್ಮಿಸಿ ಅದರೊಳಗೆ ಕೆಲಕಾಲ ಕುಳಿತರೆ ಅನೇಕ ಕಾಯಿಲೆಗಳು ಗುಣವಾಗುವುದೆಂದು ಶಿಕ್ಷಕರೇ ಹೇಳುವುದುಂಟು. ಈ ಬಗೆಗೆ ವಿಚಾರವಾದಿಗಳ ಸಂಘದ ಅಧ್ಯಕ್ಷ ನರೇಂದ್ರನಾಯಕ್, ‘ಇದು ಮೂರ್ಖತನದ ಪರಮಾವಧಿ, ಪಿರಮಿಡ್‌ನಲ್ಲಿ ಕುಳಿತು ಕಾಯಿಲೆ ವಾಸಿಯಾಗುವುದು ನಿಜವಾದಲ್ಲಿ ಆಸ್ಪತ್ರೆಗಳ ಅಗತ್ಯವಾದರೂ ಏನಿದೆ? ಪ್ರತಿ ಊರಿನಲ್ಲೂ ಇದನ್ನೇ ಕಟ್ಟಿಸಿದರೆ ರೋಗಮುಕ್ತವಾದ ಭಾರತವನ್ನು ಸಾಧಿಸಿ ತೋರಿಸಬಹುದಲ್ಲವೆ?’ ಎಂಬ ಕೆಣಕುವ ಪ್ರಶ್ನೆ ಕೇಳಿದ್ದಾರೆ. ಇದೊಂದು ಹುರುಳಿಲ್ಲದ ಸಿದ್ಧಾಂತವಾದಲ್ಲಿ ಶಿಕ್ಷಣ ಇಲಾಖೆ ಶಾಲೆಗಳಲ್ಲಿ ವೈಜ್ಞಾನಿಕವಲ್ಲದ ವಿಚಾರಗಳ ಬೆಳವಣಿಗೆಗೆ ಆಸ್ಪದ ನೀಡದೆ ಬೆಳೆಯುವ ಮಕ್ಕಳ ವಿಚಾರ ಶಕ್ತಿಯ ಸಬಲೀಕರಣಕ್ಕೆ ಮುಂದಾದರೆ ಒಳ್ಳೆಯದಿತ್ತು.

ಜೋತಿಷ್ಯ ಸುಳ್ಳೋ, ಮಾಟ ಮಂತ್ರ ಸುಳ್ಳೋ ಎಂಬ ಪ್ರತಿಪಾದನೆಗಿಂತ ಮುಖ್ಯವಾಗಿ ರಾಜ್ಯದ ಮುಖ್ಯಮಂತ್ರಿಯೊಬ್ಬರಿಗೇ ಅದರಿಂದ ರಕ್ಷಣೆ ಸಿಗದೆ ಹಾಹಾಕಾರ ಮಾಡುವ ಪರಿಸ್ಥಿತಿ ನಿರ್ಮಾಣವಾಗಬಾರದಿತ್ತು. ಎಂತೆಂತಹ ಅಪರಾಧಿಗಳನ್ನು ಪತ್ತೆ ಮಾಡಬಲ್ಲ ಸಮರ್ಥ ಪೊಲೀಸರು ನಮ್ಮಲ್ಲಿರುವಾಗ ಹೀಗೊಂದು ಕುಕೃತ್ಯ ಮಾಡಿದವರನ್ನು ಹುಡುಕಿ ಬಂಧಿಸುವುದು ಕಷ್ಟವೇನೂ ಆಗದು. ಆಗ ಯಾರು ಈ ಕೆಲಸ ಮಾಡಿಸಿದ್ದರೆಂಬ ಅಂಶ ಹೊರಬಿದ್ದು ವಿರೋಧ ಪಕ್ಷದವರು ಕುರ್ಚಿಯಿಂದ ಕೆಳಗಿಳಿದು ಅದಕ್ಕೆ ಮುಂದಾಗಿದ್ದರೆ ಬಯಲಿಗೆ ಬರುತ್ತಿತ್ತು. ಅದನ್ನು ಬಿಟ್ಟು ಮಾಧ್ಯಮಗಳೆದುರು ಅನುಕಂಪ ಗಿಟ್ಟಿಸುವ ಒಬ್ಬ ರಾಜಕಾರಣಿಯನ್ನು ಮೀರಿಸಿದ ಮಾಟ ಮಂತ್ರ ಈ ರಾಜ್ಯದ ಆಡಳಿತಕ್ಕೆ ಬೇರೊಂದು ಇರಲಾರದೆಂಬ ಭಾವನೆ ಮೂಡುತ್ತದೆ. ತಾನು ಮಾಡಿದ ಪ್ರಾರಬ್ಧ ಕರ್ಮಗಳಿಂದಾಗಿ ರಾತ್ರಿ ನಿದ್ರೆಯಿಲ್ಲದೆ ಹೊರಳಾಡುವ ಒಬ್ಬ ಅಧಿಕಾರ ವ್ಯಾಮೋಹಿಯ ಪ್ರಲಾಪವಿದು.

ಇನ್ನು ಕೂಡ ನಾವು ಮೌಢ್ಯಗಳಿಂದ ಹೊರಗೆ ಬಂದಿಲ್ಲ ಅನಿಸುತ್ತದೆ. ನೆರೆಪೀಡಿತ ಪ್ರದೇಶದಲ್ಲಿ ಮನೆಗಳಿಲ್ಲದೆ ಟೆಂಟಿನ ಒಳಗೆ ಕಾಲ ನೂಕುತ್ತಿರುವ ಜನತೆಯಲ್ಲಿ ಜನಾರ್ದನನನ್ನು ಕಾಣಲಾಗದೆ ಮುಖ್ಯಮಂತ್ರಿ ಯಾವುದೋ ದೇವಾಲಯ- ಭೂತಾಲಯಗಳಿಗೆ ಕೋಟಿ ಕೋಟಿ ಹಂಚುತ್ತಾರೆ. ದೇವರನ್ನು ನಿರಾಕಾರ, ನಿರ್ಗುಣ, ನಿರ್ಮೋಹಿ ಎಂದು ಸಾವಿರದ ನೂರ ಎಂಟು ಸಹಸ್ರನಾಮಗಳಿಂದ ಹೊಗಳಿದ ಮೇಲೂ ಅದೇ ದೇವರಿಗೆ ಬಂಗಾರದ ಕಿರೀಟ, ವಜ್ರದ ಕವಚ ಒಪ್ಪಿಸುವ ಭಾವುಕರು ನಾವು. ತನ್ನ ಬಂಗಾರವನ್ನು ಕಳ್ಳರಿಂದ ರಕ್ಷಿಸಿಕೊಳ್ಳಲೂ ಆ ದೇವರಿಗೆ ಶಕ್ತಿ ಇಲ್ಲ. ಆದರೆ ಆ ದೇವರನ್ನು ನಂಬಿ, ಯಾವುದೇ ಭ್ರಷ್ಟಾಚಾರ ಮಾಡಿದರೂ ಕುರ್ಚಿಗೆ ಭದ್ರವಾಗಿ ಅಂಟಿಕೊಳ್ಳುತ್ತಾ ಆರೂವರೆ ಕೋಟಿ ಕನ್ನಡಿಗರೂ ತನ್ನ ಜತೆಗೇ ಇದ್ದಾರೆಂದು ಘೋಷಿಸುವ ಇಂದಿನ ಆಡಳಿತಗಾರರ ಸ್ಥಿತಿ ನೋಡಿದರೆ ದೇವರು ಎಂಥ ಅಸಹಾಯಕ, ಧರ್ಮ ಸಂಸ್ಥಾಪನೆಯ ವಿಷಯ ಮರೆತುಬಿಟ್ಟನೇ ಅನಿಸುವುದುಂಟು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT